ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಪ‍ಂಕ್ತಿಭೇದದ ನಾಡಲ್ಲಿ ಹಿಜಾಬ್‌ಗೆ ವಿರೋಧ?

Last Updated 15 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿ. ಈದ್ಗಾ ಮೈದಾನ, ಬಾಬಾಬುಡನ್‌ಗಿರಿ, ಗೋಹತ್ಯೆ, ಮತಾಂತರದ ವಿಷಯಗಳನ್ನು ಚರ್ಚೆಯ ಕೇಂದ್ರಕ್ಕೆ ತಂದು, ಚರ್ಚ್‌ ಮೇಲೆ ದಾಳಿ, ಪಬ್‌ಗಳ ಮೇಲೆ ದಾಳಿಗಳನ್ನು ನಡೆಸಿ, ಸಮುದಾಯಗಳ ಮಧ್ಯೆ ಇದ್ದ ನಂಬಿಕೆ, ಸಾಮರಸ್ಯ ಛಿದ್ರಗೊಳಿಸುವ ಕೆಲಸ ದಶಕಗಳಿಂದ ನಡೆಯುತ್ತಾ ಬಂದಿದೆ. ವಯಸ್ಕರ ಮಧ್ಯೆ ವಿಷಬೀಜ ಬಿತ್ತಿದ ಬಳಿಕ ಮುಂದಿನ ಹೆಜ್ಜೆಯನ್ನು ಕೋಮುಶಕ್ತಿಗಳು ಇಟ್ಟಿವೆ. ಮಕ್ಕಳನ್ನು ದೇವರೆಂದು ನಂಬಿದ ಸಂಸ್ಕೃತಿ ನಮ್ಮದು. ಜಾತಿ– ಭೇದ– ಧರ್ಮದ ಅಮಲಿಲ್ಲದೇ ಹಂಚಿ ತಿನ್ನುವ, ಕೂಡಿ ಕಲಿಯುವ ವಯಸ್ಸಿನ ಮಕ್ಕಳಲ್ಲಿ ಪರಸ್ಪರರು ಕಚ್ಚಾಡುವುದಕ್ಕೆ ಹುಟ್ಟಿದವರು ಎಂಬ ಭಾವ ಬೆಳೆಸುವುದು ಅಪಾಯಕಾರಿ.

ಸಮುದಾಯಗಳಲ್ಲಿ ತೆಳುವಾಗಿ ಇದ್ದ ಅಭದ್ರತೆಯ ಭಾವನೆಯನ್ನು ಬಿಗಿಗೊಳಿಸಿ, ‘ನಿಮ್ಮ ರಕ್ಷಣೆಗೆ ನಾವು ಮಾತ್ರ ಇರುವುದು, ನಾವು ಹೇಳಿದಂತೆ ನಡೆಯಿರಿ’ ಎಂದು ಪ್ರತಿಪಾದಿಸುವ ಆರ್‌ಎಸ್‌ಎಸ್‌ ಮತ್ತು ಪಿಎಫ್ಐ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ತಾರತಮ್ಯ– ಓಲೈಕೆ ರಾಜಕಾರಣದಿಂದ ಅನ್ಯಾಯವಾಗಿದೆ, ಭಯದಲ್ಲಿ ನರಳುವಂತೆ ಮಾಡಲಾಗಿದೆ ಎಂದು ಎರಡೂ ಸಮುದಾಯದವರಲ್ಲಿ ಆತಂಕ ಸೃಷ್ಟಿಸಿ, ಅದನ್ನು ತಮ್ಮ ರಾಜಕೀಯ ಬಂಡವಾಳ ಮಾಡಿಕೊಳ್ಳುವುದು ಉಭಯ ಬಣಗಳ ದುರುದ್ದೇಶ. ಮುಸ್ಲಿಮರಲ್ಲಿ ಅಭದ್ರತೆ, ಭಯ ತುಂಬಿ, ಅದನ್ನು ತಮ್ಮ ಸಂಘಟನೆಯ ಬಲಕ್ಕೆ ಅಡಿಪಾಯ ಹಾಕಿಕೊಳ್ಳುವ ಕೆಲಸವನ್ನು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಪಿಎಫ್‌ಐ ಮಾಡುತ್ತಾ ಬಂದಿದೆ.

ಸದ್ಯಕ್ಕೆ ಮೂಲಭೂತವಾದಿಗಳಂತೆ ತೋರುತ್ತಿರುವ ಈ ಸಂಘಟನೆಯ ಕಾರ್ಯಕರ್ತರು ತಮ್ಮ ಶಕ್ತಿಯನ್ನು ಬಳಸಿ ಕೊಳ್ಳಲು ಹಿಂಸಾಮಾರ್ಗವನ್ನು ಹಿಡಿದಿದ್ದೂ ಇದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಇವರ ಮೇಲಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆದು, ರಾಜಕಾರಣ ಮಾಡಿದ್ದೂ ಆಗಿದೆ. ಇದು ಪಿಎಫ್‌ಐಗೆ ಬಲ ತಂದುಕೊಟ್ಟಿ ತಲ್ಲದೇ ಹಿಂಸಾಮಾರ್ಗಕ್ಕೆ ಪ್ರೇರಣೆಯನ್ನೂ ನೀಡಿತು. ಬಿಜೆಪಿ ಅಧಿಕಾರಕ್ಕೆ ಬಂದಾಗ, ಸಂಘ ಪರಿವಾರದ ವಿವಿಧ ಸಂಘಟನೆಗಳು, ವ್ಯಕ್ತಿಗಳ ಮೇಲಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆದು, ಕೆಡುಕು ಬಯಸುವವರಿಗೆ ಅಭಯ ವನ್ನೂ ತೋರಿತು. ಹೀಗೆ ಬೆಳೆದ ಸಂಘಟನೆಗಳು, ಕಾರ್ಯ ಕರ್ತರು ಈಗ ಯಾರ ಮಾತನ್ನೂ ಕೇಳದಷ್ಟು ಮಟ್ಟಕ್ಕೆ ಬೆಳೆದು, ಭಸ್ಮಾಸುರರಾಗಿ ನಿಂತಿದ್ದಾರೆ.

ಹಿಜಾಬ್‌ ವಿರೋಧದ ವಿಷಯ ವಿಶ್ವದಲ್ಲಿ ದೇಶದ ಮಾನ ಹರಾಜು ಹಾಕಿದೆ. ಪರಿಶಿಷ್ಟ ಸಮುದಾಯದ ಎರಡು ವರ್ಷದ ಮಗು ಆಂಜನೇಯನ ಗುಡಿ ಪ್ರವೇಶಿಸಿ ತೆಂಬ ಕಾರಣಕ್ಕೆ ಪೋಷಕರಿಗೆ ದಂಡ ಹಾಕಿದ ಘಟನೆ ಕುಷ್ಟಗಿಯಲ್ಲಿ ನಡೆದಿತ್ತು. ಅಸ್ಪೃಶ್ಯತೆಯ ಹೀನ ಆಚರಣೆ, ಅಮಾನವೀಯ ಪಂಕ್ತಿಭೇದದ ಪದ್ಧತಿ ಇರುವ ನಾಡಿನಲ್ಲಿ ಹಿಜಾಬ್‌ಗೆ ವಿರೋಧವೆಂಬುದೇ ಅಪಹಾಸ್ಯ. ಉಡುಗೆ–ತೊಡುಗೆ, ಆಚಾರ–ವಿಚಾರಗಳು ಅದನ್ನು ಪಾಲಿಸುವವರ ನಂಬಿಕೆಗೆ ಬಿಟ್ಟ ವಿಚಾರವಾಗಬೇಕು. ಸಂಬಂಧಪಡದವರು ಮೂಗು ತೂರಿಸಿದರೆ, ದೇಶದ ಮಾನ ಹೀಗೆ ಹರಾಜಾಗುತ್ತಲೇ ಇರುತ್ತದೆ. ಹಿಜಾಬ್ ಹಾಕಬೇಕೇ ಬೇಡವೇ ಎಂಬುದು ಆಯಾ ವಿದ್ಯಾರ್ಥಿನಿಯ ಅಥವಾ ಮಹಿಳೆಯ ಆಯ್ಕೆಗೆ ಬಿಟ್ಟ ವಿಷಯ.

ಹಿಜಾಬ್ ತೆಗೆಸದಿದ್ದರೆ ನಾವು ಕೇಸರಿ ಶಾಲು, ಪೇಟ ಹಾಕುತ್ತೇವೆ ಎಂದು ವಿದ್ಯಾರ್ಥಿಗಳು ಮೊಂಡು ಹಿಡಿಯುವುದು ರಾಜಕೀಯ. ಅಷ್ಟಕ್ಕೂ ತಲೆ ಮೇಲೆ ಹಿಜಾಬ್ ಹಾಕಿಕೊಂಡು ಬಂದರೆ ಶಿಕ್ಷಕರು ಅಥವಾ ಸಹ ಪಾಠಿಗಳಿಗೆ ಆಗುವ ತೊಂದರೆಯಾದರೂ ಏನು? ತೀರಾ ಖಾಸಗಿಯಾದ ವಿಷಯವನ್ನು ಬೀದಿಗೆ ತಂದು ನಿಲ್ಲಿಸಿ ರಾಜಕಾರಣ ಮಾಡಲು ಹೊರಟಿದ್ದು ಅಕ್ಷಮ್ಯ.

ಶಾಲೆಗಳಲ್ಲಿ ಸಮವಸ್ತ್ರಕ್ಕಷ್ಟೇ ಅವಕಾಶ, ಹಿಜಾಬ್‌ಗೆ ಅವಕಾಶ ಇಲ್ಲ ಎನ್ನುವವರಿದ್ದಾರೆ. ಅಯ್ಯಪ್ಪಸ್ವಾಮಿ ಮಾಲೆ ಹಾಕಿದವರು ಕಪ್ಪು ಬಣ್ಣದ ಬಟ್ಟೆ ತೊಟ್ಟು ಬರುವುದು ಸಾಮಾನ್ಯ. ಬಯಲುಸೀಮೆಯ ಜಿಲ್ಲೆಗಳಲ್ಲಿ ಹೆಣ್ಣು–ಗಂಡು ಭೇದವಿಲ್ಲದೇ ಹಣೆಗೆ ವಿಭೂತಿ ಪಟ್ಟೆ ಹಾಕಿಕೊಂಡು ಬರುವುದು ಉಂಟು. ಅದಕ್ಕೆ ಯಾವುದೇ ತಕರಾರು ಇರಲಿಲ್ಲ. ವಿಚಿತ್ರವೆಂದರೆ, ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಧರ್ಮದ ಕುರುಹು ಇರಬಾರದು ಎಂಬ ವಾದ ಮೊದಲಿನಿಂದಲೂ ಇದೆ. ಪ್ರತೀ ಶುಕ್ರ ವಾರ ಶಾಲೆಗಳಲ್ಲಿ ಸರಸ್ವತಿ ಪೂಜೆ, ವರ್ಷಕ್ಕೊಮ್ಮೆ ಗಣೇಶೋತ್ಸವ ಮಾಡುತ್ತಾರೆ. ಸರಸ್ವತಿಯಿಂದ ದೂರ ಇರುವ ಸಚಿವರು ತಮ್ಮ ಕಚೇರಿಯಲ್ಲಿ ಶುಕ್ರವಾರ ‘ಲಕ್ಷ್ಮಿ’ ಪೂಜೆ ಮಾಡಿಸುತ್ತಾರೆ.

ಆಯುಧಪೂಜೆಯ ದಿನ ಪೊಲೀಸ್ ಠಾಣೆಗಳಲ್ಲಿ, ಬಸ್‌ಗಳಲ್ಲಿ ಅದ್ಧೂರಿ ಪೂಜೆ ಮಾಡಲಾಗುತ್ತದೆ. ಇವೆಲ್ಲ ಯಾರು ಹೇರಿದ ಸಂಸ್ಕೃತಿ? ಅಸ್ಪೃಶ್ಯತೆಯ ಕಾರಣಕ್ಕೆ ಪೂಜೆಯಿಂದ ದೂರವೇ ಉಳಿದಿದ್ದ ಪರಿಶಿಷ್ಟ ಜಾತಿಯವರು ಎಂದಾದರೂ ಇದನ್ನು ವಿರೋಧಿಸಿದ್ದುಂಟಾ? ಭಿನ್ನ ನಂಬಿಕೆಯುಳ್ಳ ಮುಸ್ಲಿಂ, ಕ್ರೈಸ್ತರು ಎಂದಾದರೂ ತಕರಾರು ತೆಗೆದಿದ್ದಾರೆಯೇ? ಮಕ್ಕಳು ಹಿಜಾಬ್ ಧರಿಸಬಾರದು ಎಂದು ಶುರುವಾದ ವಿವಾದವೀಗ, ಮಕ್ಕಳನ್ನು ಶಾಲೆ ಬಳಿ ಬಿಡಲು ಬರುವ ಪೋಷಕರು ಸಹ ಬುರ್ಖಾ ಧರಿಸಬಾರದು ಎಂಬಲ್ಲಿಗೆ ಬಂದು ನಿಂತಿದೆ.

ಸಂವಿಧಾನದ ಆಶಯದಂತೆ ನಡೆಯುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದ ಸಚಿವರು ಹಿಜಾಬ್‌ ವಿಷಯದಲ್ಲಿ ನಡೆದುಕೊಂಡ ರೀತಿ ಅವರ ಅಪರಾಧಿಕ ಮನೋಭಾವವನ್ನು ತೋರಿಸುತ್ತದೆ. ಮಕ್ಕಳಲ್ಲಿ ಭ್ರಾತೃತ್ವ, ಸಾಮರಸ್ಯವನ್ನು ಮೂಡಿಸಬೇಕಾದ ಶಿಕ್ಷಣ ಸಚಿವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರು, ಕನ್ನಡ ಮತ್ತು ಸಂಸ್ಕೃತಿಯನ್ನು ಕಾಯಬೇಕಾದ ಕನ್ನಡ ಮತ್ತು ಸಂಸ್ಕೃತಿ ಸಚಿವರು ನಡೆದುಕೊಂಡ ರೀತಿ ಅವರು ಹೊಂದಿರುವ ಹುದ್ದೆಗೆ ತಕ್ಕ ನಡವಳಿಕೆಯಲ್ಲ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಸಮಸ್ಯೆ ಉದ್ಭವಿಸಿದಾಗ, ಅದನ್ನು ಸೌಹಾರ್ದಯುತವಾಗಿ ಶಮನ ಮಾಡುವ ಸಾಂವಿಧಾನಿಕ ಕರ್ತವ್ಯವನ್ನು ಸಚಿವರು ನಿರ್ವಹಿಸಬೇಕಿತ್ತು. ಜನರಿಗೆ ನೆಮ್ಮದಿಯ ಜೀವನ ಕೊಡಬೇಕಾದ ಸಚಿವರು ದುರುಳರಂತೆ ನಡೆದುಕೊಳ್ಳಲಾರಂಭಿಸಿದರೆ ನಾಡು ಮರುಭೂಮಿಯಾಗುತ್ತದೆ.

ಬಿಜೆಪಿಯೊಳಗೆ ಇರುವ ಆಂತರಿಕ ಕಲಹವೂ ಇದರ ಹಿಂದೆ ಕೆಲಸ ಮಾಡಿದಂತೆ ಮೇಲ್ನೋಟಕ್ಕೆ ತೋರುತ್ತದೆ. ಆರು ತಿಂಗಳ ಹಿಂದೆ ಯಡಿಯೂರಪ್ಪ ಅವರನ್ನು ಇಳಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಲಾಯಿತು. ಬೊಮ್ಮಾಯಿ ದೆಹಲಿಗೆ ಹೋದ ಅವಧಿಯಲ್ಲೇ ವಿಚ್ಛಿದ್ರಕಾರಕ ಶಕ್ತಿಗಳು ವಿಕಾರ ಮೆರೆದು ದೇಶದ ಮಾನ ಹರಾಜು ಹಾಕಿದ್ದನ್ನು ನೋಡಿದರೆ, ಆಡಳಿತ ವೈಫಲ್ಯವನ್ನು ಬಿಂಬಿಸುವ ಯತ್ನದ ಹಿಂದೆ ಕಾಣದ ಕೈಗಳು ಕೆಲಸ ಮಾಡಿದಂತೆ ತೋರುತ್ತದೆ. ದುಷ್ಟಶಕ್ತಿಗಳನ್ನು ಬೆಳೆಯಗೊಟ್ಟರೆ ಅದು ಸಂವಿಧಾನದ ರೀತಿ ಅಧಿಕಾರ ನಡೆಸುವ ರಾಜಕೀಯ ಪಕ್ಷಗಳಿಗೆ ಕಂಟಕವಾಗಿ ಪರಿಣಮಿಸುತ್ತದೆ. ಬೊಮ್ಮಾಯಿ ಕೂಡ ಇಂತಹ ಸಂದಿಗ್ಧ ಕಾಲದಲ್ಲಿ ತಮ್ಮ ಸಚಿವರಿಗೆ ಕಿವಿ ಹಿಂಡಿ, ಸರಿದಾರಿಯಲ್ಲಿ ನಡೆಯುವಂತೆ ಕಟ್ಟಪ್ಪಣೆ ವಿಧಿಸುವ ಹೊಣೆ ಮರೆತಿದ್ದು ಸರಿಯಲ್ಲ. ಪಿಎಫ್‌ಐ ಅನ್ನು ಬೆಳೆಸಿ ಕಾಂಗ್ರೆಸ್‌ನ ಶೇ 2–3ರಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂಬ ಬಿಜೆಪಿಯ ಲೆಕ್ಕಾ ಚಾರವೂ ಇದರ ಹಿಂದೆ ಇದ್ದಂತಿದೆ.

ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಕೂಗಿದ ಘೋಷಣೆ ಈ ವಿಷಯವನ್ನು ಇಡೀ ವಿಶ್ವಕ್ಕೆ ತಲುಪಿಸಿತು. ಕೇಸರಿ ಶಾಲು ಹೊದ್ದು ಅನಿರೀಕ್ಷಿತವಾಗಿ ಗೂಳಿಗಳಂತೆ ಮುಗಿಬಿದ್ದ ಪಡೆಯನ್ನು ಎದುರಿಸಲು ಆ ಕ್ಷಣದಲ್ಲಿ ಬೀಬಿಗೆ ಕಂಡಿದ್ದು, ಪ್ರತಿಯೊಬ್ಬ ಮನುಷ್ಯನಿಗೂ ಜೀವವೇ ಹೋಗಿಬಿಟ್ಟಿತು ಎಂಬ ಅಸಹಾಯಕ ಸ್ಥಿತಿ ಯೊಳಗೆ ಆಸರೆಯಾಗುವ ದೇವರಷ್ಟೆ. ಹಾಗಾಗಿಯೇ ‘ಅಲ್ಲಾಹು ಅಕ್ಬರ್‌’ ಎಂದು ಕೂಗಿದಳು. ಕಷ್ಟ ಬಂದಾಗ, ‘ರಾಮ ಕೃಷ್ಣ, ಈಶ್ವರ ಕಾಪಾಡಪ್ಪ’ ಎಂದು ಗೋಗರೆ ಯುವ ರೀತಿಯಲ್ಲಿತ್ತಷ್ಟೇ. ಅದು ಬಿಟ್ಟರೆ ಆಕೆ, ‘ರಕ್ಷಣೆಗೆ ಬೊಮ್ಮಾಯಿ, ಜ್ಞಾನೇಂದ್ರ ಬನ್ನಿ’ ಎಂದು ಕೂಗಿ ಕರೆ ಯಲು ಸಾಧ್ಯವಿತ್ತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT