ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೀಶ ದೊಡ್ಡಮನಿ ಅಂಕಣ| ಕ್ರೀಡೆ: ಕಾಡುತ್ತಿದೆ ಲೈಂಗಿಕ ದೌರ್ಜನ್ಯದ ಪೀಡೆ

ದೇಶದ ಘನತೆ ಹೆಚ್ಚಿಸುವ ಕ್ರೀಡಾತಾರೆಗಳಿಗೂ ತಪ್ಪದ ಕಿರಿಕಿರಿ
Last Updated 6 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಫ್ರಾನ್ಸ್ ದೇಶದ ಟೆನಿಸ್ ಆಟಗಾರ್ತಿ ಫಿಯೊನಾ ಫೆರೊ ಈಚೆಗೆ ನೀಡಿರುವ ಹೇಳಿಕೆಯೊಂದು ಮಹಿಳಾ
ಕ್ರೀಡಾಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಲ ಎಷ್ಟೇ ಬದಲಾಗಿದ್ದರೂ, ವನಿತೆಯರು ಕ್ರೀಡಾಕ್ಷೇತ್ರದಲ್ಲಿ ಉತ್ತುಂಗ ಸಾಧನೆ ಮಾಡಿದ್ದರೂ ಲೈಂಗಿಕ ದೌರ್ಜನ್ಯದ ಆಕ್ಟೊಪಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

‘2012ರಿಂದ 2015ರವರೆಗಿನ ಅವಧಿಯಲ್ಲಿ ಕೋಚ್ ಪಿಯರ್ ಬೊಟೆಯರ್ ಮೂರು ವರ್ಷಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೇ ಹಲ್ಲೆ ಕೂಡ ಮಾಡಿದ್ದ’ ಎಂದು ಫಿಯೊನಾ ಹೋದವಾರ ಬಹಿರಂಗಪಡಿಸಿದ್ದರು. ಅವರಿಗೆ ಈಗ ಹಲವು ತಾರಾ ಆಟಗಾರ್ತಿಯರು ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಲು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಹಿಂದೆಯೇ ಬೆಲಾರಸ್‌ ದೇಶದ ತಾರಾ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಅವರು, ಡಬ್ಲ್ಯುಟಿಎ ಟೂರ್‌ಗಳಲ್ಲಿ ಯುವ ಆಟಗಾರ್ತಿಯರ ಮೇಲೆ ತರಬೇತುದಾರರು ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಹೊಸದೇನಲ್ಲ. ಆದರೆ ಈ ಪಿಡುಗನ್ನು ತಡೆಯಲು ಆದ್ಯತೆ ನೀಡಬೇಕು ಎಂದಿದ್ದಾರೆ.

ಆಟಗಾರ್ತಿಯರ ಕೌನ್ಸಿಲ್ ಸದಸ್ಯೆಯೂ ಆಗಿರುವ ಅಜರೆಂಕಾ ಹೇಳಿಕೆಯು ನಿಜಕ್ಕೂ ಟೆನಿಸ್ ಕ್ರೀಡೆಯ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿಯಾಗಿದೆ. ಏಕೆಂದರೆ, ಭವಿಷ್ಯದ ತಾರೆಯರು ಸಿದ್ಧವಾಗುವುದೇ ಈ ಡಬ್ಲ್ಯುಟಿಎ ಟೂರ್ನಿಗಳಲ್ಲಿ. ಇದು ಹೊಸಪ್ರತಿಭೆಗಳಿಗೆ ಚಿಮ್ಮುಹಲಗೆಯೂ ಹೌದು. ಆದರೆ ಈ ಹಂತದಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಈ ಎಳೆಯ ಮನಸ್ಸುಗಳ ಮೇಲಾಗುವ ಪರಿಣಾಮ ಏನು?

ಹೋದ ಮಾರ್ಚ್‌ನಲ್ಲಿ ಅಮೆರಿಕದ ಕೈಲಿ ಮೆಕೆಂಜಿಯವರ ಪ್ರಕರಣವನ್ನೇ ನೋಡಿ. ಕೋಚ್ ಅನಿಬಾಲ್ ಅರಂದಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ನೀಡಿದರೂ ಯು.ಎಸ್. ಟೆನಿಸ್ ಸಂಘಟನೆಯು (ಯುಎಸ್‌ಟಿಎ) ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಯುಎಸ್‌ಟಿಎ ಮೇಲೆ ಕೋರ್ಟ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನ ಪ್ರತಿಯಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯದ ಕುರಿತು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿಯೂ ಅದನ್ನೇ ಹೇಳಿದ್ದರು. ಸಂತ್ರಸ್ತೆಯೆಂಬ ಕಾರಣಕ್ಕೆ ಹೆಸರು ಮುಚ್ಚಿಡಬೇಡಿ, ತಮ್ಮ ಹೆಸರಿನೊಂದಿಗೆ ಸುದ್ದಿ ಪ್ರಕಟಿಸಿ ಎಂದೂ ಅಸೋಸಿಯೇಟೆಡ್ ಪ್ರೆಸ್‌ (ಎಪಿ) ಸುದ್ದಿಸಂಸ್ಥೆಗೆ ಮೆಕೆಂಜಿ ತಿಳಿಸಿದ್ದರು.

‘ಆತ ನನ್ನ ಗುಪ್ತಾಂಗಕ್ಕೆ ಕೈಹಾಕಿದ್ದ. ಪ್ರತಿದಿನ ನನ್ನ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇಂತಹ ನಡವಳಿಕೆಗಳಿಂದ ನಾನು ಆತಂಕಿತಳಾಗಿದ್ದೆ. ಅಲ್ಲದೇ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ಇಂತಹ ನಡವಳಿಕೆಗಳಿಂದ ನಮ್ಮ ಆತ್ಮಗೌರವ ಹಾಗೂ ಆತ್ಮವಿಶ್ವಾಸ ಕುಂದುತ್ತವೆ’ ಎಂದು ಮೆಕೆಂಜಿ ಹೇಳಿದ್ದರು.

ಯುರೋಪ್ ದೇಶಗಳು, ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿ ಟೆನಿಸ್‌ ಆಟಕ್ಕೆ ಅನುಗಾಲದಿಂದಲೂ ರಾಜಮರ್ಯಾದೆ ಇದೆ. ಕಟ್ಟುನಿಟ್ಟಿನ ನಿಯಮಗಳು ಇವೆ. ಗ್ರ್ಯಾನ್‌ಸ್ಲಾಂ ಟೂರ್ನಿಗಳೆಂದರೆ ಪ್ರತಿಷ್ಠಿತ
ವಾದವುಗಳು. ಮಾರ್ಗರೆಟ್‌ ಕೋರ್ಟ್, ಸ್ಟೆಫಿ ಗ್ರಾಫ್, ಮೋನಿಕಾ ಸೆಲೆಸ್, ಮಾರ್ಟಿನಾ ನವ್ರಾಟಿಲೊವಾ, ಸೆರೆನಾ ವಿಲಿಯಮ್ಸ್, ವೀನಸ್ ವಿಲಿಯಮ್ಸ್ ಅವರಂತಹ ದಿಗ್ಗಜ ಆಟಗಾರ್ತಿಯರ ಸಾಧನೆಗಳು ಸ್ಫೂರ್ತಿ ತುಂಬುತ್ತವೆ. ಅವರಂತೆ ಆಗಬೇಕು ಎಂದು ಟೆನಿಸ್ ಅಂಕಣಕ್ಕೆ ಬರುವ ಪ್ರತಿಭೆಗಳಿಗೆ ಸುರಕ್ಷತೆ ಎಲ್ಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಈ ಪಿಡುಗು ಟೆನಿಸ್‌ಗಷ್ಟೇ ಸೀಮಿತವಾಗಿಲ್ಲ. ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನ ಚಿನ್ನದ ಹುಡುಗಿ ಸಿಮೊನಾ ಬೈಲ್ಸ್‌ ಹೋದ ವರ್ಷ ನ್ಯಾಯಾಂಗ ಸಮಿತಿಯ ಮುಂದೆ ನೀಡಿದ್ದ ಹೇಳಿಕೆಗಳು ನಿಜಕ್ಕೂ ಮೈನಡುಗಿಸಿದ್ದವು. ತಮ್ಮ ತಂಡದ ವೈದ್ಯ ಲ್ಯಾರಿ ನಾಸರ್ ಮಾಡಿದ ದೌರ್ಜನ್ಯಗಳ ಕುರಿತು ತಾವು ದೂರು ಕೊಟ್ಟಾಗ ಎಫ್‌ಬಿಐ ಅಧಿಕಾರಿಗಳು ಮತ್ತು ಅಮೆರಿಕ ಜಿಮ್ನಾಸ್ಟಿಕ್ಸ್ ಫೆಡರೇಷನ್ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಧೋರಣೆಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದರು. ಬೈಲ್ಸ್‌ ಹಾಗೂ ಅವರೊಂದಿಗೆ ಇದ್ದ ಮೂವರು ಜಿಮ್ನಾಸ್ಟ್‌ಗಳೂ ತಮ್ಮ ಮೇಲಿನ ದೌರ್ಜನ್ಯದ ಘಟನೆಗಳನ್ನು ಆಗ ಬಹಿರಂಗಪಡಿಸಿದರು. 58 ವರ್ಷದ ಲ್ಯಾರಿ ನಾಸರ್‌ಗೆ2018ರಲ್ಲಿಯೇ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜೈಲಿಗೆ ತಳ್ಳಲಾಗಿದೆ.

‘ನಾನು ಲ್ಯಾರಿಯನ್ನು ಖಂಡಿಸುವಷ್ಟೇ, ಇಡೀ ವ್ಯವಸ್ಥೆಯನ್ನೂ ದೂಷಿಸುತ್ತೇನೆ. ಅವನ ವಿಕೃತ ಕಾರ್ಯಗಳಿಗೆ ಕಡಿವಾಣ ಹಾಕದ ವ್ಯವಸ್ಥೆಗೆ ಧಿಕ್ಕಾರ’ ಎಂದು 24 ವರ್ಷದಬೈಲ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಅಮೆರಿಕ ಜಿಮ್ನಾಸ್ಟಿಕ್ಸ್ ಮತ್ತು ಮಿಷಿಗನ್ ಸ್ಟೇಟ್ ವಿಶ್ವ ವಿದ್ಯಾಲಯದಲ್ಲಿ (ಎಂಎಸ್‌ಯು) ವೈದ್ಯನಾಗಿದ್ದ ಲ್ಯಾರಿ ಮೇಲೆ 70ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದ ಆರೋಪ ಇತ್ತು. ಈ ಬಗ್ಗೆ ಎಫ್‌ಬಿಐಗೆ ಅಮೆರಿಕ ಜಿಮ್ನಾಸ್ಟಿಕ್ಸ್‌ 2015ರಲ್ಲಿಯೇದೂರು ನೀಡಿತ್ತು. ಆದರೂ ಲ್ಯಾರಿ ತನ್ನ ಹುದ್ದೆಯಲ್ಲಿ ಮುಂದುವರಿದಿದ್ದ. 2016ರಲ್ಲಿ ಸುದ್ದಿಪತ್ರಿಕೆಯೊಂದು ಆತನ ಕರ್ಮಕಾಂಡಗಳ ಲೇಖನ ಪ್ರಕಟಿಸಿದಾಗ ಎಫ್‌ಬಿಐ ಗಂಭೀರ ಕ್ರಮಕ್ಕೆ ಮುಂದಾಯಿತು.

ಅಮೆರಿಕದಂತಹ ಮುಂದುವರಿದ ದೇಶದಲ್ಲಿಯೇ ಈ ಪರಿಸ್ಥಿತಿ ಇದ್ದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೇಗಿದ್ದೀತು?

ಕ್ರೀಡಾಪಟುಗಳನ್ನು ಪೋಷಿಸಿ ಬೆಳೆಸಬೇಕಾದ ಭಾರತ ಕ್ರೀಡಾ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ವರದಿಯಾಗಿವೆ. 2010ರಿಂದ 2019ರವರೆಗೆ 24 ಎಸ್‌ಎಐಗಳಲ್ಲಿ 45 ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ 29 ಕೋಚ್‌ಗಳ ಮೇಲೆ ದೂರುಗಳು ದಾಖಲಾಗಿದ್ದವು.

ಈ ಪೈಕಿ ಐವರು ಕೋಚ್‌ಗಳಿಗೆ ಸಂಬಳ ಕಡಿತದ ಶಿಕ್ಷೆ ನೀಡಲಾಗಿತ್ತು. ಇಬ್ಬರು ಕೋಚ್‌ಗಳ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು. ಒಬ್ಬ ಕೋಚ್ ಸಸ್ಪೆಂಡ್ ಆಗಿದ್ದರೆ, ಐವರು ಖುಲಾಸೆಯಾಗಿದ್ದರು. ಹೋದ ವರ್ಷ ಒಬ್ಬ ಕೋಚ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಲೋಕಸಭೆಗೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿತ್ತು.

ಕ್ರೀಡೆಗಳ ಬೆಳವಣಿಗೆ ಹಾಗೂ ಕ್ರೀಡಾಪಟುಗಳ ಏಳ್ಗೆಯಲ್ಲಿ ಕ್ರೀಡಾ ತರಬೇತುದಾರರು, ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಅವರು ತಪ್ಪಾಗಿ ನಡೆದುಕೊಂಡಾಗ ಇಡೀ ವ್ಯವಸ್ಥೆ ಅಸ್ಥಿರಗೊಳ್ಳುತ್ತದೆ. ಕ್ರೀಡೆಯಲ್ಲಿ ಮಹಿಳೆಯರ ಸಾಧನೆಗೆ ಹಿನ್ನಡೆಯಾಗುತ್ತದೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಷ್ಟೇ ಅಲ್ಲ. ಲಿಂಗತಾರತಮ್ಯ ಮತ್ತು ನಿರ್ಲಕ್ಷ್ಯ ಧೋರಣೆಗಳೂ ಕ್ರೀಡೆಗೆ ಅಂಟಿರುವ ಶಾಪ. ಇದು ಕ್ರೀಡಾಕ್ಷೇತ್ರದೊಳಗಿನ ಸಂಕಷ್ಟ ಗಳಾದರೆ, ಸಮಾಜ ಹಾಗೂ ಕೌಟುಂಬಿಕವಾಗಿಯೂ ಭಾರತದ ಮಹಿಳೆಯರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನಗಾಥೆಯೇ ಇದಕ್ಕೆ ಉದಾಹರಣೆ. ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಆಟಗಾರ್ತಿ ವಂದನಾ ಕಠಾರಿಯಾ ಅವರ ಮನೆ ಮುಂದೆ ದುಷ್ಕರ್ಮಿಗಳು ಗದ್ದಲ ಮಾಡಿದ್ದರು. ಜಾತಿ ನಿಂದನೆ ಮಾಡಿ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದರು. ಹರಿಯಾಣದಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಕುಸ್ತಿ ಅಖಾಡಕ್ಕೆ ಇಳಿಸಲು ಮುಂದಾಗಿದ್ದ ಮಹಾವೀರ್ ಫೋಗಾಟ್ ಎದುರಿಸಿದ ಸವಾಲುಗಳು ಒಂದೆರಡಲ್ಲ. ಸಮವಸ್ತ್ರದ ಕಾರಣಕ್ಕಾಗಿಯೇ ವಯಸ್ಕ ಹೆಣ್ಣಮಕ್ಕಳು ಈಜು ಹಾಗೂ ಜಿಮ್ನಾಸ್ಟಿಕ್ಸ್‌ ಕ್ರೀಡೆಗಳನ್ನು ಬಿಟ್ಟು ಬೇರೆ ಕ್ರೀಡೆಗಳತ್ತ ವಾಲುವುದು
ನಿಂತಿಲ್ಲ.

ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್, ಬಾಕ್ಸಿಂಗ್ ಪಟು ಮೇರಿ ಕೋಮ್, ನಿಖತ್ ಜರೀನ್ ಅವರ ಸಾಧನೆಯಿಂದ ಪ್ರೇರಣೆಗೊಂಡು ಕ್ರೀಡೆಗೆ ಬರಲು ಹಾತೊರೆಯುವ ಬಾಲೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಸಮಾಜದ ಹೊಣೆ. ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ಫಿಯೊನಾ ಅವರಂತೆ ಮುಕ್ತವಾಗಿ ಹೇಳಿಕೊಳ್ಳಲು ಮುಂದಾಗುವ ಹೆಣ್ಣುಮಕ್ಕಳಿಗೆ ಗಟ್ಟಿಯಾದ ಹಾಗೂ ಪ್ರಾಮಾಣಿಕವಾದ ಬೆಂಬಲ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕು. ಆಗ ಮಾತ್ರ ಮಹಿಳೆಯರ ಕ್ರೀಡಾ ಸಾಧನೆಗಳ ಹೊಳಪು ಹೆಚ್ಚುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT