ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ಕಾಂಗ್ರೆಸ್‌, ಭೀತ ಜೆಡಿಎಸ್‌

ಆಡಳಿತ ಪಕ್ಷ ತಲೆಯಂತೆ, ಪ್ರತಿಪಕ್ಷ ಹೃದಯ – ಆತ್ಮ ಇದ್ದಂತೆ...
Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೇರು ಸತ್ತು, ಚೈತನ್ಯ ಕಳೆದುಕೊಂಡ ‘ಆಲದ ಮರ’ದಂತಾಗಿರುವ ಕಾಂಗ್ರೆಸ್‌ ಹಾಗೂ ಉಳಿಯುವ ಅನಿವಾರ್ಯಕ್ಕೆ ಕಟ್ಟುಬಿದ್ದು ಗೂಡಿಂದ ಗೂಡಿಗೆ ಹಾರುತ್ತಾ ‘ಪರ‍ಪುಟ್ಟ’ನಂತಾಗಿರುವ ಜೆಡಿಎಸ್‌ ನಾಯಕರ ಅಸಹಾಯಕ ನಿಲುಮೆಗಳಿಂದಾಗಿ ಕರ್ನಾಟಕದಲ್ಲಿ ಗಟ್ಟಿಧ್ವನಿಯ ವಿರೋಧ ಪಕ್ಷವೇ ಇಲ್ಲದಂತಾಗಿದೆ.

ಪ್ರಜಾತಂತ್ರ ವ್ಯವಸ್ಥೆಯೊಳಗೆ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಒಂದು ಮುಷ್ಟಿ ಮಿಗಿಲು ಎನ್ನಬಹುದಾದ ಹೊಣೆಗಾರಿಕೆ ಪ್ರತಿಪಕ್ಷಕ್ಕೆ ಇದೆ. ಆದರೆ, ತಮ್ಮ ಜವಾಬ್ದಾರಿಯನ್ನು ಘನವಾಗಿ ನಿಭಾಯಿಸಬೇಕಾದ ವಿರೋಧ ಪಕ್ಷಗಳು ಕರ್ತವ್ಯಪಾಲನೆಯನ್ನೇ ಮರೆತು ಕೂತಿವೆ. ಕೈಸೋತ ಸ್ಥಿತಿಯಲ್ಲಿರುವ ಕಾಂಗ್ರೆಸ್, ಅಸ್ತಿತ್ವವೇ ಕರಗಿಹೋಗುವ ಭೀತಿಯಲ್ಲಿರುವ ಜೆಡಿಎಸ್‌ನ ಈ ಧೋರಣೆಯಿಂದಾಗಿ ಆಡಳಿತ ಪಕ್ಷ ಆಡಿದ್ದೇ ಆಟ; ಹೂಡಿದ್ದೇ ಹೂಟ ಎಂಬ ದುಃಸ್ಥಿತಿ ಬಂದೊದಗಿದೆ.

‘ಆಡಳಿತದಲ್ಲಿದ್ದಾಗ ಮಾತ್ರ ಅಬ್ಬರ; ಉಳಿದ ವೇಳೆ ಕಿಂಕರ’ ಎಂಬುದು ಕಾಂಗ್ರೆಸ್‌ ವರ್ತನೆಗೆ ಇರುವ ಟೀಕೆ. ಅಧಿಕಾರಹೀನತೆಯ ಹಪಹಪಿಯಲ್ಲಿ ವಿಲವಿಲ ಒದ್ದಾಡುತ್ತಾ ಮುಂದೆ ಸಿಗಬಹುದಾದ ಕುರ್ಚಿಗಾಗಿ ಕಚ್ಚಾಡುತ್ತಾ ಪರಸ್ಪರರ ಕಾಲೆಳೆಯುತ್ತಾ ರಾಜಕಾರಣ ನಡೆಸುವುದು ಅದರ ಜಾಯಮಾನ. ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುವಾಗ ಬಿಜೆಪಿ ನಡೆಸಿದ್ದ ಹೋರಾಟಗಳ ಪರಿವೆಯೇ ಇಲ್ಲದಂತೆ ದಿಕ್ಕೆಟ್ಟು ಕೂರುವುದು ಅದಕ್ಕೆ ಅಂಟಿದ ಜಾಡ್ಯವೂ ಹೌದು. ದೇಶದಲ್ಲೇ ನೆಲಕಚ್ಚಿ ಹೋಗಿದ್ದರೂ ಜನಸಮುದಾಯವನ್ನು ಒಳಗೊಂಡು ಹೋರಾಟ ಮುನ್ನಡೆಸಬೇಕೆಂಬ ಅರಿವು ಕಾಂಗ್ರೆಸ್‌ಗೆ ಬರುವುದಿಲ್ಲ.

ದೇಶದುದ್ದಗಲದ ಕಾಂಗ್ರೆಸ್ ಸ್ಥಿತಿ ನೋಡಿದರೆ ಕರ್ನಾಟಕದಲ್ಲೇ ಅದರ ನೆಲೆ ಉತ್ತಮ. ನಾಯಕರ ಕಚ್ಚಾಟ, ನಾಯಕತ್ವದ ಪ್ರತಿಷ್ಠೆಯಿಂದಾಗಿ ಮುಂಚಲನೆ ಕಳೆದುಕೊಂಡ ನೀರೊಳಗಿನ ದೋಣಿಯಂತಿದೆ ಅದರ ಪರಿಸ್ಥಿತಿ. ಹಾಗೆ ನೋಡಿದರೆ, ಎಲ್ಲ ಸಮುದಾಯ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯ ಇರುವ, ಅನುಭವದ ಮೂಟೆಯನ್ನೇ ಹೊತ್ತುಕೊಂಡಿರುವ ನಾಯಕರ ದಂಡೇ ಕಾಂಗ್ರೆಸ್‌ನಲ್ಲಿದೆ. ಲಿಂಗಾಯತರನ್ನು ಸೆಳೆಯುವ ಪ್ರಭಾವಿ ನಾಯಕರ ಕೊರತೆಯೊಂದನ್ನು ಬಿಟ್ಟರೆ ನಾಯಕರಿಗೇನೂ ಅಲ್ಲಿ ಕಡಿಮೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಕೆ.ಆರ್. ರಮೇಶ್‌ಕುಮಾರ್‌, ಕಾಗೋಡು ತಿಮ್ಮಪ್ಪ, ಎಂ.ಬಿ. ಪಾಟೀಲ, ವೀರಪ್ಪ ಮೊಯಿಲಿ, ಶ್ಯಾಮನೂರು ಶಿವಶಂಕರಪ್ಪ, ಬಿ.ಕೆ. ಹರಿಪ್ರಸಾದ್‌, ಜಿ. ಪರಮೇಶ್ವರ, ಎಚ್‌. ಆಂಜನೇಯ, ಜಮೀರ್ ಅಹಮದ್‌ ಹೀಗೆ ದೊಡ್ಡ ದಿಬ್ಬಣವೇ ಅಲ್ಲಿದೆ. ಸಾಮೂಹಿಕ ನಾಯಕತ್ವವನ್ನು ನಂಬಿ ಪಕ್ಷವನ್ನು ಒಟ್ಟಾಗಿ ಮುನ್ನಡೆಸುವ ಆಕಾಂಕ್ಷೆಯೇ ದೊಡ್ಡ ಕೊರತೆ. ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳು ರುದ್ರತಾಂಡವವಾಡುತ್ತಿರುವ ಈ ಹೊತ್ತಿನೊಳಗೆ ಜನಸಮುದಾಯವನ್ನು ಸಂಘಟಿಸುವ ಅಪೂರ್ವ ಅವಕಾಶ ಆ ಪಕ್ಷಕ್ಕೆ ಇದೆ. ಸಿದ್ದರಾಮಯ್ಯ ಒಂದು ದಿಕ್ಕು, ಡಿ.ಕೆ.ಶಿವಕುಮಾರ್ ಮತ್ತೊಂದು ದಿಕ್ಕಿಗೆ ಎಳೆಯುತ್ತಿದ್ದು ಪಕ್ಷ ದಿಕ್ಕಾಪಾಲಾಗಿರುವುದು ಸದ್ಯದ ವಿದ್ಯಮಾನ.

ಬಿಜೆಪಿ ನೇತೃತ್ವದ ಸರ್ಕಾರ ಈಗ ಏನೆಲ್ಲಾ ಕಾನೂನುಗಳನ್ನು ತಂದು ಸುರಿಯುತ್ತಿದೆ. ಪೆಟ್ರೋಲ್–ಡೀಸೆಲ್ ಬೆಲೆ ಶತಕ ಬಾರಿಸುವ ಸನಿಹದಲ್ಲಿವೆ. ಕರ್ನಾಟಕದ ಸಮಸ್ಯೆಗಳು ಭಾರತಕ್ಕೆ ಸಾಕಾಗುವಷ್ಟು ಭಾರವಾಗಿ ಹರಡಿಕೊಂಡಿವೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದು, ಬಿಜೆಪಿ ಪ್ರತಿಪಕ್ಷವಾಗಿದ್ದರೆ ಹರತಾಳ, ಬಂದ್, ಪ್ರತಿಭಟನೆಗಳ ರಣತಾಂಡವ ನಿತ್ಯ ಎಂಬಂತೆ ನಡೆಯುತ್ತಿತ್ತು. ಇಂಧನ–ದಿನಸಿ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯ ಕುದುರೆಯೇರಿಯೇ ಬಿಜೆಪಿ ಅಧಿಕಾರ ಹಿಡಿದ ಅನೇಕ ನಿದರ್ಶನಗಳಿವೆ. ಆದರೀಗ, ಬಿಜೆಪಿಯ ಆಡಳಿತ ವೈಖರಿಯ ವಿರುದ್ಧ ಟ್ವೀಟು ಹಾಗೂ ಪತ್ರಿಕಾ ಹೇಳಿಕೆಯ ಕೂಗು ಹಾಕುವುದಕ್ಕಷ್ಟೇ ಕಾಂಗ್ರೆಸ್ ಸೀಮಿತವಾಗಿದೆ.

ಪ್ರತಿಪಕ್ಷ ಎಂದರೆ ಅದಕ್ಕೂ ಸಂವಿಧಾನದತ್ತ ಸ್ಥಾನಮಾನ ಹಾಗೂ ಕರ್ತವ್ಯ ಇದೆ. ಅದಕ್ಕಾಗಿಯೇ ಎರಡೂ ಸದನಗಳ ವಿರೋಧ ಪಕ್ಷದ ನಾಯಕರು, ಮುಖ್ಯಸಚೇತಕರಿಗೆ ಸಚಿವ ದರ್ಜೆಯ ಸ್ಥಾನಮಾನ ದಯಪಾಲಿಸಲಾಗಿದೆ. ವಿರೋಧ ಪಕ್ಷ ಪ್ರಜಾತಂತ್ರದ ಕಾವಲುಗಾರನಾಗಿ, ತನಗೆ ಮತ ಹಾಕಿದ ಮತದಾರನ ರಕ್ಷಕನಾಗಿ ಕೆಲಸ ಮಾಡಬೇಕು ಎಂಬುದು ಇದರ ಆಶಯ. ಹಾಗೆ ಮಾಡದೇ ಇದ್ದಲ್ಲಿ ಅದು ಪ್ರಜಾಸತ್ತೆಗೆ, ಮತದಾರರಿಗೆ ಬಗೆವ ದ್ರೋಹವೂ ಹೌದು.

ಜನರ ಕಷ್ಟಕ್ಕೆ ಆಗುವ ಪಕ್ಷಕ್ಕೆ ಮಾತ್ರ ಮುಂದಿನ ಚುನಾವಣೆಯಲ್ಲಿ ಜನ ಮಣೆ ಹಾಕಿಯಾರು. 2013ರಲ್ಲಿ ಬಿಜೆಪಿ ಕಚ್ಚಾಟ, ಅಖಂಡ ಭ್ರಷ್ಟಾಚಾರದ ಕಾರಣಕ್ಕೆ ರಾಜ್ಯದ ಜನ ಚಿನ್ನದ ತಟ್ಟೆಯಲ್ಲಿ ಅಧಿಕಾರದ ಕಿರೀಟವನ್ನು ಕೊಟ್ಟಂತೆ ಈ ಬಾರಿಯೂ ಕೊಡುತ್ತಾರೆ ಎಂಬ ಭಾವನೆಯಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ, ಹೋರಾಟವನ್ನೇ ಮರೆತು ಹೇಳಿಕೆಯ ಭರಾಟೆಗೆ ಅದು ಸೀಮಿತವಾಗಿದೆ. ಇಲ್ಲವೇ, ಬೇರೆಯವರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ‘ಅನ್ಯರ ಶೂನಲ್ಲಿ ಕಾಲು ತೂರಿಸಿ’ ದಾಪುಗಾಲು ಇಟ್ಟಂತೆ ಮಾಡುತ್ತಿದೆ. ಕೆಲವೊಮ್ಮೆ ಪಕ್ಕದ ಮನೆಯ ಗಳಕ್ಕೆ ಬಿದ್ದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಕಾತರಿಸಿದಂತೆ ಕಾಣಿಸುತ್ತಿದೆ.

ಜೆಡಿಎಸ್‌ ಪರಿಸ್ಥಿತಿಯಂತೂ ಮುಳುಗುತ್ತಿರುವವ ಹುಲ್ಲು ಕಡ್ಡಿಯ ಆಸರೆ ಹಿಡಿದು ತೇಲಿದಂತಿದೆ. ನಾಯಕರನ್ನೆಲ್ಲ ಹೊರಗಟ್ಟಿ ಕುಟುಂಬ ರಾಜಕಾರಣದ ಪಗಡೆಯಾಟಕ್ಕೆ ಕುಳಿತಂತಿದೆ ದಳಪತಿಗಳ ವರ್ತನೆ. ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಜೆಡಿಎಸ್‌ನಲ್ಲಿ ಆವರಿಸಿ
ಕೊಂಡಿದೆ. ಇದೇ ನಡಾವಳಿ ಆ ಪಕ್ಷದಲ್ಲಿ ಮುಂದುವರಿದರೆ ಮುಂದಿನ ಚುನಾವಣೆ ಹೊತ್ತಿಗೆ ಈಗಿರುವ ಶಾಸಕರಲ್ಲಿ ಅರ್ಧದಷ್ಟು ಮಂದಿ ಕಾಂಗ್ರೆಸ್, ಮತ್ತೆ ಅರ್ಧದಷ್ಟು ಮಂದಿ ಬಿಜೆಪಿಗೆ ಗುಳೆ ಹೋಗಲು ಅಣಿಯಾಗಿದ್ದಾರೆ. ಈ ಸಂಗತಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದ ರಹಸ್ಯವೇನಲ್ಲ. ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಬಿಜೆಪಿಗೆ ಎಡತಾಕಿ ಅಧಿಕಾರ ಉಳಿಸಿಕೊಳ್ಳುವ ಹಂಗಿಗೆ ಸಿಲುಕಿದ್ದ ಕುಮಾರಸ್ವಾಮಿ, ಈಗ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಹೆಣಗಾಟದಲ್ಲಿದ್ದಾರೆ.

ಯಾವುದೇ ಸ್ಪಷ್ಟ ನಿಲುವಿಲ್ಲದೇ, ಯಾವ ಕಡೆಗೆ ವಾಲಿದರೆ ಅನುಕೂಲವೋ ಎಂಬ ಖಚಿತತೆಯೂ ಇಲ್ಲದೇ ಸದಾ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುವ ನಾಯಕನಂತೆ ತೋರುತ್ತಿದ್ದಾರೆ ಕುಮಾರಸ್ವಾಮಿ. ಮಸೂದೆಗಳ ವಿಚಾರದಲ್ಲಿ, ಕಾಂಗ್ರೆಸ್–ಬಿಜೆಪಿ ಜತೆಗಿನ ಅವರ ನಂಟು, ಮಾತುಗಳಲ್ಲಿ ಈ ದ್ವಂದ್ವ ಎದ್ದು ಕಾಣಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಮ್ಮೆ ಟೀಕಿಸಿದರೆ, ಮತ್ತೊಮ್ಮೆ ಮೆತ್ತಗೆ ಹೊಗಳುತ್ತಾರೆ. ಯಡಿಯೂರಪ್ಪನವರ ಬಗ್ಗೆಯಂತೂ ಅವರಿಗೆ ಎಲ್ಲಿಲ್ಲದ ಮಮಕಾರ. ಹೀಗಾಗಿ, ವಿರೋಧ ಪಕ್ಷವೆಂಬ ಹಣೆಪಟ್ಟಿ ಕಳಚಿಟ್ಟು, ಯಾವಾಗ ಬೇಕಾದರೂ ಯಾರ ಜತೆಗಾದರೂ ಆಡಳಿತ ಪಕ್ಷವಾಗುವ ಅವಕಾಶವನ್ನು ಅವರು ಸದಾ ತೆರೆದಿಟ್ಟುಕೊಂಡಂತೆ ಭಾಸವಾಗುತ್ತಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವೆಂಬುದು ತಲೆ ಇದ್ದಂತೆ. ಪ್ರತಿಪಕ್ಷ ಹೃದಯ ಮತ್ತು ಆತ್ಮ ಇದ್ದಂತೆ. ಯಾವ ಪಕ್ಷವೇ ಇರಲಿ; ಆಡಳಿತದಲ್ಲಿದ್ದಾಗ ಜನಪರವಾಗಿ ವರ್ತಿಸಿದ್ದು ಅಪರೂಪ. ಜನವಿರೋಧಿ ನೀತಿಗಳನ್ನು ಅನುಷ್ಠಾನ ಮಾಡುವ, ಅದರ ವಿರುದ್ಧ ಸೊಲ್ಲೆತ್ತಿದವರನ್ನು ಬಡಿಯುವ, ಅವಕಾಶಗಳನ್ನು ನಾಜೂಕಾಗಿ ಬಳಸಿಕೊಳ್ಳುವ ‘ತಲೆ’ಯನ್ನಷ್ಟೇ ಅದು ಬಳಸುತ್ತದೆ. ವಿರೋಧ ಪಕ್ಷದ ಕೈಯಲ್ಲಿ ಆಡಳಿತ ಇಲ್ಲದೇ ಇರುವುದರಿಂದ ಅದು ಜನರ ಕಷ್ಟಕ್ಕೆ ಮಿಡಿಯುವ, ನೋವಿಗೆ ಸ್ಪಂದಿಸುವ ಹೃದಯದಂತೆ, ಪ್ರಜಾತಂತ್ರದ ಆತ್ಮದಂತೆ ಕಾರ್ಯನಿರ್ವಹಿಸಬೇಕು. ನೆಲಕ್ಕೆ ಕಿವಿ ಇಟ್ಟು ಜನರ ಆಕ್ರಂದನ, ಅವರ ಅಸಹಾಯಕ ನಡಿಗೆಯಲ್ಲಿನ ಆರ್ದ್ರ ಕಂಪನ ಆಲಿಸಿ ಸಾಂತ್ವನ ಹೇಳಬೇಕು. ಆಗ ಮಾತ್ರ ಅದು ಸಮರ್ಥ ವಿರೋಧ ಪಕ್ಷ ಎನಿಸಿಕೊಳ್ಳುತ್ತದೆ. ಜನರ ವಿಶ್ವಾಸ ಗೆಲ್ಲಲೂ ಶಕ್ಯವಾಗುತ್ತದೆ. ಇಲ್ಲದಿದ್ದರೆ, ಅದು ಆಡಳಿತ ಪಕ್ಷದ ಬಾಲಂಗೋಚಿಯಾಗಿ ಜನರ ವಿಶ್ವಾಸದಿಂದ ದೂರವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಜನರಿಗೂ ಕಷ್ಟ; ಪ್ರಜಾತಂತ್ರಕ್ಕೂ ಸಂಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT