ಸೋಮವಾರ, ಅಕ್ಟೋಬರ್ 14, 2019
23 °C

ಅಡುಗೆ ಡಬ್ಬದಲ್ಲಿಲ್ಲ ಶ್ರೀಮಂತಿಕೆ ಗುಟ್ಟು!

Published:
Updated:
Prajavani

ಅಡುಗೆ ಕೋಣೆಯ ಸಕ್ಕರೆ ಡಬ್ಬಿಯಲ್ಲಿ, ದೇವರ ಮನೆಯ ಹುಂಡಿಯಲ್ಲಿ, ಮಕ್ಕಳ ಪಿಗ್ಗಿ ಬಾಕ್ಸ್‌ನಲ್ಲಿ ಹಣ ಕೂಡಿಡುವುದು ಬಹುತೇಕರಿಗೆ ರೂಢಿ. ಆದರೆ ವಾಸ್ತವದಲ್ಲಿ, ಹೀಗೆ ಡಬ್ಬದಲ್ಲಿ ನಗದು ಸಂಗ್ರಹಿಸುತ್ತಾ ಹೋದರೆ ಸಂಪತ್ತು ಬೆಳೆಯುವುದಿಲ್ಲ. ಉಳಿಸಿದ ಹಣವನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಿದಾಗ ಮಾತ್ರ ಅದು ಬೆಳೆದು ದ್ವಿಗುಣವಾಗುತ್ತದೆ.

ಹೂಡಿಕೆಗೆ ದೊಡ್ಡ ಮೊತ್ತದ ಹಣವೇ ಬೇಕು ಎಂದೇನು ಇಲ್ಲ. ಡಬ್ಬದಲ್ಲಿ ಕೂಡಿಡುವ ಐನೂರು, ಸಾವಿರ ರೂಪಾಯಿಗಳನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೂ ಸಾಕು, ನಿರ್ದಿಷ್ಟ ಸಮಯದ ಬಳಿಕ ದೊಡ್ಡ ಮೊತ್ತದ ಹಣವನ್ನು ನೀವು ಗಳಿಸಿಕೊಳ್ಳಬಹುದು. ಶ್ರೀಮಂತರು ಮಾತ್ರ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ.

ಆದರೆ ಶ್ರೀಸಾಮಾನ್ಯರಿಗೂ, ಸಿರಿವಂತರಿಗೂ ಅನುಕೂಲ ಮಾಡಿಕೊಡುವಂತಹ ಅನೇಕ ಮಾದರಿಗಳು ಮ್ಯೂಚುವಲ್ ಫಂಡ್‌ನಲ್ಲಿವೆ. ಮ್ಯೂಚುವಲ್ ಫಂಡ್ ಅನ್ನು ಬೇಗ ಆರಂಭಿಸಿ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ಸಿಗುತ್ತದೆ.

ಪ್ರತಿ ತಿಂಗಳೂ ಮ್ಯೂಚುವಲ್ ಫಂಡ್‌ನಲ್ಲಿ ₹ 1,000 ಹೂಡಿಕೆ ಮಾಡಿ ಶೇ 12 ರ ಬಡ್ಡಿ ದರದಂತೆ ಲಾಭಾಂಶ ಪಡೆದುಕೊಂಡರೂ 10 ವರ್ಷಗಳ ಬಳಿಕ ₹ 2.30 ಲಕ್ಷ ನಿಮ್ಮದಾಗುತ್ತದೆ.

2014 ರಲ್ಲಿನ 1 ಲಕ್ಷ ಹೂಡಿಕೆ ಈಗ 35 ಲಕ್ಷ!

2014, ಮೇ 26 ರಂದು ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿ ಪಟ್ಟಕ್ಕೇರಿದಾಗ ಷೇರು ಮಾರುಕಟ್ಟೆ 25,000 ಅಂಶಗಳ ಏರಿಕೆ ಕಂಡು ದಾಖಲೆ ನಿರ್ಮಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ, ಅಂದರೆ ಕಳೆದ 5 ವರ್ಷಗಳಲ್ಲಿ ಸೆನ್ಸೆಕ್ಸ್ 15,000 ಅಂಶಗಳ ಏರಿಕೆ ಕಂಡು 40 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಇದು ಒಂದು ಕಡೆಯಾದರೆ ಕಳೆದ ಐದು ವರ್ಷಗಳಲ್ಲಿ ನಿಫ್ಟಿಯ ಸುಮಾರು 17 ಷೇರುಗಳು ಹೂಡಿಕೆದಾರರಿಗೆ ದುಪ್ಪಟ್ಟು ಗಳಿಕೆ ತಂದುಕೊಟ್ಟಿವೆ.

 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ, ನೋಟು ರದ್ದತಿ, ಕಚ್ಚಾ ತೈಲ ಬೆಲೆ ಏರಿಕೆ, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತ ಸೇರಿ ಹಲವು ಅಡೆತಡೆಗಳ ನಡುವೆಯೂ ಈ ಆಯ್ದ ಷೇರುಗಳು ಶೇ 105 ರಿಂದ ಶೇ 1600 ರಷ್ಟು ಗಳಿಕೆ ಕಂಡಿವೆ.

2014 ರಲ್ಲಿ ₹ 200 ರೂ ಇದ್ದ ಬಜಾಜ್ ಫೈನಾನ್ಸ್‌ನ ಷೇರು ಈಗ ₹3,370 ಕ್ಕೆ ಜಿಗಿದಿದೆ. ಅಂದರೆ 2014 ರಲ್ಲಿ ಬಜಾಜ್ ಫೈನಾನ್ಸ್‌ನಲ್ಲಿ ₹ 1 ಲಕ್ಷ ತೊಡಗಿಸಿದ್ದ ಹೂಡಿಕೆದಾರನಿಗೆ ಈಗ ಬರೋಬ್ಬರಿ ₹ 34.5 ಲಕ್ಷ ಸಿಗುತ್ತಿದೆ.

ಬಜಾಜ್ ಫಿನ್ ಸರ್ವ್ ಕೂಡ ಶೇ 800 ರಷ್ಟು ಏರಿಕೆ ಕಂಡು ₹ 1 ಲಕ್ಷ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ₹ 8 ಲಕ್ಷಗಳ ವರೆಗೆ ಲಾಭಾಂಶ ನೀಡಿದೆ. ಅದೇ ರೀತಿ 2014 ರಲ್ಲಿ ₹ 457 ಇದ್ದ ಬ್ರಿಟಾನಿಯಾ ಷೇರಿನ ಬೆಲೆ ಈಗ ₹ 2,830 ಆಗಿದೆ. ಶೇ 500 ರಷ್ಟು ಏರಿಕೆಯನ್ನು ಬ್ರಿಟಾನಿಯಾ ಷೇರುಗಳು ದಾಖಲಿಸಿವೆ.

ಟೈಟನ್ ಕಂಪನಿ ಕಳೆದ ಐದು ವರ್ಷಗಳಲ್ಲಿ ಶೇ 250 ಪಟ್ಟು ಬೆಳೆದಿದ್ದು ಪ್ರತಿ ಷೇರಿನ ಬೆಲೆ ₹ 1,297 ಆಗಿದೆ. ಕೋಟಕ್ ಬ್ಯಾಂಕ್‌ನ ಷೇರು ಕೂಡ ಐದು ವರ್ಷಗಳ ಅವಧಿಯಲ್ಲಿ ಶೇ 233 ರಷ್ಟು ಬೆಳೆದಿದೆ.

2014 ರಲ್ಲಿ ಕೋಟಕ್ ಷೇರುಗಳಲ್ಲಿ ₹ 1 ಲಕ್ಷ ಹೂಡಿಕೆ ಮಾಡಿದ್ದ ವ್ಯಕ್ತಿಗೆ ಈಗ ₹ 3.23 ಲಕ್ಷ ಸಿಗುತ್ತದೆ.

ಹಿನ್ನೋಟ- ಮುನ್ನೋಟ: ಷೇರುಪೇಟೆ ಸೂಚ್ಯಂಕಗಳು ಕಳೆದ ವಾರದ ವಹಿವಾಟು ಒಳಗೊಂಡು ಮೂರು ವಾರಗಳ ಸತತ ಕುಸಿತ ಕಂಡಿವೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.65 ರಷ್ಟು ಕುಸಿತ ದಾಖಲಿಸಿ 39,194 ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ (50) ಶೇ 0.84 ರಷ್ಟು ಕುಸಿತ ಕಂಡು 11,724 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ.

ಮೇ ತಿಂಗಳ ವಿತ್ತೀಯ ಕೊರತೆ ಈ ವಾರ ತಿಳಿದು ಬರಲಿದೆ. ಹಲವು ಜಾಗತಿಕ ಹಾಗೂ ದೇಶೀಯ ವಿದ್ಯಮಾನಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿವೆ.

ಅಮೆರಿಕ ಮತ್ತು ಇರಾನ್‌ ಮಧ್ಯೆ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಜಾಗತಿಕ ವ್ಯಾಪಾರ ಪರಿಸ್ಥಿತಿಯು ವಹಿವಾಟಿನ ಗತಿ ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಉಪಾಧ್ಯಕ್ಷ )

Post Comments (+)