ಒಂದು ರಾಜಕೀಯ ಆಲಿಂಗನದ ಸುತ್ತಮುತ್ತ

7
ರಾಹುಲ್ ಜಂಗಮದಂತೆಯೂ, ಮೋದಿ ಸ್ಥಾವರದಂತೆಯೂ ಇತಿಹಾಸದಲ್ಲಿ ದಾಖಲಾಗಿಬಿಡಬಹುದು

ಒಂದು ರಾಜಕೀಯ ಆಲಿಂಗನದ ಸುತ್ತಮುತ್ತ

ಡಿ. ಉಮಾಪತಿ
Published:
Updated:

ಒಬ್ಬರು ಅವರ ಕುರಿತು ಸುಡು ಆಪಾದನೆಗಳ ಮಳೆಗರೆದು ಮುಗಿಸಿ ಅವರ ಆಸನದತ್ತ ತೆರಳಿ ಆಲಿಂಗಿಸಿಕೊಳ್ಳಲು ಮುಂದಾಗುತ್ತಾರೆ. (ಆಲಿಂಗಿಸಿಕೊಳ್ಳಲು ಅನುವಾಗುವಂತೆ) ಎದ್ದು ನಿಲ್ಲಿ ಎದ್ದು ನಿಲ್ಲಿ ಎನ್ನುತ್ತಾರೆ. ಆದರೆ ಈ ಹಠಾತ್ ‘ದಾಳಿ’ಯಿಂದ ಕ್ಷಣಕಾಲ ವಿಚಲಿತರಾಗುವ ಆ ಅವರು ಸಾವರಿಸಿಕೊಳ್ಳುತ್ತಾರೆ.

ಎದ್ದು ನಿಲ್ಲುವುದಿಲ್ಲ. ಕುಳಿತೇ ಇರುವ ಅವರನ್ನು ಬಿಡದೆ ಕುಳಿತಂತೆಯೇ ಕರಡಿಯಂತೆ ತಬ್ಬಿಕೊಂಡು ಇವರು ಎದುರಾಳಿಯನ್ನು ಚಿತ್ತು ಮಾಡಿ ಗೆದ್ದವರಂತೆ ವಾಪಸು ತಮ್ಮ ಆಸನಕ್ಕೆ ಮರಳುತ್ತಾರೆ. ಅದಕ್ಕೆ ಮುನ್ನ ಕುಳಿತಿರುವ ಅವರು ಕುಳಿತಂತೆಯೇ ಇವರನ್ನೇ ವಾಪಸು ಕರೆದು ಕೈ ಕುಲುಕಿ ನಸುನಕ್ಕು ಮೆಲುನುಡಿಯಾಡಿ ಕಳಿಸುತ್ತಾರೆ.

ಮರಳಿ ಆಸೀನರಾದ ಇವರು ತಮ್ಮ ಪಕ್ಷದ ಸಹೋದ್ಯೋಗಿಗಳತ್ತ ತಿರುಗಿ ಚೇಷ್ಟೆಯಿಂದ ಕಣ್ಣು ಮಿಟುಕಿಸುತ್ತಾರೆ. ಸದನದೊಳಗೆ ಸದಾ ಹರಿದಾಡುತ್ತಲೇ ಇರುವ ಕ್ಯಾಮೆರಾ ಕಣ್ಣುಗಳು ತಮ್ಮ ಹುಡುಗಾಟವನ್ನು ಸೆರೆ ಹಿಡಿದಾವು ಎಂಬ ಎಚ್ಚರ ಇವರಿಗೆ ಇರುವುದಿಲ್ಲ. ಆ ಅವರು
ಈ ಇವರ ನಾಟಕೀಯ ಆಲಿಂಗನದ ಬಗ್ಗೆ ಚಿಂದಿ ಉಡಾಯಿಸುತ್ತಾರೆ. ಎದುರಾಳಿಗಳನ್ನು ದಯೆ, ದಾಕ್ಷಿಣ್ಯ ತೋರದೆ ಮಾತುಗಳಲ್ಲಿ ‘ಸಾಯಬಡಿಯುವ’ ಆಟದಲ್ಲಿ ಅವರನ್ನು ಸೋಲಿಸುವವರು ಸದ್ಯಕ್ಕೆ ದೇಶದಲ್ಲಿ ಇಲ್ಲ. ಅವರ ಮಾತುಗಳ ಬೀಸುಗತ್ತಿ ಗಾಳಿಯನ್ನು ಸೀಳುತ್ತಿದ್ದಂತೆ, ತಮ್ಮ ಮೈಯನ್ನೇ ಸೀಳಿತೆಂದು ಚಡಪಡಿಸಿ ಪೆಚ್ಚಾಗುತ್ತಾರೆ ಆಲಿಂಗಿಸಿ ಬೀಗಿದ್ದವರು. ಕತ್ತಿಯನ್ನು ಇರಿದು ಸುಮ್ಮನಾಗುವವರಲ್ಲ ಅವರು, ತಿವಿ ತಿವಿದು ಮೀಟುವವರು.

ಮೈಗಿಳಿದ ಕತ್ತಿಯಲಗು ಮಾಂಸಪೇಶಿಗಳಿಗೆ ಇಳಿದು ಮೀಟಿದ ನಂತರ ಹೊರಡುವ ವೈರಿಯ ಆರ್ತನಾದ ಅವರನ್ನು ಇನ್ನಷ್ಟು ಹುರಿದುಂಬಿಸಿ ನಶೆ-ಉನ್ಮಾದಕ್ಕೆ ಏರಿಸುವುದು ಜನಜನಿತ. ಆಲಿಂಗಿಸಿಕೊಳ್ಳಲೆಂದು ಬಂದು ಎದ್ದೇಳಿ ಎಂದವರು ತಮ್ಮನ್ನು ಪ್ರಧಾನಿ ಪದವಿಯಿಂದಲೇ ಎಬ್ಬಿಸಿ ದಬ್ಬಲೆಂದು ಬಂದಿದ್ದ ಅಧಿಕಾರದಾಹದ ಅಹಂಕಾರಿ ಸಂಚುಕೋರ ಎಂದು ಬಣ್ಣಿಸಿದರು ಅವರು. ತಮ್ಮ ಕಣ್ಣಲ್ಲಿ ಕಣ್ಣಿರಿಸಿ ನೋಡಲಾರದಷ್ಟು ಅಪರಾಧಿ ನೀವು ಎಂದಿದ್ದ ಇವರನ್ನು ಅವರು ಸುಮ್ಮನೆ ಬಿಟ್ಟಾರೆಯೇ? ಇವರ ಪಕ್ಷದ ಚರಿತ್ರೆಯನ್ನೇ ಸುತ್ತಿ ಬೀಸಿ ಬಡಿದರು. ಅವರು ಸುತ್ತಿದ ಈ ಚರಿತ್ರೆಯಲ್ಲಿ ದಿಟವೂ ಇತ್ತು. ಸಟೆಯೂ ಬೆರೆತಿತ್ತು. ಸಮರದಲ್ಲಿ ಎದುರಾಳಿಯ ಮಣ್ಣು ಮುಕ್ಕಿಸುವುದೊಂದೇ ಧ್ಯೇಯ. ಈ ದಿಕ್ಕಿನಲ್ಲಿ ಸಟೆಗಳೂ ದಿವ್ಯಾಸ್ತ್ರಗಳೇ!

ಶುಕ್ರವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದ ಈ ಹಠಾತ್ ನಾಟಕೀಯ ಘಟನೆ ಈಗ ದೇಶಪ್ರಸಿದ್ಧಿ. ಒಬ್ಬರಿಗೆ ಮತ್ತೊಬ್ಬರ ಕುರಿತು ರಾಜಕೀಯ ವೈಷಮ್ಯದ ಪದರದ ಕೆಳಗೆ ಒಂದು ಬೆಚ್ಚನೆಯ ಆದರ ಅಥವಾ ಆಳದ ಮನುಷ್ಯ ಪ್ರೀತಿ ಇರುವುದು ಸಾಧ್ಯವಿಲ್ಲ. ಅಂತಹ ದಟ್ಟ ನಂಜಿನಲ್ಲಿ ಅದ್ದಿ ತೆಗೆದ ರಾಜಕಾರಣದ ಎದುರಾಳಿಗಳಿವರು. ಯಾರು ಕಾರಿದ ನಂಜು ಎಷ್ಟು ಘನಿಷ್ಠ ಮತ್ತು ಎಷ್ಟು ಕನಿಷ್ಠ ಎಂಬುದು ಬೇರೆಯದೇ ಚರ್ಚೆಯ ವಿಷಯ ಆದೀತು.

ಭಾರತದ ಕಡುವೈರಿಯೂ, ಪಾಪಿಸ್ತಾನವೆಂದು ಅಡಿಗಡಿಗೆ ಮೂದಲಿಸುವ ದೇಶವೂ ಆದ ಪಾಕಿಸ್ತಾನದ ಪ್ರಧಾನಿಯನ್ನೇ ಗಟ್ಟಿಯಾಗಿ ಆಲಿಂಗಿಸಿಕೊಂಡ 56 ಅಂಗುಲ ಹರವಿನ ಎದೆಗಾರ ಮೋದಿಯವರನ್ನು ರಾಹುಲ್ ಗಾಂಧಿಯವರ ನಿರಪಾಯಕಾರಿ ಅಪ್ಪುಗೆ ಈ ಪರಿ ಗಲಿಬಿಲಿಗೊಳಿಸಬೇಕಿರಲಿಲ್ಲ.

2015ರಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಹುಟ್ಟಿದ ಹಬ್ಬದ ಸಂದರ್ಭ. ರಷ್ಯಾ ಮತ್ತು ಅಫ್ಗಾನಿಸ್ತಾನದಿಂದ ಮರಳುವ ದಾರಿಯಲ್ಲಿ ಮೋದಿ ಅನಿರೀಕ್ಷಿತವಾಗಿ ಲಾಹೋರಿನ ಅಲ್ಲಮಾ ಇಕ್ಬಾಲ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುತ್ತಾರೆ. ಎದುರುಗೊಂಡ ಷರೀಫ್ ಅವರನ್ನು ಮೋದಿ ಆತ್ಮೀಯವಾಗಿ ತಬ್ಬಿಕೊಂಡಿದ್ದರು. ಮೋದಿಯವರ ವಿಮಾನ ಹೀಗೆ ಅನಿರೀಕ್ಷಿತವಾಗಿ ಇಳಿದಿದ್ದಕ್ಕೆ 2.86 ಲಕ್ಷ ರೂಪಾಯಿಯ ನ್ಯಾವಿಗೇಷನ್ ಶುಲ್ಕವನ್ನು ಪಾಕಿಸ್ತಾನ ವಿಧಿಸಿತ್ತು.

ಷರೀಫ್ ತಾಯಿಗೆ ಶಾಲಿನ ಉಡುಗೊರೆ ಇತ್ತಿದ್ದರು ಮೋದಿ. ಪ್ರತಿಯಾಗಿ ಷರೀಫ್ ಅವರು ಮೋದಿಯವರ ಹೆತ್ತಮ್ಮನಿಗೆ ಬಿಳಿ ಸೀರೆಯ ಕಾಣಿಕೆ ಕಳಿಸಿದ್ದರು. ಮಿತ್ರರನ್ನು ಬದಲಿಸಬಹುದಂತೆ, ನೆರೆಹೊರೆಯನ್ನು ಬದಲಿಸಲು ಬರುವುದಿಲ್ಲ ಎಂಬ ಗಾದೆ ಮಾತಿದೆ. ನೆರೆಹೊರೆಯ ದೇಶಗಳ ಜೊತೆ ಸೌಹಾರ್ದ ಸಂಬಂಧ ಅನಿವಾರ್ಯ.

ಮೋದಿಯವರ ಈ ಭೇಟಿಗೆ ಮುನ್ನ ಭಾರತದ ಪ್ರಧಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿ 10 ವರ್ಷಗಳೇ ಉರುಳಿದ್ದವು. ಭಾರತದೊಳಕ್ಕೆ ಭಯೋತ್ಪಾದನೆಯ ರಫ್ತನ್ನು ನಿಲ್ಲಿಸುವ ತನಕ ಪಾಕಿಸ್ತಾನಕ್ಕೆ ಭೇಟಿಯಿಲ್ಲ ಎಂಬ ನಿರ್ಧಾರವನ್ನು ಏಕಾಏಕಿ ಮುರಿದಿದ್ದರೂ ಮೋದಿ ಭೇಟಿ ಸ್ವಾಗತಾರ್ಹ ಆಗಿತ್ತು. ನಮ್ಮ ಯೋಧರ ಒಂದು ತಲೆಗೆ ಪಾಕಿಸ್ತಾನದ ಯೋಧರ ಹತ್ತು ತಲೆಗಳನ್ನು ಕಡಿದು ತರಬೇಕು ಎಂಬ ಮಾತುಗಳನ್ನು ವಿರೋಧ ಪಕ್ಷದ ನಾಯಕಿಯಾಗಿ ಆಡಿದ್ದ ಸುಷ್ಮಾ ಸ್ವರಾಜ್, ಮೋದಿ ಭೇಟಿಯನ್ನು ಮುತ್ಸದ್ದಿತನದ ನಡೆ ಎಂದು ಬಣ್ಣಿಸಿದ್ದರು. ಬರಾಕ್ ಒಬಾಮ
ಅವರಿಂದ ಹಿಡಿದು ಡೊನಾಲ್ಡ್ ಟ್ರಂಪ್, ಚೀನಾದ ಮುಖ್ಯಸ್ಥ ಷಿ ಜಿನ್ ಪಿಂಗ್, ಜಪಾನಿನ ಶಿಂಜೋ ಅಬೆ, ಉದ್ಯಮಿ ಮುಕೇಶ್ ಅಂಬಾನಿ ಮುಂತಾದವರಿಗೆ ಮೋದಿಯವರ ‘ಕರಡಿಪ್ರೇಮದ ಆಲಿಂಗನ’ಗಳು ಸುಪರಿಚಿತ.

ಉಗ್ರ ಹಿಂದುತ್ವ-ಅಭಿವೃದ್ಧಿಯ ಮತ್ತು ಬರಿಸುವ ಮಿಶ್ರಣದ ಜೊತೆ ಜೊತೆಗೆ ಭಾರತೀಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷವೂ ಮೋದಿಯವರ ರಾಜಕೀಯ ಯಾನದ ಇಂಧನ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ, ಕಾಂಗ್ರೆಸ್‌ಮುಕ್ತ ಆಗದಿರಲಿ ಎಂದು ಅವರು ತಾವು ನಂಬುವ ದೈವವನ್ನು ಅಂತರಂಗದಲ್ಲಿ ಧ್ಯಾನಿಸುತ್ತಿರಬಹುದು.

ಬಡಿದು ಬಾರಿಸುವ ಮತ್ತು ಜಜ್ಜಿ ಕೆಡವುವ ಅವರ ರಾಜಕೀಯ ಪಂದ್ಯದ ಅವಿಭಾಜ್ಯ ಅಂಗ ಕಾಂಗ್ರೆಸ್ ಪಕ್ಷ. ಅದನ್ನು ಹಣಿಯುವ ಕ್ರಿಯೆಯಲ್ಲಿ ಅವರು ತ್ರಿವಿಕ್ರಮನಂತೆ ವಿಜೃಂಭಿಸಿಯಾರು. ದೇಶದ ಸಂಪನ್ಮೂಲಗಳನ್ನು ಕಬಳಿಸಿ ಮದಿಸುವ ಮಧ್ಯಮವರ್ಗದ ಪಾಲಿಗೆ ಬೊಮ್ಮನಹಳ್ಳಿಯ ಕಿಂದರಿ ಜೋಗಿ ಆದಾರು. ಕಳೆದ ಸಂಸತ್ ಅಧಿವೇಶನದಲ್ಲಿ ತೆಲುಗುದೇಶಂ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಹಿಂದೆ ಕಾಂಗ್ರೆಸ್ ಇರಲಿಲ್ಲ. ಈ ಬಾರಿ ನಿರ್ಣಯ ಮಂಡನೆಯಲ್ಲಿ ಕಾಂಗ್ರೆಸ್ ಪಾಲುದಾರ ಆಗಿತ್ತು. ಕಳೆದ ಅಧಿವೇಶನದಲ್ಲಿ ನಿರ್ಣಯ ಮಂಡನೆಗೆ ಅವಕಾಶವನ್ನು ತಿರಸ್ಕರಿಸಿ ಈ ಬಾರಿ ಒಪ್ಪಿಕೊಂಡ ನಡೆಯ ಹಿಂದಿನ ಗುಟ್ಟು ಕಾಂಗ್ರೆಸ್ಸೇ ಎನ್ನುವುದರಲ್ಲಿ ಸಂಶಯವಿಲ್ಲ.

ರಾಜಕಾರಣದ ಕಡು ಹಗೆಯ ನಡುವೆಯೂ ಪರಸ್ಪರ ಮನುಷ್ಯಪ್ರೇಮ ಮೆರೆದ ರಾಜಕೀಯ ಚರಿತ್ರೆಯ ಹಲವು ಉದಾಹರಣೆಗಳನ್ನು ಹಿರಿಯ ಪತ್ರಕರ್ತ ಮಿತ್ರ ರಶೀದ್ ಕಿದ್ವಾಯಿ ಹೆಕ್ಕಿ ಪಟ್ಟಿ ಮಾಡಿದ್ದಾರೆ. 1984-89ರ ಅವಧಿಯಲ್ಲಿ ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ದಿನಗಳು. ಅಟಲ್ ಬಿಹಾರಿ ವಾಜಪೇಯಿ ಮೂತ್ರಕೋಶದ ತೀವ್ರ ವ್ಯಾಧಿಗೆ ತುತ್ತಾಗಿದ್ದರು. ವಿದೇಶದಲ್ಲಿ ನುರಿತ ತಜ್ಞರ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಅವರು ಆಗ ಸಂಸತ್ ಸದಸ್ಯರಾಗಿರಲಿಲ್ಲ.

ಗ್ವಾಲಿಯರ್‌ನಲ್ಲಿ ಮಾಧವರಾವ್ ಸಿಂಧಿಯಾಅವರ ಎದುರು ಸೋತಿದ್ದರು. ವಾಜಪೇಯಿ ಅನಾರೋಗ್ಯದ ವಿಷಯ ಅರಿತ ರಾಜೀವ್, ಅವರನ್ನು ವಿಶ್ವಸಂಸ್ಥೆಗೆ ತೆರಳುವ ಭಾರತೀಯ ನಿಯೋಗದ ಸದಸ್ಯರಾಗಿ ಸೇರಿಸಿದರು. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯಲಿ ಎಂಬುದು ಅವರ ಉದ್ದೇಶವಾಗಿತ್ತು. ಅಂದು ನಾನು ನ್ಯೂಯಾರ್ಕ್‌ಗೆ ಹೋದ ಕಾರಣ ಇಂದು ಜೀವಂತ ಇರುವುದಾಗಿ ಖುದ್ದು ವಾಜಪೇಯಿ ಅವರು ಪತ್ರಕರ್ತ ಕರಣ್ ಥಾಪರ್ ಅವರಿಗೆ ತಿಳಿಸಿದ್ದರು. ಅದು 1991ರಲ್ಲಿ ರಾಜೀವ್‌ ಗಾಂಧಿ ಶ್ರೀಪೆರಂಬದೂರಿನಲ್ಲಿ ಹತ್ಯೆಗೀಡಾಗಿದ್ದ ಸಂದರ್ಭ. 

2001ರಲ್ಲಿ ಸಂಸತ್‌ ಭವನದ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ಮಾಡಿದ್ದರು. ಪ್ರಧಾನಿ ವಾಜಪೇಯಿ ಅವರಿಗೆ ಫೋನ್ ಮಾಡಿ, ‘ನೀವು ಸುರಕ್ಷಿತವಾಗಿದ್ದೀರಾ, ನಾನು ಸುರಕ್ಷಿತ’ ಎಂದು ಸೋನಿಯಾ ಗಾಂಧಿ ವಿಚಾರಿಸಿಕೊಂಡಿದ್ದನ್ನು ವಾಜಪೇಯಿಯವರೇ ನೆನೆದಿದ್ದರು.

 2001ರಲ್ಲಿ ಸೋನಿಯಾ ಆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ. ಹಿಂಜರಿಕೆ, ಸಂಕೋಚ ಅವರನ್ನು ಇನ್ನೂ ಬಿಟ್ಟಿರಲಿಲ್ಲ. ವಿಶ್ವಸಂಸ್ಥೆಯ ಏಯ್ಡ್ಸ್ ಸಮ್ಮೇಳನಕ್ಕೆ ಭಾರತೀಯ ನಿಯೋಗದ ಮುಖ್ಯಸ್ಥರನ್ನಾಗಿ ಸೋನಿಯಾ ಅವರನ್ನು ಅಮೆರಿಕೆಗೆ ಕಳಿಸಿಕೊಟ್ಟರು ಅಂದಿನ ಪ್ರಧಾನಿ ವಾಜಪೇಯಿ. ನಿಯೋಗದ ನೇತೃತ್ವ ತಮ್ಮ ಕೈ ತಪ್ಪಿತೆಂದು ಮುನಿಸಿಕೊಂಡಿದ್ದರು ಆರೋಗ್ಯ ಮಂತ್ರಿ ಡಾ.ಸಿ.ಪಿ.ಠಾಕೂರ್.

ಅಮೆರಿಕೆಯ ಉಪಾಧ್ಯಕ್ಷ ಡಿಕ್ ಚೆನೆ ಅವರ ಮಹತ್ವದ ಭೇಟಿ ಸೋನಿಯಾ ಅವರಿಗೆ ಒದಗಿತ್ತು. ಸಾಲುಗಟ್ಟಿ ಜರುಗಿದ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಸೋನಿಯಾ ಒಮ್ಮೆಯೂ ಬಿಜೆಪಿ ಜೊತೆ ತಮಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಿಲ್ಲ. ಬದಲಾಗಿ ಬಡತನ, ರೋಗರುಜಿನ, ಜನಸಂಖ್ಯಾ ನಿಯಂತ್ರಣ ಕುರಿತು ರಾಷ್ಟ್ರೀಯ ಒಮ್ಮತವನ್ನೇ ಮುಂದೆ ಮಾಡಿದ್ದರು.

ಸಮಕಾಲೀನ ರಾಜಕೀಯ ಇತಿಹಾಸವನ್ನು ಬಗೆದರೆ ಇಂತಹ ಇನ್ನೂ ಹತ್ತಾರು ನಿದರ್ಶನಗಳು ಕಣ್ಣಿಗೆ ಬಿದ್ದಾವು. ಆದರೆ ಅಧಿಕಾರಕೇಂದ್ರಿತ ರಾಜಕಾರಣದ ಹಲ್ಲಾಹಲ್ಲಿಯಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರು ಪರಸ್ಪರರನ್ನು ಕಟುಪದಗಳಲ್ಲಿ ಹಳಿದು ವೈಮನಸ್ಯದ ಹಾದಿಯಲ್ಲಿ ಪ್ರಾಯಶಃ ಮರಳಿ ಬಾರದಷ್ಟು ದೂರ ಸಾಗಿ ಹೋಗಿದ್ದಾರೆ. ಉದಾಹರಣೆಗೆ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಬಣ್ಣಿಸಿದರೆ, ಅವರನ್ನು ‘ವಿದೇಶಿ ಜರ್ಸಿ ಆಕಳು’ ಎಂದು ಬಿಜೆಪಿ ಮೂದಲಿಸಿದ್ದನ್ನು ಕಿದ್ವಾಯಿ ನೆನೆದಿದ್ದಾರೆ.

ತಾವು ಬಡ ಮತ್ತು ವಂಚಿತ ಜನಸಮೂಹಗಳ ಮಿತ್ರನೆಂದೂ, ಅವುಗಳ ಉದ್ಧಾರಕ- ಸಂರಕ್ಷಕನೆಂದೂ ಏಕಕಾಲಕ್ಕೆ ಬಿಂಬಿಸಿಕೊಳ್ಳುವ ಸಂವಹನ ಕಲೆ ಮೋದಿಯವರಿಗೆ ಸಿದ್ಧಿಸಿರುವಷ್ಟು ಬೇರೆ ಯಾರಿಗೂ ಕೈವಶ ಆಗಿಲ್ಲ. ಸದ್ಯದ ಭಾರತ ರಾಜಕಾರಣ ರಂಗಭೂಮಿಯ ಮೇಲಿನ ಮದ್ದಾನೆ ಎಂಬುದು ನಿರ್ವಿವಾದದ ಸಂಗತಿ. ಈಗಲೂ ಅವರ ಎದುರು ನಿಲ್ಲುವ ರಾಜಕೀಯ ಶಕ್ತಿ ದೂರ ದಿಗಂತದಲ್ಲೂ ಕಾಣುತ್ತಿಲ್ಲ. ಆದರೆ ಈ ನಾಯಕ ನಿಂತಿರುವ ನೆಲ ಖುದ್ದು ತಾವು ಮತ್ತು ತಮ್ಮ ಅಂಧಾಭಿಮಾನಿಗಳು ಭಾವಿಸಿರುವಷ್ಟು ಭದ್ರವಿಲ್ಲ.

ಅವರ ಕಾಲ ಕೆಳಗಿನ ನೆಲವನ್ನು ಭ್ರಮನಿರಸನ ಮತ್ತು ಅತೃಪ್ತಿ ಎಂಬ ಎರಡು ಅಂಶಗಳು ಕದಲಿಸತೊಡಗಿವೆ ಎಂಬುದನ್ನು ಉಡಾಫೆಯಿಂದ ತಳ್ಳಿ ಹಾಕದೆ ಎಷ್ಟು ಗಂಭೀರವಾಗಿ ಸ್ವೀಕರಿಸಿದರೆ ಅಷ್ಟು ಒಳ್ಳೆಯದು ಅವರಿಗೆ. ಉಗ್ರ ಹಿಂದುತ್ವವನ್ನು ಆಧರಿಸಿದ ಅಸ್ಮಿತೆಯ ರಾಜಕಾರಣದ ಕೆಚ್ಚಲು ಕೂಡ ಒಂದು ದಿನ ಬರಿದಾಗಬಲ್ಲದು. ಕಾಂಗ್ರೆಸ್ ಪಕ್ಷದ ನೀಲಿ ರಕ್ತದ ಕುಲೀನರ ಎದುರು ನಿಂತು ವಂಶರಾಜಕಾರಣದ ಬಲವಿಲ್ಲದೆ ಪ್ರಧಾನಿ ಹುದ್ದೆಗೆ ಏರಿದ ಬಡತಾಯಿಯೊಬ್ಬಳ ಸರ್ವೇಸಾಧಾರಣ ಕರುಳಕುಡಿ ತಾನು ಎಂಬ ಮಾತುಗಳು ಸದಾ ಕಾಲ ರಾಜಕೀಯ ಫಲ ನೀಡಲಾರವು.

1971, 1977, 1984ರ ಪ್ರತಿಯೊಂದು ಘನ ವಿಜಯವನ್ನು ಗಳಿಸಿದ ಪಕ್ಷಗಳಿಗೆ- ಕೂಟಗಳಿಗೆ ಶೋಚನೀಯ ಸೋಲುಗಳು ಯಾಕೆ ಹಿಂಬಾಲಿಸಿ ಬಂದವು ಎಂಬ ಕಟು ಸತ್ಯವನ್ನು ಯಾವುದೇ ಜಾಣ ರಾಜಕಾರಣಿ ಆತ್ಮಮೋಹದಲ್ಲಿ ಮುಳುಗಿ ನಿರ್ಲಕ್ಷಿಸಲಾರ.

ರಾಹುಲ್-ಮೋದಿಯ ಈ ಒಲ್ಲದ ರಾಜಕೀಯ ಆಲಿಂಗನ ಪ್ರಾಯಶಃ ಭಾರತದ ಸಂಸದೀಯ ಇತಿಹಾಸದಲ್ಲೇ ಮೊದಲನೆಯದು. ಈ ಹಠಾತ್ ರಾಹುಲ್ ನಡೆ ಪೂರ್ವಯೋಜಿತವೋ ಅಥವಾ ಸಮಯಸ್ಫೂರ್ತಿಯದೋ ತಿಳಿದು ಬಂದಿಲ್ಲ. ಆದರೆ ಮೆಚ್ಚುಗೆ-ಟೀಕೆ ಎರಡನ್ನೂ ಸೆಳೆದ ವರ್ತನೆಯಿದು. ಘಟನಾವಳಿಗಳ ಮಾತುಗಳು ಜನಮಾನಸದ ನೆನಪಿನಿಂದ ಮರೆಯಾಗಿ ಚಿತ್ರಗಳಷ್ಟೇ ಉಳಿದುಬಿಡುತ್ತವೆ ಎಂದು ನಾಗಪುರದ ಆರೆಸ್ಸೆಸ್ ಸಮಾರಂಭಕ್ಕೆ ತೆರಳುವ ಮುನ್ನ ಪ್ರಣವ್ ಮುಖರ್ಜಿ ಅವರನ್ನು ಎಚ್ಚರಿಸಿದ್ದರು ಅವರ ಮಗಳು ಶರ್ಮಿಷ್ಠಾ.

ಮೊನ್ನೆಯ ಘಟನೆಯೂ ಅಂತಹುದೇ. ರಾಹುಲ್ ಅವರ ಮೋದಿ ಆಲಿಂಗನದಲ್ಲಿ ಎಷ್ಟು ಪ್ರಾಮಾಣಿಕತೆ ಇತ್ತೋ ಬಲ್ಲವರಾರು. ಆದರೆ ಆಲಿಂಗನಕ್ಕೆ ಮುಂದಾದ ರಾಹುಲ್... ಸ್ಪಂದಿಸದೆ ಕಲ್ಲಿನಂತೆ ಮುಖ ಬಿಗಿಸಿ ಕುಳಿತೇ ಇದ್ದ ಮೋದಿಯವರ ಚಿತ್ರಗಳು ಉಳಿದುಬಿಡಬಹುದು. ಪ್ರಾಮಾಣಿಕತೆ ಇಲ್ಲದೆಯೂ ರಾಹುಲ್ ಜಂಗಮದಂತೆಯೂ, ಒಂದು ವೇಳೆ ಪ್ರಾಮಾಣಿಕತೆ ಇದ್ದೂ ಮೋದಿ ಸ್ಥಾವರದಂತೆಯೂ ಇತಿಹಾಸದಲ್ಲಿ ದಾಖಲಾಗಿಬಿಡಬಹುದು.

ಬರಹ ಇಷ್ಟವಾಯಿತೆ?

 • 42

  Happy
 • 4

  Amused
 • 3

  Sad
 • 1

  Frustrated
 • 10

  Angry

Comments:

0 comments

Write the first review for this !