ತುರ್ತು ಪರಿಸ್ಥಿತಿ: ಮರೆಯಲಾಗದು, ಕ್ಷಮಿಸಲಾಗದು

7

ತುರ್ತು ಪರಿಸ್ಥಿತಿ: ಮರೆಯಲಾಗದು, ಕ್ಷಮಿಸಲಾಗದು

ಎ. ಸೂರ್ಯ ಪ್ರಕಾಶ್
Published:
Updated:

ಜೂನ್‌ ತಿಂಗಳು ದೇಶದ ಹಲವು ಪ್ರದೇಶಗಳಿಗೆ ಅಸಾಧ್ಯ ಸೆಖೆಯನ್ನು ಹೊತ್ತು ತರುತ್ತದೆ. ಅದರ ಜೊತೆಯಲ್ಲೇ, ಕಾಂಗ್ರೆಸ್ಸಿನ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ, 1975ರ ಜೂನ್‌ 25ರಂದು ದೇಶದಾದ್ಯಂತ ಹೇರಿದ ಸರ್ವಾಧಿಕಾರದ ತುರ್ತು ಪರಿಸ್ಥಿತಿಯ ಯಾತನಾಮಯ ನೆನಪುಗಳನ್ನೂ ಈ ಮಾಸ ತನ್ನ ಜೊತೆ ತರುತ್ತದೆ. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯು ಚಲನಶೀಲ ಪ್ರಜಾತಂತ್ರ ವ್ಯವಸ್ಥೆಯೊಂದನ್ನು ಸರ್ವಾಧಿಕಾರದ ವ್ಯಾಪ್ತಿಗೆ ತಂದಿತು. ಪ್ರಜೆಗಳ ಮೂಲಭೂತ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಷ್ಟೇ ಅಲ್ಲದೆ ಈ ಅವಧಿಯು ಪ್ರಜೆಗಳ ಬದುಕುವ ಹಕ್ಕನ್ನೇ ಕಸಿದುಕೊಂಡಿತು.

ನಾವು ಅನುಭವಿಸುತ್ತಿರುವ ಪ್ರಜಾತಾಂತ್ರಿಕ ಜೀವನಕ್ರಮವನ್ನು ಉಳಿಸಿಕೊಳ್ಳಲು, ಪ್ರಜಾತಂತ್ರ ವ್ಯವಸ್ಥೆ ಹೇಗೆ ಹಳಿತಪ್ಪಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು, ಭಾರತವು ಸರ್ವಾಧಿಕಾರಕ್ಕೆ ಒಳಪಟ್ಟಾಗ ನಡೆದಿದ್ದು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು 1975ರಿಂದ 1977ರ ನಡುವೆ ಆಗಿದ್ದನ್ನು ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ನಮ್ಮ ಸಂವಿಧಾನದ ಮೂಲ ಮೌಲ್ಯಗಳನ್ನು ಸಂರಕ್ಷಿಸಬೇಕು ಎಂಬುದು ನಮ್ಮ ಇಚ್ಛೆ ಆಗಿದ್ದರೆ ತುರ್ತು ಪರಿಸ್ಥಿತಿಯ ವಿಚಾರವಾಗಿ ನಾವು ಮರೆಯಬಾರದ ಸಂಗತಿಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಹಾಗೆಯೇ, ನಾವು ಎಂದಿಗೂ ಕ್ಷಮಿಸಬಾರದ ಘಟನೆಗಳ ಪಟ್ಟಿಯನ್ನೂ ಸಿದ್ಧ ಮಾಡಿಕೊಳ್ಳಬೇಕು. ಆ ಪಟ್ಟಿ ಇಲ್ಲಿದೆ:

ಮರೆಯಬಾರದ ಸಂಗತಿಗಳು:

* ಇಂದಿರಾ ಗಾಂಧಿ ಅವರ ಸರ್ವಾಧಿಕಾರದ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿ, 1977ರ ಮಾರ್ಚ್‌ನಲ್ಲಿ ದೇಶದಲ್ಲಿ ಪ್ರಜಾತಂತ್ರದ ಮರುಸ್ಥಾಪನೆಗೆ ಕಾರಣರಾದ ಸಾಮಾಜಿಕ ಹಾಗೂ ರಾಜಕೀಯ ಮುಖಂಡರ ತ್ಯಾಗವನ್ನು ಮರೆಯಬಾರದು. ಹಾಗೆ ಹೋರಾಟ ನಡೆಸಿದವರಲ್ಲಿ ಜಯಪ್ರಕಾಶ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ಜಾರ್ಜ್ ಫರ್ನಾಂಡಿಸ್, ಎಲ್.ಕೆ. ಅಡ್ವಾಣಿ, ಚರಣ್ ಸಿಂಗ್, ಮಧು ದಂಡವತೆ, ಮೊರಾರ್ಜಿ ದೇಸಾಯಿ, ನಾನಾಜಿ ದೇಶಮುಖ್, ರಾಮಕೃಷ್ಣ ಹೆಗಡೆ, ಸಿಕಂದರ್ ಭಕ್ತ್, ನರೇಂದ್ರ ಮೋದಿ, ಎಚ್.ಡಿ. ದೇವೇಗೌಡ, ಲಾಲು ಪ್ರಸಾದ್, ನಿತೀಶ್ ಕುಮಾರ್ ಮತ್ತು ಇನ್ನಿತರರು ಇದ್ದಾರೆ.

* ದೇಶದಲ್ಲಿ ಪ್ರಜಾತಂತ್ರ ಪುನಃ ಅಸ್ತಿತ್ವಕ್ಕೆ ಬರುವಂತೆ ಆಗುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ವಹಿಸಿದ ಪಾತ್ರ. ಭಯ ಮೂಡಿಸುತ್ತಿದ್ದ ಮೀಸಾ ಕಾಯ್ದೆಯ ಅಡಿ ಜೈಲಿಗೆ ತಳ್ಳಲ್ಪಟ್ಟ 6,330 ರಾಜಕೀಯ ಕಾರ್ಯಕರ್ತರ ಪೈಕಿ 4,026 ಮಂದಿ ಜನಸಂಘ (ಬಿಜೆಪಿಯ ಹಿಂದಿನ ಹೆಸರು) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದವರಾಗಿದ್ದರು. ಹೀಗೆ ಜೈಲು ಸೇರಿದವರಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಆಗಿದ್ದ ಬಾಳಾಸಾಹೇಬ್ ದೇವರಸ್, ಈಗ ಉಪರಾಷ್ಟ್ರಪತಿ ಆಗಿರುವ ಎಂ. ವೆಂಕಯ್ಯ ನಾಯ್ಡು, ಈಗಿನ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಅನಂತಕುಮಾರ್, ರಾಮ್‌ ವಿಲಾಸ್ ಪಾಸ್ವಾನ್‌, ಆರ್‌ಎಸ್‌ಎಸ್‌ನ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ಕೂಡ ಸೇರಿದ್ದಾರೆ. ದೇಶದಿಂದ ಎರಡು ಬಾರಿ ತಪ್ಪಿಸಿಕೊಂಡು ಹೊರಗೆ ಹೋದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಇಂದಿರಾ ಅವರ ಸರ್ವಾಧಿಕಾರದ ವಿರುದ್ಧ ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಅಭಿಯಾನ ನಡೆಸಿದರು. ಆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭೂಗತ ಅಭಿಯಾನದ ಭಾಗ ಆಗಿದ್ದರು. ಆಗ ಅವರು ತುರ್ತು ಪರಿಸ್ಥಿತಿ ವಿರುದ್ಧ ಪ್ರತಿರೋಧ ಕಟ್ಟುವ, ತುರ್ತುಸ್ಥಿತಿ ವಿರೋಧಿ ಸಾಹಿತ್ಯ ರಚಿಸುವ, ಜೈಲುಪಾಲಾದ ನಾಯಕರ ಕುಟುಂಬಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದರು.

* ಎಡಿಎಂ ಜಬಲ್ಪುರ ಮತ್ತು ಶಿವಕಾಂತ್ ಶುಕ್ಲಾ ನಡುವಣ ಪ್ರಕರಣದಲ್ಲಿ (ಇದು ಹೇಬಿಯಸ್ ಕಾರ್ಪಸ್ ಅರ್ಜಿ ಎಂದೂ ಖ್ಯಾತವಾಗಿದೆ) ಭಿನ್ನ ದನಿಯ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರನ್ನೂ ಮರೆಯುವಂತೆ ಇಲ್ಲ. ಸಂವಿಧಾನದ 21ನೇ ವಿಧಿ ನೀಡಿರುವ ಜೀವಿಸುವ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರುವ ಹಕ್ಕು ಪ್ರಜೆಗಳಿಗೆ ಇದೆಯೇ ಎಂಬುದನ್ನು ಕೋರ್ಟ್ ತೀರ್ಮಾನಿಸಬೇಕಿತ್ತು. ಈ ಒಂದು ಹಕ್ಕು ಪ್ರಜಾತಾಂತ್ರಿಕ ಸಂವಿಧಾನ ಇರುವ ದೇಶದ ತಳಪಾಯ. ‘ಜೀವಿಸುವ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಪ್ರಜೆಗಳಿಗೆ ಇರುವುದಿಲ್ಲ’ ಎನ್ನುವ ಸರ್ಕಾರದ ವಾದವನ್ನು ಒಪ್ಪಿಕೊಳ್ಳಬೇಕು ಎಂದು ಅಂದಿನ ಅಟಾರ್ನಿ ಜನರಲ್ ನಿರೇನ್ ಡೇ ಹೇಳುತ್ತಿದ್ದಾಗ, ನ್ಯಾಯಮೂರ್ತಿ ಖನ್ನಾ ಅವರು, ‘ಪೊಲೀಸ್ ಅಧಿಕಾರಿಯೊಬ್ಬ ಪ್ರಜೆಯೊಬ್ಬನನ್ನು ವೈಯಕ್ತಿಕ ದ್ವೇಷದ ಕಾರಣಕ್ಕೆ ಹತ್ಯೆ ಮಾಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲವೇ’ ಎನ್ನುವ ಪ್ರಶ್ನೆಯನ್ನು ಕೇಳಿದರು. ‘ಇಲ್ಲ, ಇಂಥ ಸಂದರ್ಭದಲ್ಲಿ ಕೋರ್ಟ್ ಮೂಲಕ ನ್ಯಾಯ ಕೇಳಲು ಆಗದು’ ಎಂದು ನಿರೇನ್ ಡೇ ಉತ್ತರಿಸಿದರು. ಈ ವಾದವನ್ನು ಕೇಳಿದ, ನ್ಯಾಯಾಲಯದ ಸಭಾಂಗಣದಲ್ಲಿ ಹಾಜರಿದ್ದ ಇತರರು ದಂಗಾಗಿ ಹೋದರು. ಆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೀಠದಲ್ಲಿ ಇದ್ದ ಇತರ ನ್ಯಾಯಮೂರ್ತಿಗಳು– ಮುಖ್ಯ ನ್ಯಾಯಮೂರ್ತಿ ಎ.ಎನ್. ರೇ, ನ್ಯಾಯಮೂರ್ತಿಗಳಾದ ಎಂ.ಎಚ್. ಬೇಗ್, ವೈ.ವಿ. ಚಂದ್ರಚೂಡ್ ಮತ್ತು ಪಿ.ಎನ್. ಭಗವತಿ – ತುಟಿಬಿಚ್ಚಲಿಲ್ಲ ಎಂದು ನ್ಯಾಯಮೂರ್ತಿ ಖನ್ನಾ ಅವರು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ನಂತರದ ದಿನಗಳಲ್ಲಿ, ಈ ನಾಲ್ಕು ಜನ ನ್ಯಾಯಮೂರ್ತಿಗಳು ಸರ್ಕಾರದ ವಾದವನ್ನು ಎತ್ತಿಹಿಡಿದರು, ಪ್ರಜೆ ಹೊಂದಿರುವ ಜೀವಿಸುವ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡರು. ಈ ತೀರ್ಪಿನಲ್ಲಿ ಭಿನ್ನ ದನಿ ನ್ಯಾಯಮೂರ್ತಿ ಖನ್ನಾ ಅವರದ್ದು ಮಾತ್ರ. ಇದಾದ ಕೆಲವು ದಿನಗಳ ನಂತರ ಇಂದಿರಾ ಅವರು ನ್ಯಾಯಮೂರ್ತಿ ಖನ್ನಾ ಅವರ ಸೇವಾ ಹಿರಿತನ ಕಡೆಗಣಿಸಿ, ನ್ಯಾಯಮೂರ್ತಿ ಬೇಗ್ ಅವರನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಿದರು. ಪ್ರಜಾತಂತ್ರ ಹಾಗೂ ಮೂಲಭೂತ ಹಕ್ಕುಗಳಿಗೆ ಬೆಲೆ ಕೊಡುವ ಪ್ರತಿ ವ್ಯಕ್ತಿಯ ಪಾಲಿಗೂ ನ್ಯಾಯಮೂರ್ತಿ ಖನ್ನಾ ಅವರು ಹೀರೊ ಆಗಿ ಕಾಣಿಸುವುದು ಈ ಕಾರಣಗಳಿಂದಾಗಿ.

ನಾವು ಮರೆಯಬಾರದ್ದು:

* ಪ್ರಜಾತಂತ್ರ ವ್ಯವಸ್ಥೆಯನ್ನು ಸರ್ವಾಧಿಕಾರಿ ವ್ಯವಸ್ಥೆಯನ್ನಾಗಿ ಮಾಡಿದ್ದಕ್ಕೆ, ಜನರನ್ನು ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ನೂಕಿದ್ದಕ್ಕೆ, ತನ್ನನ್ನು ರಕ್ಷಿಸಿಕೊಳ್ಳುವ ಒಂದೇ ಉದ್ದೇಶದಿಂದ ಚುನಾವಣಾ ಕಾನೂನುಗಳು ಮತ್ತು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಕ್ಕೆ, ಉನ್ನತ ನ್ಯಾಯಾಂಗವನ್ನು ಗುರಿಯಾಗಿ ಇಟ್ಟುಕೊಂಡು ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದಿದ್ದಕ್ಕೆ, ಕಾರ್ಯಕಾರಿ ಆದೇಶದ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ರಾಷ್ಟ್ರಪತಿಯವರಿಗೆ ನೀಡಿದ್ದಕ್ಕೆ ನಾವು ಇಂದಿರಾ ಗಾಂಧಿ ಅವರನ್ನು ಮರೆಯಬಾರದು.

* ಕಲ್ಲಿಕೋಟೆಯ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪಿ. ರಾಜನ್ ಅವರಿಗೆ ಚಿತ್ರಹಿಂಸೆ ನೀಡಿ, ಅವರನ್ನು ಕೊಲೆ ಮಾಡಿಯೂ ಶಿಕ್ಷೆಗೆ ಗುರಿಯಾಗದ ಪೊಲೀಸ್‌ ಅಧಿಕಾರಿಗಳನ್ನು ಮರೆಯಬಾರದು.

* ಲಾರೆನ್ಸ್‌ ಫರ್ನಾಂಡಿಸ್ ಅವರನ್ನು ತಿಂಗಳುಗಳ ಕಾಲ ಹಿಂಸಿಸಿಯೂ ಶಿಕ್ಷೆಗೆ ಗುರಿಯಾಗದ ಕರ್ನಾಟಕ ಪೊಲೀಸ್‌ ಸಿಬ್ಬಂದಿಯನ್ನು ಮರೆಯಬಾರದು.

* ಪತ್ರಕರ್ತರಿಗೆ ಬೆದರಿಕೆ ಒಡ್ಡಿದ, ಸೆನ್ಸಾರ್‌ಶಿಪ್‌ ಜಾರಿಗೆ ತಂದ, ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಲು ಅಧಿಕಾರ ನೀಡಿದ ಮಾಧ್ಯಮ ವಿರೋಧಿ ಕಾನೂನನ್ನು ಜಾರಿಗೆ ತಂದ (ಇಂದಿರಾ ಗಾಂಧಿ ಸರ್ಕಾರದಲ್ಲಿ) ಮಾಹಿತಿ ಮತ್ತು ಪ್ರಸಾರ ಸಚಿವ ಆಗಿದ್ದ ವಿ.ಸಿ. ಶುಕ್ಲಾ ಅವರನ್ನು ಮರೆಯಬಾರದು. ಕಿಶೋರ್ ಕುಮಾರ್ ಅವರು ಸರ್ಕಾರಿ ಜಾಹೀರಾತೊಂದರಲ್ಲಿ ಹಾಡಲು ನಿರಾಕರಿಸಿದ ಕಾರಣ ಅವರ ಯಾವ ಹಾಡನ್ನೂ ಪ್ರಸಾರ ಮಾಡದಂತೆ ಶುಕ್ಲಾ ಅವರು ಆಲ್‌ ಇಂಡಿಯಾ ರೇಡಿಯೊಗೆ ಆದೇಶ ಮಾಡಿದ್ದರು.

* ಹೇಬಿಯಸ್ ಕಾರ್ಪಸ್‌ ಅರ್ಜಿಯ ವಿಚಾರಣೆ ವೇಳೆ, ‘ರಾಜಕೀಯ ಕೈದಿಗಳನ್ನು ಇಂದಿರಾ ಗಾಂಧಿ ಅವರು ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ನ್ಯಾಯಮೂರ್ತಿ ಬೇಗ್ ಅವರು ಕ್ಷಮೆಗೆ ಅರ್ಹವಲ್ಲದ ಹೇಳಿಕೆ ನೀಡಿದ್ದರು. ‘ಬಂಧಿತರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ, ಅವರಿಗೆ ಒಳ್ಳೆಯ ಆಹಾರ ನೀಡಲಾಗುತ್ತಿದೆ. ಅವರ ಒಳಿತಿಗಾಗಿ ಪ್ರಭುತ್ವವು ತೋರುತ್ತಿರುವ ಕಾಳಜಿಯು ತಾಯಿ ತೋರಿಸುವ ಕಾಳಜಿಗೆ ಸಮನಾಗಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದರು.

* ಆಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ ಆಗಿದ್ದ ಕಿಶನ್ ಚಂದ್ ಅವರ ಕಾರ್ಯದರ್ಶಿ ಆಗಿದ್ದ ನವೀನ್‌ ಚಾವ್ಲಾ ಸಂವಿಧಾನದ ವ್ಯಾಪ್ತಿಯನ್ನೂ ಮೀರಿ ಅಧಿಕಾರ ಚಲಾಯಿಸಿದರು. ತಿಹಾರ್‌ ಜೈಲಿನಲ್ಲಿ ಮೇಲ್ಚಾವಣಿಯಾಗಿ ಆ್ಯಸ್‌ಬೆಸ್ಟಾಸ್‌ ಹೊದಿಕೆ ಹಾಕಿ, ರಾಜಕೀಯ ಕೈದಿಗಳು ‘ಬೇಯುವಂತೆ’ ಮಾಡಿ ಎಂದು ಚಾವ್ಲಾ ಅವರು ತಿಹಾರ್‌ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದರು. ‘ಕೆಲವು ಬಂಧಿತರನ್ನು ಹುಚ್ಚರ ಜೊತೆ ಇರಿಸಬೇಕು’ ಎಂದೂ ಅವರು ಸೂಚಿಸಿದ್ದರು.

* ಮಧ್ಯಯುಗದ ಸರ್ವಾಧಿಕಾರಿಯ ರೀತಿಯಲ್ಲಿ ವರ್ತಿಸಿದ ಹರಿಯಾಣದ ಮುಖ್ಯಮಂತ್ರಿ, ನಂತರ ರಕ್ಷಣಾ ಸಚಿವ ಆಗಿದ್ದ ಬನ್ಸಿಲಾಲ್ ಅವರನ್ನು ಮರೆಯುವಂತಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಸಾಮೂಹಿಕವಾಗಿ ನಡೆಸುವ ಶಿಬಿರಗಳ ಉಸ್ತುವಾರಿಯನ್ನು ಇವರು ವೈಯಕ್ತಿಕವಾಗಿ ನಡೆಸುತ್ತಿದ್ದರು. ಈ ಪೈಕಿ ಅತ್ಯಂತ ಭಯ ಮೂಡಿಸುವಂಥದ್ದು ಹರಿಯಾಣದ ಮುಸ್ಲಿಂ ಬಾಹುಳ್ಯದ ಉತ್ತಾವರ್‌ ಹಳ್ಳಿಯಲ್ಲಿ ನಡೆದ ಹಲ್ಲೆ. ಪೊಲೀಸರು ಟ್ರಕ್‌ಗಳಲ್ಲಿ ಈ ಹಳ್ಳಿಗೆ ಬಂದರು, ಹಳ್ಳಿಯನ್ನು ಸುತ್ತುವರಿದರು, ಆ ಹಳ್ಳಿಯಲ್ಲಿ ವಾಸಿಸುತ್ತಿದ್ದ ಎಂಟರಿಂದ 80 ವರ್ಷ ವಯಸ್ಸಿನ ನಡುವಿನ ಪ್ರತಿ ಗಂಡಸನ್ನೂ ಮನೆಯಿಂದ ಹೊರಗೆ ಎಳೆದು ತಂದರು, ಶಿಬಿರಗಳಿಗೆ ಒಯ್ದು ಅವರನ್ನು ಬಲವಂತದಿಂದ ಸಂತಾನಶಕ್ತಿ ಹರಣ
ಶಸ್ತ್ರಚಿಕಿತ್ಸೆಗೆ ಗುರಿಪಡಿಸಿದರು. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಶಾಲಾ ಶಿಕ್ಷಕರು ಹಾಗೂ ಪೊಲೀಸರಿಗೆ ‘ಇಂತಿಷ್ಟು ಜನರನ್ನು ಈ ಚಿಕಿತ್ಸೆಗೆ ಕರೆತರಬೇಕು’ ಎನ್ನುವ ಗುರಿ ನೀಡಲಾಗುತ್ತಿತ್ತು. ಹಲವು ಪ್ರಕರಣಗಳಲ್ಲಿ ಶಿಕ್ಷಕರು ತಾವೇ ಈ ಚಿಕಿತ್ಸೆಗೆ ಒಳಗಾಗಬೇಕಾಗುತ್ತಿತ್ತು. ಈ ಚಿಕಿತ್ಸೆಗೆ ಒಳಗಾಗಲು ನಿರಾಕರಿಸಿದವರು ಮೀಸಾ ಕಾಯ್ದೆಯ ಅಡಿ ಜೈಲಿಗೆ ಹೋಗಬೇಕಿತ್ತು.

ಇಲ್ಲಿ ನೀಡಿರುವುದು ಯಾವ ರೀತಿಯಲ್ಲೂ ಪರಿಪೂರ್ಣವಾದ ಪಟ್ಟಿ ಅಲ್ಲ. ಆದರೆ, ತುರ್ತು ಪರಿಸ್ಥಿತಿಯ ಖಳನಾಯಕರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಲ್ಲಿ ನಾವು ವಿಫಲರಾದರೆ, ಅಂದಿನ ದಬ್ಬಾಳಿಕೆಯಿಂದ ಸರಿಯಾದ ಪಾಠ ಕಲಿಯಲು ನಮ್ಮಿಂದ ಆಗದಿದ್ದರೆ, ನಮ್ಮ ಪ್ರಜಾತಾಂತ್ರಿಕಜೀವನವನ್ನು ರಕ್ಷಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುವುದಿಲ್ಲ.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !