ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಗಾಂಧಿ ಎಂಬ ಆತ್ಮಶಿಕ್ಷಣ

Last Updated 3 ಅಕ್ಟೋಬರ್ 2020, 10:31 IST
ಅಕ್ಷರ ಗಾತ್ರ

ಪ್ರತಿ ವರ್ಷವೂ ಗಾಂಧೀಜಯಂತಿ ಸಮಯದಲ್ಲಿ ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಲೇ ಇರುತ್ತವೆ. ವಾಸ್ತವದಲ್ಲಿ ನಾವು ಗಾಂಧಿಯವರಿಂದ ಏನನ್ನು ಪಡೆಯುತ್ತಿದ್ದೇವೆ? ಈ ಪ್ರಶ್ನೆಯೂ ಅವುಗಳಲ್ಲಿ ಒಂದು. ಅವರು ಸ್ವಾತಂತ್ರ್ಯಸಂಗ್ರಾಮಕ್ಕೆ ಏನನ್ನು ಕೊಟ್ಟರು, ಅಥವಾ ಕೊಡಲಿಲ್ಲ ಎನ್ನುವುದರ ವಿಶ್ಲೇಷಣೆಯಲ್ಲ ಇದು. ಈಗ, ಎಂದರೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ, ಇಂದು ಅವರಿಂದ ನಾವು ಏನನ್ನು ಪಡೆಯುತ್ತಿದ್ದೇವೆ? ಇದು ಪ್ರಶ್ನೆ. ಭೌತಿಕ ಗಾಂಧಿಗಿಂತಲೂ ತಾತ್ತ್ವಿಕ ಗಾಂಧಿಯಿಂದ ನಾವು ಪಡೆದುಕೊಳ್ಳುತ್ತಿರುವುದಾದರೂ ಏನು?

ಈ ಪ್ರಶ್ನೆ ನಮಗೆ ಏಕೆ ಮುಖ್ಯವಾಗುತ್ತದೆ ಎಂದರೆ ಗಾಂಧಿಯವರಿಲ್ಲದೆ ನಮ್ಮ ಸಾಮಾಜಿಕ ಜೀವನ ಪೂರ್ಣವೇ ಆಗದು ಎನ್ನುವಷ್ಟರ ಮಟ್ಟಿಗೆ ಅವರನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಬಳಸಿಕೊಳ್ಳುತ್ತಿದ್ದೇವೆ ಸರಿ, ಆದರೆ ಆ ಬಳಕೆಯನ್ನು ಎಷ್ಟರ ಮಟ್ಟಿಗೆ ಸದ್ಬಳಿಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದು ಇಲ್ಲಿರುವ ಪ್ರಶ್ನೆ.

ಇಂದು ನಮ್ಮ ದೇಶದಲ್ಲಿ ಯಾವುದೇ ರಾಜಕೀಯಪಕ್ಷವೂ ಗಾಂಧಿಯವರನ್ನು ಬಳಸಿಕೊಳ್ಳದೆ ರಾಜಕಾರಣವನ್ನು ಮಾಡುವ ಸ್ಥಿತಿಯಲ್ಲಿಲ್ಲ ಎಂಬುದು ವಾಸ್ತವ. ಈ ಪಕ್ಷಗಳು ಕಳೆದುಕೊಂಡಿರುವ ನೈತಿಕ–ಸಾಮಾಜಿಕ ಪ್ರಜ್ಞೆಗಳು ‘ಇನ್ನೂ ತಮಲ್ಲಿ ಇದೆ’ ಎಂದು ತೋರಿಸಿಕೊಳ್ಳಬೇಕಾದ ಸಂದರ್ಭಗಳಲ್ಲಿ ಇವರು ಗುರಾಣಿಗಳಂತೆ ಗಾಂಧಿಯವರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವುದು ರಹಸ್ಯವೇನಲ್ಲ; ಎಲ್ಲರಿಗೂ ಗೊತ್ತಿರುವಂಥದ್ದೇ. ಇವರಾರು ಗಾಂಧಿಯವರಂತೆ ಬದುಕುತ್ತಿಲ್ಲ ಎನ್ನುವ ವಾಸ್ತವ ಜನರಿಗೂ ಗೊತ್ತಿರುವಂಥದ್ದೇ. ಗಾಂಧೀಜಪಮಾಡಿದ ಮಾತ್ರಕ್ಕೆ ಜನರು ಮರುಳಾಗುತ್ತಿದ್ದಾರೆಯೆ? ಬಹುಪಾಲು ಜನರು ಇವರನ್ನು ನಂಬುತ್ತಾರೆ ಎಂಬುದು ಸುಳ್ಳು. ಆದರೂ ಈ ನಾಯಕರ ಗಾಂಧೀಭಜನೆ ನಿಲ್ಲುವುದಿಲ್ಲ. ನನ್ನ ಕುತೂಹಲ ಎಂದರೆ, ರಹಸ್ಯ ಇಷ್ಟು ಬಯಲಾಗಿದ್ದರೂ ಈ ಜನನಾಯಕರು ಗಾಂಧಿಯವರನ್ನೇ ಆಶ್ರಯಿಸಲು ಕಾರಣವೇನು? ಗಾಂಧಿಯವರ ಯಾವ ಯಾವ ಗುಣಗಳ ವೇಷ ತೊಟ್ಟ ನಮ್ಮ ಸಮ್ಮುಖದಲ್ಲಿ ತೋರಿಕೊಂಡು, ನಮ್ಮ ದಿಕ್ಕು ತಪ್ಪಿಸುವುದು ಇವರ ಉದ್ದೇಶ? ವೇಷ ಎನ್ನುವುದರಲ್ಲೇ ಗೊತ್ತಾಗುತ್ತಿದೆ, ಇದು ಕೇವಲ ನಟನೆ – ಎಂದು. ಆದರೂ ಇವರು ಗಾಂಧಿಯನ್ನು ಬಳಸಿಕೊಳ್ಳುತ್ತಿದ್ದಾರೆ, ಹಾಗೆ ಬಳಸಿಕೊಳ್ಳಲು ನಾವು ಇನ್ನೂ ಏಕಾದರೂ ಅವಕಾಶ ಕೊಡುತ್ತಿದ್ದೇವೆ?

ಭಕ್ತಿಪಂಥದಲ್ಲಿ ಒಂದು ನಂಬಿಕೆಯುಂಟು. ನೀವು ಏನೇ ತಪ್ಪು ಮಾಡಿ, ದೇವರ ನಾಮಸ್ಮರಣೆ ಮಾಡಿದ ಕೂಡಲೇ ಪಾಪಗಳೆಲ್ಲವೂ ಮಾಯವಾಗಿಬಿಡುತ್ತವೆ ಎನ್ನುವ ಅತಿರೇಕದ ನಂಬುಗೆ. ಇದಕ್ಕೆ ಮಾದರಿಯಾಗಿರುವ ಒಂದು ಪದ್ಯವನ್ನು ಡಿವಿಜಿ ಅವರು ಒಂದೆಡೆ ಉಲ್ಲೇಖಿಸಿದ್ದಾರೆ:

ವನೇ ಚರಾಮೋ ವಸುಚಾಹರಾಮಃ ।

ನದೀಂ ತರಾಮೋ ನ ಭಯಂ ಸ್ಮರಾಮಃ ।।

ಇತೀರಯಂತೋಪಿ ವನೇ ಕಿರಾತಃ ।

ಮುಕ್ತಿಂ ಗತಾ ರಾಮಪದಾನುಷಂಗಾತ್‌ ।।

ಇದರ ತಾತ್ಪರ್ಯ

ಕಾಡಿನಲ್ಲಿ ಬೇಡರು ಹೀಗೆ ಹೇಳಿಕೊಂಡು ತಿರುಗಾಡುತ್ತಿದ್ದರಂತೆ: ’ಅಡವಿಯಲ್ಲಿ (ಚರಾಮಃ) ತಿರುಗಾಡುತ್ತಿರೋಣ; ಸಿಕ್ಕಿದ ಪ್ರಯಾಣಿಕರ ಒಡವೆ ವಸ್ತ್ರಗಳನ್ನು (ಅಹರಾಮಃ) ಅಪಹರಿಸೋಣ; ಆಮೇಲೆ ನದಿಯನ್ನು (ತರಾಮಃ) ದಾಟಿಬಿಡೋಣ. ಆಗ ನಮಗೆ ಭಯದ ಚಿಂತೆ ಬೇಕಿಲ್ಲ (ನಸ್ಯರಾಮಃ)’. ಹೀಗೆಂದು ಹೇಳುತ್ತಾ ನಡೆದಾಗ ‘ರಾಮ ರಾಮ’ ಎಂಬ ಪದ (ರಾಮಪಾದ) ಅಂಟಿಕೊಂಡಿದ ಕಾರಣದಿಂದ ಅವರಿಗೆ ಮುಕ್ತಿ ದೊರೆಯಿತು.

ಕಾಡಿನ ಆ ದರೋಡೆಕೋರರಿಗೂ ನಾಡಿನ ರಾಜಕಾರಣಿಗಳಿಗೂ ಸಾಮ್ಯ ಇರುವುದು ಸ್ಪಷ್ಟ; ಅವರಿಗೆ ರಾಮನಾಮ ಒದಗಿಬಂತು, ಇವರಿಗೆ ಗಾಂಧೀನಾಮ ಒದಗಿಬಂದಿದೆ. ಪ್ರಜೆಗಳ ಹಣ–ಒಡವೆಗಳನ್ನು ಅಪಹರಿಸುವುದು ಇಬ್ಬರಿಗೂ ಸಮಾನಧರ್ಮ!

ಗಾಂಧಿಯವರ ಹೆಸರನ್ನು ಹೇಳಿಕೊಂಡು, ನಾವು ಏನು ಮಾಡಿದರೂ ಸಮಾಜ ಒಪ್ಪುತ್ತದೆ ಎಂದು ರಾಜಕಾರಣಿಗಳು ನಂಬಿದಂತಿದೆ. ಹೀಗಾಗಿ ನಮ್ಮನ್ನು ಘೋಷಣೆಗಳ ಮೂಲಕವೇ ಭ್ರಾಂತಗೊಳಿಸಲು ಅವರು ತೊಡಗಿದ್ದಾರೆ. ನಾವು ಭ್ರಾಂತಿಗೆ ಒಳಗಾಗುತ್ತಿರುವುದೂ ದಿಟವೇ.

ಹಾಗಾದರೆ ಈ ಮೋಹದ ಬಲೆಯಿಂದ ನಮಗೆ ಮುಕ್ತಿ ಎಂತು?

ಡಿವಿಜಿ ಅವರು ಆ ಲೇಖನದಲ್ಲಿಯೇ ಇದಕ್ಕೊಂದು ದಾರಿಯನ್ನು ಕಾಣಿಸುತ್ತಾರೆ. ಸ್ವತಂತ್ರ ವಿಚಾರಶಕ್ತಿಯೇ ನಮ್ಮನ್ನು ಇಂಥ ಅತಿರೇಕಗಳಿಂದ ಕಾಪಾಡಲ್ಲದು ಎಂಬ ವಿಶ್ವಾಸವನ್ನು ನೀಡಿದ್ದಾರೆ. ಅವರು ಕೊಡುವ ಉದಾಹರಣೆ ಮನನೀಯ; ನಮ್ಮ ಪರಂಪರೆಯಲ್ಲಿ ಅಂತರ್ಗತವಾಗಿರುವ ವಿಚಾರಶಕ್ತಿಯ ಬಲವನ್ನು ಈ ಮಾತು ಎತ್ತಿತೋರಿಸುತ್ತದೆ:

ಆರ್ಷಂ ಧರ್ಮೋಪದೇಶಂ ಚ ವೇದಶಾಸ್ತ್ರಾsವಿರೋಧಿನಾ ।

ಯಸ್ತರ್ಕೇಣಾನುಸಂಧತ್ತೇ ಸಧರ್ಮಂ ವೇದ ನೇತರಃ ।।

(ಯಾವ ಋಷ್ಯುಪದೇಶವು ಸುತರ್ಕದ ಜಲ್ಲಡಿಯಿಂದ ಶೋಧಿಸಿದ ಬಳಿಕ ಗಟ್ಟಿ ಕಾಳಾಗಿ ನಿಲ್ಲುತ್ತದೆಯೋ ಅದೇ ಧರ್ಮ; ಮಿಕ್ಕದ್ದಲ್ಲ.)

ಇದರ ಮುಂದುವರಿಕೆಯಾಗಿಯೂ ಡಿವಿಜಿ ಅವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸಬಹುದು:

’ವೇದವಿಚಾರದಲ್ಲಿಯೇ ತರ್ಕಾವಶ್ಯಕತೆ ಹೀಗಿರುವಾಗ, ಮನುಷ್ಯಾಭಿಪ್ರಾಯಗಳ ವಿಷಯದಲ್ಲಿ ಹೇಳತಕ್ಕದ್ದೇನು? ನಮ್ಮ ಕಾಲದಲ್ಲಿ ವಾರ್ತಾಮತಪ್ರಚಾರಗಳ ಸೌಕರ್ಯಗಳು ಜಗತ್ತಿನಲ್ಲಿ ಹಿಂದೆ ಎಂದೂ ಇಲ್ಲದಿದ್ದಷ್ಟು ಅತಿಶಯವಾಗಿವೆ. ಅಚ್ಚಿನ ಯಂತ್ರಗಳು ಹೇರಳವಾಗಿವೆ; ಕಾಗದ ಅಗ್ಗವಾಗಿದೆ; ಟೆಲಿಪೋನ್‌ ರೇಡಿಯೋಗಳು ಬೆಳೆಯುತ್ತಿವೆ, ಸಭೆ ಸೇರುವುದು ಸುಲಭವಾಗಿದೆ; ಪತ್ರಿಕೆಗಳೂ ವೇದಿಕೆಗಳೂ ವಿಷಯಗಳನ್ನು ಚರ್ಚಿಸುವೆವೆಂದು ಹೊರಟು ಬುದ್ಧಿಯನ್ನೆಚ್ಚರಿಸುವುದಕ್ಕಿಂತಲೂ ಗದ್ದಲವನ್ನೆಬ್ಬಿಸುವುದು ಹೆಚ್ಚಾಗಿದೆ. ರಾಮಕೀರ್ತನೆ ಕಿವಿಗೆ ಇಂಪು, ರಾಮನ ವನವಾಸ ಊಹೆಗೂ ಸಹ್ಯವಲ್ಲ. ಆದದ್ದರಿಂದ ಜನವು ಸುಲಭವಾದ ರಾಮಭಜನೆಗೆ ಹೋಗುತ್ತದೆ; ರಾಮನ ಪ್ರತಿಜ್ಞೆಯನ್ನು ಜ್ಞಾಪಕಕ್ಕೂ ತಂದುಕೊಳ್ಳುವುದಿಲ್ಲ. ಯಾವುದು ಸುಲಭವೋ ಅದನ್ನು ಗ್ರಹಿಸುವುದು ಸ್ವಾಭಾವಿಕ. ಪತ್ರಿಕೆಗಳೂ ಜನನಾಯಕರೂ ತಮ್ಮ ತಮ್ಮ ಬುದ್ಧಿಯ ತಯಾರಿಕೆಗಳನ್ನು ತರುಣೋಪಾಯದ ಗುಳಿಗೆಗಳನ್ನಾಗಿ ಮಾಡಿ ಗುನ್ನಾಪಟ್ಟೆ ಹಚ್ಚಿ, ಆಕರ್ಷಕವಾದ ಡಬ್ಬಿಗಳಲ್ಲಿ ಹಂಚುತ್ತಾರೆ. ಈ ಗುಳಿಗೆಗಳನ್ನು ನುಂಗುವುದು ಜನಕ್ಕೆ ಸುಲಭ. ಅವುಗಳಲ್ಲಿ ಏನಿದೆ ಎಂದು ಪರೀಕ್ಷಿಸುವುದು ಪ್ರಯಾಸ. ಯಾವುದು ಸುಲಭವೋ ಅದನ್ನು ಜನ ಮಾಡುತ್ತದೆ. ಹೀಗೆ ಲೋಕದಲ್ಲಿ ಪಾಷಂಡ ಸಿದ್ಧಾಂತಗಳೂ ಅತಿವಾದಗಳೂ ಬೆಳೆದಿವೆ. ಇದರಿಂದಲೇ ನಾನಾ ಜನವರ್ಗಗಳಲ್ಲಿ ಪರಸ್ಪರ ಅಸೂಯೆ; ದೇಶ ದೇಶಾಂತರಗಳಿಗೆ ದ್ವೇಷ; ಇದರಿಂದ ಜಾತಿಮಾತ್ಸರ್ಯ; ಜನ–ಜನಾಂಗಯುದ್ಧ.’

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ವಿಚಾರಶಕ್ತಿ ತುಂಬ ಮುಖ್ಯ. ಆದರೆ ಬಹುಪಾಲು ಸಂದರ್ಭಗಳಲ್ಲಿ ನಮ್ಮ ವಿಚಾರಶಕ್ತಿಯು ವಿರೋಧಿಗಳ ಟೀಕೆಗಳಿಗಷ್ಟೆ ವಿನಿಯೋಗವಾಗುತ್ತಿರುತ್ತದೆ. ಸಮಾಜದ ಏಳಿಗೆಯನ್ನೇ ಪ್ರಧಾನ ಲಕ್ಷ್ಯವನ್ನಾಗಿಸಿಕೊಂಡ ರಾಷ್ಟ್ರಕನ ವಿಚಾರಶಕ್ತಿ ಎರಡು ನೆಲೆಗಳಲ್ಲಿ ಕೆಲಸ ಮಾಡುತ್ತದೆ; ಒಂದು: ಅದು ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುತ್ತದೆ; ಮತ್ತೊಂದು: ಅನ್ಯರನ್ನೂ ಪರೀಕ್ಷೆಗೆ ಒಳಪಡಿಸುತ್ತದೆ. ಇಂದು ನಮಗೆ ಬೇಕಾಗಿರುವುದು ಇಂಥ ವಿಚಾರಶಕ್ತಿ. ಯಾರೂ ಕೂಡ ಈ ವಿಚಾರಶಕ್ತಿಯ ವ್ಯಾಪ್ತಿಯಿಂದ ಹೊರತಾಗಿರತಕ್ಕದ್ದಲ್ಲ ಎನ್ನುವುದನ್ನೂ ನೆನಪಿನಲ್ಲಿಡಬೇಕು. ಪ್ರಜೆಗಳಲ್ಲಿ ಜಾಗರಿತವಾಗುವ ವಿಚಾರಶಕ್ತಿಯೇ ಹದೆಗೆಟ್ಟಿರುವ ರಾಜಕೀಯ ಪರಿಸ್ಥಿತಿಯನ್ನು ಸರಿದಾರಿಗೆ ತರಬಲ್ಲ ರಾಮಬಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕಾರಣದಲ್ಲಿ ತಲೆದೋರಿರುವ ಹೀನಪರಿಸ್ಥಿತಿಗೆ ಯಾವುದೋ ಒಂದು ಪಕ್ಷ ಕಾರಣ ಎಂದು ಹೇಳುವಂತಿಲ್ಲ; ಎಲ್ಲರೂ ಇದರಲ್ಲಿ ಪಾಲುದಾರರೇ.

ಗಾಂಧಿಯವರು ಈ ವಿಚಾರಶಕ್ತಿಗೆ ವಿಮುಖರಾಗಿದ್ದವರಲ್ಲ. ಅವರು ಧರ್ಮದ ಹಿರಿಮೆಯನ್ನು ಕಂಡುಕೊಂಡಿದ್ದವರೇ; ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಟೀಕಿಸಿದರು. ಅವರು ಎಲ್ಲ ಮತಗಳನ್ನೂ ಗೌರವಿಸಿದರು; ಆದರೆ ಆಮಿಷಗಳನ್ನು ಒಡ್ಡಿ ನಡೆಸುವ ಮತಾಂತರಗಳನ್ನು ವಿರೋಧಿಸಿದರು. ಅಹಿಂಸೆಯನ್ನು ಬಲವಾಗಿ ಪ್ರತಿಪಾದಿಸಿದರು, ನಿಜ; ಆದರೆ ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದೂ ಪ್ರತಿಪಾದಿಸಿದರು. ಹೀಗೆ ಗಾಂಧಿಯವರಲ್ಲಿ ಆಚಾರ ಮತ್ತು ವಿಚಾರ – ಎರಡರ ನಡಿಗೆಯೂ ಇತ್ತು. ಇದು ನಮಗೆ ಇಂದು ಬೇಕಾಗಿರುವ ಗಾಂಧೀತತ್ತ್ವಗಳಲ್ಲೊಂದು.

ಗಾಂಧಿಯವರನ್ನು ನಾವಿಂದು ಸಾಮಾಜಿಕ ಜೀವನದ ಉತ್ಸವಮೂರ್ತಿಯನ್ನಾಗಿಸಿ ಅವರನ್ನು ನಿತ್ಯಾನುಸಂಧಾನದಿಂದ ದೂರಮಾಡಿದ್ದೇವೆ. ನಮ್ಮ ಹೃದಯಮಂದಿರದಲ್ಲಿ ನಿತ್ಯಕಲ್ಯಾಣದ ಮೂಲಮೂರ್ತಿಯಾಗಿ ಅವರು ನಮಗೆ ಒದಗಬೇಕಿತ್ತು. ಅವರು ಎತ್ತಿಹಿಡಿದ ಸತ್ಯ, ಅಹಿಂಸೆ, ಸರಳತೆ, ಸೌಹಾರ್ದ – ಇವು ವ್ಯಕ್ತಿಯ ಅಂತರಂಗದ ಸಾಧನಚತುಷ್ಟಯ. ವ್ಯಷ್ಟಿಯ ಸಾಧನೆಯಲ್ಲಿಯೇ ಸಮಷ್ಟಿಯ ಹಿತವೂ ಅಡಗಿರುತ್ತದೆ ಎಂಬ ಸೂತ್ರವೇ ಅವರ ಆಚಾರಸಂಹಿತೆಯ ತತ್ತ್ವಮೀಮಾಂಸೆ. ಆದರೆ ಇಂದು ಸ್ವಾತ್ಮಶಿಕ್ಷಣಕ್ಕೆ ಒತ್ತುನೀಡುವಂಥ ಶಿಕ್ಷಣವ್ಯವಸ್ಥೆಯನ್ನಾಗಲೀ ಸಾಮಾಜಿಕಸಂದರ್ಭವನ್ನಾಗಲೀ ನಾವು ರೂಪಿಸಲು ವಿಫಲವಾಗಿರುವುದು ಸುಳ್ಳಲ್ಲ. ಸಮಾಜವನ್ನೂ ವ್ಯಕ್ತಿಯನ್ನೂ ಬೆಸೆಯಲು ಒದಗುವ ಆತ್ಮಶಿಕ್ಷಣದ ಸೇತುವೆಯಾಗಿಯೇ ಗಾಂಧಿಯವರು ನಮಗಿಂದು ದಕ್ಕಬೇಕಿದೆ.

ಹೀಗೆಂದು ಗಾಂಧಿಯವರು ಯಾವೊಂದು ಲೋಪ–ದೋಷಗಳೇ ಇಲ್ಲದ ಪರಿಪೂರ್ಣರು ಎಂದೇನಲ್ಲ; ಇಂಥ ಪರಿಪೂರ್ಣತೆಯನ್ನು ಅವರೇ ನಿರಾಕರಿಸಿಕೊಂಡಿದ್ದಾರೆ. ಇಲ್ಲಿರುವ ಪ್ರಶ್ನೆ ಅದಲ್ಲ; ಗಾಂಧಿ ನಮಗೆ ಹೇಗೆ ದಕ್ಕುತ್ತಾರೆ ಎಂಬುದು. ಗಾಂಧಿ ಎನ್ನುವುದು ನಮ್ಮ ಕಾಲದ ಒಂದು ದೊಡ್ಡ ಮಿಥ್ ಆಗಿ ರೂಪಾಂತರಗೊಂಡಿರುವುದಂತೂ ದಿಟ‌. ಇಲ್ಲಿ ಮಿಥ್‌ ಎಂದರೆ ಕಟ್ಟುಕತೆ ಎಂದಲ್ಲ; ಜನಸಮುದಾಯ ತನ್ನ ಎಲ್ಲ ಬಯಕೆಗಳ ಬಾಯಾರಿಕೆಗೆಕಂಡುಕೊಂಡಿರುವ ಜೀವಸತ್ತ್ವದ ಊಟೆ ಎಂದರ್ಥ. ಎಂದರೆ ಆ ಸಮುದಾಯಕ್ಕೆ ಬೇಕಾದ ಎಲ್ಲ ವಿಧದ ಚೈತನ್ಯವನ್ನೂ ನೀಡಬಲ್ಲ ಜೀವಂತಪ್ರತಿಮೆ; ಭಾವ–ಬುದ್ಧಿಗಳ ಕಾಮಧೇನು–ಕಲ್ಪವೃಕ್ಷಗಳು ಈ ಮಿಥ್‌ಗಳು. ಆಧುನಿಕ ಭಾರತವಂತೂ ಗಾಂಧಿಯವರನ್ನು ಹೀಗೆ ಮಿಥ್‌ ಎಂದು ಒಪ್ಪಿಕೊಂಡಾಗಿದೆ. ಇದರಿಂದ ನಮಗೆ ದಕ್ಕಬಹುದಾದ ಬಲ ಮತ್ತು ಬೆಳಕು ನಮ್ಮ ಅಂತರಂಗದ ಪ್ರಾಮಾಣಿಕತೆಯನ್ನೇ ಆಶ್ರಯಸಿವೆ.

ಆನಂದ ಕುಮಾರಸ್ವಾಮಿ ಅವರು ಗಾಂಧಿಯವರ ಭೂಮವ್ಯಕ್ತಿತ್ವವನ್ನು ಕುರಿತು ಹೇಳಿರುವ ಈ ಮಾತುಗಳು ಮನನೀಯ:

‘ಗಾಂಧಿ ಅವರ ಎಲ್ಲ ದೋಷಗಳ ನಡುವೆಯೂ ಅವರು ನಮ್ಮ ಕಾಲದ ಯುಗಪುರುಷನೇ ಹೌದು. ಅವರದ್ದು ಭೂಮವ್ಯಕ್ತಿತ್ವ; ಅವರು ಹಿಂಸೆಯ ಸಮಯದಲ್ಲಿ ಅಹಿಂಸೆಯನ್ನು ಕುರಿತು, ಮಾನವತೆಯ ಅಧಃಪತನ ಹಾಗೂ ವಿನಾಶದ ಸಮಯದಲ್ಲಿ ಶಾಂತಿ ಮತ್ತು ಸಹೋದರತೆಯನ್ನು ಕುರಿತು ಧೀರತೆಯಿಂದ ಮಾತನಾಡಿದರು. ಮಾನವನ ಆಂತರಿಕಗುಣದ ಔನ್ನತ್ಯವನ್ನು ಸಾರಿದ ಅವರ ಅನುಸರಣೆಯು ಮಂದಾಕ್ಷಿಯುಳ್ಳ ನಮ್ಮಂಥವರಿಂದ ನಿರೀಕ್ಷಿಸುವುದು ಸಾಹಸವೇ ಸರಿ. ಏಕೆಂದರೆ ಮಾನವಕುಲವು ನಮ್ರತೆಯನ್ನು ದಕ್ಕಿಸಿಕೊಳ್ಳದ ಹೊರತು ಇದು ಅಸಾಧ್ಯ. ಹೀಗೆಂದು, ನಮಗೆ ಒಂದು ಮಾರ್ಗವನ್ನು ತೋರುತ್ತಿರುವ ಅವರನ್ನು ಕೇವಲ ಸ್ತುತಿಸುವುದಷ್ಟು ಮಾತ್ರವೇ ಅಲ್ಲ, ಆರಾಧಿಸುವುದರಿಂದಲೂ ದೂರ ಉಳಿಯಲು ಸಾಧ್ಯವೇ ಇಲ್ಲವೆನ್ನಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT