ಪಾರ್ಕಿಂಗ್‌ ಸ್ಥಳವಾದ ಸ್ವಾತಂತ್ರ್ಯ ಯೋಧರ ವೃತ್ತ..!

7
ಪತ್ರಿಕೋದ್ಯಮದ ಭೀಷ್ಮ ಮೊಹರೆ ಹಣಮಂತರಾಯರ ಹಳೆಯ ವೃತ್ತಕ್ಕೆ ಕಾಯಕಲ್ಪದ ಬೇಡಿಕೆ

ಪಾರ್ಕಿಂಗ್‌ ಸ್ಥಳವಾದ ಸ್ವಾತಂತ್ರ್ಯ ಯೋಧರ ವೃತ್ತ..!

Published:
Updated:
Prajavani

ದೇವರಹಿಪ್ಪರಗಿ: ಪತ್ರಿಕೋದ್ಯಮದ ಭೀಷ್ಮ ಮೊಹರೆ ಹಣಮಂತರಾಯರ ನೆನಪಿಗಾಗಿ ಪಟ್ಟಣದಲ್ಲಿ ನಿರ್ಮಿಸಿದ್ದ ವೃತ್ತವೀಗ, ವಾಹನ ಪಾರ್ಕಿಂಗ್‌ ಸ್ಥಳವಾಗಿದೆ. ಇಲ್ಲೊಂದು ವೃತ್ತವಿತ್ತು ಎಂಬ ಕುರುಹು ಇದೀಗ ಇಲ್ಲವಾಗಿದೆ. ಆದರೆ ಜನರ ಬಾಯಲ್ಲಿ ಮಾತ್ರ ಇಂದಿಗೂ ಮೊಹರೆ ವೃತ್ತ ಜನಜನಿತವಾಗಿದೆ.

ಪಟ್ಟಣದಲ್ಲಿ ಸಿಂದಗಿ, ತಾಳಿಕೋಟೆ ರಸ್ತೆಗಳು ಸೇರುವ ಜಾಗದಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ 1997ರ ಆ.15ರಂದು ಮೊಹರೆ ಹಣಮಂತರಾಯ ವೃತ್ತ ನಿರ್ಮಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ 218ರ ನಿರ್ಮಾಣದ ಸಂದರ್ಭ ವೃತ್ತ ತೆರವುಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ವೃತ್ತ ನಿರ್ಮಿಸಿ, ಗೌರವ ಸಲ್ಲಿಸಲಾಗುವುದು ಎಂದು ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ. ದಶಕ ಗತಿಸಿದರೂ ವೃತ್ತದ ಮರು ನಿರ್ಮಾಣದ ಬೇಡಿಕೆಗೆ ಸ್ಪಂದನೆ ಸಿಗದಾಗಿದೆ.

ಈಚೆಗಷ್ಟೇ ಪಟಣದ ಕೆಲ ಆಸಕ್ತರು ಮೊಹರೆ ವೃತ್ತಕ್ಕೆ ಕಾಯಕಲ್ಪ ನೀಡುವುದಕ್ಕಾಗಿ ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರಿ ಕಚೇರಿ ಅಲೆಯಲಾರಂಭಿಸಿದ್ದಾರೆ. ಜನಪ್ರತಿನಿಧಿಗಳ ಬಳಿ ಎಡತಾಕುತ್ತಿದ್ದಾರೆ. ಸ್ಥಳೀಯ ಆಡಳಿತದ ಜಾಣ ಕುರುಡು–ಕಿವುಡತನದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಮೊಹರೆ ವೃತ್ತ ಇದೀಗ ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳವಾಗಿದೆ. ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ನಡೆಯುವುದು ಬಿಟ್ಟರೇ ಬೇರೆ ಇನ್ಯಾವುದೇ ಚಟುವಟಿಕೆ ನಡೆದಿಲ್ಲ. ಪಟ್ಟಣ ಪಂಚಾಯ್ತಿ ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ವೃತ್ತಕ್ಕೆ ಕಾಯಕಲ್ಪ ನೀಡಲು ಮುಂದಾಗಬೇಕು’ ಎನ್ನುತ್ತಾರೆ ಪಟ್ಟಣದ ಗಂಗಾರಾಮ ಮೆಟಗಾರ, ಬಾಬುಗೌಡ ಪಾಟೀಲ ಜಿಡ್ಡಿಮನಿ.

ಮೊಹರೆ ಕುರಿತಂತೆ...

ಮೊಹರೆ ಹಣಮಂತರಾಯ 12/11/1892ರಲ್ಲಿ ದೇವರಹಿಪ್ಪರಗಿಯಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು, ತಂದೆ ರಾಘಣ್ಣ ನಾಯಕ ಮೊಹರೆ ಆರೈಕೆಯಲ್ಲಿ ಬೆಳೆದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಆರಂಭಿಸಿದರು. ಬಿ.ಎ ಅಂತಿಮ ವರ್ಷದಲ್ಲಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಜೈಲುವಾಸ ಕಂಡವರು.

ವಿಜಯಪುರದ ‘ಕರ್ನಾಟಕ ವೈಭವ’ ಸಾಪ್ತಾಹಿಕ ಪತ್ರಿಕೆಯ ಉಪ ಸಂಪಾದಕರಾಗುವ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಮೊಹರೆ, ಹಿಂತಿರುಗಿ ನೋಡಲಿಲ್ಲ. ಸ್ವಾತಂತ್ರ್ಯ ಚಳವಳಿ, ಪತ್ರಿಕಾ ರಂಗದ ಮೂಲಕ ದೇಶದ ಮಹಾನ್‌ ನಾಯಕರ ಸಂಪರ್ಕ ಹೊಂದಿದ್ದರು. 27/07/1960ರಲ್ಲಿ ನಿಧನರಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !