ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ರುದ್ರಗಾಯತ್ರಿಯು ಶಿವತತ್ವ ಸ್ವರೂಪ

ಅಕ್ಷರ ಗಾತ್ರ

ಈ ಮೊದಲೇ ಹೇಳಿದಂತೆ ಶಿವಪಾರಾಯಣಕ್ಕೂ ಮುನ್ನ ಮೊದಲಿಗೆ ಗಣಪತಿಯನ್ನು, ನಂತರ ಶಿವನನ್ನು ಪೂಜಿಸಬೇಕು. ಶಿವಪುರಾಣ ಪುಸ್ತಕ ಶಿವಸ್ವರೂಪವಾಗಿರುವುದರಿಂದ ಅದನ್ನು ಈಶ್ವರನನ್ನು ಪೂಜೆಮಾಡುವಂತೆ ಭಕ್ತಿಯಿಂದ ಪೂಜಿಸಬೇಕು. ಅನಂತರ ಪುರಾಣಿಕನನ್ನು ಸಹ ಅದೇ ಭಕ್ತಿ–ವಿನಯದಿಂದ ಪೂಜಿಸಬೇಕು. ಪುಸ್ತಕವನ್ನು ಇಡಲು ತಂದ ಹೊಸದಾದ ಶುಭ್ರಪ್ರದವಾದ ಆಸನವನ್ನೂ, ಬಿಗಿಯಾದ ಮನೋಹರವಾದ ಪುರಾಣಗ್ರಂಥವನ್ನು ಕಟ್ಟುವ ದಾರವನ್ನೂ ಸಹ ಪೂಜಿಸಬೇಕು. ಯಾರು ಪುರಾಣದ ಪುಸ್ತಕವನ್ನು ಇಡಲು ಹೊಸದಾದ ಬಟ್ಟೆಯನ್ನೂ ಮತ್ತು ಅದನ್ನು ಕಟ್ಟಲು ದಾರವನ್ನು ಕೊಡುವರೋ, ಅವರು ಪ್ರತಿ ಜನ್ಮದಲ್ಲೂ ಭೋಗಶಾಲಿಗಳಾಗಿ, ಜ್ಞಾನಸಂಪನ್ನರಾಗುವರು. ಪುಸ್ತಕದ ಪೂಜೆಯಾದ ನಂತರ, ಪುರಾಣಿಕನ ಪೂಜೆಯನ್ನು ಮಾಡಿ ಕಾಣಿಕೆ ಕೊಡಬೇಕು. ಹಾಗೇ, ಪುರಾಣಿಕನ ಸಹಾಯಕನಾಗಿರುವ ಪಂಡಿತನನ್ನು ಸಹ ಪೂಜಿಸಿ, ಗೌರವಕಾಣಿಕೆ ನೀಡಬೇಕು.

ಶಿವಪುರಾಣವನ್ನು ಪುಣ್ಯವಂತರೇ ಕೇಳಬೇಕು ಎಂಬ ನಿಯಮವಿಲ್ಲ. ಅತ್ಯಂತ ಪಾಪಿಯೂ ದರಿದ್ರನೂ ಕ್ಷಯರೋಗಿಯೂ ಧನವಿಲ್ಲದವನೂ ಮಕ್ಕಳಿಲ್ಲದವನೂ ಕೇಳಬಹುದು. ಎಲ್ಲಾ ಸ್ತ್ರೀಯರೂ ಪುರುಷರೂ ಪುರಾಣಶ್ರವಣ ವಿಧಿಯನ್ನನುಸರಿಸಿಯೇ ಶಿವಪುರಾಣ ಕೇಳಬೇಕು. ವಿಧಿವತ್ತಾಗಿ ಶಿವಪುರಾಣವನ್ನು ಕೇಳಿದ ನಂತರ ಕೊನೆಯಲ್ಲಿ ಶಿವಪುರಾಣ ಆಯೋಜಿಸಿದವರು ತಮಗೆ ಇಷ್ಟವಾದ ಉದ್ಯಾಪನೆಯನ್ನು ಮಾಡಬೇಕು. ಈ ಉದ್ಯಾಪನ ವಿಧಿಯು ಚತುರ್ದಶಿ ಉದ್ಯಾಪನೆಯ ವಿಧಿಯಂತೆಯೇ ಇರುವುದು. ಉದ್ಯಾಪನೆಯಿಂದ ಫಲ ಬಯಸುವ ಧನಿಕರು ತಮ್ಮ ಶಕ್ತಿ ಅನುಸಾರವಾಗಿ ಉದ್ಯಾಪನೆಯನ್ನ ಮಾಡಬಹುದು. ಧನವಿಲ್ಲದವರೂ, ಪರಮೇಶ್ವರನ ಭಕ್ತರೂ ಉದ್ಯಾಪನೆಯನ್ನು ಮಾಡದಿದ್ದರೂ ಭಾಧಕವಿಲ್ಲ. ಅವರು ಪುರಾಣವನ್ನು ಕೇಳುವುದರಿಂದಲೇ ಶುದ್ಧರಾಗಿ, ಫಲಾಪೇಕ್ಷೆರಹಿತರಾಗುವರು.

ಶಿವಪುರಾಣವನ್ನು ಕೇಳುವ ದಿನಗಳು ಅತ್ಯುತ್ತಮವಾದ ಪುಣ್ಯದಿನಗಳಾಗಿರುತ್ತವೆ. ಆ ದಿನಗಳನ್ನು ಕೋಟಿ ಯಜ್ಞಕ್ಕೆ ಸಮಾನವಾದ ಪುಣ್ಯದಿನಗಳೆಂದು ತಿಳಿಯಬೇಕು. ವಿಧಿ-ವಿಧಾನದಿಂದ ಶಿವಪುರಾಣವನ್ನು ಕೇಳುವ ದಿನಗಳಲ್ಲಿ, ದೀನರಿಗೆ ಅಲ್ಪವನ್ನಾದರೂ ದಾನಮಾಡಬೇಕು. ಹೀಗೆ ದಾನ ಮಾಡಿದವರಿಗೆ ನಾಶರಹಿತವಾದ ಫಲವು ಸಿಗುತ್ತೆ. ಶಿವಪುರಾಣ ಪಾರಾಯಣ ಮಾಡಿದ ನಂತರ, ಬಂದಿದ್ದವರೆಲ್ಲರೂ ಭಕ್ತಿಯಿಂದ ಶಿವನನ್ನು ಪೂಜೆ ಮಾಡಬೇಕು. ಶಿವಪುರಾಣ ಕೇಳಿದ ಮಾರನೇ ದಿನ ಶಿವಪಾರಾಯಣವನ್ನು ಆಯೋಜಿಸಿದವರು ಸಂಗೀತ-ನೃತ್ಯ ಉತ್ಸವ ಏರ್ಪಡಿಸಬೇಕು. ಆಯೋಜಕರು ವಿರಕ್ತನಾಗಿ, ಸಂಗೀತ-ನರ್ತನಾದಿಗಳಲ್ಲಿ ಆಸಕ್ತಿ ಇಲ್ಲದವರಾದರೆ, ಮಾರನೆಯ ದಿನ ಮಹೇಶ್ವರನು ಶ್ರೀರಾಮಚಂದ್ರನಿಗೆ ಹೇಳಿದ ಶಿವಗೀತೆಯನ್ನು ಪಠಿಸಬೇಕು. ಗೃಹಸ್ಥನಾದಲ್ಲಿ ಅನುಶುದ್ಧವಾದ ಹವಿಸ್ಸಿನಿಂದ ಕರ್ಮಶಾಂತಿಗೋಸ್ಕರವಾಗಿ ಹೋಮ ಮಾಡಬೇಕು. ರುದ್ರಗಾಯತ್ರಿಯು ಶಿವಪುರಾಣದ ತತ್ತ್ವಸ್ವರೂಪವಾದ್ದರಿಂದ, ರುದ್ರಸಂಹಿತೆಯ ಪ್ರತಿಯೊಂದು ಶ್ಲೋಕವನ್ನು ಹೇಳುತ್ತ ಹೋಮ ಮಾಡಬೇಕು. ಹೋಮ ಮಾಡುವಾಗ ಶಿವಪಂಚಾಕ್ಷರಿಯನ್ನು ಪಠಿಸಬೇಕು. ನ್ಯೂನಾಧಿಕದೋಷ ಪರಿಹಾರಾರ್ಥವಾಗಿ ಶಿವಸಹಸ್ರನಾಮವನ್ನು ಭಕ್ತಿಯಿಂದ ಓದಬೇಕು ಅಥವಾ ಓದಿಸಿ ಕೇಳಬೇಕು. ಈ ರೀತಿ ಶಿವಪುರಾಣ ಪಾರಾಯಣದ ವಿಧಿವಿಧಾನಗಳನ್ನು ಅನುಸರಿಸಿದರೆ, ಅವರೆಲ್ಲರ ಇಷ್ಟಾರ್ಥಗಳು ಸಫಲವಾಗುವುದು.

ಶಿವಪುರಾಣ ಕೇಳುವುದರಿಂದ ಸಿಗುವ ಅಧಿಕವಾದ ಪುಣ್ಯ ಮೂರು ಲೋಕದಲ್ಲಿ ಯಾವುದರಿಂದಲೂ ಸಿಗುವುದಿಲ್ಲ. ಶಿವಪುರಾಣದ ಪ್ರಭಾವದಿಂದ ಈಶ್ವರನ ಕೃಪೆಗೆ ಪಾತ್ರನಾಗಿ ಮೋಕ್ಷ ಸಿಗುವುದು. ಶಿವಪುರಾಣವನ್ನು ಕೇಳಿದವರೆಲ್ಲರಿಗೂ, ಭುಕ್ತಿಯನ್ನೂ ಮೋಕ್ಷವನ್ನೂ ಕೊಡುವ ಸಂಪೂರ್ಣ ಫಲವು ಬರುತ್ತದೆ. ಸಂಪದ್ಯುಕ್ತವಾದ ಶಿವಪುರಾಣವು ಪುರಾಣಗಳಲ್ಲೆಲ್ಲಾ ಶ್ರೇಷ್ಠವಾದುದು. ಇದು ಮಹೇಶ್ವರನಿಗೆ ಸಂತೋಷದಾಯಕವಾದುದು. ಇದನ್ನು ಕೇಳುವುದರಿಂದ ಸಂಸಾರವೆಂಬ ಬಂಧನ ನಾಶವಾಗಿ ಮೋಕ್ಷವು ಲಭಿಸುವುದು. ಮನುಷ್ಯಜನ್ಮದಲ್ಲಿ ಹುಟ್ಟಿ, ಪ್ರಪಂಚಕ್ಕೆ ಅಧಿಪತಿಯಾದ ಈಶ್ವರನನ್ನು ಯಾರು ಧ್ಯಾನಮಾಡುವರೋ, ಅವರ ಗುಣಗಳನ್ನು ಸಾಕ್ಷಾತ್ ಸರಸ್ವತಿಯೇ ವರ್ಣಿಸುವಳು. ಅಂಥವರೆಲ್ಲರೂ ಪ್ರಾಪಂಚಿಕ ಕಷ್ಟಗಳಿಂದ ಮುಕ್ತರಾಗುವರು ಎಂದು ಸುದೀರ್ಘವಾಗಿ ಶಿವಪುರಾಣದ ಮಹಿಮೆ, ಅದರ ಆಚಾರ-ವಿಚಾರಗಳನ್ನೆಲ್ಲ ಶೌನಕಮುನಿಗೆ ತಿಳಿಸಿದ ಸೂತಮುನಿ.

ಹೀಗೆ ಶ್ರೀಸ್ಕಾಂದಮಹಾಪುರಾಣದ ಸನತ್ಕುಮಾರ ಸಂಹಿತೆಯಲ್ಲಿ ಶಿವಪುರಾಣವನ್ನು ಹೇಗೆ ಹೇಳಬೇಕು? ಎಲ್ಲಿ ಕೇಳಬೇಕು? ಅದರ ವಿಧಿ-ವಿಧಾನ ಮತ್ತು ನಿಯಮಗಳನ್ನು ತಿಳಿಸಲಾಗಿದೆ. ಮುಂದೆ ವೇದವ್ಯಾಸರಿಗೆ ಸನತ್ಕುಮಾರದೇವ ಹೇಳಿದ ಮೂಲ ಶಿವಮಹಾಪುರಾಣ ಆರಂಭಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT