ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಅಜ್ಞಾನದ ತೊಟ್ಟಿಲಲಿ ಜ್ಞಾನದ ಶಿಶು!

Last Updated 15 ಜೂನ್ 2022, 20:47 IST
ಅಕ್ಷರ ಗಾತ್ರ

‘ಓ ಬನ್ನಿ ಸೋದರರೆ ಬೇಗ ಬನ್ನಿ

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮಟ್ಟ ಕೀಳಬನ್ನಿ

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಅದೊ ನೋಡಿ ರಷ್ಯಾ ಜಪಾನು ತುರ್ಕಿಗಳೆಲ್ಲ

ಪರೆಗಳಚಿ ಹೊರಟಿಹವು ಹೊಸಪಯಣಕೆ

ಬೆಳಗಿಹರು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ

ಕಿಚ್ಚಿಟ್ಟು ಹಳೆಕೊಳಕು ಬಣಗು ತೃಣಕೆ...’

ಕವಿ ಕುವೆಂಪು ಅವರು ಕೊಟ್ಟ ಈ ಕರೆ, ನೀಡಿದ ದೀಕ್ಷೆ ದಶಕಗಳ ಬಳಿಕವೂ ನಾಡಿನ ಜನರ ಹೃದಯಾಳದಲ್ಲಿ ಪ್ರಜ್ವಲಿಸುತ್ತಲೇ ಇದೆ. ಆದರೆ, ನಮ್ಮನ್ನಾಳುತ್ತಿರುವ ಕೇಂದ್ರ–ರಾಜ್ಯದಲ್ಲಿರುವ ಬಿಜೆಪಿ ತಲೆಯಾಳುಗಳಿಗೆ ವಿಶ್ವಕ್ಕೆ ಹೊಸ ‘ಧರ್ಮಾಶಯ’ಗಳನ್ನು ನೀಡಿದ ಅಣ್ಣ ಬಸವಣ್ಣ, ಕುವೆಂ‍ಪು ಅವರ ಆದರ್ಶಗಳು ಒಗ್ಗಲೊಲ್ಲವು. ದೇಶ–ರಾಜ್ಯದಲ್ಲಿ ಅಭಿವೃದ್ಧಿಯೆಂಬುದು ಗಾಳಿಪಟದಂತೆ ಆಗಸದೆತ್ತರದಲ್ಲಿ ಹಾರುತ್ತಾ ಅಲ್ಲಾಡುತ್ತಲೇ ಇದೆ. ಜನರ ಕೈಗಂತೂ ಅದು ಸಿಕ್ಕಿಲ್ಲ; ಸಿಗುವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ, 23ರಲ್ಲಿ ನಡೆಯುವ ವಿಧಾನಸಭೆ, 24ರಲ್ಲಿ ನಡೆಯಬೇಕಾದ ಲೋಕಸಭೆ ಚುನಾವಣೆಗಳಲ್ಲಿ ಹುಲುಸು ಬೆಳೆ ತೆಗೆದು ಮತ್ತೆ ಕೇಸರಿ ಪತಾಕೆ ಹಾರಿಸಬೇಕೆಂಬ ತಯಾರಿಯಲ್ಲಿರುವವರಿಗೆ ಇವೆಲ್ಲವೂ ಬೇಕಿಲ್ಲ.

ಅಭಿವೃದ್ಧಿ ಹೀನತೆಯನ್ನೇ ಮೈವೆತ್ತುಕೊಂಡಿರುವ ಸರ್ಕಾರಗಳಿಗೆ, ಜನರ ಮನಸ್ಸನ್ನು ಕೆರಳಿಸಿ, ಅದನ್ನೇ ಮತವಾಗಿ ಪರಿವರ್ತಿಸಿಕೊಳ್ಳುವ ‘ಜಾದೂ’ ಅಷ್ಟೇ ಈಗ ಬೇಕಿರುವುದು. ಹಾಗಾಗಿಯೇ ಕುವೆಂಪು ಮಾತು ಯಾರಿಗೂ ರುಚಿಸುತ್ತಿಲ್ಲ. ವಿಜ್ಞಾನ ದೀವಿಗೆಯನ್ನು ಹಿಡಿದು ನಡೆಯಬೇಕಾದ ಯುವ ಜನಾಂಗವನ್ನು ಮಸೀದಿಯಲ್ಲಿ ಶಿವಲಿಂಗ ಪತ್ತೆ, ಹನುಮನ ಮೂಲಸ್ಥಾನದ ಹುಡು ಕಾಟಕ್ಕೆ, ಮಂದಿರ–ಮಸೀದಿ ವಿವಾದದ ಕಾಲಾಳುಗಳಾಗಿ ದುಡಿಸಲಾಗುತ್ತಿದೆ.

ಮುಂದುವರಿದ ದೇಶಗಳು ಸೂಪರ್ ಕಂಪ್ಯೂಟರ್, ಮಂಗಳ ಗ್ರಹ ಶೋಧ, ಕೃತಕ ಬುದ್ಧಿಮತ್ತೆ, ನ್ಯಾನೋ ತಂತ್ರಜ್ಞಾನದತ್ತ ವಿದ್ಯಾರ್ಥಿಗಳ ಚಿತ್ತವನ್ನು ನೇರ್ಪುಗೊಳಿಸುತ್ತಿದ್ದರೆ, ನಮ್ಮ ಸರ್ಕಾರದ ‘ಪ್ರವರ್ತಕ’ರು ಮಸೀದಿಯ ಬುಡ ಅಗೆಯಲು ಹುರಿದುಂಬಿಸುತ್ತಿದ್ದಾರೆ. ಹಿಜಾಬು, ಹಲಾಲ್, ಮೈಕು, ವ್ಯಾಪಾರಕ್ಕೆ ತಡೆ, ಪಠ್ಯ ಕೇಸರೀಕರಣದ ಕೊಸರಿನಲ್ಲಿ ಯುವಜನರನ್ನು ಹುದುಗಿಸುತ್ತಿವೆ. ಸಂವಿಧಾನ ಕೊಟ್ಟ ಅವಕಾಶಗಳಿಂದ ವಿದ್ಯೆಯ ಕಡೆ ಮುಖಮಾಡಿ, ಜ್ಞಾನ ಸಮುದ್ರದೊಳಗೆ ಕೈಚಾಚಿ ಬೊಗಸೆಯಲ್ಲಿ ಸಿಕ್ಕ ಅಕ್ಷರವನ್ನು ಎದೆಗೆ ಬಿಟ್ಟುಕೊಳ್ಳುವತ್ತ ನಡೆದಿದ್ದ ಹಿಂದುಳಿದ, ದಲಿತ ಸಮು ದಾಯದ ಯುವಕರನ್ನೇ ಅನ್ಯಾಸಕ್ತಿಗೆ ದಬ್ಬಿ, ಮತ್ತೆ ಕತ್ತಲೆ ಯೊಳಗೆ ದೂಡುವ ದಿನಗಳು ಎದುರಾಗುತ್ತಿವೆ.

ಪಠ್ಯಪುಸ್ತಕ ತಿರುಚುವಿಕೆಯ ಪ್ರಮಾದವನ್ನು ನೋಡಿ ದಾಗ ಪಕ್ಕನೆ ನೆನಪಾಗುವುದು ಕುವೆಂಪು ಅವರ ವಿಶ್ವಮಾನವ ಸಂದೇಶ. ‘ಪ್ರತಿಯೊಂದು ಮಗುವೂ ಹುಟ್ಟುತ್ತಲೆ –ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ ಆಗಬೇಕು’ ಎಂದವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ‘ವೇದಶಾಸ್ತ್ರ ಆಗಮ ಪುರಾಣಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ...’ ಎಂದು 12ನೇ ಶತಮಾನದಲ್ಲಿಯೇ ‘ಅಕ್ಕ’ ಹೇಳಿದ್ದಳು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಮಾಡಿರುವ ಅವಾಂತರ ನೋಡಿದರೆ, ಮತ್ತೆ 10–12ನೇ ಶತಮಾನದ ಹಿಂದಕ್ಕೆ ನಾಡನ್ನು ದೂಡುವ ಯತ್ನಗಳು ಕಣ್ಣಿಗೆ ರಾಚುತ್ತವೆ.

ಪರಿಷ್ಕರಿಸಿರುವ ಪಠ್ಯವನ್ನೇ ಶಾಲೆಗಳಲ್ಲಿ ಬೋಧಿಸ ಬೇಕೆಂಬ ಫರ್ಮಾನನ್ನು ಸರ್ಕಾರ ಹೊರಡಿಸಿದೆ. ‘ಪರಿಷ್ಕರಣೆಯಲ್ಲಿ ತಪ್ಪುಗಳಾಗಿವೆ, ತಿದ್ದುಪಡಿ ಮಾಡಿ ಮರು ಪರಿಷ್ಕರಿಸುತ್ತೇವೆ’ ಎಂದು ಹೇಳಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಬಾಲವಾಡಿಯ ಮಕ್ಕಳಂತೆ ಈ ವಿಷಯದಲ್ಲಿ ರಚ್ಚೆ ಹಿಡಿದಿದ್ದಾರೆ. ಇದು ಸಂಘದ ಕಾರ್ಯಸೂಚಿಯನ್ನು ಅಧಿಕಾರದಲ್ಲಿದ್ದಾಗಲೇ ಅನುಷ್ಠಾನಕ್ಕೆ ತರಬೇಕೆಂಬ ಅವರ ‘ಬದ್ಧತೆ’ಯನ್ನು ತೋರುತ್ತದೆ ವಿನಾ ಮಕ್ಕಳ ಮನಸ್ಸನ್ನು ಅರಳಿಸುವಂತಹ ಶಿಕ್ಷಣದ ಬಗ್ಗೆ ಅವರಿಗೆ ಅಸಡ್ಡೆ ಇರುವುದರ ದ್ಯೋತಕ ವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲಿಗೆ ಜಾರಿಗೆ ತಂದ ರಾಜ್ಯ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಹೀಗೆ ಘೋಷಿಸುತ್ತಲೇ, ಜ್ಞಾನದ ಹಿರಿ ಅರ್ಥವನ್ನು ಕುಬ್ಜ ಗೊಳಿಸಿ, ತ್ಯಾಜ್ಯವನ್ನು ಮಕ್ಕಳಿಗೆ ತುರುಕುವ ಯತ್ನ
ನಡೆದಿರುವುದನ್ನು ಪಠ್ಯ ಪರಿಷ್ಕರಣೆಯ ಎಡವಟ್ಟುಗಳೇ ಹೇಳುತ್ತವೆ.

‘ಅಜ್ಞಾನವೆಂಬ ತೊಟ್ಟಿಲೊಳಗೆ/ ಜ್ಞಾನವೆಂಬ ಶಿಶುವ ಮಲಗಿಸಿ/ಸಕಲ ವೇದಶಾಸ್ತ್ರವೆಂಬ ನೇಣಕಟ್ಟಿ/ ಹಿಡಿದು ತೂಗಿ/ಜೋಗುಳವಾಡುತ್ತಿದ್ದಾಳೆ ಭ್ರಾಂತಿ ಎಂಬ ತಾಯಿ/ ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ/ ಗುಹೇಶ್ವರ ಲಿಂಗ ಕಾಣಬಾರದು’ ಎಂದು ಅಲ್ಲಮಪ್ರಭು ಅವರು ಆ ಕಾಲಕ್ಕೆ ಚೆಂದದ ರೂಪಕವನ್ನು ಕಟ್ಟಿಕೊಟ್ಟಿದ್ದರು. ಬೆಳಕಿನೆಡೆಗೆ ಮಕ್ಕಳನ್ನು ಕರೆದೊಯ್ಯ ಬೇಕಾದ ಬೊಮ್ಮಾಯಿ ಮತ್ತು ನಾಗೇಶ್‌ ಅವರು,
ಜ್ಞಾನವನ್ನು ಅಜ್ಞಾನದ ತೊಟ್ಟಿಲೊಳಗೆ ಮಲಗಿಸಿ ಹಾಡುತ್ತಿರುವ ಜೋಗುಳವು ಊಳಿನಂತೆ ಕೇಳುತ್ತಿದೆ.

18ನೇ ಶತಮಾನದಲ್ಲಿ ಆಫ್ರಿಕಾದ ಕಪ್ಪುಜನರನ್ನು ಬೇಟೆಯಾಡಿ ಹಿಡಿಯುತ್ತಿದ್ದ ಬಿಳಿಯರು ಅವರ ಕೈಕಾಲು ಕಟ್ಟಿ, ಹಡಗುಗಳಲ್ಲಿ ತುಂಬಿ ಉತ್ತರ ಅಮೆರಿಕದಲ್ಲಿ ಗುಲಾಮರಾಗಿ ಮಾರುತ್ತಿದ್ದರು. ಲೇಖಕ ಅಲೆಕ್ಸ್‌ ಹೆಲಿ ತನ್ನ ‘ರೂಟ್ಸ್‌’ ಕಾದಂಬರಿಯಲ್ಲಿ ಈ ಕಥನ ಕಟ್ಟಿಕೊಟ್ಟಿದ್ದು, ಇದು ಸಿನಿಮಾ ಆಗಿದೆ. ಕಾದಂಬರಿ ಕಥಾ ನಾಯಕ ಕುಂಟಾ–ಕಿಂಟೆ ಬಿಳಿಯರ ವಿರುದ್ಧ ಕರಿಯರ ವಿಮೋಚನಾ ಹೋರಾಟವನ್ನೇ ಮುನ್ನಡೆಸಿದ ಕಥನ ವದು. ಈಗ ಹೀಗೆಲ್ಲ ಕಾಲು–ಕೈ ಕಟ್ಟಿ ಬಂಧಿಸಿ ತನ್ನ ಅಡಿಯಾಳಾಗಿಸುವುದು ಕಷ್ಟ. ಆದರೆ, ಪಠ್ಯ–ಅನಗತ್ಯ ವಿವಾದಗಳ ಮೂಲಕ ಒಂದೆರಡು ತಲೆಮಾರುಗಳನ್ನೇ ಬೌದ್ಧಿಕ ಗುಲಾಮಗಿರಿಗೆ ತಳ್ಳಿ, ಶಾಶ್ವತವಾಗಿ ಅವರನ್ನು ಪ್ರಶ್ನಿಸದಂತೆ ಮಾಡುವ ಅಪಾಯಕಾರಿ ನಡೆಯಂತೂ ಸಾಧ್ಯ. ದೈಹಿಕ ಬಂಧನಕ್ಕೆ ಒಳಗಾದವರಿಗೆ ಆಲೋಚನೆಯ ಸ್ವಾತಂತ್ರ್ಯವಿರುತ್ತದೆ; ಆದರೆ, ಮಿದುಳನ್ನೇ ಕೆರೆದು ತೆಗೆದು ವಿಷ ತುಂಬಿಸಿಬಿಟ್ಟರೆ, ಗುಲಾಮಿತನ ಶಾಶ್ವತವಾರುತ್ತದೆ.

‘ಚಾರ್ಲಿ 777’ ಸಿನಿಮಾ ನೋಡಿದ ಬೊಮ್ಮಾಯಿ ಅವರು ತಮ್ಮ ಪ್ರೀತಿಪಾತ್ರ ನಾಯಿ ‘ಸನ್ನಿ’ಯ ಅಗಲಿಕೆ ನೆನೆದು ಕಣ್ಣೀರಿಟ್ಟಿದ್ದಾರೆ. ಹೃದಯದಲ್ಲಿ ಒಳಿತನ್ನೇ ಬಯಸುವ ವ್ಯಕ್ತಿಯೊಳಗಿದ್ದ ಸಹಜ ವೇದನೆ ಹೀಗೆ ಉಮ್ಮಳಿಸಿದ್ದು ಅವರ ಭಾವುಕತೆಗೆ ಸಾಕ್ಷಿ. ಆದರೆ, ಹಿಜಾಬ್ ನಿರ್ಬಂಧದಿಂದ ಓದನ್ನೇ ತೊರೆದ ವಿದ್ಯಾರ್ಥಿನಿ ಯರು, ಜಾತಿದ್ವೇಷಕ್ಕೆ ಹತ್ಯೆಯಾಗುತ್ತಿರುವ ದಲಿತರು, ಧಾರ್ಮಿಕ ಹಗೆಗೆ ಈಡಾಗಿ ಹೊಟ್ಟೆಪಾಡಿನ ಕಲ್ಲಂಗಡಿ ಹಣ್ಣುಗಳು ಛಿದ್ರಗೊಳ್ಳುತ್ತಿದ್ದರೂ ಅಸಹಾಯಕರಾಗಿ ನಿಂತಿದ್ದ ನಬೀಸಾಬರು, ವಿವಾದದ ಕಾರಣಕ್ಕೆ ಪಠ್ಯಪುಸ್ತಕವೇ ಇಲ್ಲದೇ ಪರಿತಾಪ ಪಡುತ್ತಿರುವ ಸರ್ಕಾರಿ ಶಾಲೆಗಳ ಅಸಂಖ್ಯಾತ ಬಡ ಮಕ್ಕಳು, ತುಳುಕುತ್ತಿರುವ ಭ್ರಷ್ಟಾಚಾರದಿಂದ ಸೌಲಭ್ಯಗಳೇ ಸಿಗದೇ ಪರಿತಪಿಸುತ್ತಿ ರುವ ಸಾವಿರಾರು ಅಬಲರ ನೋವು ಕಂಡಾಗಲೂ ಅವರ ಕಣ್ಣಂಚಿನಲ್ಲಿ ನೀರಿನ ಪಸೆಯಾದರೂ ಹನಿಗಟ್ಟಬೇಕಿತ್ತು. ಹಾಗಾಗಿದ್ದರೆ, ನಾಡಿಗೆ ಆದರಣೀಯರಾದ ಎಸ್.ಆರ್. ಬೊಮ್ಮಾಯಿಯವರ ತಾಯ್ತನ ಮಗನಲ್ಲೂ ಇದೆ ಎಂದು ನಂಬಬಹುದಿತ್ತು.ಈಗಲಾದರೂ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿಯಾದರೂ ಮೌನ ತೊರೆಯಬೇಕಿದೆ. ತಮ್ಮದು ಬಸವಣ್ಣ–ಕುವೆಂಪು ಅವರ ಮಾರ್ಗವೋ ಅಥವಾ ಗೋಲ್ವಾಲ್ಕರದ್ದೋ ಎಂಬುದನ್ನು ಬಹಿರಂಗ ಪಡಿಸಬೇಕಿದೆ.

ಕರ್ನಾಟಕ ಇವತ್ತಿಗೂ 12ನೇ ಶತಮಾನದ ಅನುಭವ ಮಂಟಪವೇ. ಚರಿತ್ರೆಯಲ್ಲಿದ್ದ ಅನುಭವ ಮಂಟಪವನ್ನು ನೂರಾರು ಕೋಟಿ ಸುರಿದು ಮರುಕಟ್ಟಿದರೆ ಸಾಲದು. ಅಲ್ಲಿ ನೆರೆದು ಬೆಳಕಿನ ದಾರಿ ಹುಡುಕುತ್ತಿದ್ದ, ಸಾಮಾನ್ಯ ರನ್ನು ಅರವಿನ ಮನೆಗೆ ಒಳಗು ಮಾಡಿಕೊಳ್ಳುತ್ತಿದ್ದ ಅಲ್ಲಮ, ಮಾದಾರ ಚನ್ನಯ್ಯ, ಸೂಳೆ ಸಂಕವ್ವ, ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಂಬೋಳಿ ನಾಗಿದೇವ, ಕನ್ನಡಿ ಕಾಯಕದ ರೇಮವ್ವ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಕದಿರೆ ರೆಮ್ಮವ್ವೆ... ಇಂತಹ ಶರಣರ ಕುಡಿಗಳು ಕೂಡಿಯೇ ಕರ್ನಾಟಕವನ್ನು ಕಟ್ಟುತ್ತಿದ್ದಾರೆ. ಇಂತಹ ಹೊತ್ತಿನೊಳಗೆ ಬೊಮ್ಮಾಯಿಯವರು, ಅಂದು ವೈದಿಕರಿಗೆ ಬುದ್ಧಿಕೊಟ್ಟ ಬಿಜ್ಜಳನಾಗಕೂಡದು; ಅವರ ಹೆಸರಿಗೆ ತಕ್ಕಂತೆ ಬಸವಣ್ಣನೇ ಆಗಲಿ; ಆಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT