ಭಾನುವಾರ, ಡಿಸೆಂಬರ್ 8, 2019
20 °C

ಬಿಜೆಪಿಯ ಸಿದ್ಧಾಂತ ಬಲಪಂಥವಲ್ಲ, ಹಿಂದುತ್ವ

ಆಕಾರ್ ಪಟೇಲ್
Published:
Updated:

ಕಳೆದ ವಾರ ನಾನು ಒಂದು ಆಸಕ್ತಿಕರ ಚರ್ಚೆಯಲ್ಲಿ ಭಾಗಿಯಾಗಿದ್ದೆ. ಈ ಚರ್ಚೆಯಲ್ಲಿ ಅರುಣಾ ರಾಯ್, ಕರ್ನಾಟಕ ಸಂಗೀತ ಗಾಯಕ ಮತ್ತು ಬರಹಗಾರ ಟಿ.ಎಂ. ಕೃಷ್ಣ, ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಅವರೂ ಇದ್ದರು. ರಾಯ್ ಮತ್ತು ನಿಖಿಲ್ ಅವರು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಜೊತೆ ಗುರುತಿಸಿಕೊಂಡವರು. ಈ ಸಂಘಟನೆ ನಡೆಸಿದ ಹೋರಾಟದ ಕಾರಣವಾಗಿ ನಮ್ಮ ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು.

ಹಿಂದಿನ ಸರ್ಕಾರದ ಅವಧಿಯಲ್ಲಿ ರಾಯ್ ಅವರು ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು. ಈ ಮಂಡಳಿಯ ಮಾರ್ಗದರ್ಶನದ ಅಡಿ ನಮ್ಮ ದೇಶವು ನರೆಗಾ, ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಂತಹ ಮಾನವೀಯ ಕಾನೂನುಗಳನ್ನು ರೂಪಿಸಿತು. ಈ ಕಾಯ್ದೆಗಳ ಸಾಲಿಗೆ ಆರ್‌ಟಿಐ ಕೂಡ ಸೇರುತ್ತದೆ ಎಂಬುದು ನಿಜ. ನಮ್ಮ ದೇಶದ ಇತಿಹಾಸದಲ್ಲಿ ಇಂತಹ ಅದ್ಭುತ ಕಾನೂನುಗಳು ರೂಪುಗೊಂಡ ಐದು ವರ್ಷಗಳ ಮತ್ತೊಂದು ಅವಧಿ ನನ್ನ ನೆನಪಿಗೆ ಬರುತ್ತಿಲ್ಲ (ಕಾನೂನುಗಳನ್ನು ರೂಪಿಸುವುದು ಸರ್ಕಾರದ ಪ್ರಾಥಮಿಕ ಕೆಲಸ ಎಂಬುದು ನಿಜ).

ಚರ್ಚೆಯ ಕೊನೆಯಲ್ಲಿ ರಾಯ್‌ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ರಾಯ್ ಅವರು ಭಾರತದಲ್ಲಿನ ಬಲಪಂಥವನ್ನು ಮಾತ್ರ ವಿರೋಧಿಸುವುದು ಏಕೆ, ಎಡಪಂಥವನ್ನು ಏಕೆ ವಿರೋಧಿಸುವುದಿಲ್ಲ ಎಂಬುದು ಆ ಪ್ರಶ್ನೆ. ಈ ಪ್ರಶ್ನೆ ಮಧ್ಯಮ ಪಂಥೀಯರನ್ನು ಏಕಾಂಗಿಯಾಗಿಸಿತು.

ತಾವು ಎಡಪಂಥದ ಜೊತೆ ಗುರುತಿಸಿಕೊಂಡಿರುವ ಯಾವ ಪಕ್ಷದ ಜೊತೆಯೂ ಯಾವುದೇ ಸಂದರ್ಭದಲ್ಲೂ ನಂಟು ಹೊಂದಿರಲಿಲ್ಲ ಎಂದು ರಾಯ್ ಅವರು ಉತ್ತರ ನೀಡಿದರು. ಬಡವರ ಶಿಕ್ಷಣ ಅಥವಾ ಆಹಾರದ ಹಕ್ಕುಗಳ ಬಗ್ಗೆ ದನಿ ಎತ್ತಿದವರನ್ನೆಲ್ಲಾ ಎಡಪಂಥೀಯರು ಎಂದು ಪರಿಗಣಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ನಂತರ ರಾಯ್‌ ಕೇಳಿದರು. ಅಥವಾ ರಾಯ್ ಅವರು ಇಂಥದ್ದೊಂದು ವಾದವನ್ನು ಮುಂದಿಟ್ಟರು. ಶಿಕ್ಷಣ, ಆಹಾರ... ಇವೆಲ್ಲ ಮನುಷ್ಯನ ಮೂಲಭೂತ ಹಕ್ಕುಗಳು. ಇವು ಎಲ್ಲರಿಗೂ ಸಿಗಬೇಕು. ಇಂತಹ ಹಕ್ಕುಗಳಿಗೆ ಆಗ್ರಹ ಮುಂದಿಟ್ಟಾಗ ಯಾವುದೇ ಸಿದ್ಧಾಂತದ ಜೊತೆ ಗುರುತಿಸಿಕೊಂಡ ಯಾವುದೇ ವ್ಯಕ್ತಿ ಕೋಪಗೊಳ್ಳುವ ಅಗತ್ಯ ಇಲ್ಲ.

ಅವರು ಹೀಗೆ ಹೇಳಿದ್ದು ಬಹಳ ಸೂಕ್ತ ಎಂಬುದು ನನ್ನ ಅನಿಸಿಕೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ‘ಬಲಪಂಥ’ ಮತ್ತು ‘ಬಲಪಂಥೀಯ’ ಎನ್ನುವ ಪದಗಳು ಬಳಕೆಯಾಗುವುದು ಹೆಚ್ಚಾಗಿದೆ ಎಂಬ ಅಂಶ ನನ್ನಲ್ಲಿ ಆಸಕ್ತಿ ಕೆರಳಿಸಿತು. ಅವರು ಹೇಳುತ್ತಿರುವುದು ಏನು ಎಂಬುದನ್ನು ನಾವು ಭಾರತೀಯ ಸಂದರ್ಭದಲ್ಲಿ ನಿರಂತರವಾಗಿ ಪರಿಶೀಲನೆಗೆ ಒಡ್ಡುತ್ತಿರಬೇಕು.

ಈ ಪದದ ಬಳಕೆ ಶುರುವಾದ ಯುರೋಪಿನಲ್ಲಿ (ಇದು ಅಲ್ಲಿ ಬಳಕೆಯಾಗಿದ್ದು ಫ್ರೆಂಚ್ ಸಂಸತ್ತಿನಲ್ಲಿದ್ದ ಆಸನಗಳ ಹಂಚಿಕೆಯ ಕಾರಣದಿಂದಾಗಿ) ಹಾಗೂ ಅಮೆರಿಕದಲ್ಲಿ, ರಾಜಕೀಯವಾಗಿ ‘ಬಲ’ ಎನ್ನುವುದಕ್ಕೆ ನಿರ್ದಿಷ್ಟವಾದ ಅರ್ಥ ನೀಡಲಾಗಿತ್ತು. ಸಾಮಾಜಿಕ ವರ್ಗೀಕರಣವನ್ನು ಉಳಿಸುವ, ಸಂಪ್ರದಾಯವಾದವನ್ನು ಬಲಪಡಿಸುವ ಅಭಿಯಾನ ಎನ್ನುವ ಅರ್ಥವನ್ನು ಅದು ಹೊಂದಿತ್ತು. ಹಾಗಾದರೆ, ನಾವು ಈ ಪದದ ಅರ್ಥವನ್ನು ಭಾರತದ ಸಂದರ್ಭದಲ್ಲಿ ಹೇಗೆ ಗ್ರಹಿಸಬೇಕು, ಭಾರತದಲ್ಲಿ ಇದರ ಬೆಂಬಲಿಗರು ಬಯಸುವುದು ಏನನ್ನು?

ಅದನ್ನು ಪರಿಶೀಲಿಸುವ ಮೊದಲು ನಾವು ‘ಉದಾರವಾದಿ’ ಮತ್ತು ‘ಎಡಪಂಥ’ ಎನ್ನುವ ಪದಗಳ ಅರ್ಥವನ್ನು ಮೊದಲು ಕಂಡುಕೊಳ್ಳಬೇಕು. ‘ಎಡ’ ಎನ್ನುವ ಪದದ ಮೂಲ ಇರುವುದು ಫ್ರೆಂಚ್‌ ಸಂಸತ್ತಿನಲ್ಲಿನ ಆಸನಗಳ ಹಂಚಿಕೆ ವ್ಯವಸ್ಥೆಯಲ್ಲಿಯೇ. ನಾಡಿನಲ್ಲಿ ಸಮಾಜವಾದ ಹೆಚ್ಚಾಗಿ ಇರಬೇಕು ಎಂಬ ಬಯಕೆ ಹೊಂದಿರುವವರು ಎನ್ನುವ ಅರ್ಥ ಇಂದು ಇದೆ. ಅಂದರೆ, ಇದರ ಅರ್ಥ ಸೇವಾ ವಲಯದ ಮೇಲೆ ಪ್ರಭುತ್ವದ ಒಡೆತನ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ಆ ಮೂಲಕ ಪ್ರಭುತ್ವವು ಪ್ರಜೆಗಳಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುತ್ತದೆ. ‘ಖಾಸಗಿಯವರು ನಡೆಸುವ ವಾಣಿಜ್ಯ ವಹಿವಾಟುಗಳ ಬಗ್ಗೆ ಅನುಮಾನ’ ಎನ್ನುವ ಅರ್ಥವನ್ನೂ ಇದು ಹೊತ್ತುಕೊಂಡಿದೆ. ಹಾಗೆಯೇ, ಪ್ರಭುತ್ವವು ಶ್ರಮಿಕರು ಹಾಗೂ ದುಡಿಯುವ ವರ್ಗಗಳ ಹಿತಾಸಕ್ತಿ ಕಾಯಬೇಕು ಎಂಬುದನ್ನೂ ಒತ್ತಿ ಹೇಳುತ್ತದೆ.

ಭಾರತದಲ್ಲಿನ ಎಡಪಂಥ (ಮತ್ತು ವಿಶ್ವದ ಇತರೆಡೆ ಕೂಡ) ತನ್ನನ್ನು ಈ ಅರ್ಥದ ಜೊತೆ ಗುರುತಿಸಿಕೊಳ್ಳುತ್ತದೆ ಹಾಗೂ ‘ಎಡಪಂಥೀಯ’ ಎಂದು ಕರೆಸಿಕೊಳ್ಳಲು ಅದಕ್ಕೆ ಯಾವುದೇ ಹಿಂಜರಿಕೆ ಇಲ್ಲ.

‘ಉದಾರವಾದಿ’ ಎನ್ನುವ ಪದ ಕೂಡ ‘ಎಡಪಂಥೀಯ’ ಎನ್ನುವ ಪದದಂತೆಯೇ ವೈಶ್ವಿಕವಾಗಿದೆ. ‘ತನ್ನ ಅಭಿಪ್ರಾಯ ಹಾಗೂ ವರ್ತನೆಗಿಂತ ಭಿನ್ನವಾಗಿದ್ದನ್ನು ಗೌರವಿಸಲು ಅಥವಾ ಒಪ್ಪಿಕೊಳ್ಳಲು ಸಿದ್ಧವಿರುವ’ ಎಂದು, ‘ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಪರ ಇರುವ’ ಎಂದು ‘ಉದಾರವಾದಿ’ ಪದಕ್ಕೆ ಶಬ್ದಕೋಶಗಳು ಅರ್ಥ ವಿವರಣೆ ನೀಡಿವೆ. ಉದಾರವಾದಿಗಳನ್ನು ‘ಉದಾರವಾದಿ’ ಎಂದು ಕರೆಯುವುದಕ್ಕೆ ಅವರ ತಕರಾರು ಇಲ್ಲ. ಹಾಗೆಯೇ, ಈ ಪದಕ್ಕೆ ಶಬ್ದಕೋಶಗಳಲ್ಲಿ ಇರುವ ಅರ್ಥವನ್ನು ಗಮನಿಸಿದಾಗ, ಉದಾರವಾದಿ ಆಗಿರುವುದು ಹಂಬಲಿಸುವ ಮೌಲ್ಯ ಎಂಬುದು ಕೂಡ ಗೊತ್ತಾಗುತ್ತದೆ.

ನಾವು ಈಗ ‘ಬಲಪಂಥ’ ಎನ್ನುವ ಪದದ ಕಡೆ ಕಣ್ಣು ಹಾಯಿಸೋಣ. ಈ ಪದವನ್ನು ಭಾರತದಲ್ಲಿ ಬಿಜೆಪಿ ಎನ್ನುವ ಒಂದು ಪಕ್ಷದ ರಾಜಕೀಯವನ್ನು ಮಾತ್ರ ವಿವರಿಸಲು ಬಳಸಲಾಗುತ್ತಿದೆ. ಇಲ್ಲಿ ಒಂದು ಕುತೂಹಲದ ಸಂಗತಿ ಇದೆ. ಬಿಜೆಪಿಯು ತನ್ನ ಸಿದ್ಧಾಂತವು ಬಲಪಂಥೀಯ ಎಂದೋ, ಸಂಪ್ರದಾಯವಾದಿ ಎಂದೋ ಹೇಳಿಕೊಳ್ಳುವುದಿಲ್ಲ. ಬಿಜೆಪಿಯ ಅಜೆಂಡಾಗಳು ಅಥವಾ ನೀತಿಗಳು ಕೂಡ ಅಂಥದ್ದೊಂದು ಸಿದ್ಧಾಂತಕ್ಕೆ ಬದ್ಧವಾಗಿರುವಂತೆ ಕಾಣಿಸುವುದಿಲ್ಲ. ಅಮೆರಿಕದಲ್ಲಿ ಬಲಪಂಥೀಯ ವಿಚಾರವು ನಿರ್ದಿಷ್ಟ ನಿಲುವುಗಳನ್ನು ಪ್ರತಿಪಾದಿಸುತ್ತದೆ. ಸಾಮಾಜಿಕವಾಗಿ ಈ ಸಿದ್ಧಾಂತವು ಅಲ್ಲಿ ಗರ್ಭಪಾತಕ್ಕೆ ವಿರುದ್ಧವಾದ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ವಿರೋಧಿಸುವ ನಿಲುವು ತಾಳುತ್ತದೆ. ಅಲ್ಲಿ, ಆರ್ಥಿಕ ವಿಚಾರಗಳಲ್ಲಿ ಬಲಪಂಥವು, ಕಡಿಮೆ ತೆರಿಗೆ ವಿಧಿಸುವ ಪರವಾಗಿ ಇರುತ್ತದೆ, ಮಾರುಕಟ್ಟೆಯಲ್ಲಿ ಸರ್ಕಾರದ ಪಾತ್ರ ಇರುವುದನ್ನು ವಿರೋಧಿಸುತ್ತದೆ.

ಭಾರತದಲ್ಲಿ ‘ಎಡಪಂಥ’ ಹಾಗೂ ‘ಬಲಪಂಥ’ದ ನಡುವೆ ಇಂಥದ್ದೊಂದು ವ್ಯತ್ಯಾಸ ಕಾಣಿಸುತ್ತದೆಯೇ? ಖಂಡಿತ ಇಲ್ಲ. ಬಿಜೆಪಿಯು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ವಿರೋಧಿಸುವುದಿಲ್ಲ, ಗರ್ಭಪಾತವನ್ನೂ ವಿರೋಧಿಸುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ನ್ಯಾಯಾಲಯದಲ್ಲಿ ವಿರೋಧಿಸಿದ್ದು ಕಾಂಗ್ರೆಸ್ (ನಂತರ ಈ ಪಕ್ಷ ತನ್ನ ನಿಲುವನ್ನು ಬದಲಿಸಿತು). ಬಿಜೆಪಿಯು ತೆರಿಗೆ ಪ್ರಮಾಣ ಕಡಿಮೆ ಆಗಬೇಕು ಎಂದು ಹೇಳುತ್ತದೆಯೇ? ಈ ಸರ್ಕಾರವು ಪ್ರಜೆಗಳ ಮೇಲಿನ ತೆರಿಗೆ ಹೊರೆಯನ್ನು ಹೆಚ್ಚಿಸಿದೆ- ಹೀಗೆ ಮಾಡಿದ್ದು ಸರಿ ಎಂಬುದು ನನ್ನ ವೈಯಕ್ತಿಕ ನಿಲುವಾದರೂ ತೆರಿಗೆ ಪ್ರಮಾಣ ಹೆಚ್ಚಿಸುವುದು ‘ಬಲಪಂಥ’ ಅಲ್ಲ.

ಸಾಮಾಜಿಕ ವರ್ಗೀಕರಣಗಳ ವಿಚಾರದಲ್ಲಿ ಸಂಪ್ರದಾಯವಾದಿ ಆಗಿರುವುದು ಈ ಪದಕ್ಕೆ ಇರುವ ಇನ್ನೊಂದು ಅರ್ಥ. ಭಾರತದಲ್ಲಿ ಸಾಮಾಜಿಕ ವರ್ಗೀಕರಣ ಅಂದರೆ ಜಾತಿ ವ್ಯವಸ್ಥೆ. ಆದರೆ, ಬಿಜೆಪಿಯು ಜಾತಿ ವ್ಯವಸ್ಥೆಯ ಮುಂದುವರಿಕೆಯನ್ನು ಬೆಂಬಲಿಸುವುದಿಲ್ಲ. ಜಾತಿ ವ್ಯವಸ್ಥೆಯನ್ನು ಮುಂದುವರಿಸುವುದಕ್ಕೆ ನಮ್ಮ ಸಂವಿಧಾನ ಕೂಡ ಅವಕಾಶ ಮಾಡಿಕೊಡುವುದಿಲ್ಲ ಎಂಬುದೂ ನಿಜ. ಹಾಗಾಗಿ ಬಿಜೆಪಿಯು ತನ್ನನ್ನು ಬಲಪಂಥೀಯವಾಗಿ ತೋರಿಸಿಕೊಳ್ಳುತ್ತಿಲ್ಲ. ಜಗತ್ತು 'ಬಲಪಂಥ'ವನ್ನು ವಿವರಿಸುವ ಬಗೆಗೂ ಆ ಪಕ್ಷದ ನೀತಿಗಳು ಇರುವುದಕ್ಕೂ ದೊಡ್ಡಮಟ್ಟದ ಹೊಂದಾಣಿಕೆ ಕೂಡ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.

ಬಿಜೆಪಿಯ ಸಿದ್ಧಾಂತಕ್ಕೆ ಒಂದು ಸ್ಪಷ್ಟವಾದ ವ್ಯಾಖ್ಯಾನ ಇದೆ ಎಂಬುದು ವಾಸ್ತವ. ಆ ಸಿದ್ಧಾಂತದ ಹೆಸರು ಹಿಂದುತ್ವ. ಹಿಂದುತ್ವವನ್ನು ವ್ಯಾಖ್ಯಾನಿಸುವಾಗ ನಾವು 'ಬಲಪಂಥ' ಎನ್ನುವ ಪದವನ್ನು ಬಳಸಬಾರದು. ಹಾಗೆ ಬಳಸುವುದು ವಿಚಾರಗಳ ಮೇಲೆ ಪರದೆ ಹಾಕಿದಂತೆ ಆಗುತ್ತದೆ. ಹಾಗೆ ಬಳಸುವುದರಿಂದ ಬಿಜೆಪಿಯಲ್ಲಿ ಇಲ್ಲದ ಗುಣಗಳನ್ನು, ತನ್ನಲ್ಲಿ ಬೆಳೆಸಿಕೊಳ್ಳುವ ಇರಾದೆಯನ್ನೂ ಹೊಂದಿರದ ಗುಣಗಳನ್ನು ಆ ಪಕ್ಷಕ್ಕೆ ಆರೋಪಿಸಿದಂತೆ ಆಗುತ್ತದೆ. ಬಿಜೆಪಿಯ ಸಿದ್ಧಾಂತವು ಭಾರತೀಯ ಸಮಾಜದ ನಿರ್ದಿಷ್ಟ ವರ್ಗವೊಂದರ ವಿರುದ್ಧ ಇದೆ. ಇದು ನಾನು ಮಾಡುತ್ತಿರುವ ಆರೋಪ ಅಲ್ಲ, ಬಿಜೆಪಿ ತನ್ನನ್ನು ರೂಪಿಸಿಕೊಂಡಿದ್ದು ಹೀಗೆ. ನಾವು ಸಿದ್ಧಾಂತವನ್ನು ಬೆಂಬಲಿಸಲಿ, ಬೆಂಬಲಿಸದೆ ಇರಲಿ; ನಾವು ಮಾತನಾಡುವಾಗ ಬಳಸುವ ಪಾರಿಭಾಷಿಕ ಪದಗಳ ಬಗ್ಗೆ ಎಚ್ಚರದಿಂದ ಇದ್ದರೆ ನಮಗೇ ಹೆಚ್ಚು ಅನುಕೂಲ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು