ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ 1 ರಿಂದ ‘ಆರೋಗ್ಯ ಸಂಜೀವಿನಿ’

Last Updated 5 ಜನವರಿ 2020, 20:12 IST
ಅಕ್ಷರ ಗಾತ್ರ

ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಬಹಳ ಮುಖ್ಯ. ಆದರೆ, ಬಹುತೇಕರಿಗೆ ಆರೋಗ್ಯ ವಿಮೆ ಕೊಳ್ಳುವಾಗ ಆಯ್ಕೆಯದ್ದೇ ಸಮಸ್ಯೆಯಾಗಿ ಕಾಡುತ್ತದೆ. ಯಾವ ಆರೋಗ್ಯ ವಿಮೆ ಖರೀದಿಸಬೇಕು. ಯಾವೆಲ್ಲಾ ಸಮಸ್ಯೆಗಳಿಗೆ ಆರೋಗ್ಯ ವಿಮೆಯಲ್ಲಿ ಚಿಕಿತ್ಸೆ ಲಭ್ಯ– ಹೀಗೆ ಹತ್ತಾರು ಪ್ರಶ್ನೆಗಳು ಆರೋಗ್ಯ ವಿಮೆ ಖರೀದಿಸುವ ವ್ಯಕ್ತಿಯನ್ನು ಗೊಂದಲಕ್ಕೆ ನೂಕುತ್ತವೆ. ಈ ಸಮಸ್ಯೆಗೆ ಪರಿಹಾರದ ರೂಪದಲ್ಲಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಏಕರೂಪದ ಆರೋಗ್ಯ ವಿಮೆಯನ್ನು ಗ್ರಾಹಕರಿಗೆ ಒದಗಿಸುವಂತೆ ಎಲ್ಲಾ ಇನ್ಶೂರೆನ್ಸ್ ಕಂಪನಿಗಳಿಗೆ ಆದೇಶಿಸಿದೆ. ಈ ಏಕರೂಪದ ಆರೋಗ್ಯ ವಿಮೆಗೆ ‘ಆರೋಗ್ಯ ಸಂಜೀವಿನಿ’ ಎಂದು ಹೆಸರಿಡಲಾಗಿದೆ.

ಎಲ್ಲರಿಗೂ ಸೂಕ್ತವೆನ್ನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ‘ಆರೋಗ್ಯ ಸಂಜೀವಿನಿ’ ವಿಮೆಯನ್ನು ಸ್ಟ್ಯಾಂಡರ್ಡ್‌ ವಿಮೆಯನ್ನಾಗಿ ರೂಪಿಸಲಾಗಿದೆ. ಏಪ್ರಿಲ್ 1 ರಿಂದ ಎಲ್ಲ ಆರೋಗ್ಯ ಮತ್ತು ಸಾಮಾನ್ಯ ವಿಮಾ ಕಂಪನಿಗಳು ಕಡ್ಡಾಯವಾಗಿ ಆರೋಗ್ಯ ಸಂಜೀವಿನಿ ಪಾಲಿಸಿ ಮಾರಾಟ ಮಾಡಲೇಬೇಕಾಗಿದೆ.

ಕವರೇಜ್ ವ್ಯಾಪ್ತಿ: ಎಲ್ಲರಿಗೂ ಸೂಕ್ತವೆನ್ನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ಸ್ಟ್ಯಾಂಡರ್ಡ್ ವಿಮೆಯೇ ಆರೋಗ್ಯ ಸಂಜೀವಿನಿ. ಈ ವಿಮೆಯು ಆಸ್ಪತ್ರೆ ವೆಚ್ಚ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ ವೆಚ್ಚ, ಅರಿವಳಿಕೆ ಸಲಹೆಗಾರ ವೆಚ್ಚ, ಔಷಧಿಗಳ ವೆಚ್ಚ, ಕೃತಕ ಉಸಿರಾಟ ವ್ಯವಸ್ಥೆ , ಶಸ್ತ್ರಚಿಕಿತ್ಸೆ ವೆಚ್ಚ, ಕೊಠಡಿ ವೆಚ್ಚ ಸೇರಿದಂತೆ ಮೂಲಭೂತ ಕಡ್ಡಾಯ ಕವರೇಜ್ ಹೊಂದಿರುತ್ತದೆ.

ಕಣ್ಣಿನ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಚಿಕಿತ್ಸೆಗೆ ₹ 40 ಸಾವಿರ ಅಥವಾ ವಿಮಾ ಮೊತ್ತದ ಶೇ 25 ರಷ್ಟು ಪರಿಹಾರ ಲಭ್ಯ. ಕಾಯಿಲೆ ಅಥವಾ ಗಾಯದ ಪರಿಣಾಮ ಬೇಕಾಗುವ ದಂತ ಚಿಕಿತ್ಸೆ, ಪ್ಲಾಸ್ಟಿಕ್‌ ಸರ್ಜರಿ, ಎಲ್ಲ ಡೇ ಕೇರ್‌ ಟ್ರೀಟ್‌ಮೆಂಟ್‌, ಆ್ಯಂಬುಲನ್ಸ್‌ ವೆಚ್ಚ, ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚಿನ 30 ದಿನಗಳ ಚಿಕಿತ್ಸೆ, ಆಸ್ಪತ್ರೆ ಚಿಕಿತ್ಸೆಯ ನಂತರದ 60 ದಿನಗಳ ಚಿಕಿತ್ಸೆಗೆ ವಿಮೆ ಪರಿಹಾರ ಸಿಗುತ್ತದೆ.

ತೀವ್ರ ನಿಗಾ (ಐಸಿ) ವೆಚ್ಚ ದಿನಕ್ಕೆ ಗರಿಷ್ಠ ₹ 10 ಸಾವಿರದವರೆಗೆ ಇದೆ. ವಿಶೇಷವೆಂದರೆ ಆಯುಷ್ ಚಿಕಿತ್ಸೆಗಳಿಗೂ ಇಲ್ಲಿ ವಿಮೆ ಕವರೇಜ್ ಸಿಗುತ್ತದೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ವೈದ್ಯ ಪದ್ಧತಿಯನ್ನು ಈ ವಿಮೆ ಪರಿಗಣಿಸುತ್ತದೆ. ಆದರೆ, ಕೆಲ ಆಯ್ದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು 2 ವರ್ಷದಿಂದ 4 ವರ್ಷಗಳ ವೇಯ್ಟಿಂಗ್ ಪೀರಿಯಡ್ (ಕಾಯುವಿಕೆ ಅವಧಿ) ಇದೆ.

ಕವರೇಜ್ ಮೊತ್ತ: ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕನಿಷ್ಠ ₹ 1 ಲಕ್ಷ, ಗರಿಷ್ಠ ₹ 5 ಲಕ್ಷದವರೆಗೆ ಇನ್ಶೂರೆನ್ಸ್ ಕವರೇಜ್ ಪಡೆಯಬಹುದು. ವೈಯಕ್ತಿಕ ಆರೋಗ್ಯ ವಿಮೆ ಖರೀದಿಸಿದಾಗ ಕವರೇಜ್ ಮೊತ್ತ ವ್ಯಕ್ತಿಗತವಾಗಿ ಅನ್ವಯವಾಗುತ್ತದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿ ಖರೀದಿಸಿದಾಗ ಕವರೇಜ್ ಮೊತ್ತ ಇಡೀ ಕುಟುಂಬಕ್ಕೆ ಇರುತ್ತದೆ. ಮಡದಿ, ಪೋಷಕರು , ಅತ್ತೆ – ಮಾವ, 3 ತಿಂಗಳಾಗಿರುವ ಮಕ್ಕಳನ್ನು ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಸೇರಿಸಬಹುದು.

ಅರ್ಹತೆ, ಪಾಲಿಸಿ ಅವಧಿ, ಗ್ರೇಸ್ ಪಿರಿಯಡ್ : 18 ವರ್ಷದಿಂದ 65 ವರ್ಷದೊಳಗಿನ ವ್ಯಕ್ತಿಗಳು ಪಾಲಿಸಿ ಮಾಡಿಸಬಹುದು. ಜೀವಿತಾವಧಿ ನವೀಕರಣಕ್ಕೆ ಅವಕಾಶವಿದೆ. ಒಂದು ವರ್ಷದ ನಂತರ ಪ್ರೀಮಿಯಂ ಪಾವತಿಸಿ ನವೀಕರಣ ಮಾಡಿಸಬೇಕು. ವಾರ್ಷಿಕ ಪ್ರೀಮಿಯಂ ಪಾವತಿಗೆ ನಿಗದಿತ ದಿನಾಂಕದ ನಂತರ 30 ದಿನಗಳ ಗ್ರೇಸ್ ಪೀರಿಯಡ್ (ಹೆಚ್ಚುವರಿ ಅವಧಿ) ಸಿಗುತ್ತದೆ. ಆದರೆ, ಅರೆ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪಾವತಿಗಳಿಗೆ 15 ದಿನ ಗ್ರೇಸ್ ಪೀರಿಯಡ್ ಲಭ್ಯ.

ಪಾವತಿ ಆಯ್ಕೆ: ಪ್ರೀಮಿಯಂ ಮೊತ್ತವನ್ನು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಲೆಕ್ಕಾಚಾರದಲ್ಲಿ ಪಾವತಿ ಮಾಡಬಹುದು. ಪ್ರೀಮಿಯಂನ ಮೊತ್ತ ಏಕರೂಪದಲ್ಲಿರುತ್ತದೆ. ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ದರ ವ್ಯತ್ಯಾಸ ಇರುವುದಿಲ್ಲ.

ಜಾಗತಿಕ ವಿದ್ಯಮಾನ, ಕುಸಿದ ಸೂಚ್ಯಂಕ

ಅಮೆರಿಕ ಮತ್ತು ಇರಾನ್ ನಡುವಣ ಸಮರದಿಂದಾಗಿ ಜಾಗತಿಕ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದ ಕಾರಣ ಭಾರತೀಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯಕ್ಕೆ ಕುಸಿತ ಕಂಡಿವೆ. ವಾರಾಂತ್ಯದಲ್ಲಿ 41,464 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ಶೇ 0.3 ರಷ್ಟು ಕುಸಿತ ಕಂಡಿದೆ.

‘ನಿಫ್ಟಿ’ 12,226 ರಲ್ಲಿ ವಹಿವಾಟು ಮುಗಿಸಿದ್ದು ಶೇ 0.3 ರಷ್ಟು ತಗ್ಗಿದೆ. ಆದರೆ, ‘ನಿಫ್ಟಿ’ಮಧ್ಯಮ ಶ್ರೇಣಿ ಷೇರುಗಳ ಸೂಚ್ಯಂಕ ಶೇ 2 ರಷ್ಟು ಏರಿಕೆ ಕಂಡಿದೆ. ವಲಯವಾರು ಪ್ರಗತಿಯಲ್ಲಿ ‘ನಿಫ್ಟಿ’ ಶೇ 3.2 ರಷ್ಟು ಹೆಚ್ಚಳವಾಗಿದೆ. ಮಾಧ್ಯಮ ವಲಯ ಶೇ 3 ರಷ್ಟು ತಗ್ಗಿದೆ.

ಏರಿಕೆ- ಇಳಿಕೆ: ಟಾಟಾ ಆಟೊಮೊಬೈಲ್ ಗ್ರೂಪ್‌ನ ವಾಹನ ಮಾರಾಟದಲ್ಲಿ ಶೇ 14 ರಷ್ಟು ಕುಸಿತವಾಗಿದ್ದರೂ ಸಹಿತ ಟಾಟಾ ಮೋಟರ್ಸ್ ವಾರದ ಅವಧಿಯಲ್ಲಿ ಶೇ 8.5 ರಷ್ಟು ಹೆಚ್ಚಳ ಕಂಡಿವೆ. ಗೇಲ್, ಅದಾನಿ ಪೋರ್ಟ್ಸ್, ಸನ್ ಫಾರ್ಮಾ, ಅಲ್ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಡಿಯಾ ಶೇ 3 ರಿಂದ ಶೇ 6 ರಷ್ಟು ಏರಿಕೆ ಕಂಡಿವೆ.

ಜೀ ಎಂಟರ್‌ಟೈನ್‌ಮೆಂಟ್ ಶೇ 8.5 ರಷ್ಟು ಕುಸಿತ ದಾಖಲಿಸಿದೆ. ವಾಹನ ಮಾರಾಟ ಕುಸಿತದಿಂದ ಬಜಾಜ್ ಆಟೊ ಶೇ 5.2 ರಷ್ಟು ತಗ್ಗಿದೆ. ರಾಯಲ್ ಎನ್‌ಫೀಲ್ಡ್ ಮಾರಾಟ ತಗ್ಗಿದ ಪರಿಣಾಮ ಐಷರ್ ಮೋಟರ್ಸ್‌ನ ಷೇರುಗಳು ಶೇ 4 ರಷ್ಟು ಹಿನ್ನಡೆ ಕಂಡಿವೆ. ಟೈಟನ್, ಏಷಿಯನ್ ಪೇಂಟ್ಸ್, ಭಾರ್ತಿ ಇನ್ಫ್ರಾಟೆಲ್ ಶೇ 2 ರಿಂದ
ಶೇ 4.5 ರಷ್ಟು ಕುಸಿದಿವೆ.

ವಾರದ ಪ್ರಮುಖ ಬೆಳವಣಿಗೆ: ಎಸ್‌ಬಿಐ ತನ್ನ ಬಡ್ಡಿದರಗಳಲ್ಲಿ ಶೇ 0.25 ಕಡಿತ. ರಿಲಯನ್ಸ್ ಇಂಡಸ್ಟ್ರೀಸ್‌ನ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಜಿಯೊ ಮಾರ್ಟ್‌ನ ಪ್ರಾಯೋಗಿಕ ಪರೀಕ್ಷೆ ಆರಂಭ. ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ₹ 1 ಲಕ್ಷ ಕೋಟಿಗಿಂತ ಹೆಚ್ಚು. ನವೆಂಬರ್‌ನ ದತ್ತಾಂಶದಂತೆ ವಿತ್ತೀಯ ಕೊರತೆ ಶೇ114.8ಗೆ ಏರಿಕೆ.

ಮುನ್ನೋಟ: ಅಮೆರಿಕ ಮತ್ತು ಇರಾನ್ ನಡುವಣ ಸಮರವು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ. ಈ ಸಮರದಿಂದಾಗಿ ತೈಲ ಬೆಲೆ ಹೆಚ್ಚಳದ ಆತಂಕವೂ ಎದುರಾಗಿದೆ. ಇವೆಲ್ಲದರ ಮಧ್ಯೆ ಮೂರನೇ ತ್ರೈಮಾಸಿಕ ಸಾಧನೆಯ ವರದಿಗಳು ಈ ವಾರದಿಂದ ಹೊರ ಬೀಳಲಿವೆ. ಜನವರಿ 10 ರಂದು ಇನ್ಫೊಸಿಸ್‌ನ ತ್ರೈಮಾಸಿಕ ಫಲಿತಾಂಶ ಘೋಷಣೆಯಾಗಲಿದೆ. ಜನವರಿ 6 ರಂದು ಸುಪ್ರೀಂ ಕೋರ್ಟ್‌ನಲ್ಲಿ ಟಾಟಾ ಮತ್ತು ಮಿಸ್ತ್ರಿ ನಡುವಣ ಪ್ರಕರಣದ ತೀರ್ಪು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಜಿಡಿಪಿಯ ವಾರ್ಷಿಕ ಅಂದಾಜಿನ ಮಾಹಿತಿ ಕೂಡ ಲಭ್ಯವಾಗಲಿದೆ.

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT