ಅಸಹಾಯ ಶೂರನಂತೆ ಕುರ್ಚಿಯ ಹಕ್ಕು ಪ್ರತಿಪಾದಿಸುತ್ತಿದ್ದ ಡಿ.ಕೆ. ಶಿವಕುಮಾರ್ ಅವರೀಗ ಅಸಹಾಯಕರಂತೆ ಕಾಣಿಸುತ್ತಿದ್ದಾರೆ. ಅವರ ಬತ್ತಳಿಕೆಯಲ್ಲಿ, ಸಿದ್ದರಾಮಯ್ಯ ಅವರ ತಂತ್ರಗಾರಿಕೆಯನ್ನು ಭೇದಿಸಲು ಅಗತ್ಯವಾದ ಅಸ್ತ್ರಗಳ ಕೊರತೆ ಇರುವಂತೆ ಕಾಣಿಸುತ್ತಿದೆ....

‘ಸಿದ್ದರಾಮಯ್ಯನವರು ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ಕೂತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು ಎನ್ನುವಂತಾಗಿದೆ. ಯಾರನ್ನೂ ಬಿಡಿಸಲು ಆಗುವುದಿಲ್ಲ. ಇದು ನಮ್ಮ ರಾಜಕೀಯದ ಕತೆ...’

ಹೀಗಂದವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಅದೂ ‘ಸಹಕಾರ’ ಇಲಾಖೆಯ ಕಾರ್ಯಕ್ರಮದಲ್ಲಿ. ನಗುತ್ತಲೇ ಶಿವಕುಮಾರ್ ಹೀಗೆ ಹೇಳಿದಾಗ, ಸಿದ್ದರಾಮಯ್ಯ ಕೂಡ ನಗುತ್ತಲೇ ಆಲಿಸಿದರು. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದ ‘ಅಧಿಕಾರ ಹಂಚಿಕೆ’ ಆಗುತ್ತದೆ ಎಂದು ನಂಬಿದ್ದ ಶಿವಕುಮಾರ್, ಅದಾಗದೇ ಇದ್ದಾಗ, ‘ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕಾಗುತ್ತದೆ; ನಾನು ಸ್ಟ್ರೀಟ್ ಫೈಟರ್’ ಎಂದು ಹೇಳಿದ್ದೂ ಉಂಟು. ಸರ್ಕಾರ ಇದೇ ಮೇ 20ಕ್ಕೆ ಮೂರು ವರ್ಷ ಪೂರೈಸುತ್ತಿದ್ದು, ಸಿದ್ದರಾಮಯ್ಯ ನಡೆಯ ಬಗ್ಗೆ ಶಿವಕುಮಾರ್ಗೆ ಈಗ ಒಂದು ಮಟ್ಟಿಗಿನ ಸ್ಪಷ್ಟತೆ ಬಂದಂತಿದೆ.

ಇದೇ ವಿಧಾನಸಭೆ ಅವಧಿಯಲ್ಲಿ ಮುಖ್ಯಮಂತ್ರಿ ಆಗಬೇಕೆಂಬ ಛಲದಲ್ಲಿರುವ ಶಿವಕುಮಾರ್, ‘ಅಧಿಕಾರ ಹಂಚಿಕೆಯ ಸೂತ್ರ’ವನ್ನು ಪದೇ ಪದೇ ನೆನಪಿಸುತ್ತಾ ಬಂದಿದ್ದಾರೆ. ‘ಅಂತಹ ಒಪ್ಪಂದ ಆಗಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ. ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎನ್ನುವುದು ಸಿದ್ದರಾಮಯ್ಯ ವಾದ. ಚುನಾವಣೆ ಎದುರಿಸಲು ಎರಡು ವರ್ಷ ಉಳಿದಿದೆ. ನಾಯಕತ್ವಕ್ಕಾಗಿನ ಕಚ್ಚಾಟ ನಿಲ್ಲುವ ಲಕ್ಷಣವಂತೂ ಕಾಣುತ್ತಿಲ್ಲ.

ಶಿವಕುಮಾರ್ ಹೇಳಿದಂತೆ ಸಿಕ್ಕಿದ ಕುರ್ಚಿಯನ್ನು ಬಿಟ್ಟೇಳಲು ಯಾರೂ ತಯಾರಿರುವುದಿಲ್ಲ. ಹಾಗಿದ್ದರೂ ಶಿವಕುಮಾರ್ ಅವರು ಚೆಂಡೇ ಇಲ್ಲದೇ ಗೋಲ್ ಹೊಡೆಯಲು, ಶೂನ್ಯದಲ್ಲಿ ಒದೆಯುತ್ತಲೇ ಇದ್ದಾರೆ. ಚೆಂಡನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿದ್ದರಾಮಯ್ಯ, ಆಟವನ್ನು ರಕ್ಷಣಾತ್ಮಕವಾಗಿ ಆಡುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಸಚಿವರು, ಶಾಸಕರೂ ಸೇರಿದಂತೆ ಎಲ್ಲ ಜಾತಿಯವರಿರುವ ಬಲಿಷ್ಠ ತಂಡವನ್ನು ಕಟ್ಟಿಕೊಂಡು, ಮೈದಾನದಲ್ಲಿ ಶಿವಕುಮಾರ್ ಕೆಲವೊಮ್ಮೆ ಏಕಾಂಗಿಯಾಗುವಂತೆಯೂ ಮಾಡುತ್ತಿದ್ದಾರೆ. ಚೆಂಡಿಲ್ಲದಿದ್ದರೇನು? ತಮ್ಮ ಜತೆಗೆ ದೊಡ್ಡ ದಂಡೇ ಇದೆ ಎಂದುಕೊಂಡು ಆಟಕ್ಕೆ ಇಳಿದ ಶಿವಕುಮಾರ್, ಹಿಂದೆ ತಿರುಗಿ ನೋಡಿದರೆ ಚೆಂಡನ್ನು ತಮ್ಮ ಬಳಿ ನೂಕಲು ಬೇಕಾದ ತಂಡವೇ ಇಲ್ಲದೆ ಪರದಾಡಿದ್ದೂ ಇದೆ.

ನಾಯಕತ್ವ ಯಾರನ್ನೂ ಅರಸಿ ಬರುವುದಿಲ್ಲ. ಪಕ್ಷದ ರಾಷ್ಟ್ರೀಯ ನಾಯಕತ್ವ ಪ್ರಬಲವಾಗಿದ್ದಾಗ, ಸ್ಥಳೀಯ ನಾಯಕತ್ವಕ್ಕಾಗಿ ಹಲವರ ನಡುವೆ ಪೈಪೋಟಿ ಇದ್ದಾಗ, ಅತಂತ್ರ ಫಲಿತಾಂಶ ಬಂದಾಗ ‘ಡಾರ್ಕ್ ಹಾರ್ಸ್’ಗಳು ನೇಪಥ್ಯದಿಂದ ಮುಂಚೂಣಿಗೆ ಪುಟಕ್ಕನೇ ಚಿಮ್ಮಿ ಬರುವುದುಂಟು. ಕರ್ನಾಟಕದಲ್ಲಿ ಈಚಿನ ವರ್ಷಗಳಲ್ಲಿ ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಜತೆಗಿನ ಮೈತ್ರಿ ವೇಳೆ ಎಚ್.ಡಿ.ಕುಮಾರಸ್ವಾಮಿ ಇಂತಹ ಅವಕಾಶ ಪಡೆದರು. ಪರಿಶ್ರಮ, ಜನಾಭಿಮಾನ ಇದ್ದರೂ ಅಧಿಕಾರ ದಕ್ಕಿಸಿಕೊಂಡು, ಅದನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ದೇವೇಗೌಡರು ಮುಖ್ಯಮಂತ್ರಿಯಾಗಿ, ಬಳಿಕ ಪ್ರಧಾನಿಯೂ ಆದರು. ಎಸ್. ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅವರಂತಹ ಜನನಾಯಕರಿಗೆ ಪೂರ್ಣಾವಧಿ ಅಧಿಕಾರ ನಡೆಸಲು ಆಗಲಿಲ್ಲ. ಆಯಾ ಕಾಲದ, ಆಯಾ ಪಕ್ಷದ ‘ಹೈಕಮಾಂಡ್’ ಅವರನ್ನು ಬಗ್ಗಿಸಿದ್ದು ಇತಿಹಾಸ.

‘ಅಧಿಕಾರಕ್ಕೆ ತರುವಲ್ಲಿ ತಮ್ಮ ಪರಿಶ್ರಮ ಇದೆ; ಅದರ ಕೂಲಿ ಕೇಳುತ್ತಿದ್ದೇನೆ’ ಎಂದು ಶಿವಕುಮಾರ್ ಎಷ್ಟೇ ಹೇಳಿಕೊಂಡರೂ, ಶ್ರಮವೊಂದೇ ಕುರ್ಚಿಗೇರಿಸುವ ದಾರಿಯಾಗದು. ಛಲವೊಂದೇ ಸಾಕಾಗದು. ಕಪಟ ನಾಟಕ ಸೂತ್ರಧಾರಿ ಶ್ರೀಕೃಷ್ಣ, ಕುತಂತ್ರ ಪಾರಂಗತ ಶಕುನಿ, ತ್ಯಾಗಮಯಿ ಕರ್ಣನಂತಹವರೂ ರಾಜಕೀಯ ಚದುರಂಗದಾಟದಲ್ಲಿ ಬೇಕಾಗುತ್ತದೆ.

ನೀರಿನೊಳಗಣ ಎದುರಾಳಿಯ ಹೆಜ್ಜೆಗಳನ್ನು ಅರಿತು, ಕಟ್ಟಿ ಹಾಕುವಲ್ಲಿ ಸಿದ್ದರಾಮಯ್ಯ ನಿಷ್ಣಾತರು. ಅವಕಾಶ ಸೃಷ್ಟಿಸಿಕೊಳ್ಳುವ ನಿಸ್ಸೀಮ ಗುಣದ ಜತೆಗೆ, ಅವಕಾಶಗಳೂ ಅವರಿಗೆ ಒದಗುತ್ತಲೇ ಇವೆ.

‘ಅಧಿಕಾರ ಹಸ್ತಾಂತರ’ದ ಒಪ್ಪಂದವಾಗಿದ್ದು, 2025ರ ನವೆಂಬರ್ನಲ್ಲಿ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂದು ಶಿವಕುಮಾರ್ ಆಪ್ತರು ನಂಬಿದ್ದರು. ದೇವರಾಜ ಅರಸು ಅವರ ದಾಖಲೆ ಮುರಿಯುವವರೆಗೆ ಅವಕಾಶ ಬೇಕು ಎಂಬ ಬಾಣಗಳನ್ನು ಸಿದ್ದರಾಮಯ್ಯ ಬಣದವರು ಬಿಟ್ಟರು. ಅದಕ್ಕೆ 2026ರ ಜನವರಿವರೆಗೆ ಕಾಯಬೇಕಾಯಿತು. ಅದೂ ಮುಗಿಯಿತು. ಅಷ್ಟೊತ್ತಿಗೆ, ಬಜೆಟ್ ಮಂಡನೆಯ ದಾಖಲೆ ಮುರಿಯಲು ಅವಕಾಶ ಕಲ್ಪಿಸಬೇಕು ಎಂಬ ಅಸ್ತ್ರವೂ ಹೊರಬಂತು.

ಆ ಹೊತ್ತಿಗೆ ದೆಹಲಿಗೆ ದೌಡಾಯಿಸಿದ ಶಿವಕುಮಾರ್, ಬಜೆಟ್ ಅಧಿವೇಶನಕ್ಕೆ ಮುನ್ನವೇ ನಾಯಕತ್ವ ಬದಲಾಗಲೇಬೇಕೆಂದು ಹಟ ಹಿಡಿದರು. ‘ಯಾರು ಬಜೆಟ್ ಸಿದ್ಧಪಡಿಸುತ್ತಾರೆ ಎಂಬುದಲ್ಲ; ಯಾರು ಮಂಡಿಸುತ್ತಾರೆ ಎಂಬುದೇ ಮುಖ್ಯ’ ಎಂಬ ನಿಗೂಢಾರ್ಥದ ಮಾತುಗಳನ್ನು ಶಿವಕುಮಾರ್ ಬೆಂಬಲಿಗರು ಹರಿಯಬಿಟ್ಟರು. ನಾಯಕತ್ವ ಜಗಳ ತಾರಕಕ್ಕೇರುವ ಲಕ್ಷಣಗಳು ಗೋಚರಿಸಿದವು. ಏನೋ ಘಟಿಸಲಿದೆ ಎಂಬ ವಾತಾವರಣವೂ ಸೃಷ್ಟಿಯಾಯಿತು. ದೆಹಲಿಯಲ್ಲಿ ಶಿವಕುಮಾರ್ ಯತ್ನ ಮುಂದುವರಿಸಿರುವುದು ಗೊತ್ತಾಗುತ್ತಿದ್ದಂತೆ, ತಮ್ಮ ಆಪ್ತರೂ ಸೇರಿದಂತೆ 25ಕ್ಕೂ ಹೆಚ್ಚು ಶಾಸಕರನ್ನು ಸಿದ್ದರಾಮಯ್ಯನವರ ಬೆಂಬಲಿಗರು ವಿದೇಶ ಯಾತ್ರೆಗೆ ಕಳುಹಿಸಿದರು.

ಆಮೇಲೂ ಸಿದ್ದರಾಮಯ್ಯ ಸುಮ್ಮನೇ ಕೂರಲಿಲ್ಲ. ಉದ್ಯೋಗ ಖಾತ್ರಿ ಯೋಜನೆ ರದ್ದುಪಡಿಸಿದ ಕೇಂದ್ರ ಸರ್ಕಾರ, ಅದರ ಬದಲು ವಿಬಿ–ಜಿ ರಾಮ್ ಜಿ ಯೋಜನೆ ಘೋಷಿಸಿತು. ಅದರ ವಿರುದ್ಧ ಹೋರಾಟ ರೂಪಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತು. ಸಿದ್ದರಾಮಯ್ಯ ಅವರು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಾರದಂತೆ, ವಿಬಿ ಜಿ ರಾಮ್ ಜಿ ಕುರಿತು ಚರ್ಚಿಸಲು ವಿಧಾನಮಂಡಲದ ಅಧಿವೇಶನ ಕರೆದರು. ಅದು ಮುಗಿಯುವಾಗ ಫೆಬ್ರುವರಿ ಮೊದಲ ವಾರ ಕಳೆದಿತ್ತು. ಅಧಿಕಾರಕ್ಕೆ ಆಪತ್ಕಾಲ ಬಂದಾಗಲೆಲ್ಲ, ಅದನ್ನು ನಿವಾರಿಸಬಲ್ಲ ‘ಸಿದ್ಧಾಸ್ತ್ರ’ವೊಂದನ್ನು ಸಿದ್ದರಾಮಯ್ಯ ಆಪ್ತರು ಬಿಡುತ್ತಲೇ ಬಂದಿದ್ದಾರೆ.

ಬಜೆಟ್ ಅಧಿವೇಶನ ಮುಗಿದ ಬಳಿಕ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ತಯಾರಿಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾಯಿತು. ಅಂತಹ ಸಭೆಗಳ ಸಮಯವನ್ನು ಬಳಸಿಕೊಂಡು ಅಧಿಕಾರ ಸೂತ್ರ ಹಿಡಿಯುವ ಯತ್ನವನ್ನು ಶಿವಕುಮಾರ್ ನಡೆಸಿದರು. ಆದರೆ, ಕರ್ನಾಟಕದಲ್ಲಿ ಎದುರಾದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಸಿದ್ದರಾಮಯ್ಯನವರಿಗೆ ನಿರಾಳತೆ ಕೊಡಿಸಿತು.

ಚುನಾವಣೆ ಮುಗಿಯುತ್ತಿದ್ದಂತೆ ಮತ್ತೊಂದು ಸುತ್ತಿನ ದೆಹಲಿಯಾತ್ರೆಯನ್ನು ಶಿವಕುಮಾರ್ ಕೈಗೊಂಡರು. ಮತ್ತೊಂದು ಸೂತ್ರ ಹೆಣೆದ ಸಿದ್ದರಾಮಯ್ಯ, ಸಚಿವಾಕಾಂಕ್ಷಿಗಳಾದ 30ಕ್ಕೂ ಹೆಚ್ಚು ಶಾಸಕರನ್ನು ದೆಹಲಿಗೆ ಕಳುಹಿಸಿ ಸಂಪುಟ ವಿಸ್ತರಣೆಯ ಒತ್ತಡ ಹಾಕಿಸುವ ಯತ್ನ ಮಾಡಿದರು. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಬೇಕು ಎಂಬುದು ಗೊತ್ತಿದ್ದರೂ, ಶಾಸಕರಲ್ಲಿ ಸಚಿವ ಸ್ಥಾನದ ಆಸೆ ತುಂಬಿ ತಮ್ಮ ಬೆಂಬಲಿಗ ಪಡೆಯನ್ನು ವಿಸ್ತರಿಸಿಕೊಳ್ಳುವ ತಂತ್ರಗಾರಿಕೆಯನ್ನೂ ನಡೆಸಿದರು. ಸಿದ್ದರಾಮಯ್ಯ ಒಡನಾಡಿಗಳಾಗಿರುವ ಹಲವು ಹಿರಿಯ ಸಚಿವರು ದೆಹಲಿಗೆ ಹೋಗಿ, ತಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದರು.

ಎಲ್ಲ ಮುಗಿದು ಸರ್ಕಾರಕ್ಕೆ ಮೂರು ವರ್ಷ ತುಂಬುವ ಹೊತ್ತಿಗೆ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ವರಗಳು ಬಂದಿವೆ. ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾಯಿತರಾದ ನಾಲ್ವರು ಸದಸ್ಯರ ಅವಧಿ ಜೂನ್ 25ಕ್ಕೆ ಮುಕ್ತಾಯವಾಗಲಿದೆ. ಅದರಲ್ಲಿ ಒಂದನ್ನಷ್ಟೇ ಕಾಂಗ್ರೆಸ್ ಪ್ರತಿನಿಧಿಸುತ್ತಿದೆ. ಶಾಸಕರ ಬಲಾಬಲದಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನ ಸಿಕ್ಕಲಿದೆ. ಈ ಚುನಾವಣೆಯು ರಾಜ್ಯಸಭೆಯ ಸಂಖ್ಯಾದೃಷ್ಟಿಯಿಂದ ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದೆ. ಅದಾದ ಬೆನ್ನಲ್ಲೇ, ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಅದರಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಸಭಾಪತಿ ಸ್ಥಾನ ನಿರಾಯಾಸವಾಗಿ ಸಿಗಲಿದೆ. ಅದು ಮುಗಿಯುತ್ತಿದ್ದಂತೆ ಡಿ. ಸುಧಾಕರ್ ನಿಧನ ಹಾಗೂ ವಿನಯ ಕುಲಕರ್ಣಿಯವರ ಶಾಸಕತ್ವ ಅನರ್ಹಗೊಂಡ ಕಾರಣಕ್ಕೆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಬರಲಿದೆ. ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಅಬಾಧಿತವಾಗುವ ರೀತಿಯಲ್ಲಿ ಗಟ್ಟಿ ಬೇಲಿಗಳನ್ನು ಕಟ್ಟಿಕೊಳ್ಳುವ ಹೊತ್ತಿಗೆ, ಅವಕಾಶಗಳು ಕೂಡ ತನ್ನಿಂತಾನೇ ಅವರಿಗೆ ಅನುಕೂಲಕರವಾಗಿ ಬರುತ್ತಲೇ ಇವೆ.

ಈ ಬೆಳವಣಿಗೆ ಮಧ್ಯೆಯೇ ಮತ್ತೆ ಸಂಪುಟ ವಿಸ್ತರಣೆಯ ಪ್ರಸ್ತಾವವನ್ನು ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ. ಸ್ಥಾನ ಕಳೆದುಕೊಳ್ಳುವ ಭಯದಲ್ಲಿರುವವರು ಹಾಗೂ ಆಕಾಂಕ್ಷಿಗಳನ್ನು ಹಿಡಿದಿಟ್ಟುಕೊಳ್ಳುವುದು ಇದರ ಉದ್ದೇಶ. ಎಲ್ಲ ತಂತ್ರಗಾರಿಕೆ ನಡೆಸಿಯೂ ‘ಹೈಕಮಾಂಡ್ ಹೇಳಿದಂತೆ ಕೇಳುವೆ’ ಎನ್ನುವ ಮಹಾಮಂತ್ರವೂ ಅವರ ಬಳಿ ಇದೆ. ಹಾಗೆಯೇ, ‘ಹೈಕಮಾಂಡ್’ ಯಾರ ಪರ ಇದೆ ಎಂಬುದೂ ಅವರಿಗೆ ಗೊತ್ತಿದೆ. ಕಾಂಗ್ರೆಸ್ನ ಹೈಕಮಾಂಡ್ ಮಾತೂ ಆಡದ, ನೈವೇದ್ಯ ತಿನ್ನದ, ಬೇಕೆಂದಾಗ ಪ್ರಸಾದ ಬೀಳಿಸದ ದೇವರಂತೆ. ಪೂಜಾರಿ ಹಾಗಲ್ಲ; ಬಂದವರ ಎದುರೆಲ್ಲ ಹಸನ್ಮುಖಿ, ಯಾರಿಗೆ ಬೇಕಾದರೂ ಎಡದಿಂದಲೋ ಬಲದಿಂದಲೋ ಪ್ರಸಾದ ಬೀಳಿಸಬಲ್ಲರು. ಆದರೆ, ಫಲ ಸಿಗುವುದಿಲ್ಲ. ಪೂಜಾರಿ ಪಾತ್ರದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರು, ಒಮ್ಮೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರೆ, ಮಗದೊಮ್ಮೆ ಅದಕ್ಕೆ ದಿನಾಂಕ ನಿರ್ಧಾರವಾಗಿಲ್ಲ ಎನ್ನುತ್ತಾರೆ. ಪೂಜಾರಿ ಮುಂದೆ ನಿಂತ ಸ್ಥಿತಿ ಶಿವಕುಮಾರ್ ಅವರದ್ದು.

ಕಾಂಗ್ರೆಸ್ನ ಅಧಿಕೃತ ಹೈಕಮಾಂಡ್ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಗೊಂದಲ ನಿವಾರಿಸಿ, ಸ್ಥಿರ ಸರ್ಕಾರ ಕೊಡಬೇಕೆಂಬ ಮನಸ್ಸೇ ಇದ್ದಂತಿಲ್ಲ. ಕೇರಳಂ ವಿಷಯದಲ್ಲೂ ಅವರದ್ದು ಮಹಾಮೌನ. ನಿರ್ಣಾಯಕ ಸಂದರ್ಭದಲ್ಲೆಲ್ಲ, ಅದೇ ಧಾಟಿ. ಪಕ್ಕದ ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ಗೆ ಬಹುಮತ ಕೊರತೆಯಾಗುತ್ತಿದ್ದಂತೆ, ಏಕಾಏಕಿ ಬೆಂಬಲ ಘೋಷಿಸಿ, ಅವರ ಪ್ರಮಾಣವಚನ ಸಮಾರಂಭಕ್ಕೂ ಹಾಜರಾದರು. ರಾಹುಲ್ ಈ ಧೋರಣೆಯೇ ಸಿದ್ದರಾಮಯ್ಯಗೆ ವರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.