ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಪ್ರತ್ಯೇಕ ವೈಯಕ್ತಿಕ ಆರೋಗ್ಯ ವಿಮೆ ಬೇಕೇ?

Last Updated 6 ಮಾರ್ಚ್ 2023, 3:53 IST
ಅಕ್ಷರ ಗಾತ್ರ

ಬಹುಪಾಲು ಸಂದರ್ಭಗಳಲ್ಲಿ ಉದ್ಯೋಗದಾತ ಕಂಪನಿ ತನ್ನ ಉದ್ಯೋಗಿಗೆ ‘ಗ್ರೂಪ್ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್’ (ಗುಂಪು ಆರೋಗ್ಯ ವಿಮೆ) ಒದಗಿಸಿರುತ್ತದೆ. ಹೀಗಿರುವಾಗ ವೈಯಕ್ತಿಕ ಆರೋಗ್ಯ ವಿಮೆ ಪಡೆದುಕೊಳ್ಳಬೇಕೇ ಎಂದು ಅನೇಕರು ಕೇಳುತ್ತಾರೆ. ಒಂದು ಆರೋಗ್ಯ ವಿಮೆಯನ್ನು ಕೆಲಸ ನೀಡಿರುವ ಕಂಪನಿ ಕೊಟ್ಟಿರುವಾಗ ಮತ್ತಷ್ಟು ಖರ್ಚು ಮಾಡಿ ಇನ್ನೊಂದು ವೈಯಕ್ತಿಕ ಆರೋಗ್ಯ ವಿಮೆ ಮಾಡಿಸುವ ಅಗತ್ಯವೇನು ಎಂಬುದು ಗಂಭೀರ ಪ್ರಶ್ನೆ ಹೌದು.

ಗುಂಪು ಆರೋಗ್ಯ ವಿಮೆ ಇರುವಾಗ ವೈಯಕ್ತಿಕ ಆರೋಗ್ಯ ವಿಮೆ ಅಗತ್ಯವೇ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ಸಾಮಾನ್ಯವಾಗಿ ಕಾರ್ಪೊರೇಟ್ ಕಂಪನಿಗಳು ಗುಂಪು ಆರೋಗ್ಯ ವಿಮೆಯ ಮೊರೆ ಹೋಗುತ್ತವೆ. ಕಂಪನಿಯ ಎಲ್ಲ ನೌಕರರಿಗೂ ಇಲ್ಲಿ ವಿಮೆ ಇರುತ್ತದೆ. ಪ್ರೀಮಿಯಂ ಮೊತ್ತವನ್ನು ಕಂಪನಿ ಮತ್ತು ಕಂಪನಿಯ ಉದ್ಯೋಗಿ ಸೇರಿ ಭರಿಸಬಹುದು. ಕುಟುಂಬದ ಎಲ್ಲರಿಗೂ ಇಲ್ಲಿ ವಿಮಾ ರಕ್ಷಣೆ ಇದ್ದು ಅನಾರೋಗ್ಯದ ಸಂದರ್ಭದಲ್ಲಿ ಕೈಯಿಂದ ಖರ್ಚು ಮಾಡದೆ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಸಮಾನ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳ ಗುಂಪಿಗೆ ಈ ಆರೋಗ್ಯ ವಿಮೆ ನೀಡಲಾಗುತ್ತದೆ.

ಖಾಸಗಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಅಥವಾ ಕಂಪನಿಗಳು, ನೌಕರರ ಒಕ್ಕೂಟಗಳು, ಸಾಂಸ್ಕೃತಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಗುಂಪು ವಿಮೆ ಪಡೆದುಕೊಳ್ಳಬಹುದು. ಗುಂಪು ವಿಮೆಯ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಹೆಚ್ಚು ಜನ ಒಂದೇ ಬಾರಿಗೆ ವಿಮೆ ವ್ಯಾಪ್ತಿಗೆ ಬಂದು ಪ್ರೀಮಿಯಂ ಪಾವತಿಸುವುದರಿಂದ ಕಡಿಮೆ ದರಕ್ಕೆ ಒಳ್ಳೆಯ ವಿಮಾ ರಕ್ಷಣೆ ಸಿಗುತ್ತದೆ. ಗುಂಪು ಆರೋಗ್ಯ ವಿಮೆಯಲ್ಲಿ ಎಲ್ಲರಿಗೂ ಅನುಕೂಲವಾಗುವಂತಹ ಏಕರೂಪದ ಕವರೇಜ್ ಪಾಲಿಸಿ ಮಾಡಲಾಗಿರುತ್ತದೆ. ಹೀಗಿದ್ದರೂ, ಈ ಕೆಳಗಿನ ಕೆಲವು ಅಂಶಗಳನ್ನು ಕೂಡ ಪರಿಗಣಿಸಬೇಕಾಗುತ್ತದೆ.

1. ಉದ್ಯೋಗದ ಜೊತೆ ಆರೋಗ್ಯ ವಿಮೆಯ ಖಾತರಿ ಇರುವುದಿಲ್ಲ: ಬಹುತೇಕರು, ಕಂಪನಿಗಳು ಆರೋಗ್ಯ ವಿಮೆ ಒದಗಿಸುತ್ತವೆ ಎಂದುಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಅನೇಕ ಕಂಪನಿಗಳು ಗುಂಪು ಆರೋಗ್ಯ ವಿಮೆ ಸೌಲಭ್ಯ ಕೊಡುವುದಿಲ್ಲ. ಸಮೀಕ್ಷೆಯೊಂದರ ಪ್ರಕಾರ ಭಾರತದ ಶೇಕಡ 44ರಷ್ಟು ಕಂಪನಿಗಳು ಮಾತ್ರ ತಮ್ಮ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಒದಗಿಸುತ್ತಿವೆ. ಒಂದೊಮ್ಮೆ ನಿಮ್ಮ ಕಂಪನಿ ಗುಂಪು ಆರೋಗ್ಯ ವಿಮೆ ನೀಡಿಲ್ಲವೆಂದಾದರೆ ಅನಾರೋಗ್ಯದ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಕ ಹೊರೆ ಹೊರಬೇಕಾಗುತ್ತದೆ. ಹೀಗಾಗಿ, ಒಂದು ವೈಯಕ್ತಿಕ ವಿಮೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

2. ಕವರೇಜ್ ಮೊತ್ತ ತಗ್ಗಿಸಬಹುದು: ಕೆಲವು ಸಂದರ್ಭಗಳಲ್ಲಿ ಕೆಲವು ಕಂಪನಿಗಳು ಆರ್ಥಿಕ ಅನಿವಾರ್ಯಕ್ಕೆ ಸಿಲುಕಿ, ನೌಕರರ ಆರೋಗ್ಯ ವಿಮೆಯ ಕವರೇಜ್ ಮೊತ್ತ ಕಡಿತ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಅವು, ನೌಕರರ ಸಂಗಾತಿ ಹಾಗೂ ಮಕ್ಕಳು, ಪೋಷಕರಿಗೆ ವಿಮಾ ರಕ್ಷಣೆಗೆ ತನ್ನ ಕಡೆಯಿಂದ ಪ್ರೀಮಿಯಂ ಕಟ್ಟಲಾಗದು ಎಂದು ಹೇಳಬಹುದು. ಹೀಗಾದಾಗಲೇ ಧುತ್ತೆಂದು ವೈದ್ಯಕೀಯ ತುರ್ತು ಎದುರಾದರೆ ಆರ್ಥಿಕ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭ ಎದುರಾಗಬಾರದು ಎಂದಾದರೆ ಕುಟುಂಬದ ಎಲ್ಲರಿಗೂ ಸೇರಿ ಒಂದು ಫ್ಯಾಮಿಲಿ ಫ್ಲೋಟರ್ ಪಾಲಿಸಿ ಅಥವಾ ಕುಟುಂಬದ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಆರೋಗ್ಯ ವಿಮೆ ಪಡೆದುಕೊಳ್ಳುವುದು ಉತ್ತಮ.

3. ಸಾಕಷ್ಟು ಕವರೇಜ್ ಇರುವುದಿಲ್ಲ: ಹಲವು ಗುಂಪು ವಿಮೆಗಳಲ್ಲಿ ಕವರೇಜ್ ಮೊತ್ತ ₹ 2 ಲಕ್ಷದಿಂದ ₹ 3 ಲಕ್ಷ ಮಾತ್ರ ಇರುತ್ತದೆ. ಇಂದಿನ ಬೆಲೆ ಏರಿಕೆ ಯುಗದಲ್ಲಿ ಇದು ಸಾಲದಿರಬಹುದು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ವೈದ್ಯಕೀಯ ಹಣದುಬ್ಬರದ ಪ್ರಮಾಣ ಶೇ 14ರಷ್ಟಿದೆ. ವ್ಯಕ್ತಿ ತನ್ನ ಮಾಸಿಕ ವೇತನದ ಕನಿಷ್ಠ 6 ಪಟ್ಟು ಹೆಚ್ಚಿನ ಮೊತ್ತವನ್ನು ಆರೋಗ್ಯ ವಿಮೆಯಾಗಿ ಹೊಂದಿರಬೇಕು. ಹಾಗಾಗಿ ಗುಂಪು ವಿಮೆ ಜೊತೆ ವೈಯಕ್ತಿಕ ಆರೋಗ್ಯ ವಿಮೆ ಕೂಡ ಇದ್ದರೆ ಅನುಕೂಲ.

4. ನಿವೃತ್ತಿ ನಂತರ ಕವರೇಜ್ ಸಿಗದು: ಬಹುತೇಕ ಗುಂಪು ಆರೋಗ್ಯ ವಿಮೆ ಯೋಜನೆಗಳು ನಿವೃತ್ತಿಯವರೆಗೆ ಮಾತ್ರ ಕವರೇಜ್ ನೀಡುತ್ತವೆ. ನಿವೃತ್ತಿಯ ನಂತರ, ಅಂದರೆ 60 ವರ್ಷ ವಯಸ್ಸಾದ ಬಳಿಕ ಹೊಸದಾಗಿ ಆರೋಗ್ಯ ವಿಮೆ ಪಡೆಯಲು ಹೋದರೆ ದೊಡ್ಡ ಮೊತ್ತದ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಅಲ್ಲದೆ ವಯೋಸಹಜ ಅನಾರೋಗ್ಯದ ಕಾರಣ ಕೆಲವು ಸಂದರ್ಭಗಳಲ್ಲಿ ಕವರೇಜ್ ಸಿಗದೆ ಹೋಗಬಹುದು. ವಿಮೆ ಕವರೇಜ್ ಸಿಕ್ಕರೂ ಕೆಲವು ಚಿಕಿತ್ಸೆಗಳನ್ನು ಪಡೆಯಲು ಕಾಯುವಿಕೆ ಅವಧಿ ಪೂರೈಸಬೇಕಾಗುತ್ತದೆ. ಹೀಗಾಗಿಯೂ ಗುಂಪು ವಿಮೆ ಜೊತೆ ವೈಯಕ್ತಿಕ ಆರೋಗ್ಯ ವಿಮೆ ಕೂಡ ಪಡೆಯುವುದು ಸೂಕ್ತ.

ಅನಿಶ್ಚಿತತೆ ನಡುವೆ ಅಲ್ಪ ಚೇತರಿಕೆ

ಅನಿಶ್ಚಿತತೆಯ ನಡುವೆ ಮಾರ್ಚ್ 3ಕ್ಕೆ ಕೊನೆಗೊಂಡ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಗಳಿಕೆ ಕಂಡಿವೆ. 59,808 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.58ರಷ್ಟು ಹೆಚ್ಚಳ ಕಂಡಿದೆ.

17,594 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.73ರಷ್ಟು ಹೆಚ್ಚಳ ದಾಖಲಿಸಿದೆ. ಅದಾನಿ ಸಮೂಹದ ಷೇರುಗಳಲ್ಲಿ ವಿದೇಶಿ ಹೂಡಿಕೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ ಮತ್ತು ಸಮಗ್ರ ಆರ್ಥಿಕ ದತ್ತಾಂಶಗಳಲ್ಲಿ ಚೇತರಿಕೆಯ ಲಕ್ಷಣ ಸೇರಿ ಹಲವು ಅಂಶಗಳು ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 9ರಷ್ಟು, ಲೋಹ ಸೂಚ್ಯಂಕ ಶೇ 6.6ರಷ್ಟು, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 6ರಷ್ಟು ಮತ್ತು ಮಾಧ್ಯಮ ಸೂಚ್ಯಂಕ ಶೇ 5.2ರಷ್ಟು ಜಿಗಿದಿದೆ. ಮತ್ತೊಂದೆಡೆ ಫಾರ್ಮಾ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,010.44 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,010.44 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಶೇ 16.94ರಷ್ಟು, ಅದಾನಿ ಪೋರ್ಟ್ಸ್ ಶೇ 9.91ರಷ್ಟು, ಎಸ್‌ಬಿಐ ಶೇ 5.14ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 2.21ರಷ್ಟು ಮತ್ತು ಐಸಿಐಸಿಐ ಬ್ಯಾಂಕ್ ಶೇ 3.44ರಷ್ಟು ಹೆಚ್ಚಳ ಕಂಡಿವೆ. ಸಿಪ್ಲಾ ಶೇ 8.65ರಷ್ಟು, ಇನ್ಫೊಸಿಸ್ ಶೇ 4.60ರಷ್ಟು, ಯುಪಿಸಿಎಲ್ ಶೇ 3.83ರಷ್ಟು, ಬಜಾಜ್ ಆಟೊ ಶೇ 3.06ರಷ್ಟು, ಟೆಕ್ ಮಹಿಂದ್ರ ಶೇ 3.03ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಇಂಡ್ ಅಜೀವ್ ಕಾಮರ್ಸ್ ಲಿ., ಗ್ಯಾಮೋನ್ ಇಂಡಿಯಾ ಲಿ., ಒಸಿಎಲ್ ಐರನ್ ಆ್ಯಂಡ್ ಸ್ಟೀಲ್ ಲಿ., ಕೇತಾನ್ ಇಂಡಿಯಾ ಲಿ., ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳ ಜೊತೆ ದೇಶಿ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT