ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಾಗುವ ಸಾಮಾನ್ಯ ತಪ್ಪುಗಳು

Last Updated 27 ಜೂನ್ 2021, 20:43 IST
ಅಕ್ಷರ ಗಾತ್ರ

ಹೂಡಿಕೆಯಲ್ಲಿ ಆಗುವ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಎರಡು ಮಾರ್ಗಗಳಿವೆ. ಒಂದನೆಯದು, ನಾವೇ ತಪ್ಪು ಮಾಡಿ, ಹಣ ನಷ್ಟ ಮಾಡಿಕೊಂಡು ಅದರಿಂದ ಪಾಠ ಕಲಿಯುವುದು! ಎರಡನೆಯದು, ಬೇರೆಯವರು ಮಾಡಿದ ತಪ್ಪುಗಳನ್ನು ನೋಡಿ ಪಾಠ ಕಲಿಯುವುದು. ಹೋಲಿಕೆ ಮಾಡಿ ನೋಡಿದಾಗ ಎರಡನೆಯ ಹಾದಿಯೇ ಲೇಸು ಅಂತ ನಿಮಗೆ ಅನಿಸಿರಬೇಕಲ್ಲವೇ? ಹಾಗಾದರೆ ಬನ್ನಿ, ಹೂಡಿಕೆಯಲ್ಲಿ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಅರಿಯೋಣ, ಜಾಗೃತರಾಗೋಣ.

ಅತ್ಯಗತ್ಯದ ಹಣ ಷೇರುಗಳಲ್ಲಿ ತೊಡಗಿಸುವುದು: ದಿಢೀರ್ ಶ್ರೀಮಂತರಾಗುವ ಕನಸಿಗೆ ಬಿದ್ದು ಮಕ್ಕಳ ಶಾಲೆ ಶುಲ್ಕ, ಸಾಲ ಮರುಪಾವತಿಗೆ ಮೀಸಲಿಟ್ಟಿರುವ ಹಣ, ವಿಮೆ ಪ್ರೀಮಿಯಂಗಾಗಿ ಕೂಡಿಟ್ಟಿರುವ ಮೊತ್ತ, ತುರ್ತು ಅಗತ್ಯಗಳಿಗಾಗಿ ಮೀಸಲಿರಿಸಿದ ದುಡ್ಡನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಡಿ. ಇಲ್ಲಿ ಹೆಚ್ಚು ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುವಂತೆಯೇ, ನಷ್ಟ ಅನುಭವಿಸುವ ಸಾಧ್ಯತೆಯೂ ಜಾಸ್ತಿ ಇರುತ್ತದೆ.

ಸಾಲ ಮಾಡಿ ಷೇರುಗಳಲ್ಲಿ ಹೂಡಿಕೆ: ವೈಯಕ್ತಿಕ ಸಾಲ (ಪರ್ಸನಲ್ ಲೋನ್) ನಿಮ್ಮ ಪಾಲಿನ ಆದಾಯ ಅಲ್ಲ. ಹಾಗಾಗಿ, ಸಾಲ ಮಾಡಿ ಹೂಡಿಕೆ ಸಲ್ಲದು. ಅನೇಕರು ವೈಯಕ್ತಿಕ ಸಾಲ ಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಈ ತಪ್ಪನ್ನು ಮಾಡಲೇಬಾರದು. ಸಾಲ ಪಡೆದು ಹೂಡಿಕೆ ಮಾಡಿದ ಹಣ ನಷ್ಟವಾದರೆ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.

ಅರ್ಥ ಮಾಡಿಕೊಳ್ಳದೆ ಹೂಡಿಕೆ ಮಾಡುವುದು: ಜಗತ್ತಿನ ಶ್ರೇಷ್ಠ ಹೂಡಿಕೆದಾರ ವಾರನ್ ಬಫೆಟ್ ಮತ್ತು ಭಾರತದ ವಾರನ್ ಬಫೆಟ್ ಎಂದು ಕರೆಸಿಕೊಂಡಿರುವ ರಾಕೇಶ್ ಜುನ್‌ಜನ್‌ವಾಲಾ ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಅವರ ಹಿಂದೆ ತಜ್ಞರ ಒಂದು ತಂಡವೇ ಇರುತ್ತದೆ. ಅಷ್ಟೆಲ್ಲಾ ಪರಿಣತಿ ಹೊಂದಿರುವವರೇ ಅಷ್ಟು ಲೆಕ್ಕಾಚಾರ ಮಾಡಿ ಹೂಡಿಕೆ ಮಾಡುತ್ತಾರೆ ಅಂದರೆ ನಾವು ಕೆಲವೇ ಸೆಕೆಂಡುಗಳಲ್ಲಿ, ಯಾರದ್ದೋ ಮಾತು ಕೇಳಿ ಯಾವುದಾದರೊಂದು ಷೇರಿನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲವೇ?

ಅರ್ಥಹೀನ ಲೆಕ್ಕಾಚಾರ ಮಾಡುವುದು: ಅತ್ಯಂತ ಕಡಿಮೆ ಬೆಲೆಗೆ ಕಂಪನಿಯೊಂದರ ಷೇರು ಖರೀದಿಸುತ್ತೇನೆ ಮತ್ತು ಷೇರಿನ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿಕೆಯಾದಾಗ ಮಾರಾಟ ಮಾಡುತ್ತೇನೆ ಎನ್ನುವ ಲೆಕ್ಕಾಚಾರದ ನಿರ್ಧಾರ ಮಾಡಲು ಯಾವ ಮಾರುಕಟ್ಟೆ ತಜ್ಞರಿಗೂ ಸಾಧ್ಯವಿಲ್ಲ. ಈ ಅರ್ಥವಿಲ್ಲದ ಲೆಕ್ಕಾಚಾರಕ್ಕೆ ಬಿದ್ದು ನೀವು ಷೇರು ಮಾರುಕಟ್ಟೆ ಹೂಡಿಕೆ ನಿರ್ಧಾರಗಳನ್ನು ಮಾಡಬೇಡಿ. ಆರ್ಥಿಕವಾಗಿ ಉತ್ತಮವಾಗಿರುವ ಮತ್ತು ಭವಿಷ್ಯದಲ್ಲಿ ಬೆಳವಣಿಗೆಯ ಸಾಧ್ಯತೆ ಇರುವ ಷೇರುಗಳಲ್ಲಿ ಹೂಡಿಕೆ ಮಾಡಿ.

ಐತಿಹಾಸಿಕ ಗಳಿಕೆ ಆಧಾರದಲ್ಲಿ ಭವಿಷ್ಯದ ಲಾಭದ ಲೆಕ್ಕಾಚಾರ: ಕಳೆದ 10 ವರ್ಷಗಳಲ್ಲಿ ಆ ಕಂಪನಿ ಇಷ್ಟು ಲಾಭಾಂಶ ಕೊಟ್ಟಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇಷ್ಟು ಲಾಭ ಸಿಗಬಹುದು ಎಂಬ ಲೆಕ್ಕಾಚಾರ ಬೇಡ. ಈ ಹಿಂದೆ ಲಾಭ ಗಳಿಸಿರುವ ಕಂಪನಿ ಮುಂದೆ ಹೆಚ್ಚು ಲಾಭ ಗಳಿಸದೇ ಇರಬಹುದು. ಈವರೆಗೆ ಹೆಚ್ಚು ಲಾಭ ಕೊಡದ ಕಂಪನಿ ಮುಂದೆ ಉತ್ತಮ ಲಾಭಾಂಶ ನೀಡಬಹುದು. ಲಾಭದ ಲೆಕ್ಕಾಚಾರ ಕಂಪನಿಯ ಪ್ರಸ್ತುತ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಸಂಪತ್ತು ಗಳಿಸುವಾಗ ತಾಳ್ಮೆ ಕಳೆದುಕೊಳ್ಳುವುದು: ನೀವೇ ಒಂದು ಉದ್ದಿಮೆಯನ್ನು ಇವತ್ತು ಆರಂಭ ಮಾಡಿದಿರಿ ಎಂದಾದರೆ ಅದು ಲಾಭ ಗಳಿಸಿ ಉತ್ತಮ ಸ್ಥಿತಿಗೆ ಬರಲು ಒಂದೆರಡು ವರ್ಷ ಬೇಕು. ಆದರೆ ಷೇರು ಖರೀದಿ ಮಾಡುವವರು ಮಾತ್ರ ಇವತ್ತು ಖರೀದಿ ಮಾಡಿದ ಷೇರು ನಾಳೆಯೇ ಹೆಚ್ಚು ಲಾಭ ಕೊಡಬೇಕು ಎಂದು ಬಯಸುತ್ತಾರೆ. ಸಂಪತ್ತು ಸೃಷ್ಟಿಗೆ ಸಮಯದ ಜೊತೆ ತಾಳ್ಮೆ ಬಹಳ ಮುಖ್ಯ.

ಅತಿಯಾದ ವಿಶ್ವಾಸ: ನಿಮ್ಮ ಹೂಡಿಕೆ ಹಣವನ್ನು ನಿಮ್ಮಷ್ಟು ಕಾಳಜಿಯಿಂದ ನಿರ್ವಹಿಸಲು ಯಾರಿಂದಲೂ ಸಾಧ್ಯವಿಲ್ಲ. ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಿರಿ, ಆದರೆ ಅಂತಿಮವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಿ. ನೆನಪಿರಲಿ ಶ್ರೀಮಂತರಾದವರೆಲ್ಲರೂ ಅವರ ಹಣಕಾಸಿನ ನಿರ್ಧಾರಗಳನ್ನು ಅವರೇ ತೆಗೆದುಕೊಂಡಿದ್ದಾರೆ. ಮತ್ತೊಬ್ಬರ ಮೇಲೆ ಆ ಜವಾಬ್ದಾರಿ ಹೊರಿಸಿ ಸುಮ್ಮನಾಗಿಲ್ಲ.

ಅನಿಶ್ಚಿತತೆಯ ನಡುವೆ ಜಿಗಿದ ಷೇರುಪೇಟೆ
ಸತತ ಎರಡು ವಾರಗಳ ಕುಸಿತದ ಬಳಿಕ ಷೇರುಪೇಟೆ ಸಕಾರಾತ್ಮಕತೆಯ ಲಯಕ್ಕೆ ಮರಳಿದೆ. ಜೂನ್ 25ಕ್ಕೆ ಕೊನೆಗೊಂಡ ವಾರದಲ್ಲಿ ಸೂಚ್ಯಂಕಗಳು ಅನಿಶ್ಚಿತತೆಯ ನಡುವೆಯೂ ಏರಿಕೆ ಕಂಡಿವೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಜಿಗಿದಿವೆ. 52,925 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.10ರಷ್ಟು ಹೆಚ್ಚಳ ಕಂಡಿದೆ. 15,860 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.12ರಷ್ಟು ಏರಿಕೆಯಾಗಿದೆ. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.4ರಷ್ಟು ಹೆಚ್ಚಳವಾಗಿದ್ದರೆ, ಸ್ಮಾಲ್ ಕ್ಯಾಪ್ ಶೇ 1.4ರಷ್ಟು ಏರಿದೆ. ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಜಿಗಿದಿದೆ.

ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 5ರಷ್ಟು ಹೆಚ್ಚಳ ದಾಖಲಿಸಿದೆ. ಲೋಹ ವಲಯ ಶೇ 3.4ರಷ್ಟು, ಮಾಹಿತಿ ತಂತ್ರಜ್ಞಾನ ಶೇ 2.7ರಷ್ಟು ಮತ್ತು ಆಟೊಮೊಬೈಲ್ ವಲಯ ಶೇ 2.5ರಷ್ಟು ಜಿಗಿದಿವೆ. ನಿಫ್ಟಿ ಮಾಧ್ಯಮ ವಲಯ ಶೇ 1ರಷ್ಟು ಇಳಿಕೆ ಕಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,685.9 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 4,729.17 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಮಾರುತಿ ಶೇ 10ರಷ್ಟು, ಟಾಟಾ ಸ್ಟೀಲ್ ಶೇ 7ರಷ್ಟು, ಇನ್ಫೊಸಿಸ್ ಶೇ 5ರಷ್ಟು, ಎಸ್‌ಬಿಐ ಶೇ 4ರಷ್ಟು ಜಿಗಿದಿವೆ. ರಿಲಯನ್ಸ್ ಶೇ 5.5ರಷ್ಟು, ಕೋಟಕ್ ಬ್ಯಾಂಕ್ ಶೇ 1.5ರಷ್ಟು ಮತ್ತು ಏಷ್ಯನ್ ಪೇಂಟ್ಸ್ ಶೇ 1.5ರಷ್ಟು ಕುಸಿದಿವೆ.

ಬ್ರಾಡರ್ ಮಾರ್ಕೆಟ್ ವಿಚಾರಕ್ಕೆ ಬಂದರೆ ಬಿಇಎಲ್ ಶೇ 20ರಷ್ಟು, ಜಿಎಂಆರ್ ಇನ್ಫ್ರಾ ಶೇ 12ರಷ್ಟು, ಎಕ್ಸ್ ಫೈನಾನ್ಶಿಯಲ್ ಸರ್ವೀಸಸ್ ಶೇ 11ರಷ್ಟು, ಎಬಿಎಫ್ ಆರ್ ಎಲ್ ಶೇ 10ರಷ್ಟು, ಇಂಡಿಯಾ ಹೊಟೇಲ್ಸ್ ಶೇ 10ರಷ್ಟು ಗಳಿಕೆ ಕಂಡಿವೆ. ಜೂಬ್ಲಿಯಂಟ್ ಶೇ 5ರಷ್ಟು, ಎಂಜಿಎಲ್ ಶೇ 5ರಷ್ಟು, ಐಜಿಎಲ್ ಶೇ 4ರಷ್ಟು, ಆರತಿ ಇಂಡಸ್ಟ್ರೀಸ್ ಶೇ 3ರಷ್ಟು ಕುಸಿದಿವೆ.

ಮುನ್ನೋಟ: ರೂಪಾಂತರ ಕಂಡಿರುವ ಕೊರೊನಾ ವೈರಾಣುವಿನ ಪ್ರಕರಣಗಳ ಹೆಚ್ಚಳ, ಲಸಿಕೆ ಕಾರ್ಯಕ್ರಮದಲ್ಲಿ ವೇಗದ ನಡುವೆಯೂ ಮಾರುಕಟ್ಟೆ ಸಕಾರಾತ್ಮಕವಾಗಿದೆ. ಆದರೆ ಇದು ಹೀಗೇ ಮುಂದುವರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏರಿಳಿತದ ಹಾದಿ ಇದ್ದೇ ಇರಲಿದೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು, ಲೋಹ ವಲಯ, ವಿದ್ಯುತ್ ವಲಯ ಮತ್ತು ಸಕ್ಕರೆ ವಲಯ ಉತ್ತಮ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳನ್ನು ಖರೀದಿಸುವಾಗ ಕಂಪನಿಯ ಆರ್ಥಿಕ ಸ್ಥಿತಿಗತಿ ಮತ್ತು ಭವಿಷ್ಯದ ನೋಟ ಆಧರಿಸಿ ನಿರ್ಧರಿಸುವುದು ಸೂಕ್ತ.

ಈ ವಾರ ಬ್ಲೂಚಿಪ್, ಎರೋಸ್ ಮೀಡಿಯಾ, ಎಚ್ಎಎಲ್, ಹಿಲ್ಟನ್ ಐಎಫ್‌ಸಿಐ, ಓಂಕಾರ್, ರಜತ್, ಸುಪೀರಿಯರ್, ಸುಜಲಾ, ಸನ್ ಶೈನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT