ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಸಮುದ್ರದಲ್ಲಿ ಶಿವನ ವಡವಾಗ್ನಿ

ಭಾಗ 221
Last Updated 9 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ನಾರದ ‘ಓ ಬ್ರಹ್ಮನೆ, ಶಂಕರನ ಮೂರನೇ ಕಣ್ಣಿನಿಂದ ಜನಿಸಿದ ಅಗ್ನಿಜ್ವಾಲೆಯು ಮನ್ಮಥನನ್ನು ಭಸ್ಮಮಾಡಿ ಮುಂದೆಲ್ಲಿಗೆ ಹೋಯಿತು?’ ಎಂದು ಕೇಳುತ್ತಾನೆ.

ಆಗ ಬ್ರಹ್ಮ ‘ಎಲೈ ನಾರದ, ಶಂಕರನ ಫಾಲನೇತ್ರವು ಯಾವಾಗ ಮನ್ಮಥನನ್ನು ಭಸ್ಮಮಾಡಿತೋ, ಆಗ ಎಲ್ಲ ದೇವತೆಗಳು ಮತ್ತು ಮುನಿಗಳು ನನ್ನ ಬಳಿ ಬಂದು ತಮ್ಮ ದುಃಖವನ್ನು ಹೇಳಿಕೊಂಡರು.ಶಿವನಕೋಪಕ್ಕೆ ತುತ್ತಾಗಿ ಮನ್ಮಥ ಸುಟ್ಟುಹೋದ ವಿಷಯವನ್ನು ದೇವತೆಗಳು ಹೇಳಿದಾಗ, ಶಿವ ಹೀಗೇಕೆ ಮಾಡಿದ ಎಂದು ವಿಮರ್ಶಿಸಿದೆ. ತಕ್ಷಣವೇ ಎಚ್ಚೆತ್ತ ನಾನು ಲೋಕರಕ್ಷಣೆಗಾಗಿಶಿವನಬಳಿಗೆ ಹೋಗಿ ವಿನಯದಿಂದ ಅವನನ್ನು ಪ್ರಸನ್ನಗೊಳಿಸಿದೆ. ಅವನ ಅನುಗ್ರಹದಿಂದ ನಾನು ದಿವ್ಯತೇಜಸ್ಸನ್ನು ಪಡೆದು, ಉರಿಯುತ್ತಿದ್ದಶಿವನಫಾಲಾಗ್ನಿಯನ್ನು ಸ್ತಂಭಿಸಿದೆ. ಇಲ್ಲದಿದ್ದರೆ,ಶಿವನಮೂರನೇ ಕಣ್ಣಿನಿಂದ ಹೊರಟ ಅಗ್ನಿಜ್ವಾಲೆ ಮನ್ಮಥನನ್ನು ಸುಟ್ಟ ನಂತರವೂ ತಣಿಯದೆ, ಮೂರು ಲೋಕಗಳನ್ನೂ ಸುಡಲು ಸಿದ್ಧವಾಗಿತ್ತು. ಲೋಕಹಿತಕ್ಕಾಗಿ ಜ್ವಾಲೆಯನ್ನು ವಡವಾಗ್ನಿಯನ್ನಾಗಿ ಮಾಡಿದ ನಂತರ,ಶಿವನಅಪ್ಪಣೆಯಂತೆ ಸಮುದ್ರಕ್ಕೆ ಹಾಕಲು ಸಮುದ್ರರಾಜನ ಬಳಿಗೆ ಹೋದೆ.

‘ನನ್ನನ್ನು ನೋಡಿ ಸಮುದ್ರನು ಪುರುಷರೂಪವನ್ನು ಧರಿಸಿ ನನ್ನ ಬಳಿಗೆ ಬಂದು, ’ಓ ಬ್ರಹ್ಮ, ನೀನು ಜಗದೊಡೆಯ. ನಾನು ನಿನ್ನ ಸೇವಕ. ನೀನು ನನ್ನಲ್ಲಿಗೆ ಬಂದಿರುವ ಕಾರಣವೇನೆಂಬುದನ್ನು ಅಪ್ಪಣೆಮಾಡು‘ ಎಂದು ಬೇಡಿಕೊಂಡ. ನಾನು ‘ಎಲೈ ಸಮುದ್ರರಾಜ, ನೀನು ಮಹಾಬುದ್ಧಿವಂತ. ಲೋಕದ ಹಿತವನ್ನು ಕಾಪಾಡುವವನೂ ಆಗಿರುವೆ. ನಾನು ನಿನ್ನ ಬಳಿ ಬಂದಿರುವ ಕಾರಣವೇನೆಂದರೆ, ವಡವಾರೂಪವಾದ ಈ ಅಗ್ನಿಯು ಈಶ್ವರನ ಕ್ರೋಧವಾಗಿರುತ್ತದೆ. ಇದು ಮನ್ಮಥನನ್ನು ಸುಟ್ಟಿದ್ದೂ ಅಲ್ಲದೆ, ಜಗತ್ತೆಲ್ಲವನ್ನೂ ಸುಡುವುದರಲ್ಲಿತ್ತು. ಕ್ರೋಧಾಗ್ನಿಯಿಂದ ಪೀಡಿತರಾದ ದೇವತೆಗಳು ನನ್ನಲ್ಲಿ ಮೊರೆಯಿಟ್ಟಾಗ, ನಾನು ಜಾಗ್ರತೆಯಾಗಿಶಿವನಬಳಿಗೆ ಹೋಗಿ ಅವನಿಚ್ಛೆಯಂತೆ ಕ್ರೋಧಾಗ್ನಿಯನ್ನು ಸ್ತಂಭಿಸಿದೆ. ಆಮೇಲೆ ಇದು ವಡವಾರೂಪವನ್ನು ಧರಿಸಿತು. ಅದನ್ನುಶಿವನಮಾರ್ಗದರ್ಶನದಂತೆ ಇಲ್ಲಿಗೆ ತೆಗೆದುಕೊಂಡು ಬಂದಿದ್ದೇನೆ. ಇನ್ನು ಮುಂದೆ ಜಲರೂಪನಾದ ನೀನೇ ಈ ವಡವಾಗ್ನಿಗೆ ಆಶ್ರಯ ನೀಡಬೇಕು. ವಡವಾರೂಪವಾದ ಈ ಈಶ್ವರನ ಕ್ರೋಧಾಗ್ನಿಯನ್ನು ನೀನು ಮಹಾ ಪ್ರಳಯಕಾಲದವರೆಗೆ ಇಟ್ಟುಕೊಳ್ಳಬೇಕು. ಮುಂದೆ ನಾನು ನಿನ್ನಲ್ಲಿಗೆ ಬಂದು ವಾಸ ಮಾಡುವೆ. ಅಲ್ಲಿಯವರೆಗೆ ಭಯಂಕರವಾದ ಈ ವಡವಾಗ್ನಿಯನ್ನು ನೀನು ಹಿಡಿದಿಟ್ಟುಕೊಳ್ಳಬೇಕು. ನಿನ್ನ ಜಲವೇ ಈ ಕ್ರೋಧಾಗ್ನಿಗೆ ಆಹಾರ. ಇದು ನೀರಿನಾಳದೊಳಗೆ ಮುಳುಗಿಹೋಗದಂತೆ ಕಠಿಣ ಪ್ರಯತ್ನದಿಂದ ನೀನು ರಕ್ಷಿಸುತ್ತಿರಬೇಕು’ ಎಂದೆ.

‘ನನ್ನ ಮಾತನ್ನು ಒಪ್ಪಿದ ಸಮುದ್ರರಾಜ ವಡವಾಗ್ನಿಯನ್ನು ಧರಿಸಲು ಮುಂದಾದ. ಏಕೆಂದರೆ ತನ್ನ ವಿನಾ ಇನ್ನಾರೂ ವಡವಾಗ್ನಿಯನ್ನು ಹಿಡಿದು ಆಶ್ರಯ ನೀಡಲಾರರು ಎಂಬುದು ಸಮುದ್ರರಾಜನಿಗೂ ಗೊತ್ತಿತ್ತು. ವಡವಾಗ್ನಿಯನ್ನು ಬ್ರಹ್ಮನಿಂದ ಸಮುದ್ರರಾಜ ಸ್ವೀಕರಿಸುತ್ತಿದ್ದಂತೆ, ಅದು ತನ್ನ ಜ್ವಾಲೆಗಳಿಂದ ಸಮುದ್ರದ ಜಲತರಂಗಗಳನ್ನು ಭಸ್ಮಮಾಡುತ್ತಾ ಒಳಗೆ ಪ್ರವೇಶಿಸಿತು.

ಶಂಕರನ ಕ್ರೋಧಾಗ್ನಿಯನ್ನು ಶಮನಗೊಳಿಸಿದ ನಂತರ ಸಮುದ್ರಪುರುಷನು ಅಂತರ್ಧಾನನಾದ. ನಾನೂ ಸಂತುಷ್ಟನಾಗಿ ಮರಳಿದೆ. ಜಗತ್ತು ಶಂಕರನ ಕ್ರೋಧಾಗ್ನಿಯ ಭಯವಿಲ್ಲದೆ ಸ್ವಸ್ಥವಾಯಿತು. ದೇವತೆಗಳು ಮತ್ತು ಮುನಿಗಳು ಸುಖಿಗಳಾದರು ಎಂದು ಬ್ರಹ್ಮ ಹೇಳುವಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ, ಪಾರ್ವತೀಖಂಡದ ಇಪ್ಪತ್ತನೆ ಅಧ್ಯಾಯ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT