ಚಿಕ್ಕರೂಗಿಯಲ್ಲಿ ಸ್ವಾತಂತ್ರ್ಯ ಯೋಧರ ವೃತ್ತ

7
ತನ್ನ ವೃತ್ತ, ಪುತ್ಥಳಿಯನ್ನು ತಾನೇ ನಿರ್ಮಿಸಿಕೊಂಡಿದ್ದ ಸ್ವಾತಂತ್ರ್ಯ ಯೋಧ..!

ಚಿಕ್ಕರೂಗಿಯಲ್ಲಿ ಸ್ವಾತಂತ್ರ್ಯ ಯೋಧರ ವೃತ್ತ

Published:
Updated:
Deccan Herald

ಸಿಂದಗಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಾಲ್ಲೂಕಿನ ಚಿಕ್ಕರೂಗಿ ಸಹ ಮಹತ್ತರ ಪಾತ್ರ ವಹಿಸಿದೆ. ಇಲ್ಲಿನ 19 ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇವರ ಸವಿ ನೆನಪಿಗಾಗಿಯೇ ಗ್ರಾಮದಲ್ಲಿ ಸ್ವಾತಂತ್ರ್ಯ ಯೋಧರ ವೃತ್ತವಿರುವುದು ಈ ಗ್ರಾಮದ ವಿಶೇಷವಾಗಿದೆ.

ಜೀವಂತವಿದ್ದಾಗಲೇ ತನ್ನ ಪುತ್ಥಳಿಯನ್ನು ತಾನೇ ನಿರ್ಮಿಸಿಕೊಂಡ ಸ್ವಾತಂತ್ರ್ಯ ಯೋಧ ದುಂಡಪ್ಪ ಉಪ್ಪಾರರ ಜನ್ಮಭೂಮಿಯೂ ಇದಾಗಿದೆ.

ದುಂಡಪ್ಪ ಉಪ್ಪಾರ ಗ್ರಾಮದ ಸ್ವಾತಂತ್ರ್ಯ ಯೋಧರಲ್ಲಿ ಒಬ್ಬರು. ಇವರ ಮೂಲ ಕುಲಕಸಬು ಕಟ್ಟಡ ನಿರ್ಮಾಣ. ತಮ್ಮ ಮನೆ ಬಳಿಯ ಸ್ವಂತ ಜಾಗದಲ್ಲಿ 1984ರ ಜ 1ರಂದು, ತಾವೇ ತಮ್ಮ ವೃತ್ತ ನಿರ್ಮಿಸಿ, ಪುತ್ಥಳಿ ಅನಾವರಣಗೊಳಿಸಿಕೊಂಡಿದ್ದರು. ಜೀವಂತವಿರುವ ತನಕವೂ ನಿತ್ಯವೂ ತಾವೇ ಪುತ್ಥಳಿ, ವೃತ್ತದ ಸ್ವಚ್ಛತೆ ನಡೆಸುತ್ತಿದ್ದರು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ದುಂಡಪ್ಪ, ಸ್ವಾತಂತ್ರ್ಯ ದೊರೆತ ಬಳಿಕ ಗ್ರಾಮದ ಅಭಿವೃದ್ಧಿಗಾಗಿ ಪಣತೊಟ್ಟರು. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಆಸ್ಪತ್ರೆ ಸ್ಥಾಪಿಸಲು ಹೋರಾಟ ನಡೆಸಿ ಯಶಸ್ವಿಯಾದವರು.

ಸಿಂದಗಿ ಪಟ್ಟಣದಲ್ಲಿ ಮಹಾತ್ಮ ಗಾಂಧೀಜಿ ವೃತ್ತ, ಪುತ್ಥಳಿ ಸ್ಥಾಪಿಸಲು ಒತ್ತಾಯಿಸಿ, ದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದಕ್ಕೆ ಮಣಿದು ಅಂದಿನ ಸಚಿವ ಎಂ.ಸಿ.ಮನಗೂಳಿ ಸಿಂದಗಿಯಲ್ಲಿ ಗಾಂಧೀಜಿ ವೃತ್ತ, ಪುತ್ಥಳಿ ನಿರ್ಮಿಸಿದರು.

ದುಂಡಪ್ಪ ನಿಧನದ ನಂತರ ಅವರ ಸಮಾಧಿಯನ್ನು ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದೆ. ಆದರೆ ಅಲ್ಲಿ ಸ್ಮಾರಕ ಇನ್ನೂ ನಿರ್ಮಾಣಗೊಂಡಿಲ್ಲ. ಇಂದಿನ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಏನೂ ಗೊತ್ತಿಲ್ಲ. ತಮ್ಮ ಪುತ್ಥಳಿಯನ್ನು ಯಾರೂ ಮಾಡುವುದಿಲ್ಲ ಎಂಬುದನ್ನು ಮನಗಂಡೇ ಸ್ವತಃ ಅವರೇ ವೃತ್ತ, ಪುತ್ಥಳಿ ಕಟ್ಟಿಕೊಂಡಿದ್ದರು ಎನ್ನುತ್ತಾರೆ ಸ್ಥಳೀಯರು.

2007ರ ಆ.15ರಂದು ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ವಾತಂತ್ರ್ಯ ಯೋಧರ ವೃತ್ತ ನಿರ್ಮಿಸಿ, ಅದನ್ನು ಮತ್ತೊಬ್ಬ ಸ್ವಾತಂತ್ರ್ಯಯೋಧ ಯಶವಂತ್ರಾಯಗೌಡ ಪಾಟೀಲ ಅವರಿಂದಲೇ ಉದ್ಘಾಟಿಸಿದ್ದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !