ಜನಮತಗಣನೆ ಒಳ್ಳೆಯ ವಿಚಾರ ಅಲ್ಲ

7

ಜನಮತಗಣನೆ ಒಳ್ಳೆಯ ವಿಚಾರ ಅಲ್ಲ

ಆಕಾರ್ ಪಟೇಲ್
Published:
Updated:

ಸಾಮಾನ್ಯವಾಗಿ ದೇಶಗಳು ನೇರವಾಗಿ ನಿರ್ಧಾರಗಳನ್ನು ತೆಗೆದುಕೊಳ‍್ಳುವುದಿಲ್ಲ. ಪ್ರಜಾಪ್ರಭುತ್ವ ದೇಶಗಳು ಏನನ್ನು ಮಾಡಬೇಕೋ ಅವನ್ನು ತಮ್ಮ ಏಜೆಂಟರ ಮೂಲಕ ನಿರ್ಧರಿಸುತ್ತವೆ. ಏಜೆಂಟರು ಎಂದರೆ ಶಾಸನ ರೂಪಿಸುವವರು. ಸರ್ಕಾರವನ್ನು ನೇರವಾಗಿ ಚುನಾಯಿಸುವ ಅಮೆರಿಕದಂತಹ ದೇಶಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ತಾವು ಏನನ್ನು ಮಾಡಲು ಬಯಸುತ್ತೇವೆ ಎಂಬುದನ್ನು ಘೋಷಿಸುತ್ತಾರೆ. ಈ ಪ್ರಣಾಳಿಕೆಯೇ ಅವರ ಆಯ್ಕೆಗೆ ನೆಲೆಗಟ್ಟಾಗುತ್ತದೆ.

ಈ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಆಯ್ಕೆಯಾದವರು ಈಡೇರಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ‘ವಾಷಿಂಗ್ಟನ್‍’ (ಅಮೆರಿಕದ ಅಧಿಕಾರ ಕೇಂದ್ರ) ಯಾವತ್ತೂ ಬದಲಾಗುವುದಿಲ್ಲ ಮತ್ತು ತಮ್ಮ ಮಾತನ್ನು ಆಲಿಸುವುದಿಲ್ಲ ಎಂಬುದು ಅಮೆರಿಕದ ಮತದಾರರ ಸಾಮಾನ್ಯವಾದ ದೂರು. ಅಭ್ಯರ್ಥಿಗಳು ಭರವಸೆಗಳನ್ನು ನೀಡುತ್ತಾರೆ. ಆದರೆ ಅದನ್ನು ಯಾವತ್ತೂ ಈಡೇರಿಸುವುದಿಲ್ಲ.

ರಾಜಕಾರಣಿಗಳು ಮತದಾರರನ್ನು ನಿರ್ಲಕ್ಷಿಸುತ್ತಾರೆ ಎಂಬುದು ಇದರ ಅರ್ಥ ಅಲ್ಲ. ಆದರೆ, ಅಭ್ಯರ್ಥಿಯೊಬ್ಬ ಆಯ್ಕೆಯಾದ ಬಳಿಕ ಆತನ ಪ್ರಣಾಳಿಕೆ ವಾಸ್ತವವನ್ನು ಎದುರಾಗಬೇಕಾಗುತ್ತದೆ. ಪ್ರಬುದ್ಧ ಪ್ರಜಾಪ್ರಭುತ್ವ ವ್ಯವಸ‍್ಥೆಗಳಲ್ಲಿ ಬಹಳ ದೊಡ್ಡ ಬದಲಾವಣೆಗಳಿಗೆ ಅವಕಾಶ ಇರುವುದಿಲ್ಲ. ಹಾಗೆಯೇ, ಇಂತಹ ದೇಶಗಳು ಇಂತಹ ಬದಲಾವಣೆಗಾಗಿ ಯಾವನೋ ಒಬ್ಬ ಅಪ್ರತಿಮ ಮೇಧಾವಿಯನ್ನು ಕಾಯ್ದು ಕುಳಿತುಕೊಂಡೂ ಇರುವುದಿಲ್ಲ.

ಜನಮತಗಣನೆಯಲ್ಲಿ ಮಾತ್ರ ದೇಶಗಳು ನೇರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ರಾಜಕೀಯ ನಿರ್ಧಾರ ಕೈಗೊಳ್ಳಬೇಕಿರುವ ಒಂದು ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕಾಗಿ ಜನಮತಗಣನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಒಂದು ಪ್ರಶ್ನೆಗೆ ‘ಹೌದು’ ಅಥವಾ ‘ಅಲ್ಲ’ ಎಂಬ ಉತ್ತರವನ್ನು ದೇಶವು ನೀಡಬೇಕಾಗುತ್ತದೆ.

2016ರಲ್ಲಿ ಯುನೈಟೆಡ್‍ ಕಿಂಗ್‍ಡಮ್‍ನ (ಅಂದರೆ, ಇಂಗ್ಲೆಂಡ್‍, ಸ್ಕಾಟ್ಲೆಂಡ್‍, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‍) ಜನರು ಜನಮತಗಣನೆಯೊಂದರಲ್ಲಿ ಭಾಗಿಯಾದರು. ಅವರು ಉತ್ತರ ನೀಡಬೇಕಿದ್ದ ಪ್ರಶ್ನೆ ಹೀಗಿತ್ತು: ‘ಐರೋಪ್ಯ ಒಕ್ಕೂಟದ ಭಾಗವಾಗಿ ಯುನೈಟೆಡ್‍ ಕಿಂಗ್‍ಡಮ್‍ ಮುಂದುವರಿಯಬೇಕೇ ಅಥವಾ ಬೇಡವೇ?’

ಈ ಪ್ರಶ್ನೆಯ ಜತೆಗೆ ಎರಡು ಆಯ್ಕೆಗಳನ್ನು ನೀಡಲಾಗಿತ್ತು: ‘ಐರೋಪ್ಯ ಒಕ್ಕೂಟದಲ್ಲಿ ಇರಬೇಕು’ ಮತ್ತು ‘ಐರೋಪ್ಯ ಒಕ್ಕೂಟದಿಂದ ಹೊರಗೆ ಬರಬೇಕು’ ಎಂಬುದು ಈ ಆಯ್ಕೆಗಳಾಗಿದ್ದವು.

ಓದುಗರಿಗೆ ತಿಳಿದಿರುವಂತೆ, ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವ ನಿರ್ಧಾರವನ್ನು ಬ್ರಿಟಿಷರು ಕೈಗೊಂಡರು. 1973ರಿಂದ ಭಾಗವಾಗಿದ್ದ ಒಕ್ಕೂಟದಿಂದ ಹೊರಬರುವುದರ ಪರವಾಗಿ ಶೇ 52 ಮತ್ತು ಒಕ್ಕೂಟದಲ್ಲಿಯೇ ಮುಂದುವರಿಯುವುದರ ಪರವಾಗಿ ಶೇ 48ರಷ್ಟು ಮತಗಳು ಚಲಾವಣೆ ಆಗಿದ್ದವು.

ಒಕ್ಕೂಟದಿಂದ ಹೊರಗೆ ಹೋಗುವ ಬ್ರಿಟಿಷರ ನಿರ್ಧಾರಕ್ಕೆ ಎರಡು ಕಾರಣಗಳಿವೆ. ಪೂರ್ವ ಯುರೋಪ್‌ನ, ಅದರಲ್ಲೂ ಮುಖ್ಯವಾಗಿ ಪೋಲೆಂಡ್‌ನಿಂದ ಬ್ರಿಟನ್‌ನ ಗ್ರಾಮೀಣ ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ಜನರು ವಲಸೆ ಬಂದದ್ದು ಮೊದಲನೇ ಕಾರಣ. ಇದು ಕಾನೂನುಬದ್ಧ ವಲಸೆ. ಐರೋಪ್ಯ ಒಕ್ಕೂಟ ರಚನೆಯ ಹಿಂದೆ ಇದ್ದ ಮುಖ್ಯ ವಿಚಾರವೇ ನಾಲ್ಕು ಸ್ವಾತಂತ್ರ್ಯಗಳು– ಅವೆಂದರೆ, ಸರಕು, ಸೇವೆ, ಜನರು ಮತ್ತು ಬಂಡವಾಳದ ಮುಕ್ತ ಹರಿವು.

ಒಕ್ಕೂಟದ ಸದಸ್ಯತ್ವ ಹೊಂದಿರುವ ದೇಶದ ಪೌರರು ಈ ಗುಂಪಿನಲ್ಲಿರುವ ಯಾವುದೇ ದೇಶದಲ್ಲಿ ನೆಲೆಸಬಹುದು, ಕೆಲಸ ಮಾಡಬಹುದು ಮತ್ತು ಹೂಡಿಕೆ ಮಾಡಬಹುದು. ಇದಕ್ಕೆ ಹೆಚ್ಚಿನ ನಿರ್ಬಂಧಗಳೇನೂ ಇಲ್ಲ. ಕಸ್ಟಮ್ಸ್‌ ಅಥವಾ ಇತರ ಯಾವುದೇ ತಪಾಸಣೆ ಇಲ್ಲದೆ ಯುರೋಪ್‌ನ ಯಾವುದೇ ದೇಶದಿಂದ ಆಮದು ಮತ್ತು ರಫ್ತು ಮಾಡುವುದಕ್ಕೆ ಅವಕಾಶ ಇದೆ.

ಪೋಲೆಂಡ್‌, 2004ರಲ್ಲಿ ಐರೋಪ್ಯ ಒಕ್ಕೂಟವನ್ನು ಸೇರಿಕೊಂಡಿತು. ಈಗ ಬ್ರಿಟನ್‌ನಲ್ಲಿ ಪೋಲೆಂಡ್‌ನ ಎಂಟು ಲಕ್ಷ ಮಂದಿ ಇದ್ದಾರೆ. ಇವರಲ್ಲಿ ಹೆಚ್ಚಿನವರು ಕೌಶಲವಿಲ್ಲದ ಅಥವಾ ಅರೆಕುಶಲಿಗರಾದ ಕಾರ್ಮಿಕರು. ಇವರೆಲ್ಲರೂ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜನರ ವಲಸೆ ಬಗ್ಗೆ ಮುಖ್ಯವಾಗಿ ಬ್ರಿಟನ್‌ನ ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಅತೃಪ್ತಿ ಇತ್ತು. ಹಾಗಾಗಿಯೇ ಇಲ್ಲಿನ ಜನರು ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವುದು) ಪರವಾಗಿ ಭಾರಿ ಪ್ರಮಾಣದಲ್ಲಿ ಮತ ಚಲಾಯಿಸಿದ್ದರು.

ಐರೋಪ್ಯ ಒಕ್ಕೂಟವು ಕೆಲವು ಸಾಮಾನ್ಯ ಕಾನೂನುಗಳು ಮತ್ತು ನಿಯಮಗಳನ್ನು ಹೊಂದಿದೆ. ಇವುಗಳನ್ನು ಸದಸ್ಯ ರಾಷ್ಟ್ರಗಳೆಲ್ಲವೂ ಪಾಲಿಸಬೇಕು. ಇದು ಬ್ರಿಟಿಷರಲ್ಲಿ ಅಸಮಾಧಾನ ಉಂಟು ಮಾಡಿದ್ದು ಎರಡನೇ ಕಾರಣ. ಉದಾಹರಣೆಗೆ ಹೇಳುವುದಾದರೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು. ಐರೋಪ್ಯ ಒಕ್ಕೂಟದಲ್ಲಿ ಮರಣದಂಡನೆ ಇಲ್ಲ. ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ ಕೂಡ ಸಮಾನ ಮಾನದಂಡಗಳ ಪಟ್ಟಿಯನ್ನು ಒಕ್ಕೂಟ ಸಿದ್ಧಪಡಿಸಿದೆ. ಎಲ್ಲರೂ ಇದನ್ನು ಅನುಸರಿಸಬೇಕು.

ಹೊರಗಿನಿಂದ ನೋಡುವಾಗ ಇವು ಎಲ್ಲರಿಗೂ ಪ್ರಯೋಜನಕಾರಿಯಾದ ನಿಯಮಗಳಂತೆ ಕಾಣುತ್ತವೆ. ಆದರೆ, ಇದು ತಮ್ಮ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಎಂದು ಬ್ರಿಟನ್‌ನ ಕೆಲವರು ಭಾವಿಸಿದ್ದಾರೆ. ಈ ಕಾರಣಗಳಿಂದ ಒಕ್ಕೂಟ ತೊರೆಯವುದರ ಪರವಾಗಿ ಬ್ರಿಟನ್‌ನ ಜನರು ಮತ ಹಾಕಿದರು. ಎರಡು ವರ್ಷ ಹಿಂದೆ 2016ರ ಜೂನ್‌ನಲ್ಲಿ ಈ ಜನಮತಗಣನೆ ನಡೆಯಿತು. ಆದರೆ, ಯುರೋಪ್‌ನ ದೇಶಗಳ ಜತೆಗೆ ಹೊಸ ಸಂಬಂಧ ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಬ್ರಿಟನ್‌ಗೆ ಇನ್ನೂ ಸಾಧ್ಯವಾಗಿಲ್ಲ. ಉತ್ತರ ಐರ್ಲೆಂಡ್‌ಗೆ ಸಂಬಂಧಿಸಿದ ವಿಚಾರ ಕ್ಲಿಷ್ಟಕರವಾಗಿ ಕಾಡುತ್ತಿದೆ.

ನಮಗೆಲ್ಲ ತಿಳಿದಿರುವಂತೆ ಇಂಗ್ಲೆಂಡ್‌, ಪಶ್ಚಿಮ ಯುರೋಪ್‌ ಕರಾವಳಿಯ ಎಡಕ್ಕಿರುವ ಒಂದು ದ್ವೀಪದ ಭಾಗ. ಇಂಗ್ಲೆಂಡ್‌ನ ಎಡಕ್ಕೆ ಇನ್ನೊಂದು ದ್ವೀಪ ಐರ್ಲೆಂಡ್‌ ಇದೆ. ಈ ದ್ವೀಪ ಎರಡು ಭಾಗಗಳಾಗಿ ಹಂಚಿ ಹೋಗಿದೆ. ಶೇ 80ರಷ್ಟು ಭಾಗ ಐರ್ಲೆಂಡ್‌ ಗಣರಾಜ್ಯ. ಇದು ಐರೋಪ್ಯ ಒಕ್ಕೂಟದ ಸದಸ್ಯತ್ವ ಇರುವ ಸ್ವತಂತ್ರ ದೇಶ. ಉಳಿದ ಶೇ 20ರಷ್ಟು ಭಾಗ ಬ್ರಿಟನ್‌ನ ಅಧೀನದಲ್ಲಿರುವ ಉತ್ತರ ಐರ್ಲೆಂಡ್‌. ಉತ್ತರ ಐರ್ಲೆಂಡ್‌ನಲ್ಲಿ ಪ್ರೊಟೆಸ್ಟೆಂಟ್‌ ಮತ್ತು ಕ್ಯಾಥೊಲಿಕ್ ಸಮುದಾಯಗಳಿಗೆ ಸೇರಿದವರು ಇದ್ದರೆ ಐರ್ಲೆಂಡ್‌ ಗಣರಾಜ್ಯದ ಬಹುತೇಕ ಜನರು ಕ್ಯಾಥೊಲಿಕ್‌ ಸಮುದಾಯದವರು. ಬ್ರಿಟನ್‌ನ ಬಹುಸಂಖ್ಯಾತರು ಪ್ರೊಟೆಸ್ಟೆಂಟ್‌ ಸಮುದಾಯದವರು. ಇದು ಹಲವು ರೀತಿಯಲ್ಲಿ ಭಾರತ, ಕಾಶ್ಮೀರ ಮತ್ತು ಪಾಕಿಸ್ತಾನವನ್ನು ಹೋಲುತ್ತದೆ.

ಹಲವು ದಶಕಗಳ ಹೊಡೆದಾಟ ಮತ್ತು ಹತ್ಯೆ ಸರಣಿ ಬಳಿಕ 20 ವರ್ಷಗಳ ಹಿಂದೆ, 1998ರಲ್ಲಿ ಮೂರು ಗುಂಪುಗಳು ‘ಗುಡ್‌ಫ್ರೈಡೆ ಅಗ್ರಿಮೆಂಟ್‌’ ಎಂಬ ಶಾಂತಿ ಒಪ್ಪಂದ ಮಾಡಿಕೊಂಡವು. ಈ ಒಪ್ಪಂದ ಪ್ರಕಾರ, ಐರ್ಲೆಂಡ್‌ ಗಣರಾಜ್ಯ ಮತ್ತು ಉತ್ತರ ಐರ್ಲೆಂಡ್‌ ಮಧ್ಯದ ಗಡಿಯನ್ನು ಮುಕ್ತವಾಗಿಸಬೇಕು ಮತ್ತು ಮುಕ್ತ ಸಂಚಾರಕ್ಕೆ ಅವಕಾಶ ಇರಬೇಕು. ಬ್ರಿಟನ್‌ ಮತ್ತು ಐರ್ಲೆಂಡ್‌ ಗಣರಾಜ್ಯಗಳೆರಡೂ ಒಕ್ಕೂಟದ ಸದಸ್ಯತ್ವ ಹೊಂದಿದ್ದುದರಿಂದ ಇದು ಸರಿಯಾದ ನಿರ್ಧಾರವೇ ಆಗಿತ್ತು. 20 ವರ್ಷ ಈ ವ್ಯವಸ್ಥೆಯನ್ನು ಅನುಸರಿಸಲಾಗಿದೆ ಮತ್ತು ಅಲ್ಲಿ ಶಾಂತಿ ನೆಲೆಸಿತ್ತು.

ಈಗ, ಬ್ರಿಟನ್‌ ದೇಶವು ಒಕ್ಕೂಟದಿಂದ ಹೊರಗೆ ಬಂದಿರುವುದರಿಂದ ಬ್ರಿಟನ್‌ ಮತ್ತು ಒಕ್ಕೂಟದ (ಐರ್ಲೆಂಡ್‌ ಗಣರಾಜ್ಯವೂ ಸೇರಿ) ದೇಶಗಳ ನಡುವಣ ಗಡಿಯ ವಿಚಾರವೂ ಮುನ್ನೆಲೆಗೆ ಬಂದಿದೆ.

2019ರ ಮಾರ್ಚ್‌ 29ರಂದು ಬೆಳಿಗ್ಗೆ 11 ಗಂಟೆಗೆ ಒಕ್ಕೂಟದಿಂದ ಬ್ರಿಟನ್‌ ಹೊರಗೆ ಹೋಗಲಿದೆ. ಬಳಿಕ, ಒಕ್ಕೂಟದ ಇತರ ರಾಷ್ಟ್ರಗಳ ಜನರು ಬ್ರಿಟನ್‌ಗೆ ಹೋಗುವುದಕ್ಕೆ ವೀಸಾ, ತಪಾಸಣೆ ಮುಂತಾದ ವ್ಯವಸ್ಥೆಗಳು ಜಾರಿಗೆ ಬರುತ್ತವೆ. ತಮ್ಮನ್ನು ಉದ್ದೇಶಪೂರ್ವಕವಾಗಿ ದೂರ ಇರಿಸಿದ್ದಾರೆ ಎಂದು ಐರಿಷ್‌ ಜನರು ಭಾವಿಸಿದ ಕಾರಣಕ್ಕೇ ಹಿಂದೆ ಹಿಂಸೆ ಉಂಟಾಗಿತ್ತು. ಈಗ, ಮತ್ತೆ ಅದೇ ರೀತಿಯ ಸಿಟ್ಟು ಐರಿಷ್‌ ಜನರಿಗೆ ಬರಬಹುದು.

ಒಕ್ಕೂಟದಿಂದ ಹೊರಗೆ ಹೋಗುವ ನಿರ್ಧಾರಕ್ಕೆ ಬರುವಾಗ ಬ್ರಿಟನ್‌ನ ಜನರು ಈ ವಿಚಾರದ ಬಗ್ಗೆ ಸಮಗ್ರವಾಗಿ ಯೋಚನೆ ಮಾಡಿರಲಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಈ ಸಮಸ್ಯೆಯನ್ನು ಮತ್ತು ಜಗತ್ತಿನ ಅತ್ಯುತ್ತಮ ಮಾರುಕಟ್ಟೆಯ ಜತೆಗಿನ ತನ್ನ ಸಂಬಂಧವನ್ನು ಏಕಾಂಗಿಯಾಗಿ ಹೇಗೆ ನಿಭಾಯಿಸುತ್ತದೆ ಎಂಬುದು ಕೌತುಕದ ಸಂಗತಿ. ಒಂದು ದೇಶವು ಭಾವುಕತೆ ಅಥವಾ ಉದ್ವೇಗದಿಂದ ದಿಢೀರ್ ನಿರ್ಧಾರ ತೆಗೆದುಕೊಂಡರೆ ಅದು ದೀರ್ಘಾವಧಿಯಲ್ಲಿ ಆ ದೇಶಕ್ಕೆ ಹಾನಿಕರವಾಗಿ ಪರಿಣಮಿಸಬಹುದು. ಹಾಗಾಗಿ, ಜನಮತಗಣನೆ ಒಳ್ಳೆಯ ವಿಚಾರ ಅಲ್ಲ ಎಂಬುದೇ ನನ್ನ ಯೋಚನೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !