ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ| ಚಂಚುಲೆಯ ವೈರಾಗ್ಯ

ಭಾಗ 8
Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ದುರಾಚಾರಿಯಾದ ಗಂಡ ಬಿಂದುಗನ ಸಾವಿನ ನಂತರ ಚಂಚುಲೆ ತನ್ನ ಮಕ್ಕಳೊಡನೆ ವಾಸಮಾಡುತ್ತಾ, ಯೌವನ ಇರುವವರೆಗೂ ಕಾಮಾಸಕ್ತಳಾಗಿ ಜಾರರ ಸಹವಾಸ ಮಾಡುತ್ತಿದ್ದಳು. ಕಾಲ ಸರಿದಂತೆ, ಅವಳ ಯೌವನವು ಇಳಿಯುತ್ತಾ ಬಂತು. ಹೀಗಿರುವಾಗ ಚಂಚುಲೆಯು ಸಂಕ್ರಮಣ ದಿನ, ತನ್ನ ಬಂಧುಗಳೊಡನೆ ಗೋಕರ್ಣವೆಂಬ ತೀರ್ಥಕ್ಷೇತ್ರಕ್ಕೆ ಹೋದಳು. ಅಲ್ಲಿರುವ ಒಂದು ತೀರ್ಥಜಲದಲ್ಲಿ ಸ್ನಾನಮಾಡಿ, ಪವಿತ್ರ ಸ್ಥಳಗಳಲ್ಲೆಲ್ಲ ಸಂಚರಿಸಿದಳು. ಕೊನೆಗೆ ಅಲ್ಲಿದ್ದ ಒಂದು ದೇವಾಲಯಕ್ಕೆ ಬಂದಳು. ಅಲ್ಲಿ ಜೋಯಿಸನೊಬ್ಬ ಹೇಳುತ್ತಿದ್ದ ಪುಣ್ಯಕರವಾದ ಈಶ್ವರನ ಪುರಾಣದ ಕಥೆಯನ್ನ ಕೇಳುತ್ತಾ ನಿಂತಳು.

ಜೋಯಿಸರು ಶಿವಪುರಾಣ ಹೇಳುವಾಗ ‘ಜಾರತನ ಮಾಡಿದ ಹೆಂಗಸರನ್ನ ಯಮಕಿಂಕರರು ಚೆನ್ನಾಗಿ ಕಾಯಿಸಿರುವ ಕಬ್ಬಿಣದ ಗಡಾರಿಯಲ್ಲಿಟ್ಟು, ಕಾಮದ ಮೈ ಸುಡುತ್ತಾ, ಹಿಂಸಿಸುತ್ತಾರೆ’ ಅಂದಾಗ ಚಂಚುಲೆ ಭಯಭೀತಳಾದಳು. ಜೀವನದಲ್ಲಿ ಮೊದಲ ಬಾರಿ ಅವಳಿಗೆ ವೈರಾಗ್ಯ ಬಂತು. ಕಥೆಯೆಲ್ಲ ಮುಗಿದ ನಂತರ ಜನರೆಲ್ಲ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಚಂಚುಲೆ ಮಾತ್ರ ಅಲ್ಲಿಂದ ಹೋಗದೆ ಹೆದರಿಕೆಯಿಂದ ನಡುಗುತ್ತಾ ನಿಂತಿದ್ದಳು. ನಂತರ ಸಾವರಿಸಿಕೊಂಡು ಶಿವಪುರಾಣ ಹೇಳಿದ ಜೋಯಿಸರ ಬಳಿ ಬಂದು ಗುಟ್ಟಾಗಿ ತಾನು ಮಾಡುತ್ತಿದ್ದ ಪಾಪ ಕೃತ್ಯವನ್ನೆಲ್ಲಾ ಹೇಳಿದಳು. ‘ಶಿವನ ಸತ್ಕಥೆಯನ್ನು ಕೇಳಿ ನನಗೆ ವಿಷಯಸುಖಗಳಲ್ಲಿ ವೈರಾಗ್ಯವುಂಟಾಗಿದೆ. ನಾನು ಅನೇಕ ಪಾಪ ಕೆಲಸಗಳನ್ನು ಮಾಡಿದ್ದೇನೆ. ಶಿವಪುರಾಣ ಕೇಳಿದ ನಂತರ ನಾನು ಮಾಡಿದ ತಪ್ಪಿನ ಅರಿವಾಗಿದೆ. ನನ್ನ ಮೇಲೆ ದಯೆ ಇಟ್ಟು, ನನ್ನನ್ನು ಪಾಪದ ಶಿಕ್ಷೆಯಿಂದ ಕಾಪಾಡಿ. ನರಕವೆಂಬ ಸಮುದ್ರದಲ್ಲಿ ಬಿದ್ದಿರುವ ನನ್ನನ್ನು ಉದ್ಧಾರಮಾಡಿ. ನನಗೆ ನೀವೇ ಗುರು, ತಂದೆ, ತಾಯಿ ಎಲ್ಲಾ. ದೀನಳಾದ ನಾನು ನಿಮ್ಮನ್ನು ನಂಬಿರುವೆ. ನನಗೆ ಪುಣ್ಯಸಂಪಾದಿಸುವ ಮಾರ್ಗ ತಿಳಿಸಿ’ ಎಂದು ದುಃಖಭರಿತಳಾಗಿ ಬೇಡಿಕೊಂಡಳು.

ಶಿವಕಥೆ ಕೇಳಿದ್ದರಿಂದ ಚಂಚುಲೆಗೆ ಮನಃಪರಿವರ್ತನೆಯಾಗಿ, ಅವಳಲ್ಲಿ ತನ್ನ ಪಾಪಕೃತ್ಯಗಳಿಗೆ ಪಶ್ಚಾತ್ತಾಪ ಉಂಟಾಗಿತ್ತು. ಇದನ್ನ ಅರಿತ ಆ ಜೋಯಿಸ, ತನ್ನ ಕಾಲಿಗೆ ಬಿದ್ದ ಚಂಚುಲೆಯನ್ನು ಮೇಲಕ್ಕೆ ಎತ್ತಿ ದಯೆಯಿಂದ ಅವಳಿಗೆ ಮಾರ್ಗದರ್ಶನ ನೀಡುವುದಾಗಿ ಭರವಸೆ ನೀಡಿದರು. ‘ಪವಿತ್ರವಾದ ವೈರಾಗ್ಯವನ್ನುಂಟುಮಾಡುವ ಶಿವಪುರಾಣದ ಕಥೆಯನ್ನು ಕೇಳಿ, ಸರಿಯಾದ ಸಮಯದಲ್ಲಿ ಶಿವಾನುಗ್ರಹದಿಂದ ಎಚ್ಚೆತ್ತಿರುವೆ. ಇದು ನಿನ್ನ ಅದೃಷ್ಟ. ನೀನು ಮಾಡಬಾರದ ಪಾಪ ಮಾಡಿದ್ದೀಯಾ. ಹೆದರಬೇಡ, ಈಶ್ವರನ ಮೊರೆಹೋಗು. ಅವನ ಅನುಗ್ರಹದಿಂದ ನಿನ್ನ ಪಾಪವೆಲ್ಲವೂ ತಕ್ಷಣ ನಾಶವಾಗುವುದು’ ಎಂದು ಪಾಪವನ್ನೆಲ್ಲಾ ನಾಶಮಾಡಿ, ಯಾವಾಗಲೂ ಒಳ್ಳೆಯದನ್ನು ಮಾಡುವ ಪವಿತ್ರವಾದ ಶಿವನ ಕೀರ್ತನೆಯಿಂದ ಕೂಡಿದ ಶಿವಮಹಾಪುರಾಣವನನ್ನ ಹೇಳಿದ.

ಗೋಕರ್ಣದಂಥ ಪುಣ್ಯಕ್ಷೇತ್ರದಲ್ಲಿ ಚಂಚುಲೆಯು ಭಕ್ತಿ, ಜ್ಞಾನ, ವೈರಾಗ್ಯಗಳನ್ನುಂಟುಮಾಡುವ ಮತ್ತು ಮೋಕ್ಷವನ್ನು ಕೊಡುವ ಉತ್ಕೃಷ್ಟವಾದ ಶಿವಪುರಾಣದ ಕಥೆಯನ್ನು ಕೇಳಿ ಕೃತಾರ್ಥಳಾದಳು. ನಂತರ ಗೋಕರ್ಣದ ತೀರ್ಥಜಲದಲ್ಲಿ ನಿತ್ಯವೂ ಸ್ನಾನಮಾಡುತ್ತಾ, ಜಟೆಯನ್ನು ಬಿಟ್ಟು ನಾರುಬಟ್ಟೆಗಳನ್ನುಟ್ಟು, ಪರಿಶುದ್ಧವಾದ ಮನಸ್ಸಿನಿಂದ ಈಶ್ವರನ ಧ್ಯಾನದಲ್ಲಿ ನಿರತಳಾದಳು. ಮೈಗೆಲ್ಲಾ ಭಸ್ಮವನ್ನು ಲೇಪಿಸಿಕೊಂಡು, ಕೊರಳಿನಲ್ಲಿ ರುದ್ರಾಕ್ಷಿಸರವನ್ನು ಧರಿಸುತ್ತಿದ್ದಳು. ಹೆಚ್ಚು ಆಹಾರ ಬಯಸದೆ, ಮಿತವಾದ ಆಹಾರವನ್ನು ಸೇವಿಸುತ್ತಿದ್ದಳು. ಮೌನವ್ರತವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾ, ಈಶ್ವರನನ್ನ ಧ್ಯಾನ ಮಾಡುತ್ತಿದ್ದಳು. ಹೀಗೆ ಸುಮಾರು ವರ್ಷ ಶಿವನನ್ನ ಸ್ಮರಿಸುತ್ತಾ ಗೋಕರ್ಣ ಕ್ಷೇತ್ರದಲ್ಲಿಯೇ ಕಳೆದಳು. ಕೊನೆಗೊಂದು ದಿನ ಅವಳ ಆಯಷ್ಯ ಮುಗಿಯಿತು. ಭಕ್ತಿ, ಜ್ಞಾನ, ವೈರಾಗ್ಯಯುಕ್ತಳಾಗಿದ್ದರಿಂದ ಅವಳಿಗೆ ಅನಾಯಾಸ ಮರಣ ಪ್ರಾಪ್ತವಾಯಿತು. ಚಂಚುಲೆಯ ಭಕ್ತಿಗೆ ಮೆಚ್ಚಿದ ಈಶ್ವರನು ವಿಮಾನವನ್ನು ತನ್ನ ಗಣಗಳೊಡನೆ ಕಳುಹಿಸಿಕೊಟ್ಟ. ಶಿವದೂತರು ಚಂಚುಲೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT