ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ, ಜೆಡಿಎಸ್‌ ನಾಯಿಗಳಿವೆ ಎಚ್ಚರಿಕೆ’

ಕಾಂಗ್ರೆಸ್‌ ಮುಖಂಡ ‘ಮುಖ್ಯಮಂತ್ರಿ’ ಚಂದ್ರು ಹೇಳಿಕೆ
Last Updated 14 ಏಪ್ರಿಲ್ 2018, 4:46 IST
ಅಕ್ಷರ ಗಾತ್ರ

ಮೈಸೂರು: ‘ನಾಯಿ ಇದೆ ಎಚ್ಚರಿಕೆ ಎಂದು ಬಹಳಷ್ಟು ಮನೆಗಳ ಮುಂದೆ ಬೋರ್ಡ್‌ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಇವೆ ಎಚ್ಚರಿಕೆ ಎಂಬ ಫಲಕವನ್ನು ಪ್ರತಿ ಮನೆ ಮುಂದೆಯೂ ಹಾಕುವ ಅಗತ್ಯವಿದೆ’ ಎಂದು ಕಾಂಗ್ರೆಸ್‌ ಮುಖಂಡ ‘ಮುಖ್ಯಮಂತ್ರಿ’ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜನರಾಜಕಾರಣ ಪ್ರಚಾರಾಂದೋಲನ’ದಲ್ಲಿ ಅವರು ಮಾತನಾಡಿದರು.

‘ಬಿಜೆಪಿ, ಜೆಡಿಎಸ್ ಅಪಾಯಕಾರಿ ಪಕ್ಷಗಳು ಎಂಬುದು ಜನತೆಗೆ ಗೊತ್ತಾಗಿದೆ. ಕಳ್‌ನನ್‌ಮಕ್ಳು ಅಧಿಕಾರಕ್ಕೆ ಬಂದಾರು ಹುಷಾರಾಗಿರ್ರೋ ಎಂದು ಹಳ್ಳಿಕಟ್ಟೆ ಮೇಲೆ ಕುಳಿತ ಜನ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಯವರು ಯಾವಾಗಲೂ ದೇಶ ಒಡೆಯುತ್ತಲೇ ಬಂದಿದ್ದಾರೆ. ಜೆಡಿಎಸ್‌ನವರು ಜಾತಿ ರಾಜಕಾರಣ ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಅಪ್ಪ– ಮಕ್ಕಳ ಪಕ್ಷ ಇದ್ದದ್ದು ಈಗ ಅಪ್ಪ– ಮಕ್ಕಳು– ಮೊಮ್ಮಕ್ಕಳು– ಸೊಸೆಯಂದಿರ ಪಕ್ಷವಾಗಿ ಬಿಟ್ಟಿದೆ’ ಎಂದು ಕುಟುಕಿದರು.

‘ಇಂದು ದೇಶ ಬಿಟ್ಟು ತೊಲಗಬೇಕಿರುವುದು ಬಿಜೆಪಿಯವರು. ಬ್ರಿಟಿಷರ ವಿರುದ್ಧ ಸಾರಿದ ಯುದ್ಧದಂತೆ ಇವರ ವಿರುದ್ಧವೂ ಕ್ವಿಟ್‌ ಇಂಡಿಯಾ ಚಳವಳಿ ನಡೆಸಬೇಕಿದೆ. ಅದೇ ರೀತಿ ಜೆಡಿಎಸ್‌ ವಿರುದ್ಧ ಜಾತಿ ಬಿಟ್ಟು ತೊಲಗಿ ಹೋರಾಟ ಆರಂಭಿಸಬೇಕಿದೆ’ ಎಂದು ಆಗ್ರಹಿಸಿದರು.

‘ಅನ್ನಭಾಗ್ಯದಂಥ ಯೋಜನೆ ಮೂಲಕ ಸಿದ್ದರಾಮಯ್ಯ ಜನರ ಹೊಟ್ಟೆ ತುಂಬಿಸಿದ್ದಾರೆ. ಆದರೆ, ಬಿಜೆಪಿಯವರು ಮುಷ್ಟಿ ಧಾನ್ಯ ಆರಂಭಿಸಿದ್ದಾರೆ. ನೀವು ಸತ್ತಾಗ ನಿಮ್ಮ ಬಾಯಿಗೆ ಹಾಕೋಕೆ ಅಕ್ಕಿ ಸಂಗ್ರಹ ಮಾಡುತ್ತಿದ್ದೀವಿ ಎನ್ನುವ ಸಂದೇಶವಲ್ಲವೇ ಇದು’ ಎಂದು ಅವರು ಸಿನಿಮಾ ಶೈಲಿಯಲ್ಲಿ ಹೇಳಿದರು.

**

ಪಕ್ಕದ ಮನೆ ಹೆಂಗಸರನ್ನು ಹಿಡ್ಕೊಂಡವರಿಗೆ ಬಿಜೆಪಿಯವರು ಟಿಕೆಟ್‌ ಕೊಟ್ಟಿದ್ದಾರೆ. ಭಂಡತನವೇ ಗಾದಿ ಏರಿದ್ದನ್ನು ಕೇಂದ್ರದಲ್ಲಿ ನೋಡಿದ್ದು ಸಾಕಲ್ಲವೇ?

–‘ಮುಖ್ಯಮಂತ್ರಿ’ ಚಂದ್ರು, ಕಾಂಗ್ರೆಸ್‌ ಮುಖಂಡ

**

ಕಾಂಗ್ರೆಸ್‌ ಪರ ಪ್ರಾಧ್ಯಾಪಕ ಪ್ರಚಾರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಬಿ.ಪಿ.ಮಹೇಶ್‌ಚಂದ್ರ ಗುರು ಬಹಿರಂಗವಾಗಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ಗೆ ಹಾನಿ ಆಗುವುದೆಂದರೆ ಅದು ಸಂವಿಧಾನಕ್ಕೇ ಹಾನಿಯಾದಂತೆ’ ಎಂದರು.

‘ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತ ವರ್ಗದ ಕೆಲವು ಮೂರ್ಖರು ಸೇರಿಕೊಂಡು ಮೋದಿಯನ್ನು ಪ್ರಧಾನಿ ಮಾಡಿದ್ದಾರೆ. ಆದರೆ, ಮೋದಿ ಅವರಿಗೆ ನಾನು ಕೊಡುವ ಎಚ್ಚರಿಕೆ ಒಂದೇ; ಎಲ್ಲರನ್ನೂ, ಎಲ್ಲ ಸಮಯದಲ್ಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT