ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಬಿಂದುಗ ಚಂಚುಲೆ ಕಥೆ

ಭಾಗ 7
Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ದೇವರಾಜನೆಂಬ ದುಷ್ಟ ಶಿವಪುರಾಣ ಕೇಳಿ ಕೈಲಾಸ ಸೇರಿದ ಕಥೆಯನ್ನು ಕೇಳಿದ ಶೌನಕ ಮುನಿಗೆ ಸಂತೋಷವಾಗುತ್ತದೆ. ಮತ್ತೊಂದು ಶಿವನ ಕಥೆ ಹೇಳು ಅಂತ ಸೂತಮುನಿಯಲ್ಲಿ ಪ್ರಾರ್ಥಿಸು ತ್ತಾನೆ. ಸೂತಮುನಿಯು ಬಿಂದುಗ ಮತ್ತು ಚಂಚುಲೆ ಎಂಬ ದುಷ್ಟ ದಂಪತಿಯ ಕತೆಯನ್ನ ಹೇಳತೊಡಗುತ್ತಾನೆ.

ಸಮುದ್ರತೀರದ ದೇಶದಲ್ಲೊಂದು ‘ಬಾಷ್ಕಲ’ ಎಂಬ ಒಂದು ಗ್ರಾಮ ಇತ್ತು. ಅಲ್ಲಿ ಪಾಪಿಗಳು, ವೈದಿಕಧರ್ಮ ಬಿಟ್ಟವರು, ದುಷ್ಟರು, ದೇವತೆಗಳನ್ನ ನಂಬದೆ ನಾಸ್ತಿಕರಾದವರಿದ್ದರು. ಅವರೆಲ್ಲ ಶಸ್ತ್ರಗ ಳನ್ನು ಹಿಡಿದು ಬಡಿದಾಡುತ್ತಿದ್ದರು, ಪರಸ್ತ್ರೀಯರ ಸಹವಾಸ ಮಾಡುತ್ತಿದ್ದರು. ಅವರಿಗೆ ಜ್ಞಾನ, ವೈರಾಗ್ಯ, ಧರ್ಮ, ಆಚಾರ-ವಿಚಾರಗಳ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಒಳ್ಳೆಯದು ಏನೆಂಬುದೇ ಅವರಿಗೆ ಗೊತ್ತಿರಲಿಲ್ಲ. ಆದರೆ, ಕೆಟ್ಟ ವೃತ್ತಾಂತವನ್ನ ಕೇಳುವುದರಲ್ಲಿ ಮಾತ್ರ ಪರಮಾಸಕ್ತರಾಗಿದ್ದರು. ಒಟ್ಟಾರೆ, ಅವರಾರೂ ಮನುಷ್ಯರಂತೆ ವರ್ತಿಸುತ್ತಿರಲಿಲ್ಲ; ಪಶುಗಳಂತೆ ವ್ಯವಹರಿಸುತ್ತಾ ಇದ್ದರು. ಅಲ್ಲಿ ಪುರುಷರಲ್ಲದೆ, ಸ್ತ್ರೀಯರೂ ಸಹ ಹಾದಿ ತಪ್ಪಿದ್ದರು. ಸದಾ ಪಾಪ ಕೆಲಸದಲ್ಲಿ ತೊಡಗುತ್ತಾ, ಕೆಟ್ಟಬುದ್ಧಿ ಕಲಿತಿದ್ದರು. ಒಟ್ಟಾರೆ, ಅವರಿಗೂ ಸಹ ಪುರುಷರಂತೆ ಕೆಟ್ಟ ಕೆಲಸ ಬಿಟ್ಟು, ಒಳ್ಳೆಯ ಕೆಲಸವೇ ಗೊತ್ತಿರಲಿಲ್ಲ.

ಇಂಥ ಕೆಟ್ಟ ಜನಗಳಿಂದ ತುಂಬಿರುವ ಊರಿನಲ್ಲಿ ಬಿಂದುಗನೆಂಬ ಒಬ್ಬ ಬ್ರಾಹ್ಮಣನಿದ್ದ. ದುರಾತ್ಮನೂ ಮಹಾಪಾಪಿಯೂ ಆದ ಬಿಂದುಗನಿಗೆ ಸುಂದರಿಯಾದ ಹೆಂಡತಿ ಇದ್ದರೂ ವೇಶ್ಯೆಯರ ಸಹವಾಸ ಮಾಡುತ್ತಿದ್ದ. ಅವನ ಹೆಂಡತಿ ಚಂಚುಲೆ ತನ್ನ ಸತೀಧರ್ಮವನ್ನು ಮೀರಲು ಭಯವಾಗಿ, ಪತಿವ್ರತೆಯಾಗೇ ಬಾಳುತ್ತಿದ್ದಳು. ಕಾಲಕ್ರಮೇಣ ಸುತ್ತಲಿನ ಸಹವಾಸ ದೋಷದಿಂದ, ಕೊನೆಗೊಂದು ದಿನ ಸಂಯಮ ಕಳೆದುಕೊಂಡ ಚಂಚುಲೆ ರಾತ್ರಿ ವೇಳೆಯಲ್ಲಿ ಪತಿಗೆ ಕಾಣದಂತೆ ವಿಟಪುರುಷನೊಡನೆ ಗುಪ್ತವಾಗಿ ಕಾಮಸುಖವನ್ನು ಅನುಭವಿಸುತ್ತಿದ್ದಳು.

ಹೀಗಿರಲು ಒಂದು ರಾತ್ರಿ ಬಿಂದುಗ ತನ್ನ ಹೆಂಡತಿ ಚಂಚುಲೆ ವಿಟಪುರುಷನೊಡನೆ ರಮಿಸುತ್ತಿರುವುದನ್ನು ನೋಡಿದ. ಕೆಟ್ಟ ಅವಸ್ಥೆಯಲ್ಲಿ ವಿಟಪುರುಷನೊಡನೆ ಇದ್ದ ದುಷ್ಟಳಾದ ಪತ್ನಿಯನ್ನು ನೋಡಿ, ಕೋಪದಿಂದ ಮನೆಯೊಳಗೆ ಬಂದ. ಅಷ್ಟರಲ್ಲಿ ವಿಟಪುರುಷ ಅವನ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಿಹೋದ. ಕೈಗೆ ಸಿಕ್ಕ ಪತ್ನಿ ಚಂಚುಲೆಯನ್ನ ಹಿಗ್ಗಾಮುಗ್ಗಾ ಥಳಿಸಿದ. ಸ್ವೇಚ್ಛಾಚಾರಿಣಿಯಾಗಿದ್ದ ಚಂಚುಲೆ ಗಂಡ ತನ್ನನ್ನು ಹೊಡೆದಿದ್ದರಿಂದ ಸಿಟ್ಟಾದಳು. ‘ನೀನು ವೇಶ್ಯೆಯರೊಂದಿಗೆ ಸುಖ ಪಟ್ಟಂತೆ, ನಾನು ಬೇರೆಯವರಿಂದ ಸುಖ ಪಡೆಯುವುದು ತಪ್ಪೇ? ಸುಂದರಿಯಾದ ನಾನು ಬಿರು ಯೌವನದಲ್ಲಿ ಪುರುಷರ ಸಂಗವಿಲ್ಲದೆ ವಿರಹ ದುಃಖವನ್ನು ಹೇಗೆ ತಾನೇ ಸಹಿಸಿಕೊಂಡಿರಲಿ?’ ಅಂತ ಪ್ರಶ್ನಿಸುತ್ತಾಳೆ.

ಆಗ ಪರಮಪಾಪಿಯಾದ ಬಿಂದುಗ ಯಾವ ಗಂಡಸು ತನ್ನ ಪತ್ನಿಗೆ ಹೇಳಬಾರದಂಥ ಮಾತನ್ನ ಪತ್ನಿ ಚಂಚುಲೆಗೆ ಹೇಳುತ್ತಾನೆ. ‘ಕಾಮಾತುರಳಾದ ನೀನು ಮಾಡಿದ ಕೆಲಸ ಸರಿಯಾಗಿದೆ. ಜಾರರೊಡನೆ ನಿನ್ನ ಮನಸ್ಸಿಗೆ ಬಂದಂತೆ ಇರು. ಅವರಿಂದ ಬರುವ ಹಣ ನನಗೆ ಕೊಡು’ ಅಂತ ವ್ಯಭಿಚಾರದಿಂದ ಹಣ ಮಾಡುವ ನೀಚ ಉಪಾಯ ಹೇಳಿಕೊಡುತ್ತಾನೆ. ಬಿಂದುಗನ ಮಾತಿನಂತೆ ಚಂಚುಲೆ ವ್ಯಭಿಚಾರವನ್ನ ಸಂಕೋಚವಿಲ್ಲದೆ ಮುಂದುವರೆಸುತ್ತಾಳೆ. ಹೀಗೆ ಪತಿ-ಪತ್ನಿಯರು ದುರಾಚಾರದಲ್ಲಿರುವಾಗ ಒಂದು ದಿನ ನೀಚನಾದ ಬಿಂದುಗ ಕಾಯಿಲೆ ಬಂದು ಮರಣ ಹೊಂದಿದ. ಅವನ ಪಾಪದ ಫಲವಾಗಿ ನರಕಕ್ಕೆ ಹೋದ. ನರಕದಲ್ಲಿ ತನ್ನ ಪಾಪಗಳಿಗೆ ಯೋಗ್ಯವಾದ ಚಿತ್ರಹಿಂಸೆಗಳನ್ನ ಯಮದೂತರಿಂದ ಅನುಭವಿಸಿದ. ನರಕಲೋಕದಲ್ಲಿ ಶಿಕ್ಷೆ ಅನುಭವಿಸಿದ ನಂತರ ಬಿಂದುಗ, ತನ್ನ ಪಾಪದ ಫಲವಾಗಿ ವಿಂಧ್ಯಾರಣ್ಯದಲ್ಲಿ ಭಯಂಕರವಾದ ಪಿಶಾಚಜನ್ಮ ತಾಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT