ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿ-ಲಯದ ಕಥೆ

Last Updated 4 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಆದಿದಿವಸವದಾವುದೆಂದೆಂದುಮಿಹ ಜಗಕೆ ? |

ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||

ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |

ಸೇದಿಕೊಂಡಿರೆ ಲಯವೊ – ಮಂಕುತಿಮ್ಮ || 89 ||

ಪದ-ಅರ್ಥ: ಆದಿದಿವಸವದಾವುದೆಂದುಮಿಹ=ಆದಿದಿವಸ+ಅದಾವುದು+ಎಂದೆಂದು+ಇಹ, ಸೃಷ್ಟಿಲಯಕಥನ=ಸೃಷ್ಟಿ+ಲಯ+ಕಥನ, ಕೂರ್ಮ=ಆಮೆ
ವಾಚ್ಯಾರ್ಥ: ಎಂದೆಂದೂ ಇರುವಂಥ ಈ ವಿಶ್ವಕ್ಕೆ ಮೊದಲನೆಯ ದಿನ ಯಾವುದು? ತಿಳಿಸಲು ಅನುಕೂಲಕ್ಕಾಗಿ ಸೃಷ್ಟಿ ಮತ್ತು ನಾಶದ ಕಥೆಗಳು. ಆಮೆ ತನ್ನ ತಲೆ ಮತ್ತು ಕಾಲುಗಳನ್ನು ಚಾಚಿಕೊಂಡಿದ್ದರೆ ಸೃಷ್ಟಿ, ಒಳಗೆ ಸೆಳೆದು
ಕೊಂಡಿದ್ದರೆ ಅದೇ ಲಯ, ಪ್ರಳಯ.

ವಿವರಣೆ: ಜಗತ್ತಿನ ಅನಾದಿತ್ವವನ್ನು, ಅದನ್ನು ವಿವರಿಸಲು ಬುದ್ಧಿ ಪಡುವ ಪಾಡನ್ನು ಹೇಳುತ್ತ, ಸೃಷ್ಟಿ ಮತ್ತು ಪ್ರಳಯಗಳನ್ನು ಅತ್ಯಂತ ಸುಲಭವಾದ ಉದಾಹರಣೆಯೊಂದಿಗೆ ವಿವರಿಸುವುದು ಈ ಕಗ್ಗದ ವೈಶಿಷ್ಟ್ಯತೆ.

ಈ ಜಗತ್ತು ಅನಾದಿಯಾದದ್ದು. ಎಂದರೆ ಆದಿಯಿಲ್ಲದ್ದು, ಮೊದಲೆಂಬುದೇ ಇರದಿದ್ದದ್ದು. ಅದಕ್ಕೆ ಕಾಲದ ಬಾಧೆ ಇಲ್ಲ, ಯಾವಾಗಲೂ ಇರುವಂಥದ್ದು.

‘ಪ್ರಕೃತಿ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ’
‘ಜಗನ್ಮೂಲವಾದ ಪರಬ್ರಹ್ಮವು ಹೇಗೆ ಅನಾದಿಯೋ, ಅದರ ಕಾರ್ಯವಾದ ಪ್ರಕೃತಿ, ಪುರುಷ(ಜೀವ)ರಿಬ್ಬರೂ ಹಾಗೆ ಅನಾದಿ’.

ಹಾಗಾದರೆ ಎಂದೆಂದಿಗೂ ಇರುವಂಥ ಈ ಜಗತ್ತಿನ ಹುಟ್ಟಿದ ದಿನ ಯಾವುದು ಎಂದು ಕೇಳುವುದೇ ಸರಿಯಲ್ಲ. ಅದು ಹುಟ್ಟಿದ್ದು ಅಲ್ಲ. ಅದು ಇರುವಂಥದ್ದು, ತಾನು ತಾನೇ ಆಗಿ ಇರುವಂತಹದ್ದು. ಅದು ಹುಟ್ಟಲಿಲ್ಲ ಎಂದರೆ ಸಾಯುವುದೂ ಇಲ್ಲ ಎಂದಾಯಿತಲ್ಲ? ಹೌದು. ಅದರ ಹುಟ್ಟು ಎಷ್ಟರಮಟ್ಟಿನ ನಿಜವೋ ಅದರ ಲಯ ಕೂಡ ಅಷ್ಟೇ ನಿಜ. ಹಾಗೆಂದರೆ ಸೃಷ್ಟಿ-ಲಯಗಳೆಂದರೆ ಕೊಂಚಕೊಂಚದ ವಿಕಾರಗಳು. ಆದರೆ ಮುಗ್ಧ ಮನಸ್ಸಿಗೆ, ಮೇಲಿಂದ ಮೇಲೆ ಜಗತ್ತು ಯಾವಾಗ ಹುಟ್ಟಿತು ಎಂದು ಕೇಳುವ ಮನಸ್ಸಿಗೆ ಸುಲಭವಾಗುವಂತೆ ಸೃಷ್ಟಿ-ಲಯಗಳ ಕಥೆಗಳು ಹುಟ್ಟಿಕೊಂಡಿವೆ. ಚಕ್ರವರ್ತಿ ಮನು ನದಿಗೆ ಹೋದಾಗ ಒಂದು ಪುಟ್ಟ ಮೀನು ಕೈಗೆ ಬಂತು. ಅದು ಹೇಳಿತು, ‘ರಾಜಾ ಇನ್ನೂ ಕೆಲವರ್ಷಕ್ಕೆ ಈ ಪ್ರಪಂಚದಲ್ಲಿ ಪ್ರಳಯವಾಗುತ್ತದೆ. ನನ್ನನ್ನು ಕರೆದು ಮನೆಯಲ್ಲಿ ಪೋಷಿಸು. ಆ ಪ್ರಳಯಕಾಲದಲ್ಲಿ ನಾನು ನಿನ್ನನ್ನು ಕಾಪಾಡುತ್ತೇನೆ’ ಅರಮನೆಗೆ ತಂದ ಮೀನು ದಿನದಿನಕ್ಕೆ ಪ್ರಚಂಡವಾಗಿ ಬೆಳೆದು ನಂತರ ಸಮುದ್ರ ಸೇರುತ್ತದೆ. ಅದು ಹೇಳುತ್ತದೆ, ‘ಪ್ರಪಂಚ ನೀರಿನಲ್ಲಿ ಮುಳುಗುವಾಗ ನಾನು ಬರುತ್ತೇನೆ. ನೀನು ಒಂದು ಹಡಗಿನಲ್ಲಿ ಸಮಸ್ತ ಜೀವರಾಶಿಯ ಗಂಡು-ಹೆಣ್ಣುಗಳನ್ನು, ಮರಗಿಡಗಳ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೋ. ನಾನು ಆ ಹಡಗನ್ನು ಹಿಮಾಲಯ ಪರ್ವತದ ಶಿಖರಕ್ಕೆ ಕಟ್ಟುತ್ತೇನೆ. ಜಲಪ್ರಳಯ ಮುಗಿದ ಮೇಲೆ ಅವುಗಳನ್ನು ಬಿಟ್ಟು ಪ್ರಪಂಚ ಮತ್ತೆ ನಿರ್ಮಾಣವಾಗುವುದಕ್ಕೆ ಕಾರಣವಾಗು’ ಹಾಗೆಯೆ ಆಗಿ ಮತ್ತೆ ಪ್ರಪಂಚ ಬೆಳೆಯಿತು. ಎಲ್ಲರಿಗೂ ಮನುವೇ ಮೂಲಪುರುಷನಾದ್ದರಿಂದ ನಾವೆಲ್ಲ ಮನುಷ್ಯರಾದೆವು, ಮಾನವರಾದೆವು. ತುಂಬ ಚೆಂದದ ಕಥೆ. ಆದರೆ ಕಥೆ ಮಾತ್ರ. ಯಾಕೆಂದರೆ ಪ್ರಳಯದ ಮೊದಲು ಮನು ಇರಲಿಲ್ಲವೋ? ಅದಕ್ಕೇ ಪ್ರಪಂಚ ಅನಾದಿ.

ಇನ್ನೊಂದು ಸುಂದರ ಪ್ರತಿಮೆ. ಒಂದು ಆಮೆ ಭಯವಿಲ್ಲದೆ ತಲೆ ಮತ್ತು ಕಾಲುಗಳನ್ನು ಹೊರಗೆ ಚಾಚಿದಾಗ ಅದಕ್ಕೆ ಪ್ರಪಂಚ ಕಾಣುತ್ತದೆ. ಅದೇ ಸೃಷ್ಟಿ. ಭಯದಿಂದ ಕತ್ತು, ಕಾಲುಗಳನ್ನು ಒಳಗೆ ಸೇರಿಕೊಂಡಾಗ ಹೊರಗಿನದ್ದೇನೂ ಕಾಣದೇ ಕತ್ತಲೆಯಲ್ಲಿರುತ್ತದೆ. ಆಗ ಆಮೆಯ ಮಟ್ಟಿಗೆ ಪ್ರಳಯವಾಯಿತು. ಕಣ್ಣು ತೆರೆದರೆ ಸೃಷ್ಟಿ, ಮುಚ್ಚಿದರೆ ಲಯ. ಸತ್ಯವನ್ನರಿತವನ ಕಣ್ಣಿಗೆ ಸೃಷ್ಟಿ-ಲಯಗಳು ಪ್ರಕೃತಿಯೆಂಬ ಬ್ರಹ್ಮಶಕ್ತಿಯ ಕ್ಷಣ ಮಾತ್ರದ ಪ್ರಕಟ ವಿಕಟಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT