ಬುಧವಾರ, ಮೇ 27, 2020
27 °C

ಝೆಬ್ರೋನಿಕ್ಸ್ ಫಿಟ್-500 ಆರೋಗ್ಯ ಪಟ್ಟಿ

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

Deccan Herald

ಭಾರತದ ಮಾರುಕಟ್ಟೆಯ ವಿಶೇಷವೇನೆಂದರೆ ಅದು ಉತ್ಪನ್ನಗಳ ಬೆಲೆಯ ಕಡೆ ಅತಿಯಾಗಿ ಗಮನ ನೀಡುತ್ತದೆ. ಅಂದರೆ ಕಡಿಮೆ ಬೆಲೆಗೆ ಉತ್ತಮ ಉತ್ಪನ್ನ ಅಥವಾ ತಮಗೆ ಬೇಕಾದ ಕೆಲಸಗಳನ್ನು ಮಾಡುವ ಉತ್ಪನ್ನ ದೊರಕಿದರೆ ಜನ ಅದನ್ನು ಕೊಳ್ಳುತ್ತಾರೆ. ಝೆಬ್ರೋನಿಕ್ಸ್ ಕಂಪನಿ ಅಂತಹವರ ಕಡೆಗೆ ವಿಶೇಷ ಗಮನವಿಟ್ಟು ಕಡಿಮೆ ಬೆಲೆಗೆ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವರ ಉತ್ಪನ್ನಗಳು ಕಡಿಮೆ ಬೆಲೆಯವು ಮಾತ್ರವಲ್ಲ ಬೆಲೆಗೆ ತಕ್ಕ ಗುಣಮಟ್ಟದವೂ ಆಗಿವೆ. ಅವರ ಹಲವು ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶಿಲಾಗಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಝೆಬ್ರೋನಿಕ್ಸ್ ಕಂಪೆನಿಯ ಝಡ್‌ಇಬಿ-ಫಿಟ್500 (Zebronics ZEB-FIT500) ಎಂಬ ಒಂದು ಆರೋಗ್ಯಪಟ್ಟಿಯನ್ನು.

ಆರೋಗ್ಯಪಟ್ಟಿ ಅಥವಾ ಚಟುವಟಿಕೆ ಪಟ್ಟಿ ಎಂಬುದು ಒಂದು ಧರಿಸಬಲ್ಲ ಗ್ಯಾಜೆಟ್. ಇವು ಇದನ್ನು ಧರಿಸಿದವರು ಎಷ್ಟು ನಡೆದಿದ್ದಾರೆ, ಎಷ್ಟು ಓಡಿದ್ದಾರೆ, ಎಷ್ಟು ನಿದ್ರಿಸಿದ್ದಾರೆ ಎಂದೆಲ್ಲ ಮಾಹಿತಿ ನೀಡುತ್ತವೆ. ಇವುಗಳಲ್ಲಿ ಕೆಲವು ಹೃದಯಬಡಿತವನ್ನೂ ಎಣಿಸಿ ಹೇಳುತ್ತವೆ. ಸಾಮಾನ್ಯವಾಗಿ ಕೈಗೆ ಕಟ್ಟಿಕೊಳ್ಳಲಾಗುವ ಈ ಪಟ್ಟಿಗಳು ಎಲ್ಲ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಕಿರುತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನಿಗೆ ವರ್ಗಾಯಿಸುತ್ತವೆ. ಈ ಪಟ್ಟಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿರುವಂತಹ ಎಕ್ಸೆಲೆರೋಮೀಟರ್ ಇರುತ್ತವೆ. ಈ ಸಂವೇದಕವು ಪಟ್ಟಿಯು ಸ್ಥಿರವಾಗಿದೆಯೇ, ಚಲಿಸುತ್ತಿದೆಯೇ, ಯಾವ ದಿಕ್ಕಿಗೆ ಎಷ್ಟು ವೇಗದಿಂದ ಚಲಿಸುತ್ತಿದೆ, ಭೂಮಿ ಯಾವ ಕಡೆಗೆ ಇದೆ, ಎಂದೆಲ್ಲ ಗ್ರಹಿಸಿ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಸಾಧನವನ್ನು ಧರಿಸಿದವನು ನಿದ್ರಿಸುತ್ತಿದ್ದಾನೆಯೇ, ನಡೆಯುತ್ತಿದ್ದಾನೆಯೇ, ಓಡುತ್ತಿದ್ದಾನೆಯೇ ಎಂದು ಲೆಕ್ಕ ಹಾಕುತ್ತದೆ. ಜೊತೆಗೆ ಎಷ್ಟು ಹೆಜ್ಜೆ ನಡೆದಿದ್ದಾನೆ ಅಥವಾ ಓಡಿದ್ದಾನೆ ಎಂದೂ ಲೆಕ್ಕಹಾಕುತ್ತದೆ. ಝೆಬ್ರೋನಿಕ್ಸ್ ಝಡ್‌ಇಬಿ-ಫಿಟ್500 ಅಂತಹ ಒಂದು ಗ್ಯಾಜೆಟ್.

ಇದು ನೋಡಲು ಇತರೆ ಆರೋಗ್ಯ ಪಟ್ಟಿಗಳಂತೆಯೇ ಇದೆ. ಸಂವೇದಕವನ್ನು ಕೈಗೆ ಧರಿಸಲು ಬೆಲ್ಟ್ ಇದೆ. ಈ ಬೆಲ್ಟನ್ನು ಬದಲಿಸಲು ಸಾಧ್ಯವಿಲ್ಲ. ಇದು ಮೂರು ಬಣ್ಣಗಳಲ್ಲಿ ಲಭ್ಯ. ಪಟ್ಟಿಯನ್ನು ಕೈಗೆ ಕಟ್ಟಲು ಕೈಗಡಿಯಾರಗಳಲ್ಲಿರುವ ಮಾದರಿಯಲ್ಲೇ ವ್ಯವಸ್ಥೆ ಇದೆ. ಪಟ್ಟಿಯನ್ನು ತಯಾರಿಸಿದ ವಸ್ತುವಿನ ಗುಣಮಟ್ಟವೂ ಉತ್ತಮವಾಗಿದೆ. ರಬ್ಬರ್ ಮಾದರಿಯ ಪಟ್ಟಿಯನ್ನು ತಯಾರಿಸಿದ ವಸ್ತುವಿನ ಗುಣಮಟ್ಟ ಆರೋಗ್ಯ ದೃಷ್ಟಿಯಿಂದ ಚೆನ್ನಾಗಿದೆ ಎನ್ನಬಹುದು. 24 ಗಂಟೆಗಳ ಕಾಲ ಧರಿಸಿದರೂ, ವ್ಯಾಯಾಮ ಮಾಡುವಾಗ ಧರಿಸಿದರೂ, ಬೆವರಿದರೂ, ಚರ್ಮಕ್ಕೆ ಯಾವ ರೀತಿಯಲ್ಲೂ ಕಿರಿಕಿರಿ ಮಾಡುತ್ತಿಲ್ಲ.

ಕಪ್ಪು ಬಣ್ಣದ ಸಂವೇದಕದ ಮೇಲ್ಬಾಗದಲ್ಲಿ ಓಎಲ್‌ಇಡಿ ಪರದೆ ಇದೆ. ಸಂವೇದಕದ ಬಲಭಾಗದಲ್ಲಿ ಒಂದು ಬಟನ್ ಇದೆ. ಅದನ್ನು ಒತ್ತಿದರೆ ಸಂವೇದಕದ ಪರದೆ ಎಚ್ಚರವಾಗುತ್ತದೆ. ಕೈಯನ್ನು ತಿರುಗಿಸಿದರೂ ಅದು ಎಚ್ಚರವಾಗುತ್ತದೆ. ಹಾಗೆಂದರೆ ಉಳಿದ ಸಮಯದಲ್ಲಿ ಅದು ನಿದ್ರೆ ಮಾಡುತ್ತದೆ ಎಂದಲ್ಲ, ಪರದೆ ಮಾತ್ರ ಆಫ್ ಆಗಿರುತ್ತದೆ. ಪರದೆಯ ಕೆಳಭಾಗದ ಮಧ್ಯದಲ್ಲಿ ವೃತ್ತಾಕಾರದ ಸ್ಪರ್ಶಸಂವೇದಿ ಬಟನ್ ಇದೆ. ಅದರ ಮೇಲೆ ತಟ್ಟಿದರೆ ಬೇರೆ ಬೇರೆ ಕೆಲಸಗಳನ್ನು ಅದು ಮಾಡುತ್ತದೆ. ಉದಾಹರಣೆಗೆ ಒಂದು ಸಲ ತಟ್ಟಿದರೆ ಗಂಟೆ, ಎರಡು ಸಲ ತಟ್ಟಿದರೆ ಹೃದಯ ಬಡಿತ, ಮೂರು ಸಲ ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬ ಮಾಹಿತಿ, ನಾಲ್ಕು ಸಲ ತಟ್ಟಿದರೆ ಎಷ್ಟು ದೂರ ನಡೆದಿದ್ದೀರಿ ಎಂಬ ಮಾಹಿತಿ, ಹೀಗೆ ಹಲವು ಮಾಹಿತಿಗಳನ್ನು ತೋರಿಸುತ್ತದೆ. ಇದೇ ಕೆಲಸಗಳನ್ನು ಸಂವೇದಕದ ಬಲಭಾಗದಲ್ಲಿರುವ ಬಟನ್ ಕೂಡ ಮಾಡುತ್ತದೆ. ಈ ಎಲ್ಲ ಮಾಹಿತಿಗಳು ಓಎಲ್‌ಇಡಿ ಪರದೆಯಲ್ಲಿ ಬಿಳಿ ಅಕ್ಷರಗಳಲ್ಲಿ ಕಾಣಿಸುತ್ತವೆ.

ಈ ಆರೊಗ್ಯಪಟ್ಟಿಯಲ್ಲಿ ರಿಚಾರ್ಜೇಬಲ್ ಬ್ಯಾಟರಿ ಇದೆ. ಅವರೇ ನೀಡಿದ ಒಂದು ಕೇಬಲ್‌ಗೆ ಜೋಡಿಸಿ ಅದನ್ನು ಯಾವುದೇ ಯುಎಸ್‌ಬಿ ಚಾರ್ಜರ್‌ಗೆ ಜೋಡಿಸಿ ಸಂವೇದಕವನ್ನು ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಏಳು ದಿನಗಳ ಕಾಲ ಕೆಲಸ ಮಾಡುತ್ತದೆ. ಇದು ನೀರುನಿರೋಧಕವಲ್ಲ. ಪಟ್ಟಿಯನ್ನು ಧರಿಸಿ ಸ್ನಾನ ಮಾಡುವುದು ಅಥವಾ ಈಜುವುದನ್ನು ಮಾಡುವಂತಿಲ್ಲ.

ಸಂವೇದಕದ ಅಡಿಯ ಭಾಗದಲ್ಲಿ ಹೃದಯ ಬಡಿತವನ್ನು ದಾಖಲಿಸುವ ವಿಶೇಷ ಸಂವೇದಕ ಇದೆ. ಇದು ನಿಮ್ಮ ಹೃದಯ ಬಡಿತ ಪ್ರತಿ ನಿಮಿಷಕ್ಕೆ ಎಷ್ಟಿದೆ ಎಂದು ದಾಖಲಿಸುತ್ತದೆ. ಇದು ನಿಜಕ್ಕೂ ಉಪಯುಕ್ತ ಸವಲತ್ತು.

ಈ ಸಂವೇದಕವನ್ನು ಬಳಸಲು ನೀವು ಗೂಗ್ಲ್ ಪ್ಲೇ ಸ್ಟೋರ್ ಅಥವಾ ಆಪಲ್ ಐಫೋನ್ ಸ್ಟೋರಿನಿಂದ ಝಡ್‌ಇಬಿ ಫಿಟ್ ಎಂಬ ಕಿರುತಂತ್ರಾಂಶವನ್ನು (ಆಪ್) ನಿಮ್ಮ ಫೋನಿನಲ್ಲಿ ಹಾಕಿಕೊಳ್ಳಬೇಕು. ಇದರಲ್ಲಿ ಹಲವು ಉಪಯುಕ್ತ ಸವಲತ್ತುಗಳಿವೆ. ಸಂವೇದಕವು ದಾಖಲಿಸಿದ ಮಾಹಿತಿಗಳನ್ನು ಇದು ಗ್ರಾಫ್ ರೂಪದಲ್ಲೂ ತೋರಿಸಬಲ್ಲುದು. ನಿಮಗೆ ಕರೆ, ಸಂದೇಶ ಬಂದರೆ ಅದನ್ನು ಆರೋಗ್ಯಪಟ್ಟಿಯಲ್ಲಿ ತೋರಿಸುವಂತೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಈ ಸವಲತ್ತು ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಈ ಸಂವೇದಕವನ್ನು ನಿಮ್ಮ ಫೋನಿನ ಕ್ಯಾಮರವನ್ನು ಕ್ಲಿಕ್ ಮಾಡಲು ದೂರನಿಯಂತ್ರಕದಂತೆಯೂ ಬಳಸಬಹುದು.

ಇದರ ನಿಗದಿತ ಬೆಲೆ ಸ್ವಲ್ಪ ಹೆಚ್ಚಾಯಿತು ಎಂದು ಅನ್ನಿಸಬಹುದು. ಆದರೆ ಇದು ಜಾಲತಾಣಗಳಲ್ಲಿ ಅದಕ್ಕಿಂತ ತುಂಬ ಕಡಿಮೆ ಬೆಲೆಗೆ ದೊರೆಯುತ್ತಿದೆ. ಆ ಬೆಲೆಗೆ ಇದು ನಿಜಕ್ಕೂ ಉತ್ತಮ ಕೊಳ್ಳುವಿಕೆ ಎನ್ನಬಹುದು.

ಗುಣವೈಶಿಷ್ಟ್ಯಗಳು

ಮಾದರಿ ಆರೋಗ್ಯ/ಚಟುವಟಿಕೆ ಪಟ್ಟಿ (Health band/Activity tracker)
ಪರದೆ ಗಾತ್ರ 1.24 ಸೆ.ಮೀ. ಓಎಲ್‌ಇಡಿ
ಪರದೆ ಕಪ್ಪು ಬಣ್ಣದ ಸ್ಪರ್ಶಸಂವೇದಿ ಪರದೆ
ಸಂವೇದಕದ ಗಾತ್ರ 40.9 x 20 x 10.9 ಮಿ.ಮೀ.
ತೂಕ 25 ಗ್ರಾಂ
ಬ್ಯಾಟರಿ ಶಕ್ತಿ 70mAh (ರಿಚಾರ್ಜ್ ಮಾಡಬಹುದು)
ಸಂಪರ್ಕ ಬ್ಲೂಟೂತ್
ಆರೋಗ್ಯ ಸವಲತ್ತುಗಳು ನಡೆದ ಹೆಜ್ಜೆ, ದೂರ, ಕ್ಯಾಲರಿ
ಹೃದಯ ಬಡಿತ ಎಣಿಕೆ ಸೌಲಭ್ಯ ಇದೆ
ಇತರೆ ಸವಲತ್ತುಗಳು ಕಾಲರ್ ಐಡಿ, ಸಂದೇಶ ಸೂಚನೆ, ಅಲಾರ್ಮ್, ಗಂಟೆ, ದಿನಾಂಕ, ಇತ್ಯಾದಿ
ಬೆಲೆ ₹ 3999 (ನಿಗದಿತ), ₹2,399 (ಫ್ಲಿಪ್‌ಕಾರ್ಟ್)

ವಾರದ ಆಪ್ (app)

ಭಾರತೀಯ ಶಾಕಾಹಾರಿ ಅಡುಗೆಗಳು (Hebbars kitchen)  

ಭಾರತೀಯ ಶಾಕಾಹಾರಿ ಅಡುಗೆಗಳ ಬಗೆಗೆ ಮಾಹಿತಿ, ಅಡುಗೆ ಮಾಡಲು ಬೇಕಾದ ಸಾಮಗ್ರಿಗಳು, ಮಾಡುವ ವಿಧಾನ ಎಲ್ಲ ತಿಳಿಯಬೇಕೆ? ಅಂತಹ ಕಿರುತಂತ್ರಾಂಶಗಳು ಹಲವಾರಿವೆ. ಆದರೆ ಈ ಕಿರುತಂತ್ರಾಂಶ (ಆ್ಯಪ್‌) ಭಾರತೀಯ ಶಾಕಾಹಾರಿ ಅಡುಗೆಗಳ ಬಗ್ಗೆ ಇರುವುದಾದರೂ ಇದರಲ್ಲಿ ಬಹುತೇಕ ನಮ್ಮ ಕನ್ನಡನಾಡಿನ ಅದರಲ್ಲೂ ದಕ್ಷಿಣ ಕನ್ನಡದ ಅಡುಗೆಗಳ ಮಾಹಿತಿಯೂ ಇದೆ. ಕರಾವಳಿಯ ಪ್ರಖ್ಯಾತ ನೀರು ದೋಸೆ, ಪುನರ್ಪುಳಿ (ಬೀರುಂಡ, ಕೋಕಂ) ಸಾರು ಮಾಡುವ ವಿಧಾನ, ಮೊಟ್ಟೆ ಹಾಕದೆ ಕೇಕ್ ಮಾಡುವುದು, ಇತ್ಯಾದಿ ಹಲವು ಮಾಹಿತಿಗಳಿವೆ. ಇವೆಲ್ಲ ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Hebbars kitchen ಎಂದು ಹುಡುಕಬೇಕು ಅಥವಾ http://bit.ly/gadgetloka349 ಜಾಲತಾಣಕ್ಕೆ ಭೇಟಿ ನೀಡಬೇಕು.

ಗ್ಯಾಜೆಟ್ ಪದ

AMOLED (Active-Matrix Organic Light-Emitting Diode) = ಅಮೋಲೆಡ್

ಇದು ಸ್ಯಾಮ್‌ಸಂಗ್‌ನವರ ಆವಿಷ್ಕಾರ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳ ಪರದೆಗಳಲ್ಲಿ ಇದು ಬಳಕೆಯಾಗುತ್ತದೆ. ಇವು ಕಡಿಮೆ ವಿದ್ಯುತ್ ಬಳಸಿ ಉತ್ತಮ ಚಿತ್ರವನ್ನು ಮೂಡಿಸುತ್ತವೆ. ಇದರಲ್ಲೇ ಇನ್ನಷ್ಟು ಉತ್ತಮವಾದವುಗಳು ಸೂಪರ್ ಅಮೋಲೆಡ್ ಪರದೆಗಳು. ಇವುಗಳು ಪ್ರಖರವಾದ ಸೂರ್ಯನ ಬೆಳಕಿನಲ್ಲೂ ಉತ್ತಮ ಚಿತ್ರವನ್ನು ಮೂಡಿಸುತ್ತವೆ ಹಾಗೂ ಪರದೆಯಲ್ಲಿ ಮೂಡಿದ ಚಿತ್ರ, ಅಕ್ಷರಗಳನ್ನು ಓದಲು ಸಾಧ್ಯವಾಗುತ್ತದೆ.

ಗ್ಯಾಜೆಟ್ ಸುದ್ದಿ

ಸ್ಯಾಮ್‌ಸಂಗ್‌ನಿಂದ 3 ಕ್ಯಾಮೆರಾ ಫೋನ್

ಸ್ಯಾಮ್‌ಸಂಗ್‌ ತನ್ನ ಮೊಟ್ಟಮೊದಲ ಮೂರು ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎ7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ 24, 8 ಮತ್ತು 5 ಮೆಗಾಪಿಕ್ಸೆಲ್‌ಗಳ 3 ಪ್ರಾಥಮಿಕ ಕ್ಯಾಮೆರಾಗಳಿವೆ. 24 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಕಡಿಮೆ ಬೆಳಕಿನ ಛಾಯಾಗ್ರಹಣಕ್ಕೆ, 8 ಮೆಗಾಪಿಕ್ಸೆಲ್‌ನ ಕ್ಯಾಮೆರಾ ವೈಡ್ ಆಂಗಲ್ ಚಿತ್ರೀಕರಣಕ್ಕೆ ಮತ್ತು 5 ಮೆಗಾಪಿಕ್ಸೆಲ್‌ನ ಕ್ಯಾಮೆರಾ ವ್ಯಕ್ತಿಚಿತ್ರಣಕ್ಕೆ (ಬೋಕೆ) ಬಳಕೆಯಾಗುತ್ತದೆ. ಇವುಗಳ ಜೊತೆಗೆ 24 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾವೂ ಇದೆ. ಸ್ಯಾಮ್‌ಸಂಗ್‌ನವರದೇ ಎಕ್ಸಿನೋಸ್ 7885 ಪ್ರೊಸೆಸರ್‌ ಇರುವ ಈ ಫೋನ್ ಎರಡು ಮೆಮೊರಿ ಮಾದರಿಗಳಲ್ಲಿ ಲಭ್ಯ. 4+64 ಗಿಗಾಬೈಟ್ ಮಾದರಿಗೆ ₹23,990 ಮತ್ತು 6+128 ಗಿಗಾಬೈಟ್ ಮಾದರಿಗೆ ₹28,990 ಬೆಲೆ ನಿಗದಿ ಮಾಡಿದ್ದಾರೆ.

ಗ್ಯಾಜೆಟ್ ಸಲಹೆ

ನಾಗರಾಜು ಅವರ ಪ್ರಶ್ನೆ: ನನ್ನಲ್ಲಿ ಪಾನಾಸೋನಿಕ್ ಸ್ಮಾರ್ಟ್‌ಟಿವಿ ಇದೆ. ಅದರಲ್ಲಿ Hotstar ಇನ್‌ಸ್ಟಾಲ್ ಮಾಡುವುದು ಹೇಗೆ?
ಉ: ನಿಮ್ಮ ಸ್ಮಾರ್ಟ್‌ಟಿವಿಯಲ್ಲಿ ಗೂಗಲ್‌ ಪ್ಲೇ ಸ್ಟೋರ್ ಇದೆಯೋ ನೋಡಿ. ಇದ್ದರೆ ಅದರಲ್ಲಿ Hotstar ಕಿರುತಂತ್ರಾಂಶವನ್ನು (ಆ್ಯಪ್‌) ಹುಡುಕಿ ಹಾಕಿಕೊಳ್ಳಿ. ಗೂಗಲ್‌ ಪ್ಲೇ ಸ್ಟೋರ್ ಸೌಲಭ್ಯವಿಲ್ಲವಾದಲ್ಲಿ, apkpure.com ಜಾಲತಾಣದಿಂದ Hotstar ನ apk ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಂಡು (ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮೂಲಕ) ಅದನ್ನು ನಿಮ್ಮ ಟಿವಿಗೆ ಯುಎಸ್‌ಬಿ ಡ್ರೈವ್ ಮೂಲಕ ಪ್ರತಿ ಮಾಡಿಕೊಂಡು ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈ ರೀತಿ ಇನ್‌ಸ್ಟಾಲ್ ಮಾಡುವುದಕ್ಕೆ sideloading ಎನ್ನುತ್ತಾರೆ. ಕೆಲವು ಸ್ಮಾರ್ಟ್‌ಟಿವಿಗಳು ಹೀಗೆ ಮಾಡಲು ಬಿಡುವುದಿಲ್ಲ. ಹಾಗಿದ್ದಲ್ಲಿ ನಿಮಗೆ ನಿಮ್ಮ ಟಿವಿಯನ್ನು ರೂಟ್ ಮಾಡುವುದು (rooting) ಅಂತಿಮ ಪರಿಹಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು