ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ‘ಪ್ರಮಾಣ’ –ಮುಗಿಯದ ‘ಪ್ರಯಾಸ’

Last Updated 17 ಮೇ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿ ಗಾದಿಗೇರಿದ ಬಿ.ಎಸ್‌. ಯಡಿಯೂರಪ್ಪ, ಇದೀಗ ಸರ್ಕಾರ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಕಮಲ ಪಕ್ಷ ನಾನಾ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ.

ಅತ್ತ ಮುಖ್ಯಮಂತ್ರಿ ಕುರ್ಚಿಯಲ್ಲಿ ಯಡಿಯೂರಪ್ಪ ಕುಳಿತುಕೊಳ್ಳುತ್ತಿದ್ದಂತೆ ಇತ್ತ, ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಶಾಸಕರ ಜೊತೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು, ಬಿಜೆಪಿಯ ತಂತ್ರಗಾರಿಕೆಗಳಿಗೆ ತಡೆಯೊಡ್ಡಲು ಮುಂದಾಗಿದ್ದಾರೆ. ಎಲ್ಲ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳುವ ಜತೆಗೆ, ಕಾನೂನು ಹೋರಾಟ ಮುಂದುವರಿಸಿ ಅಧಿಕಾರ ಕೈವಶ ಮಾಡಿಕೊಳ್ಳಲು ಶತಪ್ರಯತ್ನದಲ್ಲಿದ್ದಾರೆ.

ಸಂಖ್ಯಾ ಬಲ ಹೊಂದಿಸಲೇ ಬೇಕೆಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ, ಕಾಂಗ್ರೆಸ್– ಜೆಡಿಎಸ್‌ ಶಾಸಕರನ್ನು ಸೆಳೆಯಲು ಗೌಪ್ಯ ಕಾರ್ಯಾಚರಣೆಗಿಳಿದಿದೆ. ಈ ಎರಡೂ ಪಕ್ಷಗಳಲ್ಲಿರುವ ಲಿಂಗಾಯತ, ರೆಡ್ಡಿ, ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಸೇರಿದ ಶಾಸಕರ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಿಗೆ ಹೊಣೆಗಾರಿಕೆ ನೀಡಿದೆ. ಕಲಬುರ್ಗಿ, ವಿಜಯಪುರ, ಬೆಳಗಾವಿ, ಕೊಪ್ಪಳ, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವವರನ್ನು ಸೆಳೆಯಲು ಕಸರತ್ತು ನಡೆಸುತ್ತಿದೆ.

‘ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಲು ಆ ಪಕ್ಷಗಳ ಶಾಸಕರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಾಸ ಮತಯಾಚನೆ ವೇಳೆ ‌ನಿಮ್ಮ ಊಹೆಗೂ ನಿಲುಕದಷ್ಟು ಸಂಖ್ಯೆಯಲ್ಲಿ ನಾವು ಗೆಲ್ಲುತ್ತೇವೆ’ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಶಾಸಕರ ಹಿಡಿತದಲ್ಲಿಟ್ಟುಕೊಳ್ಳುವ ಹೊಣೆಯನ್ನು ಹಿರಿಯ ಮುಖಂಡ ಶಾಮನೂರ ಶಿವಶಂಕರಪ್ಪ ಅವರಿಗೆ ನೀಡಲಾಗಿದೆ. ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ವಿಶೇಷ ವಿಮಾನದ ಮೂಲಕ ಕೇರಳದ ಕೊಚ್ಚಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಕೆಲವು ಕಿರಿಯ ಮತ್ತು ಇತರ ಪಕ್ಷಗಳಿಂದ ವಲಸೆ ಬಂದು ಶಾಸಕರಾದವರಿಗೆ ಮೊಬೈಲ್ ಬಳಕೆಗೆ ನಿರ್ಬಂಧಿಸಲಾಗಿದೆ. ಸ್ಥಳಾಂತರವನ್ನು ಖಚಿತಪಡಿಸಿರುವ ಡಿ.ಕೆ. ಶಿವಕುಮಾರ್, ಎಲ್ಲಿಗೆ ಕರೆದೊಯ್ಯಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಿಲ್ಲ.

‘ನಮ್ಮ ಇಬ್ಬರು ಶಾಸಕರನ್ನು ಬಿಜೆಪಿಯವರು ಕೂಡಿಟ್ಟುಕೊಂಡಿದ್ದಾರೆ. ಅವರನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದೂ ಗೊತ್ತಿದೆ. ನಾನು ಮನಸ್ಸು ಮಾಡಿ
ದರೆ 24 ಗಂಟೆಯಲ್ಲಿ ಅವರನ್ನು ಕರೆದುಕೊಂಡು ಬರುತ್ತೇನೆ. ಒಂದು ವೇಳೆ ಅವರು ಹೋಗುವುದಾರೆ ರಾಜೀನಾಮೆ ಪಡೆದುಕೊಳ್ಳುತ್ತೇವೆ’ ಎಂದು ಶಿವಕುಮಾರ್‌ ತಿಳಿಸಿದರು.

‘ವಿಶ್ವಾಸ ಮತ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿರುವುದು ಯಡಿಯೂರಪ್ಪ ಅವರ ಭಂಡತನ. ಕಾಂಗ್ರೆಸ್‍ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ. ಆನಂದ್‍ ಸಿಂಗ್ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್ ಬಂದೇ ಬರುತ್ತಾರೆ. ಪ್ರತಾಪ್ ಗೌಡ ಪಾಟೀಲ ಅನಾರೋಗ್ಯದಿಂದಿದ್ದಾರೆ. ಅವರು ಕಾಂಗ್ರೆಸ್‍ನಲ್ಲೇ ಇದ್ದಾರೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

‘ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಮಾಡಿಲ್ಲ. ಆಗಲೇ  ಅಧಿಕಾರಿಗಳ ವರ್ಗಾವಣೆಗೆ ಕೈಹಾಕಿದ್ದಾರೆ. ಬಿಜೆಪಿಯವರು ನಮ್ಮ ಯಾವುದೇ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ. ನಮ್ಮ ಮೂವರು ಶಾಸಕರನ್ನು ಸೆಳೆದರೆ ನಾವು ಬಿಜೆಪಿಯ ಆರು ಶಾಸಕರನ್ನು ಸೆಳೆಯುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

‘ಕಾಂಗ್ರೆಸ್, ಜೆಡಿಎಸ್ ಶಾಸಕರ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳ ಮೂಲಕ ಬಿಜೆಪಿ  ಒತ್ತಡ ಹೇರುತ್ತಿದೆ.ಈಗಾಗಲೇ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರಿಗೆ ಬೆದರಿಕೆಯೊಡ್ಡಿರುವ ಬಿಜೆಪಿ ಅವರನ್ನು ಹಿಡಿದಿಟ್ಟುಕೊಂಡಿದೆ’ ಎಂದೂ ಆರೋಪಿಸಿದರು.

‘ಆಪರೇಷನ್ ಕಮಲ’ಕ್ಕೆ ಯತ್ನಾಳ ಸಾರಥ್ಯ?

ಬಿಜೆಪಿಗೆ ಅಗತ್ಯವಿರುವ ಸಂಖ್ಯೆಯ ಶಾಸಕರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸೆಳೆಯುವ ಜವಾಬ್ದಾರಿಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಗಲಿಗೆ ನೀಡಲಾಗಿದೆ. ಯತ್ನಾಳಗೆ ಸಾಥ್‌ ನೀಡುವಂತೆ  ವೀರಣ್ಣ ಚರಂತಿಮಠ, ಉಮೇಶ ಕತ್ತಿ ಅವರಿಗೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

‘ಕಾಂಗ್ರೆಸ್‌, ಜೆಡಿಎಸ್‌ನಿಂದ ಆಯ್ಕೆಯಾದ ಶಾಸಕರನ್ನು ವೈಯಕ್ತಿಕ ಸ್ನೇಹ ಬಳಸಿಕೊಂಡು ಸೆಳೆಯಿರಿ ಎಂಬ ಸೂಚನೆಯನ್ನು ಬಸನಗೌಡರಿಗೆ ನೀಡಲಾಗಿದೆ’ ಎಂದು ಯತ್ನಾಳ ಆಪ್ತರೊಬ್ಬರು ಹೇಳಿದ್ದಾರೆ.

‘ಪಕ್ಷದ ವರಿಷ್ಠರು ಸೂಚನೆ ನೀಡಿರುವುದು ನಿಜ. ನಾಲ್ಕೈದು ಶಾಸಕರ ಜತೆ ಮಾತುಕತೆ ನಡೆಯಲಿದೆ’ ಎಂದು ಯತ್ನಾಳ ಸ್ಪಷ್ಟಪಡಿಸಿದ್ದಾರೆ.

ಆಯಕ್ಕಟಿನ ಸ್ಥಾನಗಳಿಗೆ ನಂಬಿಕಸ್ಥರು

ಬೆಂಗಳೂರು: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಆಯಕಟ್ಟಿನ ಹುದ್ದೆಗಳಲ್ಲಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸರಣಿ ಆರಂಭಗೊಂಡಿದೆ.

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ, ಕಾರ್ಯದರ್ಶಿ ಹುದ್ದೆಗೆ ವಿ.ಪಿ. ಇಕ್ಕೇರಿ ಅವರನ್ನು ನೇಮಕ ಮಾಡಲಾಗಿದೆ.

ಗುಪ್ತಚರ ಇಲಾಖೆಗೆ ಸರ್ಜರಿ: ಅಧಿಕಾರದ ಉಳಿವಿಗಾಗಿ ಕಸರತ್ತು ನಡೆಸುತ್ತಿರುವ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷಗಳ ತಂತ್ರಗಾರಿಕೆಯ ಮಾಹಿತಿ ಹೆಕ್ಕಲು, ಗುಪ್ತಚರ ವಿಭಾಗಕ್ಕೆ ತಮ್ಮ ನಂಬಿಕಸ್ಥ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ.

ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಹಾಗೂ ಡಿಐಜಿ ಸಂದೀಪ್ ಪಾಟೀಲ್ ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದಾರೆ. ಬೀದರ್ ಎಸ್ಪಿ ಡಿ.ದೇವರಾಜ್ ಬೆಂಗಳೂರು ಕೇಂದ್ರ ವಿಭಾಗಕ್ಕೆ ಹಾಗೂ ಎಸಿಬಿ ಎಸ್ಪಿ ಎಸ್‌.ಗಿರೀಶ್ ಅವರು ಬೆಂಗಳೂರು ಈಶಾನ್ಯ ವಿಭಾಗಕ್ಕೆ ವರ್ಗವಾಗಿದ್ದಾರೆ.

ರೆಸಾರ್ಟ್ ಭದ್ರತೆ ವಾಪಸ್: ಕಾಂಗ್ರೆಸ್‌ ಶಾಸಕರು ಬೀಡುಬಿಟ್ಟಿರುವ ರಾಮನಗರ ಜಿಲ್ಲೆಯ ಬಿಡದಿಯ ಈಗಲ್‌ಟನ್ ರೆಸಾರ್ಟ್‌ಗೆ ಒದಗಿಸಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದೆ. ಅದರ ಬೆನ್ನಲ್ಲೇ, ಚಿಕ್ಕಮಗಳೂರು ಎಸ್ಪಿ ಕೆ.ಅಣ್ಣಾಮಲೈ ಅವರನ್ನು ಈ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT