ಬಾಲ್ಯದಲ್ಲಿ ಬರಬೇಕಾದ ಶಿಸ್ತು

7

ಬಾಲ್ಯದಲ್ಲಿ ಬರಬೇಕಾದ ಶಿಸ್ತು

ಗುರುರಾಜ ಕರಜಗಿ
Published:
Updated:

ಸಾವತ್ಥಿಯಲ್ಲಿ ಒಬ್ಬ ತರುಣ ಯಾವುದೋ ಕಾರಣಕ್ಕೆ ಉತ್ಸಾಹದಿಂದ ಪಬ್ಬಜಿತನಾದ. ಆದರೆ ಅವನಿಗೆ ಸಂಯಮವಿಲ್ಲ, ಕರ್ತವ್ಯದ ಜವಾಬ್ದಾರಿಯಿಲ್ಲ. ಯಾವ ಸಮಯದಲ್ಲಿ ಧ್ಯಾನ ಮಾಡಬೇಕು, ಯಾವ ಕಾಲದಲ್ಲಿ ಪಾಠ ಕಲಿಯಬೇಕು ಎಂಬುದು ತಿಳಿಯದೇ ಒಂದೇ ಸಮನೆ ವಟಗುಟ್ಟುತ್ತ ಆಶ್ರಮದ ಶಾಂತಿಯನ್ನು ಕದಡುತ್ತಿದ್ದ. ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಏನೇನೋ ಗಲಾಟೆ ಮಾಡುತ್ತ ಎಲ್ಲ ಭಿಕ್ಷುಗಳ ಬೇಜಾರಿಗೆ ಕಾರಣನಾಗಿದ್ದ. ಅವರೆಲ್ಲ ಸೇರಿ ಬುದ್ಧನ ಹತ್ತಿರ ಬಂದು ದೂರು ನೀಡಿದಾಗ ಆತ ಅವರಿಗೊಂದು ಕಥೆ ಹೇಳಿದ.

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಬ್ರಾಹ್ಮಣ ಕುಲದಲ್ಲಿ ಹುಟ್ಟಿ, ದೊಡ್ಡವನಾದ ಮೇಲೆ ಸರ್ವವಿದ್ಯಾ ಪಾರಂಗತನಾಗಿದ್ದ. ಐದು ನೂರು ಶಿಷ್ಯರ ಆಶ್ರಮದಲ್ಲಿ ಗುರುವಾಗಿ ತುಂಬಾ ಮರ್ಯಾದೆಯನ್ನು ಪಡೆದಿದ್ದ. ಆ ಆಶ್ರಮದಲ್ಲಿ ಒಂದು ಹುಂಜವಿತ್ತು. ಅದು ಸರಿಯಾಗಿ ಬೆಳಗಾಗುವ ಹೊತ್ತಿಗೆ ಕೂಗುತ್ತಿತ್ತು. ಅದರ ಕೂಗನ್ನು ಕೇಳಿದೊಡನೆ ಶಿಷ್ಯರು ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಧ್ಯಾನ ಮಾಡಿ ವಿದ್ಯೆ ಕಲಿಯಲು ಕೂರುತ್ತಿದ್ದರು. ಒಂದು ರೀತಿಯಲ್ಲಿ ಹುಂಜವೇ ಗಡಿಯಾರದಂತೆ ಕೆಲಸಮಾಡುತ್ತಿತ್ತು. ಹೀಗಿರುವಾಗ ಒಂದು ದಿನ ಹುಂಜ ಸತ್ತು ಹೋಯಿತು. ಈಗ ಶಿಷ್ಯರಿಗೆ ಯಾವಾಗ ಏಳುವುದು ಎಂಬುದು ತಿಳಿಯದಾಯಿತು. ಕೆಲವರು ಮಧ್ಯರಾತ್ರಿಯೇ ಎದ್ದುಬಿಡುತ್ತಿದ್ದರು ಮತ್ತೆ ಕೆಲವರು ಬೆಳಗಾಗಿ ಸೂರ್ಯ ತಲೆಯ ಮೇಲೆ ಬಂದರೂ ಮಲಗಿಯೇ ಇರುತ್ತಿದ್ದರು.

ಆಗ ಶಿಷ್ಯರು ಹುಡುಕಾಡಿ ಮತ್ತೊಂದು ಹುಂಜವನ್ನು ತಂದು ಪಂಜರದಲ್ಲಿಟ್ಟು ಸಾಕಿದರು. ಈ ಹುಂಜದ ಕಥೆಯೇ ಬೇರೆ. ಅದು ಹುಟ್ಟಿದ್ದೇ ಸ್ಮಶಾನದಲ್ಲಿ. ಬೆಳೆದದ್ದೂ ಅಲ್ಲೇ. ಅಲ್ಲಿ ಯಾವಾಗ ಅಂತ್ಯಕ್ರಿಯೆಗೆ ಹೆಣ ಬಂದರೆ ಆಗ ಜೋರಾಗಿ ಕೂಗುತ್ತಿತ್ತು. ಹೆಣಗಳು ಬರುವುದಕ್ಕೆ ನಿರ್ದಿಷ್ಟ ಸಮಯವೇನಾದರೂ ಇರುತ್ತದೆಯೇ? ಹೀಗಾಗಿ ಅದು ಯಾವಾಗ ಬೇಕಾದಾಗ ಕೂಗುತ್ತಿತ್ತು. ಆದ್ದರಿಂದ ಅದು ಆಶ್ರಮಕ್ಕೆ ಬಂದರೂ ಯಾವಾಗ ಕೂಗಬೇಕೆಂಬುದು ತಿಳಿಯಲಿಲ್ಲ. ಅದೊಮ್ಮೆ ಮಧ್ಯರಾತ್ರಿಯೇ ಕೂಗಿಬಿಡುತ್ತಿತ್ತು. ಮತ್ತೊಮ್ಮೆ ಮಧ್ಯಾನ್ಹ ಹನ್ನೆರಡಕ್ಕೆ ಕೂಗುತ್ತಿತ್ತು. ಅದು ನಡುರಾತ್ರಿಯಲ್ಲಿ ಕೂಗಿದಾಗ ವಿದ್ಯಾರ್ಥಿಗಳು ಎದ್ದು ತಮ್ಮ ಪಾಠಕ್ಕೆ ತೊಡಗುತ್ತಿದ್ದರು. ಬೆಳಗಾಗುವ ಹೊತ್ತಿಗೆ ನಿದ್ರೆ ಅವರನ್ನು ಎಳೆಯುತ್ತಿತ್ತು. ಅವರು ಆಗ ಮಲಗಿಕೊಂಡು ಮಧ್ಯಾಹ್ನ ಏಳುತ್ತಿದ್ದರು. ಒಂದು ವಾರದಲ್ಲಿ ಯಾರಿಗೂ ನಿದ್ರೆ ಸರಿಯಾಗಲಿಲ್ಲ, ಪಾಠ ಪ್ರವಚನಗಳು ಸರಿಯಾಗಿ ನಡೆಯಲಿಲ್ಲ. ಗುರುಗಳಿಗೂ ಬಹಳ ಚಿಂತೆಯಾಯಿತು. ಒಂದು ದಿನ ಶಿಷ್ಯರ ಕೋಪ ಮಿತಿಮೀರಿ ಆ ಹುಂಜವನ್ನು ಹಿಡಿದು ಅದರ ಕತ್ತನ್ನು ತಿರುಚಿ ಕೊಂದು ಹಾಕಿಬಿಟ್ಟರು. ತಾವು ಮಾಡಿದ ಕಾರ್ಯವನ್ನು ಗುರುಗಳಿಗೆ ಹೇಳಿ ಕ್ಷಮೆ ಕೋರಿದರು.

ಬುದ್ಧ ಈ ಮೇಲಿನ ಕಥೆಯನ್ನು ತಿಳಿಸಿ ಹೇಳಿದ, ‘ಯಾರು ಬಾಲ್ಯದಲ್ಲೇ ತಂದೆ-ತಾಯಿಯರಿಂದ ಸರಿಯಾದ ಶಿಕ್ಷಣ ಹಾಗೂ ಶಿಸ್ತನ್ನು ಪಡೆಯುವುದಿಲ್ಲವೋ ಅವರು ಅಶಿಕ್ಷಿತರಾಗಿಯೇ ಉಳಿಯುತ್ತಾರೆ. ಅವರೂ ವೃದ್ಧಿಯಾಗುವುದಿಲ್ಲ ಮತ್ತು ತಾವಿರುವ ವ್ಯವಸ್ಥೆಯನ್ನು ಕೆಡಿಸಿಬಿಡುತ್ತಾರೆ – ಈ ನಮ್ಮ ಗದ್ದಲದ ಭಿಕ್ಷುವಿನ ಹಾಗೆ ಮತ್ತು ಸ್ಮಶಾನದ ಹುಂಜದ ಹಾಗೆ. ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಬಹುದೊಡ್ಡ ಶಿಕ್ಷೆಯನ್ನು ಸಮಾಜ ಅವನಿಗೆ ನೀಡುತ್ತದೆ’.

Tags: 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !