ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಶಿವನ ಮೇಲೆ ಮನ್ಮಥ ಲೀಲೆ

Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಶಿವನನ್ನು ತನ್ನ ಮೋಹಪಾಶದಿಂದ ಸುಲಭವಾಗಿ ಮಣಿಸುವ ಗರ್ವದಿಂದ ಶಿವನ ಬಳಿಗೆ ಬಂದ ಮದಾಂಧ ಮದನ, ಮೊದಲಿಗೆ ತನ್ನ ಮಿತ್ರನಾದ ವಸಂತನ ಮೂಲಕ ಆ ತಪೋವನದಲ್ಲಿ ವಸಂತ ಋತು ಹರಡುವಂತೆ ಮಾಡಿದ. ಔಷಧಿಪ್ರಸ್ಥದಲ್ಲಿ ಅದರ ಪ್ರಭಾವ ಬೀರತೊಡಗಿತು. ಮರಗಳಲ್ಲೆಲ್ಲಾ ಎಲೆಗಳು ಚಿಗುರಿದವು. ಮಾವಿನ ಮರಗಳು ಹೂವುಗಳನ್ನು ಬಿಟ್ಟವು. ಅದರ ಸುವಾಸನೆಯು ಎಲ್ಲೆಲ್ಲಿಯೂ ಹರಡಿ ಜನರಿಗೆ ಮನ್ಮಥವಿಕಾರ ಉಂಟಾಗುವಂತೆ ಮಾಡಿತು. ಕಮಲಗಳು ಅರಳಿ, ಅವುಗಳಲ್ಲಿ ದುಂಬಿಗಳು ಮುತ್ತಿ ಮಧುಪಾನವನ್ನು ಹೀರುತ್ತಾ ಕಾಮವಿಕಾರವಾದಂತೆ ಝೇಂಕರಿಸಿದವು.

ಕಾಮೋದ್ದೀಪವಾಗುವಂತೆ ಕೋಗಿಲೆಗಳು ಮನೋಹರವಾಗಿ ಧ್ವನಿಗೈಯ್ಯುತ್ತಿದ್ದರೆ, ದುಂಬಿಗಳು ಹಲವು ವಿಧದಲ್ಲಿ ಮನೋಹರವಾಗಿ ಝೇಂಕರಿಸಿದವು. ನಿರ್ಮಲವಾದ ಚಂದ್ರಕಾಂತಿಯು ಎಲ್ಲೆಡೆಯೂ ಹರಡಿ ಕಾಮಿನೀ-ಕಾಮುಕರನ್ನು ಒಗ್ಗೂಡಿಸುವ ದೂತಿಯಂತಾಯಿತು. ವಸಂತಕಾಲವೆಂಬ ದೀಪಿಕೆಯು ಕಾಮುಕರನ್ನು ಕಾಮೋತ್ಸವಕ್ಕೆ ಪ್ರೇರೇಪಿಸತೊಡಗಿತು. ಗಾಳಿಯು ಉಲ್ಲಾಸಕರವಾಗಿ ಬೀಸಿ, ಎಲ್ಲರ ಮನದಲ್ಲಿ ಕಾಮಸುಖದ ಮತ್ತೇರಿಸುತ್ತಿತ್ತು. ವಿರಹ ಬಯಸುವವರಿಗೆ ಅಲ್ಲಿನ ವಾತಾವರಣ ಹಿತಕರವಾಗಿರಲಿಲ್ಲ; ಅವರಿಗೆ ಅತ್ಯಂತ ದುಃಖಕರವಾಗಿತ್ತು. ಮುನಿಗಳಿಗೂ ಮನ್ಮಥವಿಕಾರ ಉಂಟಾಗಿ ತಪೋಭಂಗಿತರಾದರು. ತಿರ್ಯಕ್‌ ಪ್ರಾಣಿಗಳಿಗೂ ಕಾಮವಿಕಾರ ಉಂಟಾಯಿತು ಎಂದಮೇಲೆ, ಇನ್ನು ಸಾಮಾನ್ಯ ಮನುಷ್ಯರಿಗೆ ಕಾಮವಿಕಾರ ಯಾವ ಪರಿ ಉಂಟಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗೆ ವಸಂತ ಸುತ್ತಲಿನ ಎಲ್ಲ ಪ್ರಾಣಿಗಳಿಗೂ ಕಾಮವಿಕಾರವಾಗುವಂತೆ ತನ್ನ ಪ್ರಭಾವವನ್ನು ಪ್ರಸರಿಸಿದ.

ಅಕಾಲದಲ್ಲಿ ವಸಂತಋತುವಿನ ಮಹಿಮೆಯನ್ನು ನೋಡಿ ಹರನಿಗೆ ತುಂಬಾ ಆಶ್ಚರ್ಯವಾಯಿತು. ಆದರೂ ಶಿವ ಬದಲಾದ ವಾತಾವರಣಕ್ಕೆ ಮನಸ್ಸು ಕೊಡದೆ, ಎಂದಿನಂತೆ ಬ್ರಹ್ಮ ವಸ್ತುವಿನತ್ತ ಏಕಾಗ್ರಚಿತ್ತದಿಂದ ಧ್ಯಾನಿಸುತ್ತಾ, ತಪವನ್ನ ಆಚರಿಸುತ್ತಿದ್ದ. ಮನ್ಮಥನ ಲೀಲೆಗಳು ಅವನ ಮೇಲೆ ಯಾವುದೇ ಗುರುತರ ಪರಿಣಾಮ ಬೀರಲಿಲ್ಲ. ಎಂದಿನಂತೆ ನಿರ್ಲಿಪ್ತಭಾವದಿಂದ ಶಿವ ತಪೋನಿರತನಾದಾಗ ಮನ್ಮಥ ಮತ್ತು ವಸಂತ ಹತಾಶಗೊಂಡರು.

ಮನ್ಮಥ ತನ್ನ ಕಾಮಮಹಿಮೆಯನ್ನು ಮತ್ತಷ್ಟು ತೋರಿಸಲು ಚೂತಬಾಣವನ್ನು ಬಿಲ್ಲಿಗೇರಿಸಿ ಶಿವನ ಎಡಭಾಗದಲ್ಲಿ ರತಿಯೊಡನೆ ನಿಂತ. ಎಂಥವರೂ ಮೋಹಗೊಳ್ಳುವಂತೆ ನಾನಾ ಭಂಗಿಯಲ್ಲಿ ರತಿ-ಮನ್ಮಥರು ನರ್ತಿಸಿದರು. ಔಷಧಪ್ರಸ್ಥದ ತಪ್ಪಲಿನ ಸುತ್ತಲ ಜನರೆಲ್ಲ ಮೋಹಗೊಳ್ಳುತ್ತಿದ್ದರೂ, ಶಿವ ಮಾತ್ರ ವಿಚಲಿತನಾಗಲಿಲ್ಲ. ರತಿ–ಮನ್ಮಥರನ್ನು ನೋಡಿದ ಯಾರೇ ಆದರೂ ಮೋಹಗೊಳ್ಳದೆ ಇರುತ್ತಿರಲಿಲ್ಲ. ಆದರೆ ಶಿವ ಸ್ವಲ್ಪವೂ ಕಾಮವಿಕಾರಕ್ಕೆ ಮನಸ್ಸು ಕೊಡದೆ ತಪೋನಿರತನಾಗಿ ಕುಳಿತಿದ್ದ. ಧ್ಯಾನಾಸಕ್ತನಾದ ಶಂಕರನ ಹಣೆಯ ಮೇಲಿನ ತೃತೀಯ ನೇತ್ರವು ಅಗ್ನಿಜ್ವಾಲೆಯನ್ನು ಉಗುಳುತ್ತಿರುವಂತೆ ಜಾಜ್ವಲ್ಯಮಾನವಾಗಿತ್ತು.

ಹಠಯೋಗಿ ಶಿವನನ್ನು ಮಣಿಸಲು ರತಿ-ಮನ್ಮಥ-ವಸಂತರಿಗೆ ನೆರವಾಗಲು ಶೃಂಗಾರಪುರುಷ(ರಸ)ನೂ ಆಗಮಿಸಿದ. ಆದರೆ ಅವನಿಗೂ ಶಂಕರನನ್ನು ಮೋಹಗೊಳಿಸಲು ಸಾಧ್ಯವಾಗದೆ ಮಂಕಾದ. ಯೋಗಿರಾಜನಾದ ಮಹಾದೇವ ತನ್ನ ಬಲೆಗೆ ಸಿಗದಿರುವುದನ್ನು ನೋಡಿ ಮನ್ಮಥ ತುಂಬಾ ವ್ಯಾಕುಲಗೊಂಡ. ಹೀಗೆ ಧ್ಯಾನಮಗ್ನನಾಗಿ ಕುಳಿತ್ತಿದ್ದ ಶಿವನನ್ನು ಮೋಹಗೊಳಿಸಲು ಸಾಧ್ಯವಾಗದೆ, ಮದನ ಮತ್ತವನ ಪರಿವಾರ ಶಿವನ ಹಠಯೋಗದ ಮುಂದೆ ಸೋತುಹೋದರು.ಇಂಥ ಸಮಯದಲ್ಲಿ ಪಾರ್ವತಿಯು ಶಿವಪೂಜೆಗಾಗಿ ಹೂವುಗಳೊಂದಿಗೆ ಸಖಿಯರೊಡನೆ ಅಲ್ಲಿಗೆಬಂದಳು. ಜಗತ್ತಿನಲ್ಲಿ ಮಹಾಲೋಕೋತ್ತರವೆಂದು ವರ್ಣಿಸುವ ಸೌಂದರ್ಯಕ್ಕಿಂತಲೂ ಮಿಗಿಲಾದ ಸೌಂದರ್ಯವು ಅವಳಲ್ಲಿ ರಾರಾಜಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT