ಭಾನುವಾರ, ಸೆಪ್ಟೆಂಬರ್ 27, 2020
24 °C

ಸಹಾಯ ನಿರಾಕರಿಸುವ ಕ್ರೌರ್ಯ

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

ವಿಕೋಪಗಳ ಸಂದರ್ಭದಲ್ಲಿ ಭಾರತವು ವಿದೇಶಗಳಿಂದ ಬರುವ ನೆರವನ್ನು ಸ್ವೀಕರಿಸಬೇಕೇ ಬೇಡವೇ ಎಂಬ ಬಗ್ಗೆ ವಿವಾದ ಉಂಟಾಗಿದೆ. ಈ ವಿಚಾರದಲ್ಲಿ ಅಧಿಕೃತ ನೀತಿ ಏನು ಎಂಬ ವಿಚಾರದಲ್ಲೂ ಗೊಂದಲಗಳು ಇವೆ. ಈಗ ವಿವಾದವಾಗಿರುವ ವಿಚಾರ ಪರಿಶೀಲನೆಗೆ ಯೋಗ್ಯ. ಹಾಗಾಗಿ, ನಾವು ಆ ಬಗ್ಗೆ ಒಂದು ನೋಟ ಹರಿಸೋಣ.

ಕೇರಳದಲ್ಲಿ ಉಂಟಾದ ಪ್ರವಾಹವು ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ, ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳಿಗೆ ತೀವ್ರ ಹಾನಿ ಉಂಟುಮಾಡಿದೆ. ಅದು ಮಾಡಿರುವ ಹಾನಿಗೆ ಪರಿಹಾರ ರೂಪದಲ್ಲಿ ₹ 2,600 ಕೋಟಿ ಬೇಕು ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ. ತಾನು ₹ 600 ಕೋಟಿ ಕೊಡುವುದಾಗಿ ಕೇಂದ್ರ ಹೇಳುತ್ತಿದೆ. (ದುಬೈ, ಅಬುಧಾಬಿ ಮತ್ತು ಶಾರ್ಜಾವನ್ನು ಒಳಗೊಂಡ) ಸಂಯುಕ್ತ ಅರಬ್ ಸಂಸ್ಥಾನಗಳು ₹ 700 ಕೋಟಿ ನೆರವು ನೀಡಲು ಮುಂದೆ ಬಂದಿವೆ ಎಂದು ಕೇರಳ ಸರ್ಕಾರ ಹೇಳುತ್ತಿದೆ. ಆದರೆ, ಈ ನೆರವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ನೆರವು ನಿರಾಕರಿಸಲು ಕಾರಣ ಹಿಂದಿನ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ನೀತಿ ಎಂದು ಹೇಳಲಾಗಿದೆ.

ಬಹುಶಃ ಕೇಂದ್ರದ ಒತ್ತಡಕ್ಕೆ ಒಳಗಾಗಿ ಯುಎಇ ಈಗ ‘ನೆರವಿನ ಬಗ್ಗೆ ನಿರ್ದಿಷ್ಟವಾಗಿ ತಾನು ಏನೂ ಹೇಳಿಲ್ಲ’ ಎಂದು ತಿಳಿಸಿದೆ. ಆದರೆ, ಭಾರತವು ವಿದೇಶಿ ನೆರವನ್ನು ನಿರಾಕರಿಸುತ್ತಿದೆ ಎಂದು ಭಾರತದಲ್ಲಿನ ಥಾಯ್ಲೆಂಡ್ ರಾಯಭಾರಿ ಬರೆದಿದ್ದಾರೆ. ಅವರು ಬರೆದಿರುವುದು ಹೀಗಿದೆ: ‘ಕೇರಳದ ಪ್ರವಾಹ ಪರಿಹಾರದ ವಿಚಾರದಲ್ಲಿ ವಿದೇಶಗಳಿಂದ ಬರುವ ಹಣಕಾಸಿನ ನೆರವನ್ನು ಭಾರತ ಸರ್ಕಾರ ಸ್ವೀಕರಿಸುತ್ತಿಲ್ಲ ಎಂಬ ವಿಷಾದದ ಸಂಗತಿ ಅನಧಿಕೃತವಾಗಿ ಗೊತ್ತಾಗಿದೆ. ನಾವು ಹೃತ್ಪೂರ್ವಕವಾಗಿ ಭಾರತದ ಜನರ ಜೊತೆ ಇದ್ದೇವೆ.’

ದುಬೈನ ಆಡಳಿತಗಾರರ ಜೊತೆ ಮಾತನಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 18ರಂದು ಟ್ವೀಟ್‌ ಮಾಡಿ, ‘ಕಷ್ಟದ ಈ ಸಮಯದಲ್ಲಿ ಕೇರಳದ ಜನರ ಬೆಂಬಲಕ್ಕೆ ಉದಾರವಾಗಿ ಮುಂದೆ ಬಂದಿದ್ದಕ್ಕೆ ಶೇಖ್ ಮೊಹಮ್ಮದ್ ಅವರಿಗೆ ಧನ್ಯವಾದಗಳು. ಭಾರತದ ಜನ, ಸರ್ಕಾರ ಮತ್ತು ಯುಎಇ ನಡುವೆ ಇರುವ ವಿಶೇಷ ಬಾಂಧವ್ಯವು ಅವರ ಕಳಕಳಿಯಲ್ಲಿ ಪ್ರತಿಫಲಿಸುತ್ತಿದೆ’ ಎಂದು ಹೇಳಿದ್ದರು. ಇದರ ಅರ್ಥ ನೆರವು ನೀಡಲು ಯುಎಇ ಮುಂದೆ ಬಂದಿದ್ದು ನಿಜ, ಆದರೆ ನೆರವು ಬೇಡ ಎಂದು ಹೇಳಲಾಗಿದೆ. ಹಾಗಾದರೆ, ನಿಯಮಗಳಲ್ಲಿ ಏನು ಹೇಳಲಾಗಿದೆ?

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಈ ನಿಯಮಗಳಲ್ಲಿ 2004ರಲ್ಲಿ ಮಧ್ಯಪ್ರವೇಶ ಮಾಡಿತ್ತು. ಆ ವರ್ಷದವರೆಗೆ ಭಾರತವು ವಿದೇಶಗಳಿಂದ ನೆರವನ್ನು ಸ್ವೀಕರಿಸುತ್ತಿತ್ತು. 2004ರಲ್ಲಿ ಅಪ್ಪಳಿಸಿದ ಸುನಾಮಿಯ ನಂತರ, ‘ಭಾರತವು ವಿದೇಶಗಳಿಂದ ಪರಿಹಾರ ಮತ್ತು ರಕ್ಷಣೆಯ ನೆರವನ್ನು ಸ್ವೀಕರಿಸುವುದಿಲ್ಲ. ಆದರೆ, ಪುನರ್ವಸತಿಗೆ ನೆರವು ಸ್ವೀಕರಿಸುತ್ತದೆ’ ಎಂದು ತೀರ್ಮಾನಿಸಲಾಯಿತು. ಪರಿಹಾರ ಮತ್ತು ರಕ್ಷಣೆಯ ಕಾರ್ಯಗಳು ತಕ್ಷಣಕ್ಕೆ ಆಗಬೇಕಾದಂಥವು. ವಿಕೋಪಗಳ ಸಂದರ್ಭದಲ್ಲಿ ತೊಂದರೆಗೆ ಒಳಗಾದ ವ್ಯಕ್ತಿಗಳಿಗೆ ಸಹಾಯ ಮಾಡುವವರು, ಅಂತಹ ವ್ಯಕ್ತಿಗಳನ್ನು ಮೊದಲನೆಯದಾಗಿ ಸಂಪರ್ಕಿಸುವವರು ಪರಿಹಾರ ಮತ್ತು ರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಂಡವರು.

ಈ ಕಾರ್ಯಗಳಲ್ಲಿ ವಿದೇಶಿ ನೆರವನ್ನು ಸ್ವೀಕರಿಸುವುದಿಲ್ಲ ಎಂದು ಹೇಳುವುದಕ್ಕೆ ಕಾರಣಗಳು ಏನಿರಬಹುದು? ಕಾರಣಗಳು ಹಲವಾರಿರಬಹುದು. ಉದಾಹರಣೆಗೆ, ವಿಕೋಪಕ್ಕೆ ತುತ್ತಾದ ಸ್ಥಳದ ಬಗ್ಗೆ ಅರಿವು ಇರುವುದು ಸ್ಥಳೀಯ ಪ್ರಾಧಿಕಾರಕ್ಕೇ ವಿನಾ ಹೊರಗಿನವರಿಗೆ ಅಲ್ಲ. ಅವರು ಅಲ್ಲಿಗೆ ಬಂದರೆ ತೊಂದರೆಗೆ ಒಳಗಾಗಬಹುದು, ಅವರಿಗೆ ಸ್ಥಳೀಯ ಭಾಷೆ ಕೂಡ ಗೊತ್ತಿರುವುದಿಲ್ಲ ಎಂಬ ಕಾರಣ ಇದ್ದಿರಬಹುದು.

ಇಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳುವ ವಿಚಾರದಲ್ಲಿ ಭಾರತವು ಸಶಕ್ತವಾಗಿಯೇ ಇದೆ. ಇಲ್ಲೊಂದು ಶಾಶ್ವತ ಅಧಿಕಾರಶಾಹಿ ವ್ಯವಸ್ಥೆ ಕೂಡ ಇದೆ. ಹಾಗೆಯೇ, ನಾಗರಿಕರ ನೆರವಿಗೆ ಬರುವ ಕೆಲಸಗಳನ್ನು ಮಾಡಲು ಬೇಕಿರುವ ದೊಡ್ಡ ಸೇನೆ ಮತ್ತು ಅರೆಸೇನಾಪಡೆ ಕೂಡ ಇದೆ (ಕೇರಳದಲ್ಲಿ ಕೂಡ ಇವರು ನೆರವಿಗೆ ಬಂದರು) ಎಂಬುದು ಎರಡನೆಯ ಕಾರಣ ಆಗಿರಬಹುದು.

ಭಾರತದವರನ್ನು ರಕ್ಷಿಸಲು ವಿದೇಶದವರು ಬರುವುದು ನೋಡುಗರ ದೃಷ್ಟಿಯಿಂದ ಅಷ್ಟೊಂದು ಸರಿ ಎನಿಸುವುದಿಲ್ಲ, ಇದು ರಾಷ್ಟ್ರದ ಘನತೆಗೆ ಚ್ಯುತಿ ತರಬಹುದು ಎಂಬ ಮೂರನೆಯ ಕಾರಣ ಇದ್ದಿರಬಹದು. ಆದರೆ, ಸುದೀರ್ಘ ಅವಧಿ ತೆಗೆದುಕೊಳ್ಳುವ ಪುನರ್ವಸತಿ ಕಾರ್ಯಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಏಕೆಂದರೆ ಈ ಕೆಲಸ ಹೊರಗೆ ಎದ್ದು ಕಾಣಿಸುವಂಥದ್ದಲ್ಲ.

ಮನಮೋಹನ್ ಸಿಂಗ್ ಮತ್ತು ಅವರ ತಂಡ ಇಂಥದ್ದೊಂದು ತೀರ್ಮಾನ ಕೈಗೊಂಡಿದ್ದಕ್ಕೆ ಬೇರೆ ಕಾರಣಗಳೂ ಇದ್ದಿರಬಹುದು. ಅವುಗಳನ್ನು ವಿಕೋಪ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ನೀತಿಯಲ್ಲಿ ಉಲ್ಲೇಖ ಮಾಡಿಲ್ಲ. ಮೊದಲನೆಯ ಹಾಗೂ ಎರಡನೆಯ ಕಾರಣಕ್ಕಾಗಿ ಇಂಥದ್ದೊಂದು ತೀರ್ಮಾನಕ್ಕೆ ಬರಲಾಯಿತು ಎಂದಾದರೆ, ಅದರಲ್ಲಿ ತರ್ಕ ಇದೆ. ಮೂರನೆಯ ಕಾರಣಕ್ಕಾಗಿ ಯುಪಿಎ ಸರ್ಕಾರ ಈ ತೀರ್ಮಾನ ಕೈಗೊಂಡಿತು ಎಂದಾದರೆ, ಸಮಸ್ಯೆ ಎದುರಾಗುತ್ತದೆ.

ಥಾಯ್ಲೆಂಡ್ ಮತ್ತು ಯುಎಇ ನೆರವನ್ನು ನಿರಾಕರಿಸುವ ಮೂಲಕ ಪುನರ್ವಸತಿಯ ನೆರವನ್ನೂ ನಿರಾಕರಿಸಿದ್ದರ ಬಗ್ಗೆ ಗಮನ ಹರಿಸೋಣ. ಹೀಗೆ ಮಾಡಿದ್ದರ ಹಿಂದಿನ ಸಾಧ್ಯತೆಗಳ ಬಗ್ಗೆ ಈ ಕೆಳಗಿನ ಆಲೋಚನೆಗಳು ಬರುತ್ತವೆ:

ಮೊದಲನೆಯದು, ನಮಗೆ ಅವರ ಹಣದ ಅಗತ್ಯವಿಲ್ಲ. ಭಾರತದ ಪ್ರಜೆಗಳ ಕ್ಷೇಮ ನೋಡಿಕೊಳ್ಳಲು ಬೇಕಿರುವ ಸಂಪನ್ಮೂಲಗಳು ಭಾರತದ ಬಳಿ ಇವೆ. ಎರಡನೆಯದು, ನಿರ್ದಿಷ್ಟ ದೇಶಗಳಿಂದ ಹಣ ಸ್ವೀಕರಿಸಲು (ಉದಾಹರಣೆಗೆ ಪಾಕಿಸ್ತಾನ ಅಥವಾ ಚೀನಾ) ನಮಗೆ ಮನಸ್ಸಿಲ್ಲ. ಹಾಗಾಗಿ, ಈ ನಿಲುವಿನಲ್ಲಿ ದೃಢತೆ ಇರಬೇಕು ಎಂಬ ಕಾರಣಕ್ಕೆ ಇತರ ದೇಶಗಳಿಂದಲೂ ಹಣ ಪಡೆಯುವುದಿಲ್ಲ. ಮೂರನೆಯದು, ನೆರವನ್ನು ಹೊರಗಿನವರಿಂದ ಸ್ವೀಕರಿಸುವುದು ನಮ್ಮ ಘನತೆಗೆ ಕುಂದು ತರುತ್ತದೆ, ನಾವು ನೆರವು ಸ್ವೀಕರಿಸುವವರೇ ವಿನಾ ನೆರವು ಕೊಡುವವರಲ್ಲ ಎಂಬ ರೀತಿಯಲ್ಲಿ ಹೊರಗಿನ ಜಗತ್ತು ನಮ್ಮನ್ನು ಕಾಣುತ್ತದೆ.

ಇಲ್ಲಿ ಕೂಡ ನಮಗೆ ತಿಳಿದಿರದ ಇನ್ನೂ ಕೆಲವು ಕಾರಣಗಳು ಇರಬಹುದು. ಆ ಕಾರಣಗಳು ಏನು ಎಂಬುದನ್ನು ಸರ್ಕಾರ ನಮಗೆ ಹೇಳಿಲ್ಲ. ಮೊದಲನೆಯದು ಸುಳ್ಳು ನೆವ ಎಂದು ನನಗೆ ಅನಿಸುತ್ತದೆ. ಯಾವುದೇ ವ್ಯಾಖ್ಯಾನ ಬಳಸಿ ನೋಡಿದರೂ ನಮ್ಮದು ಬಡ ದೇಶ. ನಮ್ಮದು ಬಡ ರಾಷ್ಟ್ರ ಅಲ್ಲ ಎಂದು ಸೋಗು ಹಾಕುವುದು, ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಕುರುಡಾಗುವುದಕ್ಕೆ ಸಮ. ಹಾಗೆಯೇ, ನನ್ನ ಪ್ರಕಾರ ಎರಡನೆಯ ಹಾಗೂ ಮೂರನೆಯ ಕಾರಣಗಳು ಸಮಸ್ಯೆಗೆ ಮೂಲವಾಗಬಲ್ಲವು. ನೆರವು ಸ್ವೀಕರಿಸುವುದರಿಂದ ತಮ್ಮ ಮರ್ಯಾದೆಗೆ ಕುಂದು ಬರುತ್ತದೆಯೇ ಎಂಬುದನ್ನು ತೊಂದರೆಗೆ ಒಳಗಾದ ವ್ಯಕ್ತಿ ಮತ್ತು ಸಮುದಾಯ ತೀರ್ಮಾನಿಸಬೇಕು. ಭಾವನೆಗಳಿರುವುದು ವ್ಯಕ್ತಿಗೆ, ರಾಷ್ಟ್ರಕ್ಕೆ ಅಲ್ಲ. ರಾಷ್ಟ್ರದ ಸ್ವಾಭಿಮಾನ ಎಂಬುವಂಥದ್ದು ವಾಸ್ತವದಲ್ಲಿ ಏನೂ ಇಲ್ಲ. ಅದೊಂದು ಕಲ್ಪನೆ ಮಾತ್ರ. ಆದರೆ, ನೆರವು ಮತ್ತು ಸಹಾಯ ಎಂಬುದು ವಾಸ್ತವ.

ಯುಎಇ ಎಂಬುದು ಸಾಮಾನ್ಯ ದೇಶ ಅಲ್ಲ, ಅದನ್ನು ಮತ್ತೊಂದು ವಿದೇಶಿ ನೆಲ ಎಂಬಂತೆ ಕಾಣಬಾರದು ಎಂದು ಕೇರಳ ಸರ್ಕಾರ ಹೇಳುತ್ತಿದೆ. ಆ ದೇಶದ ನಿರ್ಮಾಣದಲ್ಲಿ ಭಾರತೀಯ ಕೈಗಳ, ಅದರಲ್ಲೂ ಪ್ರಮುಖವಾಗಿ ಮಲಯಾಳಿಗಳ ನೆರವು ಇದೆ. ಆ ದೇಶದ ಬೆಳವಣಿಗೆಯಲ್ಲಿ ಮಲಯಾಳಿಗಳ ಪಾಲು ಕೂಡ ಇದೆ. ಹಾಗಾಗಿ, ಅಲ್ಲಿಂದ ಬರುವ ನೆರವನ್ನು ‘ಧರ್ಮಾರ್ಥಕ್ಕೆ ಬರುವ ನೆರವು’ ಎಂಬ ರೀತಿಯಲ್ಲಿ ಮಾತ್ರವೇ ಕಾಣುವುದು ಸರಿಯಲ್ಲ. ಈ ಮಾತಿನ ಜೊತೆ ಸಹಮತ ಸೂಚಿಸದೆ ಇರುವುದು ಕಷ್ಟದ ಕೆಲಸ. ಮನಮೋಹನ್ ಅವರಲ್ಲಿ ಬೇರೊಂದು ನೀತಿ ಇದ್ದಿದ್ದರೂ, ಅದರಲ್ಲಿನ ದೋಷಗಳನ್ನು ಕಂಡು, ಅವುಗಳನ್ನು ಸರಿಪಡಿಸದೇ ಇರುವುದಕ್ಕೆ ಸಮರ್ಥನೆ ಇಲ್ಲ. ಅತ್ಯಂತ ಅಗತ್ಯವಾಗಿರುವ ಸಂದರ್ಭದಲ್ಲಿ ನಮ್ಮ ಜನರಿಗೆ ಸಹಾಯವನ್ನು ನಿರಾಕರಿಸುವುದು ಕ್ರೌರ್ಯ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು