7

ವಿರೋಧ ಪಕ್ಷಗಳಿಗೆ ಒಂದೇ ಒಂದು ಅಜೆಂಡಾ ಇದ್ದಿದ್ದರೆ...

ಆಕಾರ್ ಪಟೇಲ್
Published:
Updated:

ವಿರೋಧ ಪಕ್ಷಗಳ ‘ಏಕೈಕ ಉದ್ದೇಶ ಮೋದಿ ಅವರನ್ನು ಪದಚ್ಯುತಗೊಳಿಸುವುದು’ ಎಂದು ಪ್ರಧಾನಿಯವರೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಭಾವಿಸಿದ್ದಾರೆ. ಈ ಮಾತನ್ನು ಅವರು ಸಂದರ್ಶನಗಳಲ್ಲಿ ಹಾಗೂ ಭಾಷಣಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಅವರು ಭಾವಿಸಿರುವುದರಲ್ಲಿ ಸತ್ಯವಿದೆಯೇ?

ಬಿಜೆಪಿ ಕೂಡ ಇದನ್ನು ನಂಬಿರುವಂತಿದೆ ಎಂಬುದು ಸತ್ಯ. ಮೇಲೆ ಉಲ್ಲೇಖಿಸಿದ ಇಬ್ಬರೂ ನಾಯಕರು ಇದನ್ನು ಮತ್ತೆ ಮತ್ತೆ ಹೇಳಿದ್ದಾರೆ.

ಅವರು ಮಾಡಿರುವ ಆರೋಪ ಸತ್ಯವಾಗಿರಬಹುದು ಅಥವಾ ಸುಳ್ಳಾಗಿರ ಬಹುದು. ಮೊದಲು ಈ ಆರೋಪ ಸತ್ಯ ಎಂದು ಭಾವಿಸೋಣ. ಈಗ ಎದುರಾಗುವ ಪ್ರಶ್ನೆ ವಿರೋಧ ಪಕ್ಷಗಳು ಮೋದಿ ಅವರನ್ನು ಪದಚ್ಯುತಗೊಳಿಸಲು ಏಕೆ ಬಯಸುತ್ತವೆ ಎಂಬುದು. ಇದಕ್ಕೆ ಎರಡು ಪ್ರಮುಖ ಕಾರಣಗಳು ಇರಬಹುದು.

ಮೊದಲನೆಯದು ನಕಾರಾತ್ಮಕ ಕಾರಣ (ಅಂದರೆ, ದೇಶವನ್ನು ಹಾಳು ಮಾಡಲು ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದರೂ ಮೋದಿ ಎನ್ನುವ ಹೀರೊ ಏಕಾಂಗಿಯಾಗಿ ಅವುಗಳನ್ನು ತಡೆದಿದ್ದಾರೆ).

ಇನ್ನೊಂದು ಸಕಾರಾತ್ಮಕ ಕಾರಣ. ಅಂದರೆ, ಮೋದಿ ನೇತೃತ್ವದ ಸರ್ಕಾರಕ್ಕಿಂತಲೂ ಉತ್ತಮವಾದ ಸರ್ಕಾರವೊಂದನ್ನು ತಾವು ಕೊಡಬಲ್ಲೆವು ಎಂದು ವಿರೋಧ ಪಕ್ಷಗಳು ಭಾವಿಸಿದ್ದು, ಹಾಗಾಗಿ ಅವು ಮೋದಿ ಅವರ ಪದಚ್ಯುತಿ ಬಯಸಿವೆ ಎಂಬುದು. ಮೋದಿ ಅವರು ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಕೆಲವು ವಿರೋಧ ಪಕ್ಷಗಳು ನಂಬಿರುವುದನ್ನು ಈ ಮಾತಿಗೆ ಪುಷ್ಟಿಕೊಡುವಂತೆ ಉಲ್ಲೇಖಿಸಬಹುದು.

ನಿರ್ಭಾವುಕವಾಗಿ ನೋಡಿದ್ದೇ ಆದಲ್ಲಿ, ಮೊದಲ ಕಾರಣವು ತೀರಾ ಸರಳೀಕೃತವಾಗಿ ತೋರುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಲಾಗದು. ಭಾರತ ಎನ್ನುವುದು ಬಹುಕಾಲದ ಪ್ರಜಾತಂತ್ರ ರಾಷ್ಟ್ರ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿನ ರಾಜಕೀಯ ಪಕ್ಷಗಳು ಪ್ರಜಾತಂತ್ರದ ಜೊತೆ ಅನುಸಂಧಾನ ನಡೆಸಿಕೊಂಡು ಬಂದಿವೆ. ಹಲವು ಪಕ್ಷಗಳಿಗೆ ಸ್ಪಷ್ಟ ರಾಜಕೀಯ ಸಿದ್ಧಾಂತ, ಚರಿಷ್ಮಾ ಇರುವ ನಾಯಕರು ಮತ್ತು ನಂಬಿಕಸ್ಥ ಮತದಾರರು ದಶಕಗಳಿಂದಲೂ ಇದ್ದಾರೆ. ಈ ಎಲ್ಲ ಪಕ್ಷಗಳಿಗೆ ಇರುವುದು 'ಒಂದೇ ಅಜೆಂಡಾ' ಎಂದು ಸಾರಾಸಗಟಾಗಿ ಹೇಳಿಬಿಡುವುದು ಇತಿಹಾಸದ ಬಗ್ಗೆ ಕುರುಡಾಗಿ ಮಾತನಾಡಿದಂತೆ ಆಗುತ್ತದೆ.

ಇದಲ್ಲದೆ, 'ಏಕೈಕ ಉದ್ದೇಶ' ಎನ್ನುವುದು ಹಾಗೂ ವಿರೋಧ ಪಕ್ಷಗಳ ಒಕ್ಕೂಟ ಎನ್ನುವುದು ಇನ್ನೂ ಕಾಣಿಸುತ್ತಿಲ್ಲ. ವಿಸ್ತೃತ ನೆಲೆಗಟ್ಟಿನ ರಾಜಕೀಯ ಪಕ್ಷಗಳ ರಾಷ್ಟ್ರಮಟ್ಟದ ಒಕ್ಕೂಟ ಇನ್ನೂ ರೂಪುಗೊಂಡಿಲ್ಲ.

ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕೇರಳದಂತಹ ಹಲವು ರಾಜ್ಯಗಳು ಇಂತಹ ಒಕ್ಕೂಟವನ್ನು ಕಂಡಿಲ್ಲ, ಚುನಾವಣೆಗೂ ಮೊದಲು ಈ ರಾಜ್ಯಗಳಲ್ಲಿ ಇಂಥದ್ದೊಂದು ಒಕ್ಕೂಟ ಹುಟ್ಟಿಕೊಳ್ಳುವ ಸಾಧ್ಯತೆಯೂ ಇಲ್ಲ. ಇಲ್ಲಿ ಹೇಳಿರುವ ರಾಜ್ಯಗಳ ಪೈಕಿ ಹಲವೆಡೆ ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಬೆದರಿಕೆ ಆಗಿರುವುದು ಕಾಂಗ್ರೆಸ್ಸೇ ವಿನಾ ಮೋದಿ ಅಥವಾ ಬಿಜೆಪಿ ಅಲ್ಲ.

ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಕೂಡ ಇಂತಹ ಒಕ್ಕೂಟ ಇಲ್ಲ. ಏಕೆಂದರೆ ಈ ರಾಜ್ಯಗಳ ರಾಜಕೀಯ ಕ್ಯಾನ್ವಾಸ್‌ನಲ್ಲಿ ಇರುವುದು ಎರಡು ಪಕ್ಷಗಳು ಮಾತ್ರ. ಇಲ್ಲೆಲ್ಲ ಕಾಂಗ್ರೆಸ್ ಪಕ್ಷವು ಬಿಜೆಪಿ ಅಥವಾ ಎನ್‌ಡಿಎ ಜೊತೆ ನೇರ ಹಣಾಹಣಿ ನಡೆಸುತ್ತಿದೆ.

ಈಗ ಇನ್ನೊಂದು ಸಾಧ್ಯತೆಯ ಬಗ್ಗೆ ಗಮನ ನೀಡೋಣ. ಅಂದರೆ, ವಿರೋಧ ಪಕ್ಷಗಳ ಕುರಿತ ಆರೋಪ ಸುಳ್ಳು ಎನ್ನುವ ಸಾಧ್ಯತೆಯ ಬಗ್ಗೆ. ಅಂದರೆ, ಮೋದಿ ಅವರನ್ನು ಕೆಳಗಿಳಿಸುವ ಏಕೈಕ ಉದ್ದೇಶ ವಿರೋಧ ಪಕ್ಷಗಳದ್ದಲ್ಲ ಎಂಬ ಸಾಧ್ಯತೆ. ಮೋದಿ ಅವರನ್ನು ವಿರೋಧಿಸಲು ವಿರೋಧ ಪಕ್ಷಗಳು ಅಸಹಜ ಎನ್ನುವಂಥದನ್ನೂ ಮಾಡುತ್ತಿವೆ ಎಂಬುದನ್ನು ನಿರಾಕರಿಸಲು ಆಗದು. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ರಾಜಕೀಯದಲ್ಲಿ ಸಹಜ ಸ್ನೇಹಿತರಂತೂ ಅಲ್ಲ. ಅವು ತಮ್ಮ ಬಹುಪಾಲು ರಾಜಕೀಯ ಇತಿಹಾಸದಲ್ಲಿ ಪ್ರತಿಸ್ಪರ್ಧಿಗಳಾಗಿಯೇ ಸೆಣಸಿವೆ. ಹೀಗಿರುವಾಗ, ಅವು ಈಗ ಒಟ್ಟಾಗುತ್ತಿರುವುದು ಏಕೆ?

ಮೋದಿ ಅವರು ಪ್ರವರ್ಧಮಾನಕ್ಕೆ ಬರುವುದಕ್ಕಿಂತ ಮೊದಲಿನಿಂದಲೂ ವಿರೋಧ ಪಕ್ಷಗಳು ಹೀಗೆ ಮಾಡುತ್ತ ಬಂದಿವೆ ಎಂಬುದು ಈ ಪ್ರಶ್ನೆಗೆ ಇರುವ ಉತ್ತರ. 1989ರವರೆಗೆ ಭಾರತದ ರಾಜಕೀಯದಲ್ಲಿ ಇದ್ದ ಪ್ರಮುಖ ಗುಂಪುಗಳೆಂದರೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು. ಇಂದಿರಾ ಮತ್ತು ರಾಜೀವ್‌ ಅವರ ಪಕ್ಷವು ಹಟಮಾರಿಯೂ, ಬಹುತೇಕ ಸಂದರ್ಭಗಳಲ್ಲಿ ಅಪಾಯಕಾರಿಯೂ ಆಗಿತ್ತು. ಏಕೆಂದರೆ ಆ ಪಕ್ಷ ದಶಕಗಳ ಕಾಲ ಪ್ರಾಬಲ್ಯ ಹೊಂದಿತ್ತು.

ಬಿಜೆಪಿಯು ಅಯೋಧ್ಯೆಯ ವಿಚಾರವನ್ನು ಕೈಗೆತ್ತಿಕೊಂಡು, ಬಾಬ್ರಿ ಮಸೀದಿಯನ್ನು ಉರುಳಿಸಿದ ನಂತರ ಈ ರಾಜಕೀಯ ಸಮೀಕರಣ ಬದಲಾಯಿತು. ಕಮ್ಯುನಿಸ್ಟರು ಹಾಗೂ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿಯಿಂದ ದೂರ ಸರಿಯಲಾರಂಭಿಸಿದವು. ಏಕೆಂದರೆ, ಬಿಜೆಪಿಯು ದೇಶದ ಸಾಮಾಜಿಕ ವ್ಯವಸ್ಥೆಗೆ ಅಪಾಯಕಾರಿ ಎಂದು ಅವು ಭಾವಿಸಿದವು. ಆ ಪಕ್ಷಗಳು ಹೀಗೆ ಭಾವಿಸಿದ್ದು ತಪ್ಪು ಎಂದು ಕೆಲವರು ವಾದಿಸಬಹುದು. ಆದರೆ ಮೋದಿ ಅವರೊಬ್ಬರ ಕಾರಣಕ್ಕಾಗಿಯೇ ವಿರೋಧ ಪಕ್ಷಗಳು ಒಗ್ಗೂಡಲು ಆರಂಭಿಸಿದವು ಎಂದು ಹೇಳುವುದು ತಪ್ಪಾಗುತ್ತದೆ. ಬಿಜೆಪಿಯನ್ನು ಅಸ್ಪೃಶ್ಯ ಪಕ್ಷದಂತೆ ಕಾಣುವುದನ್ನು ಎಲ್‌.ಕೆ. ಅಡ್ವಾಣಿ ಅವರು 'ಪಕ್ಷವೊಂದನ್ನು ಏಕಾಂಗಿಯಾಗಿಸುವ ಅತ್ಯುತ್ಕೃಷ್ಟ ನಿದರ್ಶನ' ಎಂದು ಬಣ್ಣಿಸಿದ್ದರು. ಆದರೆ ಅವರು ಹಾಗೆ ಹೇಳಿದ್ದು ಪದಗಳ ಜಾಣತನದ ಬಳಕೆಯಷ್ಟೇ ಆಗಿತ್ತು. ಹಿಂದುತ್ವ ಎನ್ನುವುದು ಭಾರತದ ಬಹುತೇಕರಲ್ಲಿ ತಲೆಬಿಸಿ ಉಂಟುಮಾಡುತ್ತದೆ. ರಾಜಕೀಯ ಪಕ್ಷಗಳಲ್ಲಿ ಕೂಡ ತಳಮಳಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಇರುವ ವಿವರಣೆ ಇದೊಂದೇ.

ಬಾಬ್ರಿ ಘಟನೆಯ ನಂತರ ಬಿಜೆಪಿ ಪಡೆದ ಯಶಸ್ಸು, ಆ ಪಕ್ಷ ಅಧಿಕಾರದ ಹತ್ತಿರಕ್ಕೆ ಬಂದಾಗಲೆಲ್ಲ ಒಂದೆರಡು ಪಕ್ಷಗಳು ಬಿಜೆಪಿ ಜೊತೆ ಸೇರಿಕೊಳ್ಳಲಿಕ್ಕೆ ಮುಂದಾಗುವುದಕ್ಕೆ ಕಾರಣವಾಯಿತು. ವಾಜಪೇಯಿ ಅವಧಿಯಲ್ಲಿಯೂ ಇದು ಕಂಡುಬಂತು.

ಈಗ ನಿತೀಶ್ ಕುಮಾರ್ ಅವರ ಪಕ್ಷವೂ ಅದನ್ನೇ ಮಾಡುತ್ತಿದೆ. ಆದರೆ, ಅಕಾಲಿದಳ ಮತ್ತು ಶಿವಸೇನೆಯನ್ನು ಹೊರತುಪಡಿಸಿದರೆ ಬಿಜೆಪಿಯು ಶಾಶ್ವತ ಸ್ನೇಹಿತರನ್ನು ಸಂಪಾದಿಸಿಲ್ಲ. ಏಕೆಂದರೆ, ಹಿಂದುತ್ವದ ರಾಜಕಾರಣವು ಭಾರತೀಯ ಸಮಾಜಕ್ಕೆ ಏನು ಮಾಡಬಲ್ಲದು ಎಂಬುದರ ಬಗ್ಗೆ ಬಹುತೇಕ ರಾಜಕೀಯ ಪಕ್ಷಗಳು ನಿಜಕ್ಕೂ ಕಳವಳ ಹೊಂದಿವೆ.

'ಏಕೈಕ ಉದ್ದೇಶ' ಎಂಬುದರ ಬಗ್ಗೆ ಮೋದಿ ಮತ್ತು ಶಾ ಅವರಿಗೆ ನಿಜಕ್ಕೂ ನಂಬಿಕೆ ಇದ್ದರೆ ಅವರು ಒಂದು ವಿಷಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದುತ್ವದ ಬಹುಸಂಖ್ಯಾತವಾದಿ ರಾಜಕಾರಣವನ್ನು ವಿರೋಧಿಸುವವರು ಇನ್ಯಾವುದೇ ಪಕ್ಷದ ಬೆಂಬಲಕ್ಕೆ ನಿಲ್ಲಬಹುದು. ಕಮ್ಯುನಿಸ್ಟರು, ಸಮಾಜವಾದಿಗಳು, ಜಾತಿ ಆಧಾರಿತ ಪಕ್ಷಗಳು, ಪ್ರಾದೇಶಿಕ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು, ಭಾಷೆ ಆಧಾರದಲ್ಲಿ ಕೆಲಸ ಮಾಡುವ ಪಕ್ಷಗಳು ಅಥವಾ ಇನ್ಯಾವುದೇ ನೆಲೆಯಲ್ಲಿ ಕೆಲಸ ಮಾಡುವ ಪಕ್ಷಗಳನ್ನು ಅವರು ಬೆಂಬಲಿಸಬಹುದು. ಆದರೆ, ಹಿಂದುತ್ವದ ರಾಜಕಾರಣವನ್ನು ಬೆಂಬಲಿಸುವವರಿಗೆ ಇರುವುದು ಒಂದೇ ಒಂದು ಪಕ್ಷ - ಅದು ಬಿಜೆಪಿ.

ಬಿಜೆಪಿಯನ್ನು ಬೆಂಬಲಿಸಿದ ಶೇಕಡ 31ರಷ್ಟು ಜನ ಮಾಡುತ್ತಿರುವುದು ಪವಿತ್ರವೂ, ರಾಷ್ಟ್ರೀಯತೆಯ ಪರವೂ ಆಗಿರುವ ಕೆಲಸ ಹಾಗೂ ಇತರ ಶೇಕಡ 69ರಷ್ಟು ಜನ ಮಾಡುತ್ತಿರುವುದು ಅವಕಾಶವಾದಿತನದ ಕೆಲಸ ಎಂದು ಭಾವಿಸುವುದು ಭಾರತದ ರಾಜಕಾರಣವನ್ನು ಪ್ರಬುದ್ಧವಾಗಿ ಗ್ರಹಿಸುವ ಬಗೆಯಲ್ಲ.

ಎಲ್ಲ ರಾಜಕೀಯ ಪಕ್ಷಗಳಿಗೂ ಅಧಿಕಾರ ಬೇಕು, ಅವು ಅಧಿಕಾರಕ್ಕಾಗಿ ಅಸಹಜ ಕೆಲಸಗಳನ್ನು ಮಾಡುತ್ತವೆ ಎಂಬುದು ನಿಜ. ಈ ಮಾತು ಮೋದಿ ಮತ್ತು ಬಿಜೆಪಿಗೂ ಅನ್ವಯ ಆಗುತ್ತದೆ. ಅವರು ಸರ್ಕಾರ ರಚಿಸಿರುವುದು ವಿಭಿನ್ನ ಕಾರಣಗಳಿಗಾಗಿ ಅಲ್ಲ. ತಾವು ಸಕಾರಾತ್ಮಕ ಪರಿವರ್ತನೆ ತರಬಲ್ಲೆವು ಎಂದು ಎಲ್ಲ ಪಕ್ಷಗಳೂ ಭಾವಿಸುತ್ತವೆ, 'ಮಹತ್ವದ ಕೊಡುಗೆ ನೀಡಿದ ನಾಯಕ' ಎಂದು ತಮ್ಮನ್ನು ಗುರುತಿಸಲಿ ಎಂದೇ ಎಲ್ಲ ರಾಜಕೀಯ ನಾಯಕರೂ ಬಯಸುತ್ತಾರೆ.

ಪಕ್ಷಗಳು ರಚನೆಯಾಗುವುದು ಈ ಉದ್ದೇಶಕ್ಕಾಗಿ, ಅವು ಕೆಲಸ ಮಾಡುವುದೂ ಇದೇ ಉದ್ದೇಶದಿಂದ. ಒಬ್ಬ ವ್ಯಕ್ತಿಯ ವಿರುದ್ಧ ಅಜೆಂಡಾ ಇಟ್ಟುಕೊಂಡು ಅಲ್ಲ!

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !