ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸ್ಪಂದನ’ ಸಭೆ ಮರೆತ ಅಧಿಕಾರಿಗಳು

3 ವರ್ಷಗಳಿಂದಲೂ ಸಭೆ ಸ್ಥಗಿತ: ಕಾರ್ಯರೂಪಕ್ಕೆ ಬಾರದ ಮುಖ್ಯಕಾರ್ಯದರ್ಶಿ ಸೂಚನೆ
Last Updated 16 ಜೂನ್ 2018, 9:52 IST
ಅಕ್ಷರ ಗಾತ್ರ

ಕುಷ್ಟಗಿ: ಗ್ರಾಮೀಣ ಪ್ರದೇಶದ ಜನರ ಬಳಿಗೆ ಸರ್ಕಾರದ ಆಡಳಿತ ಯಂತ್ರ ನೇರವಾಗಿ ತಲುಪುವಂತೆ ಮಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಮಾಡುವ ಪರಿಕಲ್ಪನೆಯಲ್ಲಿ ಆರಂಭಿಸಲಾಗಿದ್ದ ಜನಸ್ಪಂದನ ಸಭೆಗಳು ತಾಲ್ಲೂಕಿನಲ್ಲಿ ಸುಮಾರು ಮೂರು ವರ್ಷಗಳಿಂದಲೂ ಸ್ಥಗಿತಗೊಂಡಿದೆ.

ಪ್ರತಿ ಶನಿವಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುವುದನ್ನು ಮೊದಲು ಜಾರಿಗೆ ತರಲಾಗಿತ್ತು. ಆದರೆ, ಆಡಳಿತಾತ್ಮಕ ದೃಷ್ಟಿಯಿಂದ ಕಚೇರಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ನಂತರ ಅದನ್ನು ಬದಲಿಸಿ ತಿಂಗಳಿಗೆ ಒಂದು ಬಾರಿ ಹೋಬಳಿ ಮಟ್ಟದಲ್ಲಿ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ಅಲ್ಲಿ 'ಜನಸ್ಪಂದನ' ಸಭೆ ನಡೆಸಬೇಕು. ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಸರ್ಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದ ಯಾವುದೇ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಚರ್ಚಿಸಿ ಸಾಧ್ಯವಾದರೆ ಸ್ಥಳೀಯವಾಗಿಯೇ ಪರಿಹರಿಸುವಂತೆ ಸರ್ಕಾರ ಸೂಚಿಸಿತ್ತು.

ವಿವಿಧ ಸಾಮಾಜಿಕ ಸುರಕ್ಷಾ ವೇತನಗಳ ವಿಲೇವಾರಿ, ಬಾಲ್ಯವಿವಾಹ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಬಗ್ಗೆ, ವಸತಿ, ಕುಡಿಯುವ ನೀರು ಪೂರೈಕೆ ಸಮಸ್ಯೆಗಳು, ಕಂದಾಯ, ಕೃಷಿ ಇಲಾಖೆ, ವಸತಿ ನಿಲಯ, ಆಸ್ಪತ್ರೆ, ಸರ್ಕಾರಿ ಶಾಲೆಗಳು, ಅಂಗನವಾಡಿ ಹಾಗೂ ಗ್ರಾಮಗಳಲ್ಲಿನ ಮೂಲಸೌಲಭ್ಯ ಮೊದಲಾದ ವಿಷಯಗಳ ಬಗ್ಗೆ ಜನರ ಮತ್ತು ಅಧಿಕಾರಿಗಳ ಮಧ್ಯೆ ಚರ್ಚೆ ನಡೆಯುತ್ತಿತ್ತು. ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಿತ್ತು. ಆದರೆ, ಮೂಲಗಳ ಪ್ರಕಾರ ಕಳೆದ ಮೂರು ವರ್ಷಗಳಿಂದಲೂ ಸಭೆ ನಡೆಸುವುದನ್ನು ಕೈಬಿಡಲಾಗಿದೆ. ಸಭೆಯ ಎಲ್ಲ ಜವಾ ಬ್ದಾರಿಯನ್ನು ಹೊಂದಿರುವ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ದರೆ ಅಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಕನಿಷ್ಟ ಕೊನೆಯ ಸಭೆ ನಡೆಸಿದ್ದು ಯಾವಾಗ? ಎಂಬ ವಿವರವೂ ಲಭ್ಯವಾಗಲಿಲ್ಲ.

ಜಿಲ್ಲಾ ಮಟ್ಟದಲ್ಲಿ ಪ್ರತಿ ಮಂಗಳವಾರ ಜನಸ್ಪಂದನ ಸಭೆ ನಡೆಯುವುದು ಈಗಲೂ ಚಾಲ್ತಿಯಲ್ಲಿದೆ, ಆದರೆ, ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳಿಗೆ ಒಮ್ಮೆ ನಡೆಯುವ ಈ ಸಭೆ ಸ್ಥಗಿತಗೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿಚಾರಿಸಿದರೆ ಸ್ವತಃ ಕಂದಾಯ ಇಲಾಖೆ ಸಿಬ್ಬಂದಿ ನಿರುತ್ತರರಾಗುತ್ತಿದ್ದಾರೆ.

ಈ ಬಗ್ಗೆ ವಿವರ ಪಡೆಯಲು ಕರೆ ಮಾಡಿದರೆ ತಹಶೀಲ್ದಾರ್‌ ಎಚ್‌.ವಿಶ್ವನಾಥ್‌ ಅವರ ಮೊಬೈಲ್‌ ದೂರವಾಣಿ ಸ್ಥಗಿತಗೊಂಡಿತ್ತು. ಈ ಕುರಿತು ನಂತರ ವಿವರಿಸಿದ ಗ್ರೇಡ್‌ 2 ತಹಶೀಲ್ದಾರ್‌ ಸುರೇಶ ಮೂರಂಕಣದ, ತಾವು ತಿಂಗಳ ಹಿಂದಷ್ಟೇ ಇಲ್ಲಿಯ ಅಧಿಕಾರ ವಹಿಸಿಕೊಂಡಿದ್ದು ಜನಸ್ಪಂದನೆ ಸಭೆಗಳನ್ನು ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಈ ವಿಷಯದ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದು, ಮೇಲಧಿಕಾರಿಗಳು ನೀಡುವ ಸೂಚನೆ ಯನ್ನು ಪಾಲಿಸುವುದಾಗಿ ತಿಳಿಸಿದರು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುರಿಂದ ಯಾವುದೇ ಸಭೆ ನಡೆದಿರಲಿಲ್ಲ ಎಂದರು.

ಆದರೆ, ಮೂರುವರ್ಷಗಳಿಂದಲೂ ಜನಸ್ಪಂದನ ಸಭೆ ನಡೆದಿಲ್ಲ ಎಂಬ ಮಾಹಿತಿಯನ್ನು ಅವರ ಗಮನಕ್ಕೆ ತಂದಾಗ 'ಗೊತ್ತಿಲ್ಲ' ಎಂದಷ್ಟೇ ಹೇಳಿದರು.

ಮುಖ್ಯಕಾರ್ಯದರ್ಶಿ  ಸುತ್ತೋಲೆ: ಜನಸ್ಪಂದನ ಸಭೆ ನಡೆಸುವ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಫೆ 9 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭ ಅವರು, ಜಿಲ್ಲೆ ಮತ್ತು ತಾಲ್ಲೂಕು ಆಡಳಿತ ಯಂತ್ರ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಂತೆ ಮಾಡುವ ಜನಸ್ಪಂದನ ಸಭೆ ಗಳನ್ನು ಪರಿಣಾಮಕಾರಿಯಾಗಿ ಯಶಸ್ವಿ ಗೊಳಿಸುವ ಮೂಲಕ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಮತ್ತು ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ದೊರೆತರೆ ಸರ್ಕಾರದ ಬಗ್ಗೆ ನಾಗರಿಕರಲ್ಲಿ ಉತ್ತಮ ಭಾವನೆ ಮೂಡುತ್ತದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT