ಮಧ್ಯಮ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

7

ಮಧ್ಯಮ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಯು.ಬಿ. ಪವನಜ
Published:
Updated:

ಟೆಕ್ನೊ ಮೊಬೈಲ್ ಕಂಪನಿ ಬಗ್ಗೆ ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಅದು ಮೂಲತಃ ಹಾಂಗ್‌ಕಾಂಗ್‌ನ ಕಂಪನಿ. ಅದು ತನ್ನ ಬಹುತೇಕ ಫೋನ್‌ಗಳನ್ನು ಚೀನಾದಲ್ಲಿ ತಯಾರಿಸುತ್ತಿದೆ. ₹15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಕೊಳ್ಳಲು ಬಹುಮಂದಿ ಇಚ್ಛಿಸುತ್ತಾರೆ. ಟೆಕ್ನೊ ಕಂಪನಿ ಕೂಡ ಈ ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಕೆಲವು ಫೋನ್‌ಗಳನ್ನು ತಯಾರಿಸಿದೆ. ಈ ವಾರ ನಾವು ವಿಮರ್ಶೆ ಮಾಡುತ್ತಿರುವುದು ಟೆಕ್ನೊ ಕಮೊನ್ ಐ ಟ್ವಿನ್ (Tecno Camon I Twin) ಫೋನನ್ನು.

ಈ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಿದ್ದ ಟೆಕ್ನೊ ಕಮೊನ್ ಐ ಗೆ ಇದು ಉತ್ತರಾಧಿಕಾರಿ ಅಥವಾ ಅದರ ಸ್ವಲ್ಪ ಸುಧಾರಿತ ಆವೃತ್ತಿ ಎನ್ನಬಹುದು. ಇದು ಹಲವು ರೀತಿಯಲ್ಲಿ ಅದಕ್ಕಿಂತ ಉತ್ತಮ. ಅಂತೆಯೇ ಬೆಲೆಯೂ ಹೆಚ್ಚು.

ಇದೊಂದು ಮಧ್ಯಮ ಬೆಲೆಯ ಫೋನ್. ಅಂತೆಯೇ ನಾವು ವಿಮರ್ಶೆ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್‌ನ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಕೆಳಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಹಿಂಭಾಗದಲ್ಲಿ ಮೂಲೆಯಲ್ಲಿ ಪ್ರಾಥಮಿಕ ಕ್ಯಾಮೆರಾಗಳು ಮತ್ತು ಅದರ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಭಾಗದಲ್ಲಿ ಸ್ವಲ್ಪ ಮೇಲೆ ಬೆರಳಚ್ಚು ಸ್ಕ್ಯಾನರ್ ಇದೆ. ಇದು ಅಂಚುರಹಿತ ಪರದೆಯುಳ್ಳ ಫೋನ್. ಅಂದರೆ ಪರದೆಯ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ. ಹಿಂಭಾಗದ ಕವಚ ತೆಗೆಯಲು ಅಸಾಧ್ಯ. ಅಂದರೆ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ. ಹಿಂಭಾಗದ ಕವಚ ಬದಿಗಳಲ್ಲಿ ವಕ್ರವಾಗಿದೆ. ತುಂಬ ನಯವೂ ಅಲ್ಲ, ದೊರಗೂ ಅಲ್ಲದ ಕವಚ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಪರವಾಗಿಲ್ಲ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ. ನೀಡುವ ಹಣಕ್ಕೆ ತಕ್ಕಂತಿದೆ.

ಇದರಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 45,101 ಇದೆ. ಅಂದರೆ ಇದು ಕಡಿಮೆ ವೇಗದಲ್ಲಿ ಕೆಲಸ ಮಾಡುವ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದಕ್ಕೆ ಇದು ತಕ್ಕುದಲ್ಲ. ಆದರೂ 3 ಗಿಗಾಬೈಟ್ ಮೆಮೊರಿ ಇರುವ ಕಾರಣ ಕೆಲಸ ಮಾಡುವಾಗ ಅಅಷ್ಟೇನೂ ಅಡೆತಡೆ ಅನ್ನಿಸುವುದಿಲ್ಲ.

ಟೆಕ್ನೊ ಕಮೊನ್ ಐ ಫೋನಿನಲ್ಲಿ 13 ಮೆಗಾಪಿಕ್ಸೆಲ್‌ನ ಒಂದು ಕ್ಯಾಮೆರಾ ಮಾತ್ರ ಇತ್ತು. ಇದರಲ್ಲಿ 13 ಮತ್ತು 2 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮೆರಾಗಳಿವೆ. ‌ಸೆಲ್ಪಿ ಕ್ಯಾಮೆರಾ ಕೂಡ 13 ಮೆಗಾಪಿಕ್ಸೆಲ್‌ನದ್ದಾಗಿದೆ. ಪ್ರಾಥಮಿಕ ಕ್ಯಾಮೆರಾಗಳ ಗುಣಮಟ್ಟ ಒಂದು ಮಟ್ಟಿಗೆ ತೃಪ್ತಿದಾಯಕವಾಗಿವೆ. ತುಂಬ ಬೆಳಕಿದ್ದಲ್ಲಿ ತೆಗೆದ ಫೋಟೋ ತೃಪ್ತಿದಾಯಕವಾಗಿದೆ. ಹತ್ತಿರದ ವಸ್ತುಗಳ, ಉದಾಹರಣೆಗೆ ಹೂವುಗಳ ಫೋಟೋ ಚೆನ್ನಾಗಿ ಮೂಡಿಬರುತ್ತದೆ. ಪ್ರಕೃತಿ ದೃಶ್ಯಗಳ (landscape) ಫೋಟೊ ಕೂಡ ಒಂದು ಮಟ್ಟಿಗೆ ಚೆನ್ನಾಗಿ ಬರುತ್ತದೆ. ಕಡಿಮೆ ಬೆಳಕಿನ ಛಾಯಾಗ್ರಹಣ ಸುಮಾರಾಗಿದೆ. ವಿಡಿಯೊ ಚಿತ್ರೀಕರಣ ಇನ್ನೂ ಸ್ವಲ್ಪ ಉತ್ತಮವಾಗಿದ್ದರೆ ಒಳ್ಳೆಯದಿತ್ತು. ಒಟ್ಟಿನಲ್ಲಿ ಕ್ಯಾಮೆರಾ ವಿಭಾಗದಲ್ಲಿ ಇದು ಅಲ್ಲಿಂದಲ್ಲಿಗೆ ಪಾಸು ಆಗುತ್ತದೆ.

ಇದರ ಪರದೆ ಒಂದುಮಟ್ಟಿಗೆ ತೃಪ್ತಿದಾಯಕವಾಗಿದೆ. ಇದೇ ಮಾತನ್ನು ವಿಡಿಯೊ ನೋಡುವ ಅನುಭವದ ಬಗ್ಗೆಯೂ ಹೇಳಬಹುದು. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಅವರು ನೀಡಿರುವ ಇಯರ್‌ಫೋನ್ ಕೂಡ ಒಂದು ಮಟ್ಟಿಗೆ ಅಂದರೆ ನೀಡುವ ಹಣಕ್ಕೆ ತೃಪ್ತಿದಾಯಕವಾಗಿದೆ ಎನ್ನಬಹುದು. ನಿಮ್ಮಲ್ಲಿ ಯಾವುದಾದರೂ ಉತ್ತಮ ಇಯರ್‌ಪೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗುವಂತಹ ಸಂಗೀತ ಆಲಿಸಬಹುದು.

ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಕನ್ನಡವೂ ಇದೆ. ಕನ್ನಡ ಭಾಷೆಯ ತೋರುವಿಕೆ ಸರಿಯಾಗಿದೆ. 4000 mAh ಶಕ್ತಿಯ ಬ್ಯಾಟರಿ ಇದೆ. ಆದರೆ ವೇಗವಾಗಿ ಚಾರ್ಜ್ ಮಾಡುವ ಸೌಲಭ್ಯ ನೀಡಿಲ್ಲ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.

ಒಟ್ಟಿನಲ್ಲಿ ಹೇಳುವುದಾರೆ ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡಬಹುದಾದ ಫೋನ್.

ವಾರದ ಆ್ಯಪ್‌ (app)

ಕಾರೆಲ್ಲಿದೆ? (Find parked car) 
[ಚಿತ್ರಕ್ಕೆ ಕೊಂಡಿ – http://bit.ly/gadgetloka342 ]

ನಗರದೊಳಗೆ ಹೋದಾಗ, ಮದುವೆಗೆ ಹೋದಾಗ, ಇನ್ನೆಲ್ಲಾದರೂ ದೊಡ್ಡ ಜಾಗಕ್ಕೆ ಅಂದರೆ ತುಂಬ ಕಾರುಗಳನ್ನು ಪಾರ್ಕ್ ಮಾಡಿದ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಕೆಲವೊಮ್ಮೆ ಎಲ್ಲಿ ಪಾರ್ಕ್ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಜಾಗ ದೊರೆಯದೆ ಇನ್ನೆಲ್ಲೊ ಪಾರ್ಕ್ ಮಾಡಿರುತ್ತೀರಿ. ಆದರೆ ತಲೆಯೊಳಗೆ ಮೊದಲಿನ ಜಾಗವೇ ಇರುತ್ತದೆ. ಕೆಲಸ ಮುಗಿಸಿ ವಾಪಾಸು ಬಂದಾಗ ಕಾರು ಎಲ್ಲಿದೆ ಎಂದು ಹುಡುಕುವುದು ಕೆಲವೊಮ್ಮೆ ತಲೆನೋವಿನ ಕೆಲಸ. ಈ ಸಮಸ್ಯೆಗೆ ಪರಿಹಾರವಾಗಿ ಈ ಕಿರುತಂತ್ರಾಂಶ (ಆಪ್) ಬಂದಿದೆ. ಇದು ಬೇಕಿದ್ದಲ್ಲಿ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Find parked car ಎಂದು ಹುಡುಕಬೇಕು ಅಥವಾ http://bit.ly/gadgetloka342 ಜಾಲತಾಣಕ್ಕೆ ಭೇಟಿ ನೀಡಬೇಕು. ಇದು ಜಿಪಿಎಸ್ ಬಳಸುತ್ತದೆ. ಕಾರು ನಿಲ್ಲಿಸಿದಾಗ ಆ ಜಾಗವನ್ನು ಇದರಲ್ಲಿ ಉಳಿಸಬೇಕು. ನಂತರ ಕಾರು ಎಲ್ಲಿದೆ ಎಂದು ಪತ್ತೆ ಹಚ್ಚಲು ಅದು ಮತ್ತೆ ಜಿಪಿಎಸ್ ಬಳಸಿ ಅದು ಎಲ್ಲಿದೆ ಎಂದು ತೋರಿಸುತ್ತದೆ. ಈ ಕಿರುತಂತ್ರಾಂಶವನ್ನು ಕಾರು ಪತ್ತೆ ಹಚ್ಚಲು ಮಾತ್ರವಲ್ಲ ಬೈಕ್, ಸ್ಕೂಟರ್, ಏನೇ ಬೇಕಿದ್ದರೂ ಪತ್ತೆಹಚ್ಚಲು ಬಳಸಬಹುದು. ಮೊದಲು ದಾಖಲಿಸಿದ ಜಾಗ ಯಾವುದು ಎಂಬುದನ್ನು ಅದು ತೋರಿಸುತ್ತದೆ ಅಷ್ಟೆ.

ಗ್ಯಾಜೆಟ್ ಪದ

Tethering = ಟೆದರಿಂಗ್

ಸ್ಮಾರ್ಟ್‌ಫೋನಿನ ಅಂತರಜಾಲ ಸಂಪರ್ಕವನ್ನು ಇನ್ನೊಂದು ಸಾಧನ (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಇತ್ಯಾದಿ) ಜೊತೆ ಹಂಚಿಕೊಳ್ಳುವುದು. ಈ ಹಂಚಿಕೊಳ್ಳುವಿಕೆಯನ್ನು ವೈಫೈ ಅಥವಾ ಬ್ಲೂಟೂತ್ ಅಂದರೆ ನಿಸ್ತಂತು (wireless) ವಿಧಾನ ಅಥವಾ ಯುಎಸ್‌ಬಿ ಕೇಬಲ್ ಮೂಲಕವೂ ಸಾಧಿಸಬಹುದು.

ಗ್ಯಾಜೆಟ್ ತರ್ಲೆ

ಐಫೋನ್ ಪಾಸ್‌ಪೋರ್ಟ್‌: ಆಪಲ್ ಕಂಪನಿ ಅಮೆರಿಕದ ಪೇಟೆಂಟ್ ಇಲಾಖೆಗೆ ಸಲ್ಲಿಸಿರುವ ಹೊಸ ಅರ್ಜಿಯಲ್ಲಿ ಐಫೋನ್ ಅನ್ನು ಪಾಸ್‌ಪೋರ್ಟ್ ಆಗಿ ಬಳಸುವ ಸಾಧ್ಯತೆ ಬಗ್ಗೆ ತಿಳಿಸಿದೆ. ಇನ್ನು ಮುಂದೆ ಪಾಸ್‌ಪೋರ್ಟ್‌ಕಚೇರಿಗಳು ಮುದ್ರಿತ ಪಾಸ್‌ಬುಕ್ ಬದಲಿಗೆ ಐಫೋನ್ ನೀಡುತ್ತಾರೊ ಎಂಬುದನ್ನು ಕಾದು ನೋಡಬಹುದು!

ಗ್ಯಾಜೆಟ್ ಸಲಹೆ

ಆನಂದ ಮೊದಲಿಯಾರ್ ಅವರ ಪ್ರಶ್ನೆ: ನೀವು ಸ್ಮಾರ್ಟ್ರೋನ್ ಟಿ.ಬುಕ್ ಫ್ಲೆಕ್ಸ್ ಬಗ್ಗೆ ಬರೆದುದನ್ನು ಓದಿದೆ. ನನಗೆ ಅದನ್ನು ಕೊಳ್ಳಬೇಕಿದ್ದರೆ ಎಲ್ಲಿ ವಿಚಾರಿಸಬೇಕು? ಕಂಪೆನಿಯ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ ದೊರೆಯುತ್ತದೆ?
ಉ: www.smartron.com ಜಾಲತಾಣದಲ್ಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !