ಅಂಬೇಡ್ಕರ್ ವೃತ್ತಕ್ಕೆ ಐದು ದಶಕದ ಐತಿಹ್ಯ

7
ಅಂಬೇಡ್ಕರ್ ಚಿತಾಭಸ್ಮ ವಿಜಯಪುರಕ್ಕೆ ತಂದಿಟ್ಟ ಮಾಜಿ ಶಾಸಕ ಎಲ್.ಆರ್.ನಾಯ್ಕ್

ಅಂಬೇಡ್ಕರ್ ವೃತ್ತಕ್ಕೆ ಐದು ದಶಕದ ಐತಿಹ್ಯ

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ನಿವಾಸ, ಐತಿಹಾಸಿಕ ಗಗನಮಹಲ್, ನರಸಿಂಹ ದೇಗುಲದ ಕಂದಕ, ಹಳೆಯ ಪ್ರವಾಸಿ ಮಂದಿರ ಕೇಂದ್ರೀಕರಿಸಿಕೊಂಡೇ, ನಗರದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತಕ್ಕೆ ಇದೀಗ ಐದು ದಶಕದ ಹರೆಯ.

ಮೈಸೂರು ರಾಜ್ಯದ ಆಡಳಿತದಲ್ಲಿ ಆಗಿನ ಪ್ರಭಾವಿ ಸಚಿವ, ಪೌರಾಡಳಿತ ಖಾತೆಯ ಹೊಣೆ ಹೊತ್ತಿದ್ದ ಬಿ.ಬಸವಲಿಂಗಪ್ಪ 25/08/1972ರಲ್ಲಿ ಈ ವೃತ್ತ ಉದ್ಘಾಟಿಸಿದ್ದಾರೆ. ಕೆ.ಎಚ್.ರಂಗನಾಥ್‌ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರಲಿದೆ.

ಅಂಬೇಡ್ಕರ್ ಅನುಯಾಯಿ, ತತ್ವ ಸಿದ್ಧಾಂತ ಪಾಲನೆ ಮೂಲಕ ಅಂಬೇಡ್ಕರ್‌ವಾದಿ ಎಂದೇ ಹೆಸರಾಗಿದ್ದ ಆಗಿನ ಶಾಸಕ ಎಲ್‌.ಆರ್‌.ನಾಯ್ಕ್‌ ಈ ವೃತ್ತ ನಿರ್ಮಾಣದ ರೂವಾರಿ. ಸಂವಿಧಾನ ಶಿಲ್ಪಿಯ ಪ್ರತಿಮೆ, ವೃತ್ತ ಪ್ರತಿಷ್ಠಾಪನೆಗಾಗಿ ಸ್ಥಳೀಯ ಮುಖಂಡರ ಸಾಥ್‌ ದೊರಕದಿದ್ದಾಗ, ನಿರಾಶರಾಗದ ನಾಯ್ಕ್‌ ಬಸವಲಿಂಗಪ್ಪ ಬೆನ್ನು ಬಿದ್ದು ವೃತ್ತ ನಿರ್ಮಾಣಕ್ಕೆ ಮುಂದಾಗಿದ್ದರು ಎಂಬುದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದು ದಲಿತ ಸಂಘಟನೆಗಳ ಪ್ರಮುಖ ಅಡಿವೆಪ್ಪ ಸಾಲಗಲ್ಲ ತಿಳಿಸಿದರು.

ಅಂಬೇಡ್ಕರ್ ಚಿತಾಭಸ್ಮ ಈ ವೃತ್ತದ ತಳಪಾಯದಲ್ಲಿದೆ ಎಂಬುದು ವಿಜಯಪುರ ಜಿಲ್ಲೆಯ ದಲಿತ ನಾಯಕರ ನಂಬಿಕೆ. ಈ ಕೆಲಸ ನಿರ್ವಹಣೆಯಲ್ಲಿ ಮಾಜಿ ಶಾಸಕ ಎಲ್‌.ಆರ್‌.ನಾಯ್ಕ್ ಪಾತ್ರ ಹಿರಿದಾದುದು ಎಂಬ ಮಾತುಗಳು ಕೇಳಿ ಬರುತ್ತವೆ.

ಎಲ್.ಆರ್‌.ನಾಯ್ಕ್‌ಗೆ ಸ್ಥಳೀಯವಾಗಿ ಸಾಥ್‌ ನೀಡಿದವರು ಲಾಯಪ್ಪ ಚಂಚಲಕರ, ಆನಂದ ತೊರವಿ ಮತ್ತಿತರರು. 1972ರಲ್ಲಿ ವೃತ್ತ, ಪ್ರತಿಮೆ ನಿರ್ಮಾಣಗೊಂಡ ಬಳಿಕ ಮೊದಲ ಬಾರಿಗೆ ಸೌಂದರ್ಯೀಕರಣಗೊಂಡಿದ್ದು ಕೆ.ಶಿವರಾಂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿದ್ದ ಸಂದರ್ಭ.

ಮಹಾನಗರ ಪಾಲಿಕೆ ಆಡಳಿತ ವರ್ಷದ ಹಿಂದಷ್ಟೇ ಅಂಬೇಡ್ಕರ್ ವೃತ್ತದ ಸೌಂದರ್ಯೀಕರಣ ನಡೆಸಿ, ಆಕರ್ಷಣೆಯ ತಾಣವನ್ನಾಗಿಸಿದೆ ಎನ್ನುತ್ತಾರೆ ವಕೀಲ ನಾಗರಾಜ ಲಂಬು.

ಆಧುನೀಕರಣಕ್ಕೆ ₹ 1 ಕೋಟಿ

ಎಂ.ಬಿ.ಪಾಟೀಲ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಿದ್ದ ಸಂದರ್ಭ ಸ್ಥಳೀಯ ದಲಿತ ಸಂಘಟನೆಗಳ ಒತ್ತಾಸೆ ಮೇರೆಗೆ ಅಂಬೇಡ್ಕರ್‌ ವೃತ್ತದ ನವೀಕರಣಕ್ಕೆ ಅನುಮೋದನೆ ನೀಡಿ, ಕೆಬಿಜೆಎನ್‌ಎಲ್‌ನ ಎಸ್‌ಸಿಪಿ–ಟಿಎಸ್‌ಪಿ ಅನುದಾನದಡಿ ₹ 1 ಕೋಟಿ ಮೊತ್ತ ಮೀಸಲಿಟ್ಟಿದ್ದರು.

ಇದರಲ್ಲಿ ₹ 36 ಲಕ್ಷ ಪ್ರತಿಮೆ ನಿರ್ಮಾಣಕ್ಕೆ ಮೀಸಲಾದರೆ, ಉಳಿದ ಮೊತ್ತ ವೃತ್ತದ ಸೌಂದರ್ಯೀಕರಣಕ್ಕೆ ಎಂದು ನಿಗದಿಯಾಗಿತ್ತು. ಮಹಾನಗರ ಪಾಲಿಕೆಗೆ ಅನುದಾನವೂ ಬಿಡುಗಡೆಯಾಗಿತ್ತು. ಸರ್ಕಾರಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆದಿದೆ. ಮೂರ್ತಿ ನಿರ್ಮಾಣ ವಿಳಂಬಗೊಳ್ಳಬಾರದು ಎಂದು ಕೊಲ್ಹಾಪುರದ ಕಲಾವಿದ, ಶಿಲ್ಪಿ ಡೊಂಗರ ಸಾಣೆಗೆ ಎಂ.ಬಿ.ಪಾಟೀಲರೇ ವೈಯಕ್ತಿಕವಾಗಿ ₹ 2 ಲಕ್ಷ ಮುಂಗಡ ಹಣ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆದಿದೆ ಎಂದು ಅಡಿವೆಪ್ಪ ಸಾಲಗಲ್ಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವೃತ್ತದಲ್ಲಿರುವ ಸಂದೇಶ

ವೃತ್ತದ ಸುತ್ತಲೂ ಇರುವ ಕಲ್ಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಘೋಷ ವಾಕ್ಯ, ಸಂದೇಶಗಳನ್ನು ಕೆತ್ತಲಾಗಿದೆ. ಇವು ಗಮನ ಸೆಳೆಯುತ್ತಿವೆ.

* ಮಾನವನಿಗೆ ಸ್ವಾಭಿಮಾನವೇ ಪ್ರಿಯ ಹೊರತು ಲಾಭವಲ್ಲ. ಇಂದು ನಾವು ಸ್ವಾಭಿಮಾನಕ್ಕಾಗಿ ಹೋರಾಟ ಹೂಡಿದ್ದೇವೆ

* ಜಗತ್ತಿನಲ್ಲಿ ಎಲ್ಲಿಯವರೆಗೆ ನ್ಯಾಯಕ್ಕೆ ಸ್ಥಾನ ದೊರೆಯುವುದಿಲ್ಲವೋ, ಅಲ್ಲಿಯವರೆಗೆ ಶಾಂತಿ ದೊರೆಯಲಾರದು

* ಪ್ರತಿಯೊಬ್ಬ ಭಾರತೀಯನಿಗೆ ಪ್ರಾಪ್ತವಾದ ಮೂಲಭೂತ ಹಕ್ಕುಗಳನ್ನು ಅನುಭವಿಸುವಾಗ ಯಾರ ಹೆಸರನ್ನು ಹೆಮ್ಮೆಯಿಂದ ಹೇಳುವೆವೋ ಅವರೇ ಕಾರಣ ಪುರುಷರು

* ಸ್ವಾಭಿಮಾನಿ ಹಾಗೂ ಗುಲಾಮಗಿರಿ ಒಂದೆಡೆ ಕೂಡಿರಲಾರವು

* ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !