ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಸಿಕ್ಕಿದ್ದು ಉಂಡುಳಿದ ಅಗಳು!

Last Updated 18 ಫೆಬ್ರುವರಿ 2019, 11:59 IST
ಅಕ್ಷರ ಗಾತ್ರ

ಹೊಟ್ಟೆ ಹಸಿವು ನೀಗುವುದಕ್ಕೆ ಅನ್ನಭಾಗ್ಯ, ಕ್ಷೀರಭಾಗ್ಯ ಸಾಕು. ಅಪೌಷ್ಟಿಕತೆ ತೊಲಗಿಸುವುದಕ್ಕೆ ವಿಧವಿಧವಾದ ಮಾತ್ರೆಗಳುಂಟು. ಆದರೆ ಹಣದ ಹಸಿವು ನೀಗುವುದಕ್ಕೆ ಇನ್ನೂ ಸಿಕ್ಕಿಲ್ಲ ಮುಲಾಮು. ಈ ಹಿಂದೆ ರಾಜೀವ ಗಾಂಧಿ ಅವರು ‘ಅಭಿವೃದ್ಧಿ ಕಾರ್ಯಕ್ಕೆ ನೀಡಿದ ಹಣ ಮಂಜಿನ ಗಡ್ಡೆ ಇದ್ದ ಹಾಗೆ. ಅದು ಕೇಂದ್ರದಿಂದ ಹೊರಟು ಹಳ್ಳಿಗೆ ತಲುಪುವ ವೇಳೆಗೆ ಕರಗಿ ಹೋಗಿರುತ್ತದೆ’ ಎಂದು ಹೇಳಿದ್ದರು. ಈಗ ಆಡಳಿತದಲ್ಲಿ ತಾಪಮಾನ ಇನ್ನೂ ಹೆಚ್ಚಳವಾಗುತ್ತಿರುವುದರಿಂದ ಈ ಮಂಜುಗಡ್ಡೆ ಇನ್ನಷ್ಟು ಬೇಗ ಬೇಗ ಕರಗುತ್ತಿದೆ.

ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣ ಇಂತಿಷ್ಟು ಎಂದು ನಿಗದಿಯಾಗಿ ಬಿಡುಗಡೆಯಾದರೆ ಅದು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹೊಟ್ಟೆ ತುಂಬಿ ಇನ್ನು ಉಣ್ಣಲು ಸಾಧ್ಯವೇ ಇಲ್ಲ ಎಂದಾಗ ಮಾತ್ರ ಅಭಿವೃದ್ಧಿಗೆ ಲಭ್ಯವಾಗುತ್ತದೆ. ಒಂದರ್ಥದಲ್ಲಿ ಈಗ ಅಭಿವೃದ್ಧಿಗೆ ಸಿಕ್ಕುತ್ತಿರುವುದು ಉಂಡು ಉಳಿದ ಹಣ ಮಾತ್ರ. ನಾವು ವೈಚಾರಿಕವಾಗಿ ಮಡೆ ಮಡೆ ಸ್ನಾನವನ್ನು ವಿರೋಧಿಸುತ್ತೇವೆ. ಬ್ರಾಹ್ಮಣರು ಊಟ ಮಾಡಿದ ಎಲೆಗಳ ಮೇಲೆ ಭಕ್ತರು ಉರುಳಾಡುವುದನ್ನು ಖಂಡಿಸುತ್ತೇವೆ. ಆದರೆ ನಾವು ನಡೆಯುವ ರಸ್ತೆಗಳು, ಹತ್ತುವ ಬಸ್ ಗಳು, ನದಿ ದಾಟಿಸುವ ಸೇತುವೆಗಳು, ಸರ್ಕಾರಿ ಕಟ್ಟಡಗಳು, ಶಾಲೆ, ಕಾಲೇಜು ಎಲ್ಲವೂ ಎಂಜಲೆಲೆಗಳೇ ಆಗಿವೆ ಎನ್ನುವುದನ್ನು ಮರೆತುಬಿಡುತ್ತೇವೆ.

ಇತ್ತೀಚೆಗೆ ಬಿಡಿಎ ಎಂಜಿನಿಯರ್ ಮತ್ತು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಮನೆಯ ಮೇಲೆ ಎಸಿಬಿ ದಾಳಿ ಮಾಡಿದಾಗ ಸಿಕ್ಕ ಹಣದ ಥೈಲಿ ಮತ್ತು ಚಿನ್ನದ ಆಭರಣಗಳನ್ನು ಕಂಡಾಗ ನಮ್ಮ ಅಧಿಕಾರಿಗಳ ಹಸಿವು ಎಷ್ಟು ದೊಡ್ಡದು ಎಂದು ಗಾಬರಿಯಾಗುತ್ತದೆ. ಹೀಗೆ ದಾಳಿ ನಡೆದ ಸಂದರ್ಭದಲ್ಲಿಯೇ ಹಳ್ಳಿಹೈದನೊಬ್ಬ ‘ಜನರ ಕಲ್ಯಾಣಕ್ಕಾಗಿ ಮೀಸಲಿಡುವ ಎಲ್ಲ ಹಣವೂ ರಾಜಕಾರಣಿಗಳ, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಹಸಿವಿಗೇ ಬೇಕು. ಅವರು ಕಂಠಮಟ್ಟ ಉಂಡು ವಾಂತಿ ಮಾಡಿದ್ದು ಅಥವಾ ಅವರಿಗೆ ಅಜೀರ್ಣವಾಗಿ ಭೇದಿ ಮಾಡಿಕೊಂಡಿದ್ದು ಮಾತ್ರ ಜನರಿಗೆ ಸಿಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ. ಆತನ ಮಾತಿನಲ್ಲಿ ಸತ್ಯ ಅಡಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಲವಾರು ಬಡಾವಣೆಗಳನ್ನು ನಿರ್ಮಿಸುತ್ತಿದೆ. ಅಲ್ಲಿ ಇನ್ನೂ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಅದಕ್ಕೆ ಸಾಕಷ್ಟು ಹಣ ಬಿಡಿಎ ಬಳಿ ಇಲ್ಲ. ಬಿಡಿಎ ನಿರ್ಮಿಸಿದ ಫ್ಲ್ಯಾಟ್‌ಗಳನ್ನು ಮೂಲ ಸೌಲಭ್ಯಗಳ ಕೊರತೆಯಿಂದಾಗಿಯೇ ಯಾರೂ ಕೇಳುತ್ತಲೂ ಇಲ್ಲ. ಆದರೆ ಬಿಡಿಎ ಎಂಜಿನಿಯರ್ ಮನೆಯಲ್ಲಿ 18.2 ಕೆ.ಜಿ ಚಿನ್ನ ಲಭ್ಯವಾಗುತ್ತದೆ. ಈ ಮಹಾಶಯನ ಬಳಿ 2 ಮನೆ, 8 ನಿವೇಶನ, 14 ಅಪಾರ್ಟ್‌ಮೆಂಟ್‌ಗಳು, 3 ಕಾರು, 3 ಬೈಕು, ಬ್ಯಾಂಕ್ ನಲ್ಲಿ ಲಕ್ಷ ಲಕ್ಷ ಹಣ ಎಲ್ಲ ಇವೆ. ಅದೇ ರೀತಿ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿಯ ಬಳಿಯೂ ₹ 4.5 ಕೋಟಿ ನಗದು, 1.6 ಕೆ.ಜಿ ಚಿನ್ನ, 7.5 ಕೆ.ಜಿ ಬೆಳ್ಳಿ, 3 ಕಾರು, 8 ಮನೆ, 14 ಎಕರೆ ಜಮೀನು ಇದೆ. ಮನೆಯಲ್ಲಿ ಕೋಟಿ ಕೋಟಿ ಹಣ ಇಟ್ಟುಕೊಂಡ ಈ ಅಧಿಕಾರಿಯ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬಹುದು? ಅದಕ್ಕೇ ಗಾಂಧೀಜಿ ‘ಭಾರತ ಶ್ರೀಮಂತ ರಾಷ್ಟ್ರ. ಆದರೆ ಪ್ರಜೆಗಳು ಬಡವರು’ ಎಂದು ಹೇಳಿದ್ದರು.

ಅಧಿಕಾರಿಗಳ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಹಣ, ಚಿನ್ನಾಭರಣ ಲಭ್ಯವಾಗುವುದನ್ನು ನೋಡಿದರೆ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿ ಹೋಗುತ್ತದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ರಾಜಕಾರಣಿಗಳೂ ಸುಭಗರೇನೂ ಅಲ್ಲ. ಅವರ ಬಗ್ಗೆಯೂ ಪ್ರಜೆಗಳಿಗೆ ಒಳ್ಳೆಯ ಅಭಿಪ್ರಾಯ ಏನೂ ಇಲ್ಲ. ‘ನಮ್ಮ ಹಣವನ್ನು ತಿಂದೇ ಇವರು ದೊಡ್ಡವರಾಗಿದ್ದಾರೆ’ ಎಂಬ ಭಾವನೆಯೇ ಇದೆ.

ಇದಕ್ಕಿಂತ ದೊಡ್ಡ ದುರಂತ ಎಂದರೆ ನಮ್ಮಲ್ಲಿ ಎಸಿಬಿ ಇದೆ. ಲೋಕಾಯುಕ್ತ ಇದೆ. ಪೊಲೀಸ್ ಇದೆ. ಆದಾಯ ತೆರಿಗೆ ಅಧಿಕಾರಿಗಳಿದ್ದಾರೆ. ಇಡಿ ಇದೆ. ಆದರೆ ಭಯ ಮಾತ್ರ ಯಾರಿಗೂ ಇಲ್ಲ. ಎಸಿಬಿ ದಾಳಿಯಲ್ಲಿ ಕೋಟಿ ಕೋಟಿ ಪತ್ತೆಯಾಗುತ್ತದೆ. ಆಗ ದೊಡ್ಡ ಸುದ್ದಿಯಾಗುತ್ತದೆ. ಕೆಲ ದಿನ ಅಮಾನತ್ತಿನಲ್ಲಿ ಇದ್ದು ಸುಧಾರಿಸಿಕೊಂಡು ಅದೇ ಅಧಿಕಾರಿ ಮತ್ತೆ ಆಯಕಟ್ಟಿನ ಜಾಗಕ್ಕೇ ಬಂದು ಮೇಯ ತೊಡಗುತ್ತಾನೆ. ಗ್ರಾಮ ಪಂಚಾಯ್ತಿ ಪಿಡಿಒ ನಿಂದ ಹಿಡಿದು ವಿಧಾನಸೌಧದಲ್ಲಿ ಕುಳಿತ ಇಲಾಖಾ ಕಾರ್ಯದರ್ಶಿಯವರೆಗೆ ಎಲ್ಲರೂ ಇದೇ ರೀತಿಯೇ ಆಲೋಚಿಸುತ್ತಾರೆ.

ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯ ಮನೆಯಲ್ಲಿಯೂ ಲೋಡುಗಟ್ಟಲೆ ಚಿನ್ನಾಭರಣ, ಹಣ ಸಿಗುತ್ತದೆ. ವಿಧಾನಸೌಧದಲ್ಲಿ ಕುಳಿತ ಅಧಿಕಾರಿಯ ಮನೆಯಲ್ಲಿಯೂ ಇದಕ್ಕಿಂತ ಜಾಸ್ತಿ ಸಿಗುತ್ತದೆ. ಹೀಗೆ ಎಲ್ಲ ಕಡೆಯೂ ಹಸಿದು ಕುಳಿತ ತಿಮಿಂಗಿಲಗಳೇ ಊಟಕ್ಕೆ ಬಾಯಿ ತೆರೆದು ಕುಳಿತಿರುವಾಗ ಪ್ರಜೆಗಳ ಹಸಿವಿಗೆ ಅನ್ನ ಹಾಕುವವರು ಯಾರು? ಇದೊಂದು ದೊಡ್ಡ ರೋಗ. ಈ ರೋಗಕ್ಕೆ ಮದ್ದು ಸಿಗುತ್ತಲೇ ಇಲ್ಲ.

ಸರಳವಾಗಿ ಬದುಕಿದವರ ಕತೆಗಳು ನಮ್ಮ ನಡುವೆ ಇಲ್ಲವೇ? ಬೇಕಾದಷ್ಟಿವೆ. ಈಗ 70–80 ವರ್ಷಗಳ ಹಿಂದೆ ನಮ್ಮ ನಡುವೆ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಕಾರ್ನಾಡ ಸದಾಶಿವರಾಯರು ಎಲ್ಲ ಬದುಕಿದ್ದರು. ಅವರ ಸರಳತೆಗಳು ನಮಗೆ ಆದರ್ಶವಾಗಬೇಕಿತ್ತು. ಆದರೆ ನಮ್ಮ ಆದರ್ಶಗಳು ಬೇರೆಯದೇ ಆಗಿವೆ.

ಚಂದ್ರಗುಪ್ತ ಮೌರ್ಯನನ್ನು ಅತ್ಯಂತ ಯಶಸ್ವಿ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯ ಎಂದೂ ಅರಮನೆಯಲ್ಲಿ ವಾಸಿಸಲಿಲ್ಲ. ರಾಜಧಾನಿಯಿಂದ ಹೊರಗೆ ಗುಡಿಸಲಿನಲ್ಲಿ ಇದ್ದ. ಒಂದು ದಿನ ಅವನ ಮನೆಗೆ ಕಳ್ಳನೊಬ್ಬ ಬಂದ. ಚಾಣಕ್ಯ ರಾಜಗುರುವಾಗಿದ್ದರಿಂದ ಅವರ ಮನೆಯಲ್ಲಿ ತನಗೆ ಕಳ್ಳತನ ಮಾಡಲು ಸಾಕಷ್ಟು ಇದೆ ಎಂದು ಲೆಕ್ಕಹಾಕಿಯೇ ಆತ ಬಂದಿದ್ದ.

ಗುಡಿಸಲು ಹೊಕ್ಕು ನೋಡಿದರೆ ಚಾಣಕ್ಯ ಹರಕು ಚಾಪೆಯ ಮೇಲೆ ಹರಕು ಕಂಬಳಿ ಹೊದ್ದುಕೊಂಡು ಮಲಗಿದ್ದ. ಚಳಿಗೆ ನಡುಗುತ್ತಲೂ ಇದ್ದ. ಗುಡಿಸಿಲಿನಲ್ಲಿಯೇ ಸಾಕಷ್ಟು ಹೊಸ ಕಂಬಳಿಗಳನ್ನು ಇಡಲಾಗಿತ್ತು. ಅಲ್ಲಿ ಕದಿಯಲು ಏನೂ ಸಿಗದೇ ಇರುವುದರಿಂದ ಹೊಸ ಕಂಬಳಿಗಳನ್ನೇ ಕದ್ದು ಸಾಗಿಸಬಹುದು ಎಂದು ಅದಕ್ಕೆ ಕೈ ಹಾಕಿದ. ಅಷ್ಟರಲ್ಲಿ ರಾಜಭಟರು ಆತನನ್ನು ಹಿಡಿದುಬಿಟ್ಟರು. ಅವನನ್ನು ಚಾಣಕ್ಯನ ಮುಂದೆ ನಿಲ್ಲಿಸಲಾಯಿತು. ಕಳ್ಳ ತನ್ನ ತಪ್ಪನ್ನು ಒಪ್ಪಿಕೊಂಡ. ನಂತರ ಚಾಣಕ್ಯನಲ್ಲಿ ಒಂದು ಪ್ರಶ್ನೆ ಕೇಳಿದ.

‘ನೀವು ಗುಡಿಸಲಿನಲ್ಲಿ ಚಳಿಯಲ್ಲಿ ನಡಗುತ್ತಾ ಮಲಗಿದ್ದಿರಿ. ಹರಕು ಕಂಬಳಿ ಹೊದ್ದುಕೊಂಡಿದ್ದಿರಿ. ಅಲ್ಲಿಯೇ ಹೊಸ ಕಂಬಳಿ ಇದ್ದರೂ ಅದನ್ನು ಹೊದ್ದುಕೊಳ್ಳಲಿಲ್ಲ ಯಾಕೆ?’ ಎಂದು ಕೇಳಿದ. ಅದಕ್ಕೆ ಚಾಣಕ್ಯ ‘ಹೊಸ ಕಂಬಳಿಗಳು ಬಡ ಜನರಿಗೆ ಹಂಚಲು ತಂದು ಇಟ್ಟಿದ್ದು. ಅವು ನನ್ನವಲ್ಲ. ಅದಕ್ಕೇ ಅವುಗಳನ್ನು ಮುಟ್ಟಲಿಲ್ಲ. ನನ್ನದು ಹರಕುಕಂಬಳಿ ಮಾತ್ರ. ಅದಕ್ಕೇ ಅದನ್ನು ಹೊದ್ದು ಮಲಗಿದ್ದೆ’ ಎಂದ.

ಇಂತಹ ಆದರ್ಶಗಳಿಗೆ ನಾವು ಚಾಣಕ್ಯನಷ್ಟು ಹಳೆಯ ಕಾಲಕ್ಕೆ ಹೋಗಬೇಕಿಲ್ಲ. ಸರ್ ಎಂ.ವಿಶ್ವೇಶ್ವರಯ್ಯ ಅವರು ತಮ್ಮ ಸ್ವಂತಕ್ಕೆ ಬೇರೆ ದೀಪ, ಸರ್ಕಾರಿ ಕೆಲಸಕ್ಕೆ ಬೇರೆ ದೀಪ ಬಳಸುತ್ತಿದ್ದರು. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಮನೆಯ ಚಿನ್ನಾಭರಣಗಳನ್ನು ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿದರು. ಅರಮನೆಯ ಚಿನ್ನ ಮಾರಿ ಅಣೆಕಟ್ಟೆ ಕಟ್ಟಿದ ರಾಜರು ಇದ್ದ ಜಾಗದಲ್ಲಿ ಈಗ ಪ್ರಜೆಗಳ ಹಣವನ್ನೇ ತಿಂದು ಅರಮನೆ ಕಟ್ಟಿಕೊಂಡವರು, ಮನೆತುಂಬ ಚಿನ್ನಾಭರಣ ತುಂಬಿಕೊಂಡವರೂ ಇದ್ದಾರೆ.

ಈಗ ಪ್ರಜಾಸತ್ತೆಯಲ್ಲಿ ಪ್ರಜೆ ಸತ್ತಿದ್ದಾನೆ. ಪ್ರಭುಗೆ ಅಂಕುಶವಿಲ್ಲ. ನೆನಪಿಡಿ ರಾಮರಾಜ್ಯ ಆಗಿದ್ದು ಪ್ರಜೆಗಳಿಂದಲೇ ಹೊರತು ರಾಮನಿಂದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT