ಸೃಷ್ಟಿ ವೈಭವ

7

ಸೃಷ್ಟಿ ವೈಭವ

ಗುರುರಾಜ ಕರಜಗಿ
Published:
Updated:

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? !
ಅರ್ಥವೇಂ ಕ್ರಿಮಿಕೀಟ ಕೋಟಿ ರಚನೆಯಲಿ ? ||
ಕರ್ತನಾಲೋಚಿಸದ ದುಂದಿನವನೆಂಬ ನುಡಿ |
ಯರ್ಧದೃಷ್ಟಿಯ ವಿವರ – ಮಂಕುತಿಮ್ಮ || 67 ||

ಪದ-ಅರ್ಥ: ವ್ಯರ್ಥವೆಂದೆನಿಪುದಲ=ವ್ಯರ್ಥವೆಂದು=ಅನಿಪುದಲ(ಎನ್ನಿಸುವುದಲ್ಲವೇ), ಕರ್ತನಾಲೋಚಿಸದ=ಕರ್ತನು(ಭಗವಂತನು)+ಆಲೋಚಿಸದ, ದುಂದಿನವನೆಂಬ=ದುಂದಿನವನು(ಬಹಳ ಧಾರಾಳಿ)+ಎಂಬ, ಯರ್ಧದೃಷ್ಟಿಯ=ಅರ್ಧ+ದೃಷ್ಟಿಯ.

ವಾಚ್ಯಾರ್ಥ: ಸೃಷ್ಟಿಯಲ್ಲಿ ಬಹುಭಾಗ ವ್ಯರ್ಥವೆಂದೆನಿಸುವುದಿಲ್ಲವೇ? ಈ ಕೋಟಿ ಕೋಟಿ ಕ್ರಿಮಿ ಕೀಟಗಳ ರಚನೆಯಲ್ಲಿ ಏನಾದರೂ ಅರ್ಥವಿದೆಯೇ? ಇದರ ಸೃಷ್ಟಿಕರ್ತ ಸರಿಯಾಗಿ ಆಲೋಚನೆಯನ್ನು ಮಾಡದ ದುಂದುಗಾರನೆಂಬ ಹೇಳಿಕೆ ಅರ್ಧ ತಿಳುವಳಿಕೆಯ ಮಾತು.

ವಿವರಣೆ: ಈ ವಿಶಿಷ್ಟವಾದ ಹಾಗೂ ವಿಚಿತ್ರವಾದ ಪ್ರಪಂಚವನ್ನು ಗಮನಿಸಿದರೆ ಅದರ ಅಗಾಧತೆ ನಮ್ಮನ್ನು ಬೆರಗುಗೊಳಿಸುತ್ತದೆ. ಅದೆಷ್ಟು ತರಹದ ಪ್ರಾಣಿಗಳು, ಪಕ್ಷಿಗಳು! ಕೆಲವೊಮ್ಮೆ ದೂರದರ್ಶನದಲ್ಲಿ ತೋರಿಸುವ ಸಾಗರದಾಳದ ಜೀವನವನ್ನು ಕಂಡಾಗ ಈ ತರಹದ ಮೀನುಗಳು, ಜಲಚರಗಳು ಇದ್ದಿರಬಹುದು ಎಂಬುದು ನಮಗೆ ಹೊಳೆದೇ ಇರಲಿಲ್ಲ ಎನ್ನಿಸಿಲ್ಲವೇ? ಅದೇ ರೀತಿ ಅನೇಕ ಬಗೆಯ ಪಕ್ಷಿಗಳು, ವಿಚಿತ್ರ ಪ್ರಾಣಿಗಳು, ಸರೀಸೃಪಗಳು ಈ ಪ್ರಪಂಚದ ಸೃಷ್ಟಿಯಲ್ಲಿ ಇವೆಯಲ್ಲ ಎಂದು ಆಶ್ಚರ್ಯವಾಗುತ್ತದೆ. ಅದರೊಂದಿಗೆ ಇವೆಲ್ಲ ಬೇಕಿತ್ತೇ ಜಗತ್ತಿಗೆ ಎನ್ನಿಸುತ್ತದೆ. ಹಾಗೆ ನಾವು ನಮ್ಮ ಮನುಷ್ಯರ ಸ್ವಾರ್ಥದಿಂದ ನೋಡಿದಾಗ ಈ ಸೃಷ್ಟಿಯ ಬಹುಭಾಗ ವ್ಯರ್ಥ ಎನ್ನಿಸುತ್ತದೆ.

ನಮ್ಮ ಪರಂಪರೆಯಲ್ಲಿ ಹೇಳುವಂತೆ ಪ್ರಕೃತಿಯಲ್ಲಿ ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಿವೆಯಂತೆ! ಈ ಕೋಟಿ ಕೋಟಿ ಕ್ರಿಮಿ-ಕೀಟಗಳ ಅಸ್ತಿತ್ವಕ್ಕೆ ಏನು ಅರ್ಥ? ಸೃಷ್ಟಿಯನ್ನು ಮಾಡಿದ ಭಗವಂತನಿಗೆ ಕೈ ಹಿಡಿತವಿಲ್ಲದೆ ದುಂದುಗಾರನಂತೆ ಯಾವುಯಾವುದೋ ಪ್ರಯೋಜನವಿಲ್ಲದ ರಾಶಿ ರಾಶಿ ಪ್ರಾಣಿಗಳನ್ನು ಸೃಷ್ಟಿಸಿದ್ದಾನೆ ಎಂದ ಭಾವಿಸುವುದು ಸರಿಯಲ್ಲ. ಅದು ಸರಿಯಾಗಿ ತಿಳಿಯದವರ ದೃಷ್ಟಿ. ಈ ಜಗತ್ತು ಒಂದು ಮಹಾನ್ ಯಂತ್ರ. ಇದರಲ್ಲಿ ಎಲ್ಲರೂ-ದೇವತೆಗಳು, ಮನುಷ್ಯರು, ಕ್ರಿಮಿ-ಕೀಟಗಳು, ಪ್ರಾಣಿಗಳು ಪಕ್ಷಿಗಳು, ಜಂತುಗಳು, ಜಡವಸ್ತುಗಳು – ಎಲ್ಲವೂ ಈ ಮಹಾಯಂತ್ರದ ಕಾರ್ಯನಿಯಂತ್ರಣದ ಭಾಗಗಳು. ಅವು ದೊಡ್ಡವಾಗಿರಬಹುದು ಇಲ್ಲವೇ ಪುಟ್ಟದಾಗಿರಬಹುದು. ಪ್ರತಿಯೊಂದೂ ಈ ಬೃಹತ್ ಯಂತ್ರದಲ್ಲಿ ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ ಮಾತ್ರ ಅದು ವ್ಯವಸ್ಥಿತವಾಗಿ ನಡೆಯುವುದು.

ಒಂದು ದೊಡ್ಡ ವಿಮಾನದಲ್ಲಿ ಅಥವಾ ಹಡಗಿನಲ್ಲಿ ಒಂದು ಪುಟ್ಟ ಸ್ಕ್ರೂ ಏನು ಪ್ರಯೋಜನ, ಒಂದು ತೀರ ಸಣ್ಣದಾದ ಬೋಲ್ಟದಿಂದ ಏನಾದೀತು ಎಂದು ಕೇಳಲಾಗುತ್ತದೆಯೇ? ಬಹುಶಃ ಆ ಒಂದು ಸ್ಕ್ರೂ ಅಥವಾ ಬೋಲ್ಟ್ ಸರಿಯಾಗಿ ಕೆಲಸಮಾಡದಿದ್ದರೆ ಅಷ್ಟು ದೊಡ್ಡ ವಿಮಾನ ಅಥವಾ ಹಡಗು ನಾಶವಾಗುತ್ತದೆ. ಈ ಸೃಷ್ಟಿಯಂತ್ರದಲ್ಲಿ ಪ್ರತಿಯೊಂದು ಜೀವಿಗೂ ಈ ಜೀವನ ಚಕ್ರದಲ್ಲಿ ಅದರದೇ ಆದ ಗೌರವದ ಸ್ಥಾನವಿದೆ. ಎಷ್ಟೋ ಬಾರಿ ದೊಡ್ಡ ಜೀವಿಗಳಿಂದಾಗದ್ದು ಪುಟ್ಟ ಕ್ರಿಮಿಯಿಂದ ಸಾಧ್ಯವಾದೀತು. ಆದ್ದರಿಂದ ಸೃಷ್ಟಿಯ ಪ್ರತಿಯೊಂದು ಜೀವಿಯ ಬಗ್ಗೆ ನಮ್ಮ ಗೌರವ ಸಲ್ಲಬೇಕು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !