ಭಾನುವಾರ, ಸೆಪ್ಟೆಂಬರ್ 27, 2020
26 °C

ಒಂದು ಸುದ್ದಿ, ಚಿತ್ರ ನೀಡಿದ ಸಂದೇಶ

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

ರಕ್ಷಣೆ ಮತ್ತು ದ್ವಿಪಕ್ಷೀಯ ಸಂಬಂಧ ಕುರಿತ ಎರಡು ಸಂಗತಿಗಳು ಈಚಿನ ದಿನಗಳಲ್ಲಿ ಸುದ್ದಿಯಲ್ಲಿವೆ. ಮೊದಲನೆಯದು, ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡುವುದಕ್ಕೆ ಸಂಬಂಧಿಸಿದ ಸುದ್ದಿ. ಎರಡನೆಯದು, ‘2+2’ ಮಾತುಕತೆ ಹೆಸರಿನಲ್ಲಿ ಭಾರತವು ಅಮೆರಿಕದ ಜೊತೆ ನಡೆಸಿದ ಸಭೆ.

ನಾನು ಈ ಎರಡರ ಪೈಕಿ ಒಂದು ಸುದ್ದಿಯ ಬಗ್ಗೆ ಮಾತನಾಡೋಣ ಅಂದುಕೊಂಡಿದ್ದೆ. ಆದರೆ ನಾನು ಮಾತನಾಡುವುದು ರಕ್ಷಣಾ ದೃಷ್ಟಿಕೋನದಿಂದ ಅಲ್ಲ. ನಾನು ಬೇರೊಂದು ಆಯಾಮದ ಬಗ್ಗೆ ಗಮನ ನೀಡುವ ಮನಸ್ಸು ಹೊಂದಿದ್ದೇನೆ.

ಸಾಮಾನ್ಯವಾಗಿ ಇಂತಹ ವಿಚಾರಗಳು ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸುವವರಿಗೆ ಮತ್ತು ಅವುಗಳ ಬಗ್ಗೆ ವರದಿ ಮಾಡುವವರಿಗೆ ಮಾತ್ರ ಆಸಕ್ತಿ ಹುಟ್ಟಿಸುತ್ತವೆ. 2+2 ಮಾತುಕತೆಯ ಪರಿಣಾಮಗಳ ಬಗ್ಗೆ ಈ ಗುಂಪು ತೀರಾ ಉತ್ಸಾಹ ತೋರಿತ್ತು. ಏಕೆಂದರೆ ಈ ಮಾತುಕತೆಯು ಹಲವು ಬಗೆಯ ಹೊಸತುಗಳಿಗೆ ಕಾರಣವಾಗಲಿದೆ ಎಂದು ಅನಿಸಿತ್ತು. ಆದರೆ ಈ ಗುಂಪಿನ ಆಲೋಚನೆ ಅದೆಷ್ಟು ಸಂಕುಚಿತ ಎಂಬುದು ಈ ಮಾತುಕತೆ ಬಗ್ಗೆ ಒಂದು ರಾಷ್ಟ್ರೀಯ ದಿನಪತ್ರಿಕೆ ಮಾರನೆಯ ದಿನ ಪ್ರಕಟಿಸಿದ ವರದಿಯಲ್ಲಿ ಪ್ರತಿಫಲಿತವಾಯಿತು.

ಆ ವರದಿಯ ಮೊದಲ ಸಾಲಿನಲ್ಲಿ ‘ಸಿಐಎಸ್‌ಎಂಒಎ ಒಪ್ಪಂದವನ್ನು ಭಾರತದ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಿರುವ ಸಿಒಎಂಸಿಎಎಸ್‌ಎ ಒಪ್ಪಂದಕ್ಕೆ ಅಮೆರಿಕದ ಜೊತೆಗಿನ 2+2 ಮಾತುಕತೆ ಸಂದರ್ಭದಲ್ಲಿ ಸಹಿ ಹಾಕಿರುವುದರ ಪರಿಣಾಮವಾಗಿ ಭಾರತದ ರಕ್ಷಣಾ ವಿಚಾರಗಳ ವಲಯದಲ್ಲಿನ ಹಲವರ ಸಂತಸ ಎಲ್ಲೆ ಮೀರಿದೆ’ ಎಂದು ಬರೆಯಲಾಗಿತ್ತು.

ಈ ಎರಡು ಒಪ್ಪಂದಗಳು ಅಥವಾ 2+2 ಮಾತುಕತೆ ಎಂದರೆ ಏನು ಎಂಬುದು ಭಾರತೀಯರಲ್ಲಿ ಎಷ್ಟು ಜನರಿಗೆ ಗೊತ್ತಿದೆ? ಬಹುಶಃ ಇಲ್ಲಿ ಲಕ್ಷಕ್ಕೆ ಒಬ್ಬರಿಗೆ ಅವುಗಳ ಬಗ್ಗೆ ಗೊತ್ತಿರಬಹುದು. ಅಥವಾ ಅದಕ್ಕಿಂತ ಕಡಿಮೆ ಜನರಿಗೆ ಗೊತ್ತಿದ್ದಿರಬಹುದು. ಈ ಅಂಕಣ ಬರಹವು ರಕ್ಷಣಾ ವಿಚಾರಗಳ ಬಗ್ಗೆಯೋ ರಕ್ಷಣಾ ಹಗರಣಗಳ ಬಗ್ಗೆಯೋ ಆಗಿಲ್ಲದ ಕಾರಣ, ಸಿಒಎಂಸಿಎಎಸ್‌ಎ ಅಂದರೆ, ಸಿಐಎಸ್‌ಎಂಒಎ ಅಂದರೆ ಏನು ಎಂಬ ಬಗ್ಗೆ ಬರೆಯಲು ಹೋಗುವುದಿಲ್ಲ.

ಈ ಮಾತುಕತೆಯ ಸುದ್ದಿ ಜೊತೆ ಪ್ರಕಟವಾದ ಚಿತ್ರ ನನ್ನಲ್ಲಿ ಆಸಕ್ತಿ ಮೂಡಿಸಿತು. ಆ ಚಿತ್ರದಲ್ಲಿ ನಾಲ್ಕು ಜನ ಇದ್ದರು. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮತ್ತು ವಿದೇಶಾಂಗ ಕಾರ್ಯದರ್ಶಿ, ಭಾರತದ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಅದರಲ್ಲಿ ಇದ್ದರು.

ಈ ನಾಲ್ಕೂ ಸಚಿವರು ಹೊಂದಿರುವ ಹುದ್ದೆಗಳು ಸಮಾನವಾದವು. ಅಂದರೆ, ಅಮೆರಿಕದಲ್ಲಿ ಕಾರ್ಯದರ್ಶಿ ಹುದ್ದೆಯು ಭಾರತದಲ್ಲಿ ಸಂಪುಟ ದರ್ಜೆಯ ಸಚಿವರಿಗೆ ಸಮ. ನಮಗಿಂತ ಕೆಳಗಿನವರ ಜೊತೆ ಮಾತುಕತೆ ನಡೆಸಲು ಸಿದ್ಧವಿಲ್ಲದ ದೇಶ ಮತ್ತು ಸಂಸ್ಕೃತಿಗೆ
ಸೇರಿದವರು ಎಂಬ ಆರೋಪವನ್ನು ಸಾಮಾನ್ಯವಾಗಿ ನಮ್ಮ ಮೇಲೆ ಹೊರಿಸಲಾಗುತ್ತದೆ. ಮಾಜಿ ರಾಜತಾಂತ್ರಿಕ ಹಾಗೂ ಭಾರತ-ಅಮೆರಿಕ ನಡುವಣ ಸಂಬಂಧಗಳ ಕುರಿತ ತಜ್ಞ ಡೆನ್ನಿಸ್ ಕಕ್ಸ್‌ ಒಂದು ಮಾತು ಬರೆದಿದ್ದಾರೆ.

ಭಾರತದ ರಾಜತಾಂತ್ರಿಕರು ಅಮೆರಿಕದ ತಮಗಿಂತ ಕೆಳಗಿನ ದರ್ಜೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ಸಾಮಾನ್ಯವಾಗಿ ಒಪ್ಪುವುದಿಲ್ಲ. ಮಾತುಕತೆಯಲ್ಲಿ ಪ್ರಸ್ತಾಪ ಆಗುವ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಅಮೆರಿಕದ ಆ ಅಧಿಕಾರಿಗಳಿಗೆ ಇದ್ದರೂ, ಭಾರತದವರು ಮಾತುಕತೆ ನಡೆಸುವುದಿಲ್ಲ ಎಂದು ಅವರು ಬರೆದಿದ್ದಾರೆ. ಮಾತುಕತೆಯಿಂದ ಯಾವುದೇ ತೀರ್ಮಾನ ಹೊರಬಾರದೆ ಇದ್ದರೂ, ಭಾರತದ ಅಧಿಕಾರಿಗಳು ತಮಗೆ ಸಮಾನರಾದ ಅಧಿಕಾರಿಗಳ ಜೊತೆ ಮಾತುಕತೆಗೆ ನಡೆಸುತ್ತಾರೆ.

2+2 ಮಾತುಕತೆಯಲ್ಲಿ ಇಂತಹ ಪರಿಸ್ಥಿತಿ ಖಂಡಿತ ಎದುರಾಗಿರಲಿಲ್ಲ. ಬಲಾಢ್ಯ ಅಮೆರಿಕವು ತನ್ನ ಅಧ್ಯಕ್ಷನ ನಂತರದ ಇಬ್ಬರು ಶಕ್ತಿಶಾಲಿ ಪ್ರತಿನಿಧಿಗಳನ್ನು ದೆಹಲಿಗೆ ಮಾತುಕತೆಗೆ ಕಳುಹಿಸಿತ್ತು, ಅದರಲ್ಲೂ ಈ ಮಾತುಕತೆ ನಡೆದಿದ್ದು ಸಚಿವರ ಮಟ್ಟದಲ್ಲಿ ಎಂಬ ವಿಚಾರವಾಗಿ ಭಾರತದಲ್ಲಿ ವ್ಯೂಹಾತ್ಮಕ ವಿದ್ಯಮಾನಗಳ ಜೊತೆ ತೊಡಗಿಕೊಂಡ ಹಲವರು ಖುಷಿಪಟ್ಟಿರುತ್ತಾರೆ. ಅದಿರಲಿ, ನನಗೆ ಆಸಕ್ತಿ ಇರುವುದು ಶಕ್ತಿಪ್ರದರ್ಶನದ ವಿಚಾರದಲ್ಲಿ ಅಲ್ಲ. ಅದಕ್ಕಿಂತ ವಿಭಿನ್ನವಾದ ವಿಚಾರದಲ್ಲಿ.

ಆ ಚಿತ್ರದಲ್ಲಿ ನಾಲ್ಕು ಜನ ಒಟ್ಟಿಗೆ ನಿಂತು, ವೀಕ್ಷಕರತ್ತ ಮುಖ ಮಾಡಿದ್ದರು. ಎಡ ಭಾಗದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಇದ್ದರು. ಅವರ ಜೊತೆ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಇದ್ದರು. ಇವರಿಬ್ಬರೂ ಪುರುಷರು, ಬಿಳಿಯರು. ಮ್ಯಾಟಿಸ್ ಅವರು ಹಿಂದೆ ಸೇನೆಯಲ್ಲಿ ಹಿರಿಯ ಅಧಿಕಾರಿ (ಜನರಲ್) ಆಗಿದ್ದವರು. ಪಾಂಪಿಯೊ ಕೂಡ ಹಿಂದೆ ಸೇನೆಯಲ್ಲಿ ಇದ್ದವರು. ಒಂದು ಸಂದರ್ಭದಲ್ಲಿ ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಮುಖ್ಯಸ್ಥ ಕೂಡ ಆಗಿದ್ದವರು.

ಅವರ ಬಲಭಾಗದಲ್ಲಿ ಭಾರತದ ರಕ್ಷಣಾ ಸಚಿವೆ ಮತ್ತು ವಿದೇಶಾಂಗ ಸಚಿವೆ ನಿಂತಿದ್ದರು. ಇವರಿಬ್ಬರೂ ಮಹಿಳೆಯರು. ಇಬ್ಬರಲ್ಲಿ ಒಬ್ಬರು ಉತ್ತರ ಭಾರತದವರು (ಸುಷ್ಮಾ ಸ್ವರಾಜ್), ಇನ್ನೊಬ್ಬರು (ನಿರ್ಮಲಾ ಸೀತಾರಾಮನ್) ದಕ್ಷಿಣ ಭಾರತದವರು. ಇವರಿಬ್ಬರೂ ಸ್ವಂತ ಶಕ್ತಿಯಿಂದ ಮೇಲೆ ಬಂದವರು. ದೇಶದ ಬಹುಮುಖ್ಯ ಹಾಗೂ ಶಕ್ತಿಶಾಲಿ ಸ್ಥಾನಕ್ಕೆ ಅವರು ಬಂದಿದ್ದು ಯಾರನ್ನೋ ನೆಚ್ಚಿಕೊಂಡು ಅಲ್ಲ.

ಇಬ್ಬರು ಶಕ್ತಿಶಾಲಿ ಪುರುಷರು, ಇಬ್ಬರ ಶಕ್ತಿಶಾಲಿ ಮಹಿಳೆಯರ ಜೊತೆ ಕೈಕುಲುಕುತ್ತಿದ್ದರು. ಈ ಚಿತ್ರ ನನ್ನಲ್ಲಿ ಸಂತಸದ ಭಾವ ಮೂಡಿಸಿತು. ನಾನು ಸಾಮಾನ್ಯವಾಗಿ ರಕ್ಷಣೆಗೆ ಸಂಬಂಧಿಸಿದ ವರದಿಗಳನ್ನು ಓದಲು ಇಷ್ಟಪಡುವುದಿಲ್ಲ. ಏಕೆಂದರೆ, ತೀರಾ ಕಡಿಮೆ ಸಂಪನ್ಮೂಲಗಳು ಇರುವ ದೇಶವೊಂದರ ಹಣವನ್ನು ಇವು ಭಯ ಹುಟ್ಟಿಸುವ ರೀತಿಯಲ್ಲಿ ಖರ್ಚು ಮಾಡಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಈ ಕ್ಷೇತ್ರದಲ್ಲಿ ಆಗುವ ಖರ್ಚುಗಳು ಸಾಮಾನ್ಯವಾಗಿ ಶ್ರೀಮಂತರ ಹಿತಾಸಕ್ತಿಗಳಿಗೆ ಅನುಕೂಲ ಆಗುವಂತೆ ಇರುತ್ತವೆ (ಇದನ್ನು ರಕ್ಷಣೆಗೆ ಸಂಬಂಧಿಸಿದ ಇನ್ನೊಂದು ವರದಿ ತೋರಿಸುತ್ತಿದೆ). ಆದರೆ, ಈ ವರದಿ ಮತ್ತು 2+2 ಮಾತುಕತೆಯ ಚಿತ್ರ ನನ್ನನ್ನು ಬಹಳ ಹರ್ಷಚಿತ್ತನನ್ನಾಗಿ ಮಾಡಿತು.

ಜಗತ್ತಿನ ಇತರೆಡೆಗಳಂತೆಯೇ ನಾವು ಕೂಡ ತೀವ್ರ ಅಸಮಾನತೆಗಳು ಇರುವಲ್ಲಿ ವಾಸಿಸುತ್ತಿದ್ದೇವೆ. ಅಮೆರಿಕದಲ್ಲಿ ಬಿಳಿಯರ ಪ್ರಭಾವ ಎಲ್ಲೆಡೆ ಕಾಣುತ್ತದೆ. ಅಲ್ಲಿ ಕೂಡ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಇಲ್ಲ. ಹಾಗೆಯೇ, ಕಪ್ಪುವರ್ಣೀಯರಿಗೆ ಮತ್ತು ಇತರ ಧರ್ಮೀಯರಿಗೆ ಅವಕಾಶಗಳು ಬಹಳ ಕಡಿಮೆ. ಈ ಮಾತು ಭಾರತದ ಮಟ್ಟಿಗೂ ಸತ್ಯ. ಆ ಚಿತ್ರವು ನಮ್ಮ ಸರ್ಕಾರವನ್ನು ಪೂರ್ತಿಯಾಗಿ ಪ್ರತಿನಿಧಿಸುವುದಿಲ್ಲ. ಆದರೆ ಇವರಿಬ್ಬರನ್ನು ಹೊರತುಪಡಿಸಿದರೆ, ನಮ್ಮ ಸಂಪುಟದಲ್ಲಿ ಶಕ್ತಿಶಾಲಿ ಎನ್ನುವ ಒಬ್ಬ ಮಹಿಳೆ (ಸ್ಮೃತಿ ಇರಾನಿ) ಮಾತ್ರ ನೆನಪಾಗುತ್ತಾರೆ.

ನಮ್ಮ ರಾಜಕಾರಣದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲದಿರುವುದು ಪ್ರತಿಭೆ ಇಲ್ಲದಿರುವ ಕಾರಣದಿಂದ ಅಲ್ಲ. ಸ್ವರಾಜ್, ಸೀತಾರಾಮನ್, ಇರಾನಿ, ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಹಾಗೂ ಇತರ ಕೆಲವರು ‘ಪ್ರತಿಭೆ ಇಲ್ಲ’ ಎಂಬ ಮಾತನ್ನು ಅಲ್ಲಗಳೆದಿದ್ದಾರೆ. ನಮ್ಮಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದಿರುವುದಕ್ಕೆ ಕಾರಣ, ಅವಕಾಶಗಳ ಕೊರತೆ.

2+2 ಸಭೆಯಂತಹ ಸಂದರ್ಭಗಳು ಈ ಅರಿವನ್ನು ನಮ್ಮಲ್ಲಿ ಮೂಡಿಸಬೇಕು. ನಮ್ಮ ಬೆಂಬಲ ಮತ್ತು ನಮ್ಮ ಮತ ಬೇಕು ಎಂದಾದರೆ ತಮ್ಮ ಚಟುವಟಿಕೆಗಳಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಒತ್ತಾಯವನ್ನು ನಾವು ಎಲ್ಲ ರಾಜಕೀಯ ಪಕ್ಷಗಳ ಮೇಲೆ ತರಬೇಕು.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು