ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಶಿವಪುರಾಣ ಶ್ರವಣವಿಧಾನ

ಅಕ್ಷರ ಗಾತ್ರ

ಬಿಂದುಗ ಮತ್ತು ಚಂಚುಲೆ ದಂಪತಿಕಥೆಯನ್ನು ಕೇಳಿದ ಶೌನಕಮುನಿ ಭಾವಪರವಶರಾದರು. ಗಂಡ ಮಾಡಿದ ಅನ್ಯಾಯ ಮರೆತು, ಪತಿಯ ಶಾಪವಿಮೋಚನೆಗಾಗಿ ಪತಿವ್ರತಧರ್ಮ ಪಾಲಿಸಿದ ಚಂಚುಲೆಯ ಗುಣವನ್ನು ಪ್ರಶಂಸಿಸಿದರು. ಜಗನ್ಮಾತೆಯ ಬಳಿ ಚಂಚುಲೆ ಶಾಶ್ವತವಾಗಿ ನೆಲೆಸಲು ಸೌಭಾಗ್ಯ ಸಿಕ್ಕಿದ್ದು ಶಿವಪುರಾಣ ಮಹಿಮೆಯಿಂದ. ಇಂಥ ಪವಿತ್ರವಾದ ಮತ್ತು ಪುಣ್ಯಫಲದ ಶಿವಪುರಾಣವನ್ನ ಯಾವ ರೀತಿ ಕೇಳಬೇಕು. ಅದರ ವಿಧಿ-ವಿಧಾನಗಳನ್ನ ತಿಳಿಸುವಂತೆ ಶೌನಕಮುನಿಯು ವ್ಯಾಸರ ಪರಮಶಿಷ್ಯ ಸೂತಪುರಾಣಿಕನನ್ನು ಕೋರುತ್ತಾರೆ. ಆಗ ಸೂತಮುನಿಯು ಶಿವಪುರಾಣದ ಪುಣ್ಯಫಲ ದೊರೆಯುವ ಶ್ರವಣವಿಧಿ-ವಿಧಾನವನ್ನು ತಿಳಿಸುತ್ತಾನೆ.

ಶಿವಪುರಾಣ ಕೇಳಬೇಕೆನ್ನುವವರು ಮೊದಲಿಗೆ ಒಬ್ಬ ಜೋಯಿಸನನ್ನು ಕರೆಸಬೇಕು. ಆತನಿಂದ ಶಿವಪ್ರವಚನ ಹೇಳಿಸಬೇಕು. ಹಾಗೇ, ಶಿವಪುರಾಣ ಕೇಳ ಬಯಸುವ ಜನರನ್ನು ಸೇರಿಸಬೇಕು. ಶಿವಭಕ್ತರೆಲ್ಲ ಸಂತೋಷದಿಂದ ಪುರಾಣ ಕೇಳಲು ಅನುಕೂಲವಾಗುವಂತೆ, ನಿರ್ವಿಘ್ನವಾದ ಒಂದು ಒಳ್ಳೆಯ ಮುಹೂರ್ತವನ್ನ ಇಡಬೇಕು. ಶಿವಪುರಾಣ ಕೇಳಲು ಜನರು ಬರುವಂತೆ ಮಾಡಲು, ಶಿವಕಥೆ ನಡೆಯುವ ವಿಚಾರವನ್ನ ಊರುಊರುಗಳಲ್ಲಿ ಸಾರಬೇಕು. ಯಾರಿಗೆ ಹರಿಕಥೆ ಕೇಳುವುದರಲ್ಲಿ ಆಸಕ್ತಿ ಇದೆಯೋ, ಯಾರು ಈಶ್ವರನ ನಾಮಕೀರ್ತನೆಯಲ್ಲಿ ಶ್ರದ್ಧೆ ಇದೆಯೋ, ಅಂತಹವರು ದೂರದ ಸ್ಥಳಗಳಲ್ಲಿದ್ದರೂ, ಅವರಿಗೆ ಶಿವಪುರಾಣಶ್ರವಣ ವಿಚಾರ ತಿಳಿಯುವಂತೆ ಮಾಡಬೇಕು.

ಶಿವಕೀರ್ತನೆ ಪಾರಾಯಣ ಮಾಡಲು ಮತ್ತು ಕೇಳಲು ಉತ್ಸುಕರಾಗಿರುವ ಎಲ್ಲರನ್ನೂ ಸ್ತ್ರೀ-ಪುರುಷ ಎಂಬ ಲಿಂಗಭೇದವಿಲ್ಲದೆ, ಬ್ರಾಹ್ಮಣ-ಶೂದ್ರ ಎಂಬ ಜಾತಿ ವಿಂಗಡಣೆ ಮಾಡದೆ, ಬಡವ-ಶ್ರೀಮಂತ ಎಂಬ ತಾರತಮ್ಯ ಮಾಡದೆ ಆದರದಿಂದ ಕರೆಯಬೇಕು. ಹಾಗೆ ಕರೆಯುವಾಗ ಶಿವಪುರಾಣದ ಮಹಿಮೆಯನ್ನು ಜನರಿಗೆ ತಿಳಿಸಬೇಕು. ‘ಶಿವಪುರಾಣ ಕೇಳಲು ಸತ್ಪುಷರೆಲ್ಲರೂ ಬರುತ್ತಿದ್ದಾರೆ, ಇಂಥ ಪವಿತ್ರ ಕಾರ್ಯಕ್ಕೆ ತಾವೆಲ್ಲರೂ ಬರಬೇಕು. ಶಿವಪುರಾಣದಂಥ ಪುಣ್ಯಕಥೆ ಕೇಳುವ ಸುವರ್ಣಾವಕಾಶ ಸಿಕ್ಕಿದೆ. ನಿಮಗಿನ್ನು ಶಿವಪುರಾಣ ಕೇಳಲು ಉಳಿದಿರುವುದು ಒಂದೇ ದಿನ. ಪುನಃ ಇಂತಹ ಸಮಯ ಸಿಕ್ಕಲಾರದು. ಆದುದರಿಂದ ಶಿವಪುರಾಣ ಕೇಳಲು ತಪ್ಪದೆ ಬನ್ನಿ’ ಅಂತ ಜನರಿಗೆ ಮನಮುಟ್ಟುವಂತೆ ಹೇಳಬೇಕು.

ಶಿವಪುರಾಣವನ್ನು ಕೇಳಲು ಸರಿಯಾದ ಸ್ಥಳಗಳೆಂದರೆ: ಈಶ್ವರನ ದೇವಸ್ಥಾನ, ಅಥವಾ ಯಾವುದಾದರೂ ತೀರ್ಥಕ್ಷೇತ್ರ, ಅದೂ ಇಲ್ಲದಿದ್ದರೆ ಒಂದು ಉಪವನವಾದರೂ ಆಗಬಹುದು. ಚೊಕ್ಕಟವಾದ ಮನೆಯಾದರೂ ಸರಿಯೇ. ಅಂತಹ ಯೋಗ್ಯವಾದ ಸ್ಥಳದಲ್ಲಿ ನೆಲವನ್ನು ಸಾರಿಸಿ ಶುದ್ಧಿಮಾಡಬೇಕು. ರಂಗವಲ್ಲಿ ಬಿಡಿಸಿ, ಹೂವಿನಿಂದ ಅಲಂಕಾರ ಮಾಡಬೇಕು. ತಳಿರು-ತೋರಣಾದಿಗಳಿಂದ ಅಲಂಕಾರ ಮಾಡಿ, ಮಹಾವೈಭವದ ಉತ್ಸವವನ್ನೇರ್ಪಡಿಸಬೇಕು. ಶಿವಪುರಾಣ ಕೇಳುವ ಸ್ಥಳದಲ್ಲಿ ಒಂದು ಮಂಟಪವನ್ನು ರಚಿಸಬೇಕು. ಅದಕ್ಕೆ ಬಾಳೆಯ ಕಂಬವನ್ನು ಕಟ್ಟಿ, ಹಣ್ಣುಕಾಯಿಗಳನ್ನು ತೂಗುಹಾಕಬೇಕು. ಹೂಗಳಿಂದ ಚೆಂದವಾಗಿ ಅಲಂಕರಿಸಬೇಕು. ಸುತ್ತಲೂ ಮಕರತೋರಣವನ್ನು ಕಟ್ಟಬೇಕು. ಮಂಟಪದ ನಾಲ್ಕು ದಿಕ್ಕುಗಳಲ್ಲೂ ಶುಭ್ರ್ರವಾದ ಧ್ವಜಗಳನ್ನು ಕಟ್ಟಬೇಕು. ಸರ್ವಾನಂದವಾಗುವ ಆ ಮಂಟಪದಲ್ಲಿ ಒಂದು ದಿವ್ಯವಾದ ಪೀಠವನ್ನು ಇಡಬೇಕು. ಅದರಲ್ಲಿ ಈಶ್ವರನನ್ನು ಪ್ರತಿಷ್ಠಾಪಿಸಬೇಕು. ಮಂಟಪದ ಮುಂದೆ, ಪುರಾಣವನ್ನು ಹೇಳುವವನಿಗೂ ಒಂದು ಸುಖಾಸನವನ್ನು ಕಲ್ಪಿಸಬೇಕು.

ಪುರಾಣಶ್ರವಣ ಕಾಲದಲ್ಲಿ ಯಾರೂ ಬೇರೆ ಯೋಚನೆ ಮಾಡಬಾರದು. ಚಿಂತೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹರ್ಷಚಿತ್ತರಾಗಿ ಶಿವಪುರಾಣ ಕೇಳಬೇಕು. ಪುರಾಣವನ್ನು ಹೇಳುವವನು ಉತ್ತರಾಭಿಮುಖವಾಗಿಯೂ, ಕೇಳುವವರು ಪೂರ್ವಾಭಿಮುಖವಾಗಿಯೂ ಕುಳಿತುಕೊಳ್ಳಬೇಕು. ಬಹುಮುಖ್ಯವಾಗಿ ಪ್ರಾಸಂಗಿಕ ವಿಷಯವನ್ನು ಮುಗಿಸುವುದಕ್ಕಿಂತ ಮುಂಚೆ ಯಾರೂ ನಮಸ್ಕರಿಸಬಾರದು. ಮುಕ್ತಿಯನ್ನು ಕೊಡುವವನಿಗಿಂತ ಉತ್ತಮವಾದ ಗುರು ಮತ್ತೊಬ್ಬನಿಲ್ಲ. ಪುರಾಣಜ್ಞನ ಮಾತುಗಳು ಕಾಮಧೇನುವಿನಂತೆಜನಗಳಿಗೆ ಇಷ್ಟಾರ್ಥಗಳನ್ನು ಕೊಡುವುದು. ಶಿವಪುರಾಣವನ್ನು ಹೇಳುವವನು ಶುಚಿಯಾಗಿ, ದಕ್ಷನಾಗಿ, ಯಾರಲ್ಲಿಯೂ ದ್ವೇಷವಿರದ ದಯಾಶಾಲಿಯಾಗಿರಬೇಕು. ಸೂರ್ಯೋದಯದಿಂದ ರಾತ್ರಿ ಮೂರೂವರೆ ಯಾಮದವರೆಗೆ ಶಿವಪುರಾಣವನ್ನು ಪೂರ್ಣವಾಗಿ ಹೇಳಬೇಕು. ಯಾವುದೇ ಕಾರಣಕ್ಕೂ ಶಿವಪುರಾಣವನ್ನ ಧೂರ್ತರು, ಕೆಟ್ಟ ನಡತೆಯವರು ಮತ್ತು ತಾವೇ ಹೆಚ್ಚೆಂದು ಗರ್ವ ಪಡುವ ಕುಟಿಲಗಾಮಿಗಳ ಮುಂದೆ ಮತ್ತು ಧೂರ್ತರ ಮನೆಯಲ್ಲಿ ಹೇಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT