ಭಾನುವಾರ, ಮೇ 29, 2022
24 °C
ಭಾಗ 9

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ| ಕೈಲಾಸ ಸೇರಿದ ಚಂಚುಲೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

‘ಚಂಚುಲೆಯು ಶಿವಸಾನ್ನಿಧ್ಯವನ್ನು ಹೊಂದಿದ ನಂತರ ಅವಳು ಅಲ್ಲಿ ಏನು ಮಾಡಿದಳು? ಅವಳ ಗಂಡ ಬಿಂದುಗನ ಗತಿ ಏನಾಯಿತು? ಈ ವಿಷಯವನ್ನೀಗ ಹೇಳು’ ಎಂದು ಶೌನಕಮುನಿಯು ಸೂತಪುರಾಣಿಕನನ್ನು ಕಾತರದಿಂದ ಕೇಳುತ್ತಾನೆ. ಆಗ ಸೂತಮುನಿ, ಚಂಚುಲೆ ಕೈಲಾಸ ಸೇರಿದ ನಂತರ ತನ್ನ ಪತಿ ಬಿಂದುಗನನ್ನು ಪಾರ್ವತಿ ಮಾತೆಯಿಂದ ಸದ್ಗತಿ ಕೊಡಿಸಿದ ಕಥೆಯನ್ನ ಹೇಳತೊಡಗುತ್ತಾನೆ.

ಕೈಲಾಸಕ್ಕೆ ಬಂದ ಚಂಚುಲೆಗೆ ದೇವಲೋಕದವರ ರೂಪವೂ ಶರೀರವೂ ಬಂತು. ಕೈಲಾಸದ ನೆಲ ಸ್ಪರ್ಶಿಸುತ್ತಿದ್ದಂತೆ ದಿವ್ಯವಾದ ಅಲಂಕಾರಗಳಿಂದ ದೇವತೆಯಂತೆ ಚಂಚುಲೆ ಶೋಭಿಸತೊಡಗಿದಳು. ಕೈಲಾಸದಲ್ಲಿ ತ್ರಿಲೋಚನನಾದ ಈಶ್ವರನನ್ನು ವಿಷ್ಣು, ಬ್ರಹ್ಮ, ಇಂದ್ರನೇ ಮೊದಲಾದ ದೇವತೆಗಳು ಮತ್ತು ಗಣೇಶ, ಭೃಂಗಿ, ನಂದಿ, ವೀರಭದ್ರ ಮುಂತಾದ ಗಣಗಳು ಭಕ್ತಿಯಿಂದ ಆರಾಧಿಸುತ್ತಿದ್ದುದನ್ನು ಕಂಡಳು. ಶಿವನ ಎಡಭಾಗದಲ್ಲಿ ಮಿಂಚಿನಂತೆ ಪ್ರಕಾಶಿಸುತ್ತಿದ್ದ ಜಗನ್ಮಾತೆ ಗೌರಿ ಕುಳಿತಿದ್ದಳು. ಸಮುದ್ರಮಂಥನ ಸಂದರ್ಭದಲ್ಲಿ ಉದ್ಭವಿಸಿದ ವಿಷವನ್ನು ಕುಡಿದಿದ್ದರಿಂದ ಶಿವನ ಕತ್ತು ಕಪ್ಪಾಗಿತ್ತು. ಅವನ ದೇಹಕ್ಕೆ ವಿಭೂತಿ ಲೇಪಿಸಿದ್ದರಿಂದ ಬಿಳುಪಾಗಿತ್ತು. ಕೈಲಾಸದಲ್ಲಿ ಇಂಥ ದೃಶ್ಯವನ್ನು ನೋಡಿ ಚಂಚುಲೆಯು ಸಂತೋಷದಿಂದ ರೋಮಾಂಚಿತಳಾದಳು. ಅವಳು ಶಿವ-ಪಾರ್ವತಿಯರನ್ನು ಪ್ರತ್ಯಕ್ಷವಾಗಿ ನೋಡಿದ ಸಂತೋಷ ಸಂಭ್ರಮದಿಂದ ಭಾಷ್ಪಾಂಜಲಿ ಸುರಿಸುತ್ತಾ, ನಮಸ್ಕರಿಸಿದಳು.

ತಮ್ಮ ಬಳಿ ಬಂದು ನಮಸ್ಕರಿಸುತ್ತಿದ್ದ ಚಂಚುಲೆಯನ್ನು ಪಾರ್ವತಿ ಮತ್ತು ಈಶ್ವರ ದಯಾಪೂರಿತ ದೃಷ್ಟಿಯಿಂದ ನೋಡಿದರು. ಅನಂ
ತರ ಪಾರ್ವತಿಯು ಚಂಚುಲೆಯನ್ನು ಪ್ರೀತಿಯಿಂದ ತನ್ನ ಸಖಿಯ ನ್ನಾಗಿಮಾಡಿಕೊಂಡಳು. ಇದರಿಂದ ಚಂಚುಲೆ ಕೈಲಾಸದಲ್ಲಿ ದಿವ್ಯವಾದ ಆದರಾನುಭೂತಿ ಪಡೆದಳು. ಚ್ಯೋತಿರ್ಮಯವೂ ಆನಂದಮಯವೂ ಶಾಶ್ವತವೂ ಆದ ಕೈಲಾಸದಲ್ಲಿ ಚಂಚುಲೆಯು ಶಾಶ್ವತವಾದ ಸುಖವನ್ನ ನುಭವಿಸುತ್ತಾ ಇದ್ದಳು. ಹೀಗಿರುವಾಗ ಒಂದು ದಿನ ಚಂಚುಲೆ ಕೈಲಾಸ
ಪರ್ವತದಲ್ಲಿದ್ದ ಪಾರ್ವತಿ ಬಳಿ ಹೋಗಿ ಪರಮಾನಂದದಿಂದ ಭಾವಪರ ವಶಳಾಗಿ ಭಕ್ತಿಯಿಂದ ಸ್ತೋತ್ರಮಾಡಿದಳು. ಸಂತುಷ್ಟಳಾದ ಪಾರ್ವತಿ ‘ಎಲೈ ಸಖಿ ಚಂಚುಲೆಯೇ, ನಿನ್ನ ಸ್ತುತಿಯನ್ನು ಮೆಚ್ಚಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳು, ಕೊಡುವೆನು’ ಎಂದಳು. ಆಗ ಚಂಚುಲೆಯು ಆನಂದಾಶ್ರು ಸುರಿಸುತ್ತಾ, ‘ನನ್ನ ಪತಿ ಬಿಂದುಗ ಈಗ ಎಲ್ಲಿರುವನು? ನನ್ನ ಪತಿಯೊಡನೆ ನಾನು ಸೇರುವಂತೆ ನನಗೆ ಅನುಗ್ರಹಮಾಡು’ ಎಂದು ಕೋರಿದಳು.

ಆಗ ಜಗನ್ಮಾತೆ ಪಾರ್ವತಿ ‘ಮಗಳೇ ಚಂಚುಲೆ, ನಿನ್ನ ಗಂಡ ಬಿಂದುಗ ಮಹಾಪಾಪಿಯಾಗಿದ್ದರಿಂದ ಬಹುಕಾಲ ನರಕದಲ್ಲಿ ಶಿಕ್ಷೆ ಅನುಭವಿಸಿದ ನಂತರ, ಅವನೀಗ ವಿಂಧ್ಯಾರಣ್ಯದಲ್ಲಿ ಪಿಶಾಚಿಯ ಜನ್ಮ ಪಡೆದಿದ್ದಾನೆ. ಪಿಶಾಚಿಯಾಗಿ ನಾನಾ ದುಃಖಗಳನ್ನು ಅನುಭವಿಸುತಾ, ವಿಂಧ್ಯಾರಣ್ಯದಲ್ಲಿ ಗಾಳಿಯನ್ನೇ ಆಹಾರಮಾಡಿಕೊಂಡು ಅಲೆಯುತ್ತಿದ್ದಾನೆ’ ಎಂದು ತಿಳಿಸಿದಳು.

ಜಗನ್ಮಾತೆ ಗೌರಿ ಹೇಳಿದ್ದನ್ನು ಕೇಳಿ ಚಂಚುಲೆಗೆ ತುಂಬಾ ದುಃಖವಾ ಗುತ್ತದೆ. ತನ್ನ ಪತಿ ಬಿಂದುಗನಿಗೆ ಬಂದ ಘನಘೋರ ಸ್ಥಿತಿಯನ್ನು ನೆನೆದು ರೋದಿಸುತ್ತಾಳೆ. ಸುಮಾರು ಹೊತ್ತು ಗೋಳಾಡಿದ ಚಂಚುಲೆ, ನಂತರ ತನ್ನ ಮನಸ್ಸನ್ನು ಸಮಾಧಾನಮಾಡಿಕೊಂಡು ‘ಕೆಟ್ಟ ಬುದ್ಧಿಯಿಂದ ಪಾಪಿಯಾದ ನನ್ನ ಪತಿ ಪಿಶಾಚಿಯಂತೆ ಅಲೆಯುತ್ತಿರುವುದನ್ನು ಕೇಳಿ ಬಹಳ ದುಃಖವಾಗಿದೆ. ಪತಿಯ ಪಾಪ ಪರಿಹಾರದ ಮಾರ್ಗ ತಿಳಿಸು ತಾಯಿ. ನಾನು ಪತಿಯಿಂದ ದೂರ ಇರಲಾರೆ, ಪತಿಯೊಂದಿಗೆ ಮತ್ತೆ ಸೇರುವಂತೆ ಮಾಡು’ ಅಂತ ಪಾರ್ವತಿಯನ್ನು ಅಂಗಲಾಚಿ ಬೇಡಿಕೊಳ್ಳುತ್ತಾಳೆ. ಚಂಚುಲೆಯ ಮಾತನ್ನು ಕೇಳಿ ಭಕ್ತವತ್ಸಲೆಯಾದ ಪಾರ್ವತಿ ಪ್ರಸನ್ನಳಾಗಿ ‘ಚಂಚುಲೆ, ಗಂಡನ ಮೇಲೆ ನೀನು ಇಟ್ಟಿರುವ ಪ್ರೀತಿ ಕಂಡು ನನಗೆ ಸಂತೋಷವಾಗಿದೆ. ಆದ್ದರಿಂದ ನಿನ್ನ ಪತಿಯ ಪಾಪ ವಿಮೋಚನೆಗೆ ಸರಳವಾದ ಮಾರ್ಗ ತಿಳಿಸುತ್ತೇನೆ. ಪವಿತ್ರವಾದ ಶಿವಕಥೆಯನ್ನು ಕೇಳಿ ನೀನು ಪುನೀತಳಾದಂತೆ, ನಿನ್ನ ಗಂಡ ಸಹ ಶಿವಪುರಾಣ ಕೇಳಿದರೆ, ಅವನಿಗೆ ಬಂದಿರುವ ಪಿಶಾಚಜನ್ಮ ಹೋಗಿ ಸದ್ಗತಿ ಪಡೆಯುತ್ತಾನೆ. ಆಗ ಅವನು ಕೈಲಾಸಕ್ಕೆ ಬಂದು, ನಿನ್ನ ಸೇರುತ್ತಾನೆ’ ಅಂತ ಪಾರ್ವತಿದೇವಿ ಪಾಪ ಪರಿಹಾರದ ಮಾರ್ಗ ತಿಳಿಸುತ್ತಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು