ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯವನ್ನು ವಿನಾಶದ ಅಂಚಿಗೆ ತಳ್ಳುತ್ತಿರುವ ಸರ್ಕಾರ

ಬೆಂಗಳೂರಿನ ತಕ್ಷಣದ ಅಗತ್ಯಕ್ಕಾಗಿ ಪಶ್ಚಿಮ ಘಟ್ಟಗಳ ಮೇಲಿನ ಅತಿಕ್ರಮಣ, ದೀರ್ಘಾವಧಿಯಲ್ಲಿ ವಿಧ್ವಂಸಕಾರಿ
Last Updated 5 ಜುಲೈ 2018, 20:36 IST
ಅಕ್ಷರ ಗಾತ್ರ

ಡಾ. ಶಿವರಾಮ ಕಾರಂತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಗ್ರಾಮದ ಅವರ ಮನೆಯಲ್ಲಿ 1989ರಲ್ಲಿ ನಾನು ಭೇಟಿಯಾಗಿದ್ದೆ.

ಆಧುನಿಕ ಕನ್ನಡ ಕಾದಂಬರಿಗೆ ಹೊಸ ಮಾರ್ಗ ತೋರಿದ್ದ, ಯಕ್ಷಗಾನವನ್ನು ಪುನಶ್ಚೇತನಗೊಳಿಸಿದ್ದ, ವಿಧವಾ ವಿವಾಹ ಮತ್ತು ಮಹಿಳೆಯರ ಶಿಕ್ಷಣದ ಪ್ರವರ್ತಕರಾಗಿದ್ದ ಅವರು ಆಗ ತಮ್ಮ ನೆಚ್ಚಿನ ಪಶ್ಚಿಮ ಘಟ್ಟಗಳನ್ನು ರಕ್ಷಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದರು. ಎಂಬತ್ತು ದಾಟಿದ್ದ ಕಾರಂತರು ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಭಾಷಣ ಮಾಡುತ್ತಿದ್ದರು, ಬರೆಯುತ್ತಿದ್ದರು ಮತ್ತು ಪ್ರವಾಸ ಮಾಡುತ್ತಿದ್ದರು.

ಕನ್ನಡಿಗರಿಗೆ ಬಳುವಳಿಯಾಗಿ ಬಂದ ಸಮೃದ್ಧ ನೈಸರ್ಗಿಕ ಸಂಪನ್ಮೂಲವನ್ನು ರಕ್ಷಿಸಿಕೊಳ್ಳುವಂತೆ ಜನರನ್ನು ಹುರಿದುಂಬಿಸುತ್ತಿದ್ದರು.

ನಂತರದ ವರ್ಷಗಳಲ್ಲಿ ಪಶ್ಚಿಮ ಘಟ್ಟಗಳಿಗೆ ನಾನು ಹಲವು ಬಾರಿ ಭೇಟಿ ಕೊಟ್ಟಿದ್ದೇನೆ. ಪರ್ವತ ಶ್ರೇಣಿಯ ಪೂರ್ವಕ್ಕಿರುವ ಸಮೃದ್ಧ ಹಸಿರು ಪ್ರದೇಶವಾದ ಮಲೆನಾಡು ಮತ್ತು ಪಶ್ಚಿಮಕ್ಕಿರುವ ವೈಭವೋಪೇತ ಕೊಂಕಣ ಕರಾವಳಿಯ ನಡುವೆ ಓಡಾಡಿದ್ದೇನೆ. ನನ್ನ ಸಹೋದರಿ ಮಣಿಪಾಲದಲ್ಲಿ ಬೋಧನೆಯ ವೃತ್ತಿಯಲ್ಲಿದ್ದುದು ನಾನು ಈ ಪ್ರದೇಶಕ್ಕೆ ಹೋಗಲು ಕಾರಣವಾಗಿತ್ತು.

ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌ ಜತೆಗೂ ಹಲವು ಬಾರಿ ಈ ಪ್ರದೇಶಕ್ಕೆ ಹೋಗಿದ್ದೇನೆ. ಕಾರಂತರಿಂದ ಸ್ಫೂರ್ತಿ ಪಡೆದಿದ್ದ ಗಾಡ್ಗೀಳರು ತಮ್ಮ ವೈಜ್ಞಾನಿಕ ಸಂಶೋಧನೆಯನ್ನು ಜನಸೇವೆಯತ್ತ ತಿರುಗಿಸಿಕೊಂಡಿದ್ದರು.

ಘಟ್ಟದ ಎರಡೂ ಕಡೆಗಳಲ್ಲಿನ ಜೀವ ಸಂಕುಲಕ್ಕಾಗಿ ಕೆಲಸ ಮಾಡಿದ ಅವರು, ಜೀವನೋಪಾಯ ಭದ್ರತೆ ಮತ್ತು ಪರಿಸರ ಸುಸ್ಥಿರತೆಯ ಅನಿವಾರ್ಯ ಸಮರಸಕ್ಕಾಗಿ ದುಡಿಯುತ್ತಿದ್ದರು. ತೀರಾ ಇತ್ತೀಚೆಗೆ, ಸಾಂಸ್ಕೃತಿಕ ಕ್ರಿಯಾಶೀಲತೆಯ ಕೇಂದ್ರವಾಗಿ ಬೆಳೆದು ನಿಂತಿರುವ ಸಾಗರ ತಾಲ್ಲೂಕಿನ ಹೆಗ್ಗೋಡಿಗೆ ಹೋಗಿದ್ದೆ.

ಕರ್ನಾಟಕದ ಇತರ ಭಾಗಗಳು ವಾಸ್ತುಶಿಲ್ಪ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದ್ದರೆ ಪಶ್ಚಿಮದ ಈ ಜಿಲ್ಲೆಗಳು ನಿಸರ್ಗ ಸೌಂದರ್ಯ ಅಪಾರವಾಗಿ ದಕ್ಕಿರುವ ಪ್ರದೇಶ. ಆದರೆ ಇದು ಎಷ್ಟು ದಿನ ಉಳಿಯಬಲ್ಲುದು ಎಂಬುದು ಯಾರಿಗೂ ಗೊತ್ತಿಲ್ಲ. ಕಳೆದ ದಶಕಗಳಲ್ಲಿ, ಮಲೆನಾಡು, ಘಟ್ಟ ಮತ್ತು ಕರಾವಳಿಯ ವೈಭವವು ಮನುಷ್ಯನ ಕೈಯಲ್ಲಿ ನಿರಂತರವಾಗಿ ನಾಶವಾಗುತ್ತಿರುವುದನ್ನು ಕಂಡಿದ್ದೇನೆ.

ಗುಡ್ಡಗಳನ್ನು ನೆಲಸಮಗೊಳಿಸಲಾಗಿದೆ ಮತ್ತು ಅರಣ್ಯವನ್ನು ಕಡಿದು ಹಾಕಲಾಗಿದೆ; ನದಿಗಳನ್ನು ಮಲಿನಗೊಳಿಸಲಾಗಿದೆ ಅಥವಾ ಅಣೆಕಟ್ಟೆ ಕಟ್ಟಿ ನಿಲ್ಲಿಸಲಾಗಿದೆ; ಮಣ್ಣಿಗೆ ವಿಷ ತುಂಬಲಾಗಿದೆ ಅಥವಾ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಈಗ ಇನ್ನಷ್ಟು ವಿನಾಶಕ್ಕೆ ವೇದಿಕೆ ಸಜ್ಜಾಗಿದೆ. ಚಿತ್ರದುರ್ಗದಿಂದ ಧರ್ಮಸ್ಥಳದವರೆಗಿನ ನಾಲ್ಕು ಪಥಗಳ ಹೆದ್ದಾರಿ ಯೋಜನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಲಿವೆ. ಈ ಎರಡು ಪ್ರಮುಖ ನಗರಗಳ ನಡುವೆ ಸಂಪರ್ಕಕ್ಕೆ ಈಗಾಗಲೇ ಎರಡು ರಸ್ತೆಗಳಿದ್ದರೂ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ತೀರ್ಥಹಳ್ಳಿಯಿಂದ ಮಲ್ಪೆಗೆ, ಸಾಗರದಿಂದ ಕೊಲ್ಲೂರಿಗೆ ಮತ್ತು ಶಿಕಾರಿಪುರದಿಂದ ಬೈಂದೂರಿಗೆ ಹೊಸ ಹೆದ್ದಾರಿಗಳ ಪ್ರಸ್ತಾವವೂ ಇದ್ದು ಇವೆಲ್ಲ ಘಟ್ಟಗಳ ನಡುವಿನಿಂದಲೇ ಹಾದು ಹೋಗಬೇಕಾಗಿವೆ. ಈ ರಸ್ತೆಗಳಿಗಾಗಿ ವಿವಿಧ ಸ್ಥಳಗಳಲ್ಲಿ ಪರ್ವತಗಳನ್ನು ಕಡಿಯಬೇಕಾಗುತ್ತದೆ, ಮರಗಳನ್ನು ನಾಶ ಮಾಡಬೇಕಾಗುತ್ತದೆ.

ಇದರಿಂದಾಗಿ ಧಾರಾಕಾರ ಮಳೆಗೆ ಮಣ್ಣು ತೆರೆದುಕೊಂಡು ಪ್ರವಾಹದ ಅಪಾಯ ಸೃಷ್ಟಿಯಾಗುತ್ತದೆ. ಟನ್‍ಗಟ್ಟಲೆ ಮರಳು ವಾತಾವರಣ ಸೇರಿ ವಾಯು ಮತ್ತು ಜಲ ಮಾಲಿನ್ಯ ಉಂಟಾಗುತ್ತದೆ.

ಈ ಯೋಜನೆಗಳ ಬಗ್ಗೆ ಜನರು ಕೇಳುವ ಪ್ರಶ್ನೆಗಳು ಇವು: ಸರಕುಗಳು ಮತ್ತು ಜನರು ರಾಜ್ಯದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲೇಬೇಕು. ಆದರೆ, ಕರ್ನಾಟಕ ಸರ್ಕಾರವು ಪರ್ಯಾಯಗಳನ್ನು ಗಣನೆಗೆ ತೆಗೆದುಕೊಂಡಿದೆಯೇ? ದುಬಾರಿಯಾದ, ವಿನಾಶಕಾರಿಯಾದ ಹತ್ತಾರು ರಸ್ತೆ ಯೋಜನೆಗಳಿಗಿಂತ ಕರಾವಳಿಯನ್ನು ಒಳನಾಡಿಗೆ ಸಂಪರ್ಕಿಸುವ ಒಂದು ಉತ್ತಮ ಗುಣಮಟ್ಟದ ರೈಲು ಮಾರ್ಗ ಹೆಚ್ಚು ಉಪಯುಕ್ತ ಮತ್ತು ಕಡಿಮೆ ಹಾನಿಕಾರಕ ಎಂಬುದರಲ್ಲಿ ಅನುಮಾನ ಇಲ್ಲ.

ಈ ಮಧ್ಯೆ, ಕರ್ನಾಟಕದ ಅತ್ಯಂತ ದೊಡ್ಡ ನಗರ ಬೆಂಗಳೂರಿನ ನಿವಾಸಿಗಳಿಗೆ ನೀರು ಪೂರೈಸುವುದಕ್ಕಾಗಿ ಹಾನಿಕಾರಕವಾದ ಇನ್ನಷ್ಟು ಯೋಜನೆಗಳ ಪ್ರಸ್ತಾವವೂ ಇದೆ. ನೇತ್ರಾವತಿ ನದಿಯ ನೀರನ್ನು ತಿರುಗಿಸುವ ಎತ್ತಿನಹೊಳೆ ಯೋಜನೆ ಅವುಗಳಲ್ಲಿ ಒಂದು.

ಬೃಹತ್‍ ಕೊಳವೆಗಳ ಮೂಲಕ ಅಮೂಲ್ಯವಾದ ನೀರನ್ನು ಬೆಂಗಳೂರಿಗೆ ಹರಿಸುವುದು ಯೋಜನೆಯ ಪ್ರವರ್ತಕರ ಗುರಿ. ಕೊಳವೆಗಳು, ಸಂಗ್ರಹಣಾಗಾರಗಳು, ಪಂಪ್‍ ಹೌಸ್‍ಗಳು, ಕಚೇರಿ ಮತ್ತು ಯೋಜನೆಯಲ್ಲಿ ಕೆಲಸ ಮಾಡುವವರ ಮನೆಗಳಿಗಾಗಿ ಮಾಡಿದ ನಾಶ ಅಪಾರವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ.

‘ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಗಳಂತಹ ನಗರಗಳು ಒಣಗಿ ಹೋಗುತ್ತಿವೆ ಎಂಬುದು ನಿಜ. ಆದರೆ ಪಶ್ಚಿಮ ಘಟ್ಟಗಳ ನದಿ ವ್ಯವಸ್ಥೆಯನ್ನು ನಾಶ ಮಾಡುವುದು ಇದಕ್ಕೆ ದೀರ್ಘಾವಧಿ ಪರಿಹಾರ ಆಗದು. ಎತ್ತಿನಹೊಳೆಯಂತಹ ದುಬಾರಿ ಯೋಜನೆಗಳನ್ನು ಕೈಗೆತ್ತಿಕೊಳ‍್ಳುವುದಕ್ಕೆ ಮುಂಚೆ ಸುಸ್ಥಿರ ಪರ್ಯಾಯ ಕ್ರಮಗಳನ್ನು ಸರ್ಕಾರ ಪರಿಶೀಲಿಸಲೇಬೇಕು.

ಪರಿಹಾರದ ಸಾಧ್ಯತೆಗಳು ಸಾಕಷ್ಟಿವೆ. ಆದರೆ, ಅದನ್ನು ಕೇಳುವ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ’ ಎಂದು ಇಬ್ಬರು ವಿಜ್ಞಾನಿಗಳು ಜತೆಯಾಗಿ ಬರೆದ ಲೇಖನದಲ್ಲಿ ಹೇಳಿದ್ದಾರೆ https://thewire.in/environment/yettinahole-karnataka-bengaluru-chikkaballapur).

ಎತ್ತಿನಹೊಳೆ ಯೋಜನೆಯು ವೈಜ್ಞಾನಿಕ ಪರಿಶೀಲನೆಗೆ ಒಳಪಟ್ಟಿರುವಾಗಲೇ ಜೆಡಿಎಸ್‍-ಕಾಂಗ್ರೆಸ್‍ನ ಕರ್ನಾಟಕದ ಮೈತ್ರಿ ಸರ್ಕಾರವು ಇನ್ನಷ್ಟು ವಿಚಿತ್ರ ಅನಿಸುವ ಯೋಜನೆಯ ಪ್ರಸ್ತಾವವನ್ನು ಮುಂದಿಟ್ಟಿದೆ. ಪಶ್ಚಿಮ ಘಟ್ಟದ ಇನ್ನೊಂದು ನದಿಯಾದ ಶರಾವತಿಯಿಂದ ಬೆಂಗಳೂರಿಗೆ ನೀರು ಒದಗಿಸುವುದು ಈ ಪ್ರಸ್ತಾವ. ಲಿಂಗನಮಕ್ಕಿ ಅಣೆಕಟ್ಟೆಯಿಂದ ಈ ನೀರು ತರಬೇಕು.

ಈ ಅಣೆಕಟ್ಟೆ ಬೆಂಗಳೂರಿನಿಂದ 425 ಕಿಲೋಮೀಟರ್ ದೂರದಲ್ಲಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಮೂಲ ಉದ್ದೇಶ ವಿದ್ಯುತ್‍ ಉತ್ಪಾದನೆಯಾಗಿತ್ತು. ಬೆಂಗಳೂರಿಗೆ ನೀರು ತರುವ ಯೋಜನೆಗಾಗಿ ಮಲೆನಾಡಿನ ಜನರು ತೆರಬೇಕಾದ ಬೆಲೆ ಬೃಹತ್ತಾದುದು. ಯೋಜನೆಯಿಂದಾಗಿ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗುತ್ತದೆ ಮತ್ತು ಲಿಂಗನಮಕ್ಕಿಯಲ್ಲಿನ ವಿದ್ಯುತ್‍ ಉತ್ಪಾದನೆಯೂ ಕುಸಿಯುತ್ತದೆ.

ಈ ಅಪ್ರಬುದ್ಧ ಯೋಜನೆಗಳು ವನ್ಯಜೀವಿಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಪರಿಸರಪ್ರೇಮಿಗಳಲ್ಲಿ ಆತಂಕ ಇದೆ. ಈಗಲೇ ಅಪಾಯದ ಅಂಚಿನಲ್ಲಿರುವ ಹುಲಿ, ಆನೆ, ಕಾಡುಕೋಣ ಮತ್ತು ಕಾಳಿಂಗಸರ್ಪ ದಂತಹ ಜೀವಿಗಳುಈ ಯೋಜನೆಯಿಂದಾಗುವ ಅರಣ್ಯ ನಾಶದಿಂದಾಗಿ ಇನ್ನಷ್ಟು ಅಪಾಯಕ್ಕೆ ಒಳಗಾಗಲಿವೆ.

ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಇರುವವರಲ್ಲಿ ಕೂಡ ಇಷ್ಟೇ ಆತಂಕ ಇದೆ. ಬೆಂಗಳೂರನ್ನು ಸಿಂಗಪುರ ಮಾಡುವ ಕನಸಿಗಾಗಿ ಸಂಪನ್ಮೂಲಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವುದರಿಂದ ಲಕ್ಷಾಂತರ ರೈತರು, ಮೀನುಗಾರರು, ಕುಶಲಕರ್ಮಿಗಳು ಮತ್ತು ಗ್ರಾಮೀಣ ಜನರ ಜೀವನೋಪಾಯ ನಷ್ಟವಾಗುವ ಅಪಾಯವಿದೆ. ಒಂದು ನಗರ, ಅಥವಾ ಯಾವುದೇ ನಗರ ನೀರಿಗಾಗಿ ಮತ್ತೆ ಮತ್ತೆ ಹುಡುಕಾಟಕ್ಕೆ ಇಳಿಯುವುದು ಸುಸ್ಥಿರ ಅಲ್ಲವೇ ಅಲ್ಲ.

ಕಳಕಳಿ ಇರುವ ನಾಗರಿಕರು ತಮ್ಮ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಲೇಬೇಕು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿದ್ದ ಅಸಂಖ್ಯ ಕೆರೆಗಳನ್ನು ಪುನಶ್ಚೇತನಗೊಳಿಸಿ ನಗರದ ನೀರಿನ ಅಗತ್ಯವನ್ನು ಯಾಕೆ ಪೂರೈಸಬಾರದು?

ಕೊಳೆಗೇರಿಗಳ ನಲ್ಲಿಗಳು ಒಣಗಿಹೋಗಿರುವಾಗ ತಮ್ಮ ಉದ್ಯಾನಗಳಿಗೆ ಯಥೇಚ್ಚ ನೀರು ಬಳಸುವ ಬಂಗಲೆಗಳು ಮತ್ತು ಕಚೇರಿಗಳಿಗೆ ನೀರಿನ ಶುಲ್ಕವನ್ನು ಭಾರಿ ಮಟ್ಟದಲ್ಲಿ ಏಕೆ ಏರಿಸಬಾರದು?

ಬಹುಸಂಖ್ಯಾತರು ವಾಸಿಸುತ್ತಿರುವ ಗ್ರಾಮೀಣ ಪ್ರದೇಶಗಳ ನೀರಿನ ಅಗತ್ಯಗಳಿಗೆ ಯಾಕೆ ಆದ್ಯತೆ ಇಲ್ಲ? ರಾಜ್ಯದ ಬೇಸಾಯವನ್ನು ಒಂದು ಕಾಲದಲ್ಲಿ ಸುಸ್ಥಿರಗೊಳಿಸಿದ್ದ ಸಾವಿರಾರು ಕೆರೆಗಳಿಗೆ ಮರುಜೀವ ನೀಡುವ ಕೆಲಸ ಯಾಕೆ ಮಾಡಬಾರದು?

ಪರಿಸರ ಸುಸ್ಥಿರತೆಯ ಜತೆಗೆ ಆರ್ಥಿಕ ಪ್ರಗತಿಯನ್ನು ಸಮರಸಗೊಳಿಸುವುದಕ್ಕೆ ಬೇಕಾದ ನೈಸರ್ಗಿಕ ಮತ್ತು ಬೌದ್ಧಿಕ ಸಂಪತ್ತು ಕರ್ನಾಟಕದಲ್ಲಿ ಇದೆ. ಭಾರತೀಯ ವಿಜ್ಞಾನ ಸಂಸ‍್ಥೆಯು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ.

ಭಾರತದಲ್ಲಿರುವ ಪರಿಸರ ಸಂಶೋಧನೆಯ ಎರಡು ಅತ್ಯುತ್ತಮ ಸಂಸ್ಥೆಗಳಾದ ಪರಿಸರ ವಿಜ್ಞಾನಗಳ ಕೇಂದ್ರ ಮತ್ತು ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಅಂಡ್‍ ಎನ್‍ವಿರಾನ್‍ಮೆಂಟ್‍ ಈ ನಗರದಲ್ಲಿಯೇ ಇವೆ. ನಗರ ಅಧ್ಯಯನದ ದೇಶದ ಏಕೈಕ ಸಂಸ್ಥೆ ಇಂಡಿಯನ್‍ ಇನ್ಸ್‌ಟಿಟ್ಯೂಟ್‍ ಆಫ್‍ ಹ್ಯೂಮನ್‌ ಸೆಟಲ್‍ಮೆಂಟ್‍ ಕೂಡ ಬೆಂಗಳೂರಿನಲ್ಲಿಯೇ ಇದೆ.

ನೀರು, ವಿದ್ಯುತ್‍, ಸಾರಿಗೆ, ಕೃಷಿ ಮತ್ತು ನಗರಾಭಿವೃದ‍್ಧಿಯ ಸುಸ್ಥಿರ ನೀತಿಗಳನ್ನು ವಿನ್ಯಾಸಗೊಳಿಸಲು ಪರಿಣತರು ಕರ್ನಾಟಕ ಸರ್ಕಾರಕ್ಕೆ ನೆರವಾಗಬಹುದು. ಆದರೆ ಸರ್ಕಾರ ತಜ್ಞರ ಜತೆ ಸಮಾಲೋಚಿಸುವ ಕೆಲಸವನ್ನೇ ಮಾಡುವುದಿಲ್ಲ.

ಬಿಜೆಪಿ, ಕಾಂಗ್ರೆಸ್‍ ಅಥವಾ ಜೆಡಿಎಸ್‍ ಯಾವುದೇ ಪಕ್ಷಕ್ಕೆ ಸೇರಿದ ರಾಜಕಾರಣಿಗಳಿಗೆ ವೈಜ್ಞಾನಿಕ ತಿಳಿವಳಿಕೆ ಬಗ್ಗೆ ಅಪಥ್ಯವಿದೆ. ಈ ಜ್ಞಾನ ಕೈಯಳತೆಯ ದೂರದಲ್ಲಿ ಇದ್ದರೂ ಅದನ್ನು ಅವರು ಪಡೆದುಕೊಳ್ಳುತ್ತಿಲ್ಲ. ಈ ನಿರ್ಲಕ್ಷ್ಯಕ್ಕೆ ಕಾರಣ ಕೆಡುಕಾಗಲಿ ಎಂಬ ಮನೋಭಾವವೇ ಹೊರತು ಅಜ್ಞಾನ ಅಲ್ಲ.

ವಿಜ್ಞಾನ ಮತ್ತು ಪಾಂಡಿತ್ಯದ ಬಗ್ಗೆ ನಿರ್ಲಕ್ಷ್ಯ ತೋರಿ, ಅರ್ಹ ವೃತ್ತಿಪರ ಸಲಹೆಗಾರರನ್ನು ದೂರವೇ ಇರಿಸುವುದರಿಂದ ರಸ್ತೆ, ಅಣೆಕಟ್ಟೆ, ವಿದ್ಯುತ್‍ ಸ್ಥಾವರಗಳಂತಹ ಯೋಜನೆಗಳ ಗುತ್ತಿಗೆಗಳನ್ನು ತಮ್ಮಿಷ್ಟದಂತೆ ನೀಡಿ ತಮ್ಮ ಜೇಬು ತುಂಬಿಸಿಕೊಳ್ಳುವುದು ಅಧಿಕಾರಸ್ಥ ರಾಜಕಾರಣಿಗಳಿಗೆ ಸುಲಭ.

ಕರ್ನಾಟಕದ ವಿಧಾನಸಭಾ ಚುನಾವಣೆಗೆ ಮುನ್ನ ನಾನು ಬರೆದಿದ್ದ ಅಂಕಣದಲ್ಲಿ ‘ರಾಷ್ಟ್ರೀಯ’ ಮಾಧ್ಯಮಕ್ಕೆ ರಾಜ್ಯದ ಬಗೆಗಿನ ಆಸಕ್ತಿ ತಾತ್ಕಾಲಿಕ ಎಂದು ಎಚ್ಚರಿಸಿದ್ದೆ. ಅದು ಹಾಗೆಯೇ ಆಗಿದೆ. ಈ ತಿಂಗಳ ಆರಂಭದಲ್ಲಿ, ನವದೆಹಲಿಯಲ್ಲಿ 17 ಸಾವಿರ ಮರಗಳನ್ನು ಕಡಿಯಲಾಗುವುದು ಎಂಬುದರ ಬಗ್ಗೆ ‘ರಾಷ್ಟ್ರೀಯ’ ಎಂದು ಕರೆದುಕೊಳ್ಳುವ ಸುದ್ದಿವಾಹಿನಿಗಳು ಗಂಟೆಗಟ್ಟಲೆ ಚರ್ಚೆ ನಡೆಸಿವೆ.

ಈ ವಿನಾಶ ಅನಗತ್ಯ ಮತ್ತು ಅವಿವೇಕದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ಮರ ಕಡಿಯುವುದಕ್ಕೆ ನ್ಯಾಯಾಲಯ ತಡೆ ನೀಡಿದೆ. ಆದರೆ, ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ಮರಗಳ ಹನನದ ಪ್ರಸ್ತಾವದ ಬಗ್ಗೆ ‘ರಾಷ್ಟ್ರೀಯ’ ಸುದ್ದಿವಾಹಿನಿಗಳು ಇಂತಹುದೇ ಆಸಕ್ತಿ ತೋರಿಸಲು ನಾವು ಏನು ಮಾಡಬೇಕು?

ಇದು ನನ್ನ ರಾಜ್ಯ ಎಂಬ ಕಾರಣಕ್ಕೆ ನಾನು ಈ ಪ್ರಶ್ನೆ ಕೇಳುತ್ತಿಲ್ಲ. ಪಶ್ಚಿಮ ಘಟ್ಟಗಳ ವಿನಾಶದ ಬಗೆಗಿನ ಕಾಳಜಿಯಿಂದಾಗಿ ಕೇಳುತ್ತಿದ್ದೇನೆ. ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕಿಗೆ ಹಿಮಾಲಯ ಪರ್ವತಶ‍್ರೇಣಿಯಷ್ಟೇ ಪಶ್ಚಿಮ ಘಟ್ಟಗಳೂ ಮುಖ್ಯ ಎಂಬ ಗ್ರಹಿಕೆಯಿಂದಾಗಿ ಕೇಳುತ್ತಿದ್ದೇನೆ.

ಅದೃಷ್ಟವಶಾತ್‍ ಕನ್ನಡದ ಕೆಲವು ಯುವಜನರಲ್ಲಿ ಕಾರಂತರ ಸ್ಫೂರ್ತಿ ಈಗಲೂ ಜೀವಂತವಾಗಿದೆ. ಈ ಅಂಕಣದಲ್ಲಿ ಪ್ರಸ್ತಾಪಿಸಲಾದ ಕ್ಷೇತ್ರಮಟ್ಟದ ಮಾಹಿತಿಗಳನ್ನು ಪಶ್ಚಿಮ ಘಟ್ಟ ಜಾಗೃತಿ ವೇದಿಕೆಯ ಸದಸ್ಯರು ನಡೆಸಿದ ಸಮೀಕ್ಷೆಯಿಂದ ಪಡೆದುಕೊಂಡಿದ್ದೇನೆ.

ಈ ಹೋರಾಟಗಾರರ ಕಳಕಳಿಯನ್ನು ವಿಜ್ಞಾನಿಗಳು, ಕಾನೂನು ತಜ್ಞರು, ಲೇಖಕರು, ಪತ್ರಕರ್ತರು ಮತ್ತು ರಾಜ್ಯದ ಬೇರೆ ಭಾಗಗಳಲ್ಲಿ ಇರುವ ಜನಪ್ರೀತಿಯ ನಾಗರಿಕರು ಮುಂದಕ್ಕೆ ಒಯ್ಯಬೇಕು. ಬೆಂಗಳೂರಿನ ಅಲ್ಪಾವಧಿ ಅಗತ್ಯ ಪೂರೈಕೆಗಾಗಿ ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಮೇಲೆ ಮಾಡುವ ಅತ್ಯಾಚಾರ ದೀರ್ಘಾವಧಿಯಲ್ಲಿ ಇಡೀ ರಾಜ್ಯವನ್ನೇ ವಿನಾಶಕ್ಕೆ ತಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT