ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಕೇಳಿದಷ್ಟು ಅನುದಾನ ಕೊಡಿಸುವೆ: ಡಬಲ್ ಹ್ಯಾಟ್ರಿಕ್‌ನ ರಮೇಶ ಜಿಗಜಿಣಗಿ

ವಿಜೇತರ ಮನದಾಳ
Last Updated 25 ಮೇ 2019, 19:30 IST
ಅಕ್ಷರ ಗಾತ್ರ

ವಿಜಯಪುರ:ಪಕ್ಕಾ ಜವಾರಿ ಶೈಲಿ. ವಿನಯ ನಡವಳಿಕೆ. ಹಿರಿಯ–ಕಿರಿಯರನ್ನು ಗೌರವಿಸುವಿಕೆ. ಸರಳತನ. ಸೌಮ್ಯ ಸ್ವಭಾವದ ರಮೇಶ ಜಿಗಜಿಣಗಿ ವಿಜಯಪುರ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಛಾಪು ಹೊಂದಿದವರು. ಬದ್ಧತೆ, ನಿಷ್ಠೆಗೆ ಹೆಸರಾದವರು. ರಾಮಕೃಷ್ಣ ಹೆಗಡೆ ಶಿಷ್ಯ ಎಂದೇ ಇಂದಿಗೂ ಹೇಳಿಕೊಳ್ಳುವವರು.

ಪಕ್ಷದ ಸೂಚನೆ, ಆದೇಶವನ್ನು ಶಿರಸಾ ವಹಿಸಿ ಪಾಲಿಸುವರು. ಮೂರುವರೆ ದಶಕಗಳಿಗೂ ಹೆಚ್ಚು ಅವಧಿ ತನ್ನ ಅಸ್ಮಿತೆಯಾಗಿದ್ದ ಗಾಂಧಿ ಟೋಪಿಯನ್ನು ಹಿರಿಯರ ಒಂದೇ ಮಾತಿಗೆ ತೆಗೆದಿಟ್ಟವರು. ತಾಯಿಯ ಮಾತಿಗೆ ಮನ್ನಣೆ ನೀಡಿ ದೇಗುಲ ಪ್ರವೇಶಿಸದವರು, ಹಿರಿಯರು ಸೂಚಿಸುತ್ತಿದ್ದಂತೆ ಮರು ಮಾತನಾಡದೆ, ದೇಗುಲ ಪ್ರವೇಶಿಸಿ, ದೇವರ ದರ್ಶನ ಪಡೆದವರು.

ಲಿಂಗಾಯತ ಶಕ್ತಿ ಹೊಂದಿದ್ದ ಬಿಜೆಪಿಗೆ, ದಲಿತ ಎಡಗೈ ಬಲವನ್ನು ತುಂಬಿ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಭಾರತೀಯ ಜನತಾ ಪಕ್ಷಕ್ಕೆ ಹುಲ್ಲು ಕಡ್ಡಿಯಂತೆ ಆಸರೆಯಾದವರು ರಮೇಶ ಜಿಗಜಿಣಗಿ.

ಗುರುವಿನ ಆದೇಶ ಪಾಲನೆಗಾಗಿ ಸಚಿವ ಸ್ಥಾನವನ್ನೇ ತ್ಯಜಿಸಿ, ಪರಿಚಯವೇ ಇಲ್ಲದ ಚಿಕ್ಕೋಡಿ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಕೇಂದ್ರ ಸಚಿವೆಯನ್ನೇ ಮಣಿಸಿದ ಖ್ಯಾತಿ ಹೊಂದಿದವರು. 1998ರಿಂದಲೂ ಲೋಕಸಭೆಯ ಕಾಯಂ ಪ್ರತಿನಿಧಿಯಾಗಿದ್ದು, ಇದೀಗ ಡಬಲ್‌ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು, ಅತ್ಯಂತ ಹೆಚ್ಚು ಅಂತರದ ಮತಗಳ ಗೆಲುವಿನ ದಾಖಲೆಯನ್ನು ನಿರ್ಮಿಸಿದ ರಮೇಶ ಜಿಗಜಿಣಗಿ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಗೆಲುವನ್ನು ಹೇಗೆ ವಿಶ್ಲೇಷಿಸುತ್ತೀರಿ ?

ಖಂಡಿತಾ ಇದು ನನ್ನ ಗೆಲುವಲ್ಲ. ವಿಜಯಪುರಿಗರ ಗೆಲುವು. ಬಿಜೆಪಿ ಕಾರ್ಯಕರ್ತರ ಗೆಲುವು. ಮೋದಿಯ ಗೆಲುವು. ಐದು ವರ್ಷದಲ್ಲಿನ ದೇಶದ ಅಭಿವೃದ್ಧಿಯ ಗೆಲುವು. ಕ್ಷೇತ್ರಕ್ಕೆ ಮೋದಿ ನೀಡಿದ ಕಾಣಿಕೆ, ಕೊಡುಗೆಗಳು ಸಹ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

* ಗೆಲುವಿನಲ್ಲಿ ನಿಮ್ಮ ಪಾತ್ರವೇನು ?

ಎನಗಿಂತ ಕಿರಿಯನಿಲ್ಲ. ಶಿವಭಕ್ತನಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ನುಡಿ ಪಾಲಿಸುವಾತ ನಾನು. ನನ್ನ ರಾಜಕೀಯ ಗುರು ರಾಮಕೃಷ್ಣ ಹೆಗಡೆ ಆದೇಶದಂತೆ ಎಂದೆಂದೂ ಜಾತಿ ರಾಜಕಾರಣ ಮಾಡದವ. ದಲಿತನಾದರೂ ಎಲ್ಲ ವರ್ಗದ ಜನರೊಟ್ಟಿಗೆ ನಾನಿರುವೆ. ಎಲ್ಲರನ್ನೂ ಗೌರವಿಸುವೆ. ಕೆಲ ಸ್ವಾರ್ಥಿ ರಾಜಕಾರಣಿಗಳಷ್ಟೇ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದರು. ಆದರೆ ವಿಜಯಪುರಿಗರು ಮಾತ್ರ ಜಿಗಜಿಣಗಿ ನಮ್ಮವ ಎಂದು ನನಗೆ ಮತ ಹಾಕಿದರು. ಇದರಿಂದ ದೊಡ್ಡ ಪ್ರಮಾಣದ ಗೆಲುವು ಸಾಧಿಸಿದೆ.

ನಾಲ್ಕುವರೆ ದಶಕದಿಂದ ಜನರೊಟ್ಟಿಗಿರುವೆ. ಅಧಿಕಾರವಿದ್ದಾಗ ಸಹ ಎಂದೆಂದೂ ದುರಂಹಕಾರದಿಂದ ನಡೆದುಕೊಂಡಿಲ್ಲ. ಅಧಿಕಾರ ಇರಲಿ–ಬಿಡಲಿ ಯಾವಾಗಲೂ ಸಮಚಿತ್ತದಿಂದಿರುವೆ. ಇದೇ ನನ್ನ ಕೈ ಹಿಡಿದಿದೆ.

* ಪ್ರಚಾರದಲ್ಲಿ ನೀವೇ ಟಾರ್ಗೆಟ್‌ ಆಗಿದ್ರೀ..?

ಹೌದೌದು..! ವಿರೋಧಿಗಳು ನನ್ನ ವಿರುದ್ಧ ಅಪಪ್ರಚಾರ ಹೆಚ್ಚೆಚ್ಚು ಮಾಡಿದಷ್ಟು ನನಗೆ ವರದಾನವಾಯ್ತು. ಎಷ್ಟು ಅಪ ಪ್ರಚಾರ ನಡೆಯಿತು, ಅಷ್ಟೇ ಪ್ರಮಾಣದ ಹೆಚ್ಚಿನ ಮತಗಳು ಕಮಲದ ಬುಟ್ಟಿಗೆ ಬಿದ್ದವು. ಅಪಪ್ರಚಾರ ಮಾಡಿದವರು ನಾಯಕರು. ಇವರ‍್ಯಾರು ಮತ ಹಾಕುವವರಲ್ಲ. ಎಲ್ಲವನ್ನೂ ಗಮನಿಸಿದ ಮತದಾರರು ಕಮಲದ ಚಿಹ್ನೆಗೆ ತಮ್ಮ ಅಮೂಲ್ಯ ಮತ ಹಾಕಿದ್ದಾರೆ.

ಈ ಹಿಂದಿನ ಯಾವೊಬ್ಬ ಸಂಸದರು ಮಾಡದಷ್ಟು ಕೆಲಸಗಳನ್ನು ಕ್ಷೇತ್ರಕ್ಕೆ ನಾ ಮಾಡಿರುವೆ. ಆದರೂ ನನ್ನನ್ನೇ ಗುರಿಯನ್ನಾಗಿಸಿಕೊಂಡು ನಾಯಕರು ಟೀಕಿಸಿದರು. ಇದಕ್ಕೆ ಕಿವಿಗೊಡದ ಮತದಾರರು ನನಗೆ ಮತದ ಮುದ್ರೆಯೊತ್ತಿದ್ದಾರಷ್ಟೇ.

* ಅಭಿವೃದ್ಧಿಯ ಆದ್ಯತೆಗಳೇನು..?

ಬಹು ದಶಕಗಳಿಂದಲೂ ವಿಜಯಪುರ ವಿಮಾನ ನಿಲ್ದಾಣಕ್ಕೆ ಬೇಡಿಕೆಯಿದೆ. ಮೋದಿ ನೇತೃತ್ವದಲ್ಲಿ ಈ ಬಾರಿ ನಮ್ಮ ಸರ್ಕಾರ ರಚನೆಯಾಗುತ್ತಿದ್ದಂತೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸುವೆ.

ಈಗಾಗಲೇ ರೈಲ್ವೆ, ಹೆದ್ದಾರಿ, ರಸ್ತೆ ಕಾಮಗಾರಿ ಶರವೇಗದಲ್ಲಿ ನಡೆದಿವೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳ ನಿವಾರಣೆಗೆ ಸ್ಪಂದಿಸುವೆ.

* ನೀರು ಕೊಡಲಿಲ್ಲ ಎಂಬ ಟೀಕೆಗೆ ಏನೇಳ್ತೀರಿ ?

ಕುಡಿಯುವ ನೀರು, ನೀರಾವರಿ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ರೊಕ್ಕ ಕೊಡಲಿದೆ. ರಾಜ್ಯ ಇದನ್ನು ಅನುಷ್ಠಾನಗೊಳಿಸಬೇಕು. ಎಷ್ಟು ರೊಕ್ಕ ಬೇಕಿದ್ದರೂ ಕೊಡಿಸಲು ನಾ ಸಿದ್ಧನಿರುವೆ.

ನೀರಾವರಿ ಯೋಜನೆಗಳ ವಿಷಯದಲ್ಲಿ ಜನರು ಅಪೇಕ್ಷೆಪಟ್ಟರೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವೆ. ಗ್ರಾಮೀಣಾಭಿವೃದ್ಧಿಯ ಜತೆಯಲ್ಲೇ ನೀರು ಹಿಡಿದಿಡಲು ಎಲ್ಲೆಡೆ ಚೆಕ್‌ ಡ್ಯಾಂ ನಿರ್ಮಾಣ, ಕೆರೆ ನಿರ್ಮಾಣ ಮತ್ತಿತರ ಕಾಮಗಾರಿ ಕೈಗೊಳ್ಳಲು ಮುಂದಾಗುವೆ.

* ಸರ್ಕಾರದಲ್ಲಿ ಸ್ಥಾನಮಾನ..?

ಅಧಿಕಾರಕ್ಕಾಗಿ ಯಾರನ್ನೂ ಇದೂವರೆಗೂ ಬೇಡಿಲ್ಲ. ನಮ್ಮ ಸಮಾಜದ ಪ್ರತಿನಿಧಿಗಳು ಸರ್ಕಾರದಲ್ಲಿರಬೇಕಷ್ಟೇ. ಯಾರಾದರೂ ಅಡ್ಡಿಯಿಲ್ಲ. ಪಕ್ಷ, ನಮ್ಮ ವರಿಷ್ಠರು ಈ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT