ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೇಗದ ಪೋನ್

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ವಿಶಿಷ್ಟ ಸ್ಥಾನದಲ್ಲಿ ಒನ್‌ಪ್ಲಸ್ ಕಂಪನಿ ಇದೆ. ಭಾರತದಲ್ಲಿ ಒಂದು ಫೋನಿಗೆ ಜನ ಸಾಲು ನಿಲ್ಲುವಂತೆ ಮಾಡಿದ ಫೋನ್ ಇದು. ಈವರೆಗೂ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲ ಫೋನ್‌ಗಳೂ ಅತ್ಯುತ್ತಮ ಅನ್ನಬಹುದಾದ ಫೋನ್‌ಗಳನ್ನು ತಯಾರಿಸಿದ ವಿಶಿಷ್ಟ ಕಂಪನಿ ಇದು. ಮಾರುಕಟ್ಟೆಯಲ್ಲಿ ಒಂದು ಸಮಯದಲ್ಲಿ ಒಂದೇ ಫೋನ್ ಇಟ್ಟುಕೊಳ್ಳುವ ಕಂಪನಿ. ಈ ಕಂಪನಿಯಿಂದ ಬಂದಿರುವ ಹೊಸ ಫೋನ್ ಒನ್‌ಪ್ಲಸ್ 6 (Oneplus 6). ಇದು ನಮ್ಮ ಈ ವಾರದ ಗ್ಯಾಜೆಟ್.

ಇದು ಒನ್‌ಪ್ಲಸ್ 5ಟಿ ಗೆ ಉತ್ತರಾಧಿಕಾರಿ. ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ. ಹಿಂಬದಿಯ ಕ್ಯಾಮೆರಾ ಮೂಲೆಯಿಂದ ಮಧ್ಯಕ್ಕೆ ಹೋಗಿದೆ. ಬೆರಳಚ್ಚು ಸ್ಕ್ಯಾನರ್ ಅದರ ಕೆಳಗಡೆ ಇದೆ. ಇದು ಕೂಡ ಅಂಚುರಹಿತ (bezelless) ಮಾತ್ರವಲ್ಲ ಪರದೆಯ ಕಚ್ಚು (screen notch) ಕೂಡ ಇದೆ. ಈ ಸವಲತ್ತು ಇಷ್ಟವಿಲ್ಲದಿದ್ದವರು ಅದನ್ನು ಆಫ್ ಮಾಡುವ ಆಯ್ಕೆಯನ್ನೂ ನೀಡಿದ್ದಾರೆ. ಹಿಂಬದಿಯ ಕವಚ ಗಾಜಿನ ಲೇಪ ಹೊಂದಿದ್ದು ಅತಿ ನಯವಾಗಿದೆ. ಕೈಯಿಂದ ಜಾರಿ ಬೀಳದಂತೆ ಹೆಚ್ಚಿಗೆ ಒಂದು ಪ್ಲಾಸ್ಟಿಕ್ ಕವಚವನ್ನು ಕೂಡ ನೀಡಿದ್ದಾರೆ. ರಚನೆ ಮತ್ತು ವಿನ್ಯಾಸದಲ್ಲಿ ಇತರೆ ಒನ್‌ಪ್ಲಸ್ ಫೋನ್‌ಗಳಂತೆ ಇದು ಕೂಡ ಅತ್ಯುತ್ತಮವಾಗಿದೆ.

ಇದು ಅತಿ ವೇಗದ ಫೋನ್. ಇದರ ಅಂಟುಟು ಬೆಂಚ್‌ಮಾರ್ಕ್ 2,83,877 ಇದೆ. The speed you need - ಈ ಫೋನ್‌ನ ಧ್ಯೇಯ ವಾಕ್ಯ. ಭಾರತದಲ್ಲಿ ಬಿಡುಗಡೆಯಾದ ಸ್ನಾಪ್‌ಡ್ರಾಗನ್ 845 ಪ್ರೊಸೆಸರ್ ಒಳಗೊಂಡ ಪ್ರಥಮ ಫೋನ್ ಇದು. ಜೊತೆಗೆ 8 ಗಿಗಾಬೈಟ್ ಪ್ರಾಥಮಿಕ ಮೆಮೊರಿ ಇದೆ. ಅತ್ಯಂತ ಅಧಿಕ ವೇಗದ ಫೋನ್ ಬೇಕು ಎನ್ನುವವರಿಗೆ ಇದು ಖಂಡಿತ ತೃಪ್ತಿ ನೀಡುವ ಫೋನ್. ಫೋನಿನಲ್ಲಿ ಮೂರು ಆಯಾಮದ ಅತಿ ವೇಗದ, ಅತಿ ಶಕ್ತಿಯನ್ನು ಬೇಡುವ, ಆಟಗಳನ್ನು ಆಡುವವರು ನೀವಾದರೆ ನಿಮಗೆ ಈ ಫೋನ್ ಹೇಳಿ ಮಾಡಿಸಿದ್ದು. ಅತಿ ವೇಗದ ಜೊತೆಗೆ ಉತ್ತಮ ಪರದೆ, ಉತ್ತಮ ಆಡಿಯೊ ಎಂಜಿನ್ ಕೂಡ ಇದಕ್ಕೆ ಪೂರಕವಾಗಿವೆ. ಈ ಮಾತನ್ನು ಪರೀಕ್ಷಿಸಬೇಕಾದರೆ ನೀವು ಈ ಫೋನಿನಲ್ಲಿ ಅಸ್ಫಾಲ್ಟ್ 8 ಆಟವನ್ನು ಆಡಿ ನೋಡಬೇಕು.

ಒನ್‌ಪ್ಲಸ್ 3ಟಿ ಫೋನಿನಲ್ಲಿ ಕ್ಯಾಮೆರಾಕ್ಕೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇತ್ತು. ಇದರಿಂದಾಗಿ ವಿಡಿಯೊ ಚಿತ್ರೀಕರಣ ಮಾಡುವಾಗ ಫೋನ್ ಸ್ವಲ್ಪ ಅಲುಗಾಡಿದರೂ ಉತ್ತಮ ಚಿತ್ರೀಕರಣ ಆಗುತ್ತಿತ್ತು. ಒನ್‌ಪ್ಲಸ್‌ನವರು ತಮ್ಮ 5 ಮತ್ತು 5ಟಿ ಫೋನ್‌ಗಳಲ್ಲಿ ಅದನ್ನು ತೆಗದು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಸೇರಿದ್ದರು. ಈಗ ಒನ್‌ಪ್ಲಸ್‌ 6 ರಲ್ಲಿ ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಎರಡೂ ಇವೆ. ಇಲ್ಲಿವರೆಗೂ ಬಿಡುಗಡೆಯಾದ ಎಲ್ಲ ಒನ್‌ಪ್ಲಸ್ ಫೋನ್‌ಗಳು ಉತ್ತಮ ಕ್ಯಾಮೆರಾಕ್ಕೆ ಹೆಸರಾಗಿದ್ದವು. ಈ ಫೋನ್ ಕೂಡ ಆ ಪರಂಪರೆಯನ್ನು ಉಳಿಸಿಕೊಂಡಿದೆ. ಈ ಫೋನಿನ ಕ್ಯಾಮೆರಾದ ನಿಜ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಪಡೆಯಬೇಕಾದರೆ ನೀವು ಇದರ ಮ್ಯಾನ್ಯುವಲ್ ಮೋಡ್ ಅನ್ನು ಬಳಸಬೇಕು. ನಮ್ಮ ಮನೆಯ ತಾರಸಿಯಲ್ಲಿ ಬೆಳೆದ ಹೂವಿನ ಗಿಡಕ್ಕೆ ಕಟ್ಟಿದ ಜೇಡನ ಬಲೆಯನ್ನು ನಾನು ಈ ವಿಧಾನದಲ್ಲಿ ಉತ್ತಮವಾಗಿ ಸೆರೆಹಿಡಿದಿದ್ದೇನೆ. ವಿಡಿಯೊ ಚಿತ್ರೀಕರಣದಲ್ಲಿ ಅತಿ ನಿಧಾನ ಎಂಬ ಆಯ್ಕೆ ಇದೆ. ಇದು ಸೆಕೆಂಡಿಗೆ 480 ಫ್ರೇಂಗಳನ್ನು (fps) ಚಿತ್ರೀಕರಿಸಬಲ್ಲುದು. ಮಳೆ ಹನಿಹನಿಯಾಗಿ ಬೀಳುವುದನ್ನು ಅದ್ಭುತವಾಗಿ ಚಿತ್ರೀಕರಣ ಮಾಡಬಹುದು. ಅಂದ ಹಾಗೆ ಕಳೆದ ವಾರ ವಿಮರ್ಶೆ ಮಾಡಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9+ ಫೋನಿನಲ್ಲಿ ಸೆಕೆಂಡಿಗೆ 960 ಫ್ರೇಂಗಳ ವೇಗದಲ್ಲಿ ಚಿತ್ರೀಕರಣ ಮಾಡಬಹುದು.

ಈ ಫೋನಿನಲ್ಲೂ ಒನ್‌ಪ್ಲಸ್‌ನವರ ಹೆಸರುವಾಸಿಯಾದ ಡ್ಯಾಶ್ ಚಾರ್ಜಿಂಗ್ ವ್ಯವಸ್ಥೆ ಇದೆ. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿ ಚಾರ್ಜ್ ಮಾಡಿದರೆ 100 ನಿಮಿಷದಲ್ಲಿ 0 ಯಿಂದ 100% ಚಾರ್ಜ್ ಆಗುತ್ತದೆ. ಒಂದು ದಿನದ ಮಟ್ಟಿಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಬ್ಯಾಟರಿ ಬಾಳಿಕೆ ಅದ್ಭುತವೇನೂ ಅಲ್ಲ. ಆದರೆ ಸುಮಾರು 30 ನಿಮಿಷದಲ್ಲಿ ನಿಮಗೆ ಒಂದು ಹಗಲಿಗೆ ಸಾಕಾಗುವಷ್ಟು ಚಾರ್ಜ್ ಮಾಡಿಕೊಳ್ಳಬಹುದು.

ಇದರಲ್ಲಿ ಮುಖವನ್ನು ಗುರುತುಹಿಡಿದು ಅದನ್ನೇ ಪಾಸ್‌ವರ್ಡ್‌ಮಾಡಿಕೊಳ್ಳುವ ವ್ಯವಸ್ಥೆ ಇದೆ. ಆದರೆ ಅದನ್ನು ಚಾಲೂ ಇಟ್ಟರೆ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಕನ್ನಡದ ತೋರುವಿಕೆ ಸರಿಯಾಗಿದೆ. ಇದರಲ್ಲಿ ಎರಡು ಸಿಮ್‌ಗಳನ್ನು ಏಕಕಾಲದಲ್ಲಿ ಕ್ರಿಯಾತ್ಮಕವಾಗಿ ಬಳಸಬಹುದು. ಅಂದರೆ ಒಂದು ಸಿಮ್‌ನಲ್ಲಿ ಮಾತನಾಡುತ್ತಿದ್ದಾಗ ಇನ್ನೊಂದು ಸಿಮ್‌ಗೆ ಕರೆ ಬಂದರೆ ಅದು ತೋರಿಸುತ್ತದೆ. ಕರೆ ಮಾಡಿದವರಿಗೆ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ತಪ್ಪು ಸಂದೇಶ ಕೇಳಿಸುವುದಿಲ್ಲ.

ಒನ್‌ಪ್ಲಸ್‌ನವರು ತಮ್ಮ ಫೋನ್‌ ಬೆಲೆಯನ್ನು ಪ್ರತಿ ಆವೃತ್ತಿಯಲ್ಲೂ ನಿಧಾನಕ್ಕೆ ಏರಿಸುತ್ತಾ ಬಂದಿದ್ದಾರೆ. ಆದರೂ ಈ ಬೆಲೆಗೆ ಇದು ಉತ್ತಮ ಫೋನ್ ಎನ್ನಬಹುದು. ಈಗ ನೀವು ಒಂದು ಪ್ರಶ್ನೆ ಕೇಳಬಹುದು – ‘ನನ್ನಲ್ಲಿ ಈಗಾಗಲೇ ಒನ್‌ಪ್ಲಸ್ 5/5T ಇದೆ. ನಾನು ಪುನಃ ಹಣ ಖರ್ಚು ಮಾಡಿ ಒನ್‌ಪ್ಲಸ್ 6 ಕೊಳ್ಳುವ ಅಗತ್ಯವಿದೆಯೇ?’ ಎಂದು. ನನ್ನ ಉತ್ತರ, ‘ನೀವು 30 ಚಿಲ್ಲರೆ ಸಾವಿರ ಖರ್ಚು ಮಾಡಲು ಹಲವು ಸಲ ಯೋಚಿಸುವವರಾದರೆ ಅದು ಅಗತ್ಯವಿಲ್ಲ. ಅಷ್ಟೇಕೆ? ಒನ್‌ಪ್ಲಸ್ 3T ಕೂಡ ಇನ್ನೂ ಚೆನ್ನಾಗಿಯೇ ಇದೆ. ಇನ್ನೂ ಯಾವುದೇ ಮೇಲ್ಮಟ್ಟದ ಫೋನ್ ನೀವು ಕೊಂಡಿಲ್ಲವಾದರೆ ಖಂಡಿತ ಇದನ್ನು ಕೊಳ್ಳಬಹುದು.

ನಾನು ಬಳಸಿ ನೋಡಿದವುಗಳಲ್ಲಿ ಇದಕ್ಕಿಂತ ಉತ್ತಮ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9+ ಎಂದು ಹೇಳಬಹುದು. ಆದರೆ ಅದರ ಬೆಲೆ ಇದರದಕ್ಕಿಂತ ಒಂದೂವರೆ ಪಾಲು ಹೆಚ್ಚು.

***

ವಾರದ ಆಪ್ (app): ವಿಶ್ವಕಪ್ ಕಾಲ್ಚೆಂಡು (2018 FIFA World Cup Russia Official App)

ಕೆಲವರಿಗೆ ಈಗ ನಡೆಯುತ್ತಿರುವ ವಿಶ್ವಕಪ್ ಕಾಲ್ಚೆಂಡಿನ ಜ್ವರ ಹಿಡಿದಿದೆ. ಭಾರತದಲ್ಲಿ ಇದರ ಹುಚ್ಚು ಕಡಿಮೆ ಇದ್ದರೂ ಜಾಗತಿಕ ಮಟ್ಟದಲ್ಲಿ ಇದು ಅತಿ ದೊಡ್ಡ ಸುದ್ದಿ. ಈ ವರ್ಷದ ಫಿಫಾ ವರ್ಲ್ಡ್ ಕಪ್ ಫುಟ್‌ಬಾಲ್ ಆಟಗಳು ಜುಲೈ 15ಕ್ಕೆ ಮುಗಿಯುತ್ತವೆ. ಯಾವ ತಂಡದ ಅಂಕಗಳು ಎಷ್ಟು, ಇವತ್ತು ಯಾವ ತಂಡ ಯಾರ ಜೊತೆ ಆಡಲಿದೆ, ಆಟ ನಡೆಯುತ್ತಿದ್ದಂತೆ ಅದರ ವಿವರಗಳು ಎಲ್ಲ ದೊರೆಯುವ ಕಿರುತಂತ್ರಾಂಶಗಳು (ಆಪ್) ಹಲವಾರಿವೆ. ಫಿಫಾದವರ ಅಧಿಕೃತ ಕಿರುತಂತ್ರಾಂಶ ಬೇಕಿದ್ದರೆ ಪ್ಲೇ ಸ್ಟೋರಿನಲ್ಲಿ 2018 FIFA World Cup Russia Official App ಎಂದು ಹುಡುಕಿ ಅಥವಾ http://bit.ly/gadgetloka336 ಜಾಲತಾಣಕ್ಕೆ ಭೇಟಿ ನೀಡಿ. ಕೆಲವು ಬ್ಲಾಗ್‌ಗಳು ಹಾಗೂ ಸ್ವಾರಸ್ಯಕರ ಮಾಹಿತಿಗಳೂ ಇದರಲ್ಲಿವೆ.

ಗ್ಯಾಜೆಟ್ ಪದ: Text = ಪಠ್ಯ

ಗಣಕದಲ್ಲಿ ಬಳಸುವ ಮಾಹಿತಿಯು ಅಕ್ಷರಗಳ ಸರಣಿಯಾಗಿದ್ದಲ್ಲಿ ಅದು ಪಠ್ಯ ಎನಿಸಿಕೊಳ್ಳುತ್ತದೆ. ಜಾಲತಾಣಗಳಲ್ಲಿ ಸುದ್ದಿಗಳು ಬಹುತೇಕ ಪಠ್ಯರೂಪದಲ್ಲಿರುತ್ತವೆ.

ಗ್ಯಾಜೆಟ್ ತರ್ಲೆ

ಅತ್ತೆ: ಗ್ಯಾಸ್‌ಒಲೆ ಮೇಲೆ ಹಾಲಿಟ್ಟಿದ್ದೇನೆ, ಅದನ್ನು ಸಿಮ್‌ನಲ್ಲಿಡು.

ಸೊಸೆ: ಯಾವ ಸಿಮ್‌ನಲ್ಲಿಡಬೇಕು: ಸಿಮ್-1 ಅಥವಾ ಸಿಮ್-2?

(ಫೇಸ್‌ಬುಕ್‌ನಿಂದ ಕದ್ದಿದ್ದು)

ಗ್ಯಾಜೆಟ್ ಸಲಹೆ

ಅನೂಪ್ ಅವರ ಪ್ರಶ್ನೆ: ಶಿಯೋಮಿ ನೋಟ್ 5 ಮತ್ತು ರೆಡ್‌ಮಿ ವೈ2 ಇವುಗಳಲ್ಲಿ ಯವುದು ಉತ್ತಮ?

ಉ: ನೋಟ್ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT