7

ಉದ್ರಿಕ್ತ ಗುಂಪೋ, ಭಾರತೀಯ ಸಮಾಜವೋ?!

ಆಕಾರ್ ಪಟೇಲ್
Published:
Updated:

ಭಾರತದಲ್ಲಿ ಎರಡು ಶತಮಾನಗಳಿಂದ ಸುದ್ದಿಪತ್ರಿಕೆಗಳು ಪ್ರಕಟವಾಗುತ್ತಿವೆ. 1780ರ ಸುಮಾರಿಗೆ ಪ್ರಕಟವಾದ ಯಾವುದಾದರೂ ಪತ್ರಿಕೆಯ ಪುಟ ತೆರೆದು ನೋಡಿದರೆ, ಇಂದಿನ ದಿನಪತ್ರಿಕೆಗಳಲ್ಲಿ ಕಾಣಿಸುವಂತಹ ಹಲವು ಸುದ್ದಿಗಳು ಅದರಲ್ಲಿಯೂ ಕಾಣಿಸುತ್ತವೆ.

ಪ್ರೀತಿಯಲ್ಲಿ ಬಿದ್ದಳು ಎಂಬ ಕಾರಣಕ್ಕೆ ದೇಶದ ಯಾವುದೋ ಒಂದು ಕಡೆಯ ತಂದೆಯೊಬ್ಬ ತನ್ನ ಮಗಳನ್ನು ಕೊಂದುಹಾಕಿರುತ್ತಿದ್ದ (ಇದನ್ನು ನಾವು 'ಮರ್ಯಾದಾ ಹತ್ಯೆ' ಎಂದು ಕರೆಯುತ್ತಿದ್ದೇವೆ). ಆಧುನಿಕತೆ ಮತ್ತು ನಗರೀಕರಣವು ಇಂತಹ ಮೃಗೀಯ ವರ್ತನೆಗಳನ್ನು ಕೊನೆಗೊಳಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಹಲವು ವಿಚಾರಗಳಲ್ಲಿ ಭಾರತೀಯರು ಬದಲಾಗಿಲ್ಲ. 'ಮರ್ಯಾದಾ ಹತ್ಯೆಗಳು' 2018ರಲ್ಲೂ ಆಗಾಗ ನಡೆಯುತ್ತಿವೆ.

ಆಧುನಿಕ ಸಮಾಜವಾಗಿಯೂ ನಮ್ಮಿಂದ ಕಳಚಿಕೊಳ್ಳಲು ಸಾಧ್ಯವಾಗದಿರುವ ಇನ್ನೊಂದು ಸಂಗತಿ, ಮನುಷ್ಯರನ್ನು ಬೀದಿಯಲ್ಲಿ ಹೊಡೆದು ಸಾಯಿಸುವುದು. 'ವ್ಯಕ್ತಿಯೊಬ್ಬ ತಪ್ಪು ಮಾಡಿದ್ದಾನೆ ಎಂಬ ಆರೋಪದ ಅಡಿ, ಆತನ ವಿರುದ್ಧ ಕಾನೂನುಬದ್ಧ ವಿಚಾರಣೆ ನಡೆಸದೆಯೇ ಆತನನ್ನು ಹೊಡೆದು ಸಾಯಿಸುವುದು' ಎಂಬ ಅರ್ಥವನ್ನು 'ಲಿಂಚಿಂಗ್' ಪದಕ್ಕೆ ಶಬ್ದಕೋಶಗಳು ನೀಡಿವೆ. ಒಬ್ಬರಿಗೊಬ್ಬರು ಪರಿಚಯ ಇಲ್ಲದ ಕೆಲವರು ಒಟ್ಟಾಗಿ ಸೇರಿಕೊಂಡು, ತಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸುವುದು ಸುಲಭ ಸಾಧ್ಯವಾಗುವುದು ಹೇಗೆ ಎಂಬುದು ನನಗೆ ಅರ್ಥ ಆಗುವಂಥದ್ದಲ್ಲ.

ಜನ ಒಬ್ಬನ ಮೇಲೆ ಆರೋಪ ಹೊರಿಸಿ, ವಿಚಾರಣೆಯೇ ಇಲ್ಲದೆ ಆತನನ್ನು ಹೊಡೆದು ಸಾಯಿಸುವುದನ್ನು ತಡೆಯಲು ತ್ರಿಪುರ ಸರ್ಕಾರ ಕಳುಹಿಸಿದ್ದ ವ್ಯಕ್ತಿಯೊಬ್ಬನನ್ನು ಹಳ್ಳಿಯೊಂದರ ಜನ ಹೊಡೆದು ಸಾಯಿಸಿದ್ದಾರೆ ಎನ್ನುವ ವಿಚಿತ್ರ ಸುದ್ದಿ ಕಳೆದ ವಾರ ಬಂದಿದೆ! ಮಕ್ಕಳನ್ನು ಕದಿಯುವವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದ್ದ ಸುದ್ದಿ ಸುಳ್ಳು ಎಂದು ತಿಳಿಸುತ್ತ ಸುಕಾಂತ ಚಕ್ರಬರ್ತಿ ಎಂಬ ಹೆಸರಿನ ಈ ವ್ಯಕ್ತಿ ಊರಿಂದ ಊರಿಗೆ ತಿರುಗುತ್ತಿದ್ದರು. ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರು ಧ್ವನಿವರ್ಧಕ ಬಳಸಿ ಹೇಳುತ್ತಿದ್ದರು. ಆಗ ಅವರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಯಿತು. ಅವರ ಜೊತೆ ಇನ್ನಿಬ್ಬರ ಮೇಲೆ ಕೂಡ ಹಲ್ಲೆ ನಡೆಯಿತು.

ಒಂದು ವಿದೇಶಿ ಪತ್ರಿಕೆಯಲ್ಲಿ ಈ ಕುರಿತ ವರದಿ ಓದುವವರೆಗೆ ನನಗೆ ಇದರ ಬಗ್ಗೆ ಗೊತ್ತೇ ಆಗಿರಲಿಲ್ಲ. ಏಕೆಂದರೆ, ನಮ್ಮ ದೇಶದ ಮಾಧ್ಯಮಗಳಲ್ಲಿ, ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಟಿ.ವಿ. ವಾಹಿನಿಗಳಲ್ಲಿ, ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸುವುದು ಈಗ ದೊಡ್ಡ ಸುದ್ದಿಯಾಗಿ ಉಳಿದಿಲ್ಲ.

ತಮಗೆ ಬರುವ ಮಾಹಿತಿಯನ್ನು ಸುದ್ದಿಮನೆಗಳು ನಿರ್ದಿಷ್ಟ ಕ್ರಮದಲ್ಲಿ ನೋಡುತ್ತವೆ. ಮತ್ತೆ ಮತ್ತೆ ವರದಿಯಾಗುವ ಘಟನೆಗಳನ್ನು ದೊಡ್ಡದಾಗಿ ಪರಿಗಣಿಸುವುದಿಲ್ಲ. ಏಕೆಂದರೆ ಅವು 'ಸುದ್ದಿ'ಯಾಗಿ ಉಳಿದಿರುವುದಿಲ್ಲ. ವ್ಯಕ್ತಿಯನ್ನು ಹೊಡೆದು ಸಾಯಿಸುವ ವಿದ್ಯಮಾನಗಳ ವಿಚಾರದಲ್ಲೂ ಇದು ಆಗಿದೆ. ಇಂತಹ ಘಟನೆಗಳು ಪತ್ರಿಕೆಗಳ ಮುಖಪುಟದಿಂದ, ವಾಹಿನಿಗಳ ಪ್ರೈಮ್‌ ಟೈಮ್‌ ಚರ್ಚೆಯಿಂದ ನಿಧಾನವಾಗಿ ದೂರವಾಗಿವೆ. ಇದರ ಅರ್ಥ ಹಿಂಸೆ ಮರೆಯಾಗಿದೆ ಎಂದಲ್ಲ. ಹಾಗೆ ನೋಡಿದರೆ, ಇಂತಹ ಹಿಂಸೆಗಳು ಹೆಚ್ಚೇ ಆದಂತಿವೆ.

ಕಳೆದೊಂದು ತಿಂಗಳ ಅವಧಿಯಲ್ಲೇ ಹದಿನಾಲ್ಕು ಜನ ಭಾರತೀಯರನ್ನು ಹೊಡೆದು ಸಾಯಿಸಲಾಗಿದೆ. ಅಸ್ಸಾಂ, ಆಂಧ್ರಪ್ರದೇಶ, ತ್ರಿಪುರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ರಾಜ್ಯಗಳಲ್ಲಿ ತಲಾ ಇಬ್ಬರನ್ನು ಹೊಡೆದು ಸಾಯಿಸಲಾಗಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬನನ್ನು ಹೊಡೆದು ಸಾಯಿಸಲಾಗಿದೆ.

ಇವು ವರದಿಯಾದ ಹತ್ಯೆಗಳು ಮಾತ್ರ. ಪೊಲೀಸರು ತಮ್ಮ ಬಳಕೆಯಲ್ಲಿ ಇರುವ ಬಗೆಬಗೆಯ ಅಸ್ತ್ರಗಳನ್ನು ಬಳಸಿ ಈ ಬಗೆಯ ಅನೇಕ ಘಟನೆಗಳನ್ನು ಮುಚ್ಚಿಹಾಕಿರುತ್ತಾರೆ ಎಂಬುದನ್ನು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಕಳೆದ ಮೂವತ್ತು ದಿನಗಳ ಅವಧಿಯಲ್ಲಿ ಒಡಿಶಾದಲ್ಲೊಂದೇ ಒಟ್ಟು 28 ಜನರ ಮೇಲೆ ಹಲ್ಲೆ ನಡೆದ 15 ಪ್ರಕರಣಗಳು ದಾಖಲಾಗಿವೆ.

ನಮ್ಮ ದೇಶದಲ್ಲಿ ಈ ರೀತಿ ಆಗುತ್ತಿದೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ ವಿದೇಶಿಯರು ಭಯಕ್ಕೆ ಒಳಗಾಗಿದ್ದಾರೆ. 2018ರಲ್ಲೂ ಇಂಥವೆಲ್ಲ ಏಕೆ ನಡೆಯುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅವರ ಪಾಲಿಗೆ ಸುಲಭವಲ್ಲ. ಇಂಥವುಗಳನ್ನು ತಡೆಯಲು ನಾವು ಏನಾದರೂ ಮಾಡಬೇಕು ಎಂಬಷ್ಟು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಂತಹ ಹಿಂಸಾ ಕೃತ್ಯಗಳ ವಿರುದ್ಧ, ಇವು ನಮ್ಮ ಸಮಾಜಕ್ಕೆ ಹಾಗೂ ನಮ್ಮ ದೇಶಕ್ಕೆ ಯಾವ ರೀತಿಯ ತೊಂದರೆ ಉಂಟುಮಾಡಬಲ್ಲವು ಎಂಬ ಬಗ್ಗೆ 'ಮನ್‌ ಕಿ ಬಾತ್‌' (ಮನದ ಮಾತು) ಕೇಳಿಬಂದಿಲ್ಲ, ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತು ಕೂಡ ಬಂದಿಲ್ಲ.

ಇವುಗಳ ಬಗ್ಗೆ ಸರ್ಕಾರ ಕಳವಳ ಹೊಂದಿದ್ದೇ ಹೌದಾಗಿದ್ದರೆ, ಇವುಗಳಿಗೆ ಪ್ರಾಮುಖ್ಯತೆ ಸಿಗಬಾರದು ಎನ್ನುವಷ್ಟರಮಟ್ಟಿಗೆ ಮಾತ್ರ ಆ ಕಳವಳ ಸೀಮಿತವಾಗಿದೆ. ದ್ವೇಷದ ನೆಲೆಯಲ್ಲಿ ನಡೆಯುವ ಇಂತಹ ಅಪರಾಧಗಳನ್ನು ದಾಖಲಿಸುತ್ತಿದ್ದ ಸಂಸ್ಥೆಯೊಂದಕ್ಕೆ ಆ ಕೆಲಸ ಮಾಡದಂತೆ ಸರ್ಕಾರ ಸೂಚಿಸಿತು, ಆ ಸಂಸ್ಥೆ ಅದನ್ನು ಪಾಲಿಸಿತು.
ಇಂಥವೆಲ್ಲಾ ಕಾನೂನು- ಸುವ್ಯವಸ್ಥೆಗೆ ಸಂಬಂಧಿಸಿದವು, ಇವುಗಳನ್ನು ನೋಡಿಕೊಳ್ಳಬೇಕಿರುವುದು ರಾಜ್ಯ ಸರ್ಕಾರಗಳ ಕೆಲಸ ಎಂದು ಕೇಂದ್ರ ಸರ್ಕಾರದ ಸಮರ್ಥಕರು ಹೇಳುತ್ತಾರೆ. ಅವರು ಹೇಳುವ ಮಾತು ನಿಜ. ವ್ಯಕ್ತಿಯೊಬ್ಬನನ್ನು ಹೊಡೆದು ಕೊಲ್ಲುವುದು ಅಂದರೆ ಏನು, ಅದು ಏಕೆ ಆಗುತ್ತದೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡಾಗ, ಈ ವಿದ್ಯಮಾನದಲ್ಲಿ ನಮ್ಮದೂ ಒಂದು ಪಾತ್ರ ಇರುವುದು ಗೊತ್ತಾಗುತ್ತದೆ. ಸಾಮೂಹಿಕ ಹಿಂಸಾಚಾರದ ಕೃತ್ಯಗಳು ಭಾರತದಲ್ಲಿ ಮತ್ತೆ ಮತ್ತೆ ವರದಿಯಾಗುವುದಕ್ಕೆ ಮೂರು ಕಾರಣಗಳಿವೆ.

ಮೊದಲನೆಯದು, ನಮ್ಮ ಸಮಾಜ ಮತ್ತು ಧರ್ಮದ ರಚನೆಯ ಕಾರಣದಿಂದಾಗಿ ನಾವು ಸಾಮೂಹಿಕ ಅಸ್ಮಿತೆ ಹೊಂದಿದ್ದೇವೆ. ನಾವು ಸಮುದಾಯಗಳ ಗುಣಲಕ್ಷಣಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಗ್ರಹಿಸುತ್ತೇವೆ - ವಿವೇಕಿ ಬ್ರಾಹ್ಮಣ, ಹಿಂಸಾವಾದಿ ಕಟುಕ ಎಂಬ ರೀತಿಯಲ್ಲಿ. ವ್ಯಕ್ತಿಯನ್ನು ವ್ಯಕ್ತಿಯಾಗಿ ನಾವು ಕಾಣುವುದಿಲ್ಲ. ನಮ್ಮಲ್ಲಿ ಒಬ್ಬರಂತೆ ಇನ್ನೊಬ್ಬರು ಇರುವುದಿಲ್ಲ ಎಂಬುದನ್ನು ಗುರುತಿಸುವುದಿಲ್ಲ.

ಈ ಕಾರಣದಿಂದಾಗಿ ಹಿಂಸೆಗೆ ಮುಂದಾಗುವ ಜನರ ಗುಂಪಿಗೆ ಒಬ್ಬ ವ್ಯಕ್ತಿ ಯಾವ ಸಮುದಾಯಕ್ಕೆ ಸೇರಿದವ ಎಂಬುದನ್ನು ಹೊರತುಪಡಿಸಿದರೆ ಆತನ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯ ಇರುವುದಿಲ್ಲ. ಆತ ಯಾವ ಸಮುದಾಯಕ್ಕೆ ಸೇರಿದವ ಎಂಬುದನ್ನು ಗೊತ್ತು ಮಾಡಿಕೊಂಡು, ಆಕ್ರೋಶ ತಂದುಕೊಂಡು ಆತನ ಮೇಲೆ ಹಿಂಸೆಯ ಪ್ರಯೋಗ ನಡೆಸುತ್ತದೆ ಜನರ ಗುಂಪು.

ಎರಡನೆಯದು, ಭಾರತದಲ್ಲಿ ಸರ್ಕಾರಗಳು ಚಿಕ್ಕವಾಗಿಯೂ, ದುರ್ಬಲವಾಗಿಯೂ ಇರುವ ಕಾರಣ ಇಂತಹ ಹಿಂಸಾಕೃತ್ಯಗಳನ್ನು ತಡೆಯುವುದು ಕಷ್ಟ. ನಮ್ಮ ಸಮಾಜ ಹೊಂದಿರುವ ಎಲ್ಲ ರೀತಿಯ ದೌರ್ಬಲ್ಯಗಳು ಸರ್ಕಾರಗಳಲ್ಲೂ ಇವೆ. ಹಾಗೆಯೇ ಅಗತ್ಯ ಸಂಪನ್ಮೂಲ ಕೂಡ ಸರ್ಕಾರದ ಬಳಿ ಇರುವುದಿಲ್ಲ. ಜನರ ಸಮೂಹ ನಡೆಸುವ ಬಹುತೇಕ ಪ್ರಕರಣಗಳಲ್ಲಿ ತಪ್ಪು ಮಾಡಿದವರಿಗೆ ಕೊನೆಗೂ ನ್ಯಾಯಾಲಯದಲ್ಲಿ ಶಿಕ್ಷೆ ಆಗುವುದಿಲ್ಲ.

ಪ್ರಭುತ್ವ ಇರುವ ಸ್ಥಳಗಳಲ್ಲಿ ಕೂಡ ಅದಕ್ಕೆ ಜನರ ಸಮೂಹವನ್ನು ಪ್ರಶ್ನಿಸುವ ಸಾಮರ್ಥ್ಯ ಇಲ್ಲ ಅಥವಾ ಪ್ರಶ್ನಿಸುವ ಮನಸ್ಸು ಇಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಅರೆಸೈನಿಕ ಪಡೆಗೆ ಸೇರಿದ ಶಿಬಿರದಲ್ಲಿ ಆಶ್ರಯ ಕೇಳುವ ಯತ್ನ ನಡೆಸಿದರೂ ಜಹೀರ್ ಖಾನ್ ಎನ್ನುವ ವ್ಯಕ್ತಿಯೊಬ್ಬರನ್ನು ಜನರ ಗುಂಪೊಂದು ಹೊಡೆದು ಸಾಯಿಸಿತು.
ಮೂರನೆಯದು, ಪ್ರಭುತ್ವ ಮತ್ತು ಪ್ರಭುತ್ವವನ್ನು ನಿಯಂತ್ರಿಸುವ ವ್ಯಕ್ತಿಗಳು ಕೂಡ ಹಿಂಸೆಯಲ್ಲಿ ಭಾಗಿಯಾಗಿರುತ್ತಾರೆ. ಕಾನೂನು ದುರ್ಬಲವಾಗಿದೆ ಎಂಬುದು ಗೊತ್ತಿದ್ದರೂ, ನಿರ್ದಿಷ್ಟ ಕಾನೂನುಗಳನ್ನು ಜಾರಿಗೆ ತರುವುದರಿಂದ ಮನುಷ್ಯನ ಹತ್ಯೆಗೆ ಕಾರಣವಾಗಬಹುದು ಎಂಬುದು ಗೊತ್ತಿದ್ದರೂ, ನಮ್ಮ ನಾಯಕರು ಅದನ್ನೇ ಮಾಡುತ್ತಾರೆ. ಗೋಮಾಂಸದ ಮೇಲಿನ ನಿಷೇಧವನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಜನರನ್ನು ಬೀದಿಗಳಲ್ಲಿ ಹೊಡೆದು ಸಾಯಿಸುವ ಘಟನೆಗಳು ಭಾರತದಲ್ಲಿ ಹೆಚ್ಚುತ್ತಿವೆ ಎಂದಾದರೆ, ಅಂಥವುಗಳನ್ನು ತಡೆಯುವ ಹಾಗೂ ಕೊನೆಗಾಣಿಸುವ ಹೊಣೆ ದೇಶವನ್ನು ಮುನ್ನಡೆಸುವವರ ಮೇಲೆ ಇರುತ್ತದೆ, ಅವುಗಳಿಗೆ ಉತ್ತೇಜನ ನೀಡುವುದಲ್ಲ.

ಜನರನ್ನು ಹೊಡೆದು ಸಾಯಿಸುವ ವರದಿಯನ್ನು ನಾನು ಓದಿದ್ದು 'ದಿ ಗಾರ್ಡಿಯನ್' ಎಂಬ ಹೊರದೇಶದ ಪತ್ರಿಕೆಯಲ್ಲಿ. ಅದು ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸುವ ಯತ್ನ ನಡೆಸಿತ್ತು. ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಮಗುವೊಂದನ್ನು ಅಪಹರಿಸುವ, ಪಾಕಿಸ್ತಾನದಲ್ಲಿನ ಸುರಕ್ಷತೆಗೆ ಸಂಬಂಧಿಸಿದ ವಿಡಿಯೊ ಒಂದನ್ನು ಭಾರತದಲ್ಲಿ ನಡೆದ ನೈಜ ಘಟನೆ ಎಂಬಂತೆ ಒಬ್ಬರಿಂದ ಒಬ್ಬರಿಗೆ ರವಾನಿಸಲಾಯಿತು. ಈ ವಿಡಿಯೊ ಜೊತೆ, ಪಾಲಕರು ಕಟ್ಟೆಚ್ಚರದಲ್ಲಿ ಇರಬೇಕು ಎನ್ನುವ ಸಂದೇಶ ಕೂಡ ಇತ್ತು. ಇದು ಹುಸಿ ಬೆದರಿಕೆಗಳಿಗೆ ತುಪ್ಪ ಸುರಿಯುವಂತೆ ಇತ್ತು ಎಂದು ಅದರಲ್ಲಿನ ವರದಿಯಲ್ಲಿ ಹೇಳಲಾಗಿದೆ.

'ಸಾಮಾನ್ಯವಾಗಿ ಹೊರಗಿನವರನ್ನು ಗುರಿಯಾಗಿಸಿಕೊಂಡು ನಡೆದ, ಹಿಂದೆ ಮುಂದೆ ಆಲೋಚಿಸದೆ ನಡೆಸಿದ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆ ಕೊಡಲು ಅಧಿಕಾರಸ್ಥರಿಗೆ ಆಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸೀಮಿತ ಪರಿಣಾಮ ಬೀರಿವೆ' ಎಂದೂ ಆ ವರದಿಯಲ್ಲಿ ಹೇಳಲಾಗಿದೆ.

ವ್ಯಕ್ತಿಯನ್ನು ಹೊಡೆದು ಸಾಯಿಸಿದ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ ತ್ರಿಪುರ ಸರ್ಕಾರವು ಇಡೀ ರಾಜ್ಯದಲ್ಲಿ ಇಂಟರ್ನೆಟ್‌ ಸೇವೆಗಳನ್ನು ನಿರ್ಬಂಧಿಸಿತು. ಇದು ನನಗೆ ಆಶ್ಚರ್ಯ ತರಿಸುತ್ತದೆ. ಏಕೆಂದರೆ, ಸಾರ್ವಜನಿಕವಾಗಿ ನಡೆಯುವ ಜನರ ಹತ್ಯೆಯನ್ನು ತಡೆಯುವುದು ವಾಟ್ಸ್‌ಆ್ಯಪ್‌ ಅನ್ನು ನಿಯಂತ್ರಿಸುವ ಮೂಲಕ ಎಂದು ಸರ್ಕಾರ ನಂಬಿದೆ.

ಈ ರೀತಿ ಜನರ ಹತ್ಯೆ ಆಗುತ್ತಿರುವುದು, ಅದು ಮತ್ತೆ ಮತ್ತೆ ನಡೆಯುತ್ತಿರುವುದೇ ಒಂದು ಕಥೆ. ಆದರೆ ಇದರ ಬಗ್ಗೆ ಒಂದು ಸಮಾಜವಾಗಿ ನಾವು ಹೆಚ್ಚು ತಲೆಕೆಡಿಸಿಕೊಂಡಂತೆ ಇಲ್ಲ. ಇದು ನಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳುತ್ತದೆ. ನಾವು 'ಉದ್ರಿಕ್ತರ ಗುಂಪು' ಎಂದು ಸಾಮಾನ್ಯವಾಗಿ ಕರೆಯುವುದು ಭಾರತದ ಸಮಾಜವನ್ನೇ...

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !