ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಆತ್ಮ ಸೌಂದರ್ಯ

Last Updated 30 ಸೆಪ್ಟೆಂಬರ್ 2021, 19:47 IST
ಅಕ್ಷರ ಗಾತ್ರ

ಗಣನೆಗೆಟುಕದ ಗುಣಗಳಾತ್ಮದವವರ್ಣ್ಯಗಳು |
ಮನದ ದೇಹದ ಜೀವದೆಲ್ಲ ಕರಣಗಳಾ ||
ಅನುಭವದ ಮುಕುರದೊಳ್ ಪ್ರತಿಫಲಿಸೆ ತನ್ನದೊಂ- |
ದಣುವದನೆ ಸುಂದರವೊ – ಮಂಕುತಿಮ್ಮ
|| 467 ||

ಪದ-ಅರ್ಥ:ಗಣನೆಗೆಟುಕದ=ಗಣನೆಗೆ (ಲೆಕ್ಕಕ್ಕೆ)+ ಎಟುಕದ(ನಿಲುಕದ), ಗುಣಗಳಾತ್ಮದವವರ್ಣ್ಯಗಳು=ಗುಣಗಳು+ಆತ್ಮದವು+ಅವರ್ಣ್ಯಗಳು (ವರ್ಣನೆಗೆ ನಿಲುಕದವು), ಮುಕುರ=ಕನ್ನಡಿ, ತನ್ನದೊಂದಣುವದುವೆ=ತನ್ನದೊಂದು+ಅಣು+ಅದುವೆ.

ವಾಚ್ಯಾರ್ಥ:ಲೆಕ್ಕಕ್ಕೆ ಸಿಗದ, ವರ್ಣನೆಗೆ ಅಸಾಧ್ಯವಾದ ಗುಣಗಳು ಆತ್ಮದವು. ಮನಸ್ಸಿನ, ದೇಹದ, ಜೀವದ ಎಲ್ಲ ಸಾಧನಗಳ ಮೂಲಕ ಅನುಭವದ ಕನ್ನಡಿಯೊಳಗೆ ತನ್ನ ಆತ್ಮವೆಂಬ ಅಣು ಪ್ರತಿಫಲಿಸಿದಾಗ ಅದೇ ಸುಂದರ.

ವಿವರಣೆ:ಲೋಕದಲ್ಲಿ ಎರಡು ಪದಾರ್ಥಗಳು, ಒಂದು ದೇಹ. ಇದು ಎಲ್ಲರಿಗೂ ಕಾಣುವ, ತಿಳಿದಿರುವ ವಸ್ತು. ಇದರಲ್ಲಿ ಭೌತಿಕವಾದ ಅಂಗಾಂಗಳು ಮಾತ್ರವಲ್ಲದೆ ಮನಸ್ಸು, ಬುದ್ಧಿ ಮೊದಲಾದ ಅಂತಃಕರಣಗಳು, ಕರ್ಮ, ಋಣಶೇಷಗಳು ಸೇರಿಕೊಂಡಿವೆ. ಇವು ಜೀವಲಕ್ಷಣಗಳು. ಎರಡನೆಯದು ದೇಹದೊಳಗಿದ್ದ ಚೈತನ್ಯ. ಯಾವುದರಿಂದ ದೇಹಕ್ಕೆ ನಾನು ಎಂಬ ಪ್ರಜ್ಞೆ ಮೂಡಿದೆಯೋ ಅದು ಶುದ್ಧಾತ್ಮ. ದೇಹ ಆತ್ಮದ ಸೊತ್ತು. ನಾವು ದೇಹವನ್ನು ವರ್ಣಿಸಬಲ್ಲೆವು, ಕಣ್ಣಿಗೆ ತೋರದ ಅತ್ಮವನ್ನು ವರ್ಣಿಸುವುದು ಅಸಾಧ್ಯ. ಅದಕ್ಕೇ ಅದು ಅವರ್ಣನೀಯ. ಇದೆಷ್ಟು ಚೆಂದದ ಹೊಂದಾಣಿಕೆ? ಕಣ್ಣಿಗೆ ಕಾಣದ ಆತ್ಮವಸ್ತು, ಕಣ್ಣಿಗೆ ಕಾಣುವ ಆದರೆ ಜಡವಾದ ದೇಹದಲ್ಲಿ ಕುಳಿತು ಏನೇನೋ ಕಾರ್ಯಗಳನ್ನು ಅದರ ಮೂಲಕ ಮಾಡಿಸುತ್ತದೆ. ಆತ್ಮದ ನೆಲೆಯೇ ದೇಹ. ಆದರೆ ಆತ್ಮವಿಲ್ಲದ ದೇಹ ಒಂದು ಮರದ ತುಂಡು-ಹೆಣ. ಅಂದರೆ ಜಡವಾದ, ಅನಿತ್ಯವಾದ ದೇಹದಲ್ಲಿ ಚೈತನ್ಯರೂಪಿಯಾದ, ನಿತ್ಯವಾದ ಆತ್ಮ. ಆದರೆ ಇಲ್ಲೊಂದು ತೊಂದರೆ ಇದೆ. ಶ್ರೀಗಂಧವನ್ನು ತೇಯ್ದ ಕೈಗೆ ಸುಗಂಧದ ವಾಸನೆ ಬರುವಂತೆ, ಸೀಮೆಎಣ್ಣೆಯಲ್ಲಿ ನೆನೆದ ಕೈಗೆ ಅದರ ಘಾಟು ವಾಸನೆ ಅಂಟಿಕೊಳ್ಳುವಂತೆ, ಜೀವ ದೇಹಕರ್ಮದಲ್ಲಿ ಸತತವಾಗಿ ತೊಡಗಿದಾಗ ಅನೇಕ ಕಷ್ಟಗಳನ್ನು ಅನುಭವಿಸುತ್ತದೆ. ಆಗ ಅದರ ಚೈತನ್ಯ ಮಸುಕಾದಂತಾಗಿ ತನ್ನ ನಿಜಸ್ವರೂಪವನ್ನು ಮರೆತು ಬಿಡುತ್ತದೆ. ನಿತ್ಯವೂ ಬಳಸುವ ವಜ್ರದೋಲೆಯ ಮೇಲೆ ಎಣ್ಣೆ, ಬೆವರು, ಧೂಳು ಕುಳಿತು ಮಸಕಾಗುವುದಿಲ್ಲವೆ? ಆದರೆ ವಜ್ರ ವಜ್ರವೇ. ಅದರ ಮೇಲಿನ ಕೊಳೆಯನ್ನು ತೊಳೆದರೆ ಮತ್ತೆ ಫಳಫಳನೆ ಹೊಳೆಯುತ್ತದೆ. ಹಾಗೆಯೇ ಆತ್ಮ ಕೂಡ ಕೆಲಗುಣಗಳಿಂದ ತನ್ನನ್ನು ಶುದ್ಧಿಗೊಳಿಸಿಕೊಳ್ಳುತ್ತದೆ. ಆ ಗುಣಗಳೂ ದೇಹದ ಕರಣಗಳಿಂದಲೇ ಬರುವಂಥವುಗಳು.

ಎಂಟು ಗುಣಗಳ ಮೂಲಕ ಆತ್ಮಕ್ಕೆ ಪುನಃ ಮೊದಲಿನ ಕಾಂತಿ ಬರುತ್ತದೆ. ಅವುಗಳು, ಎಲ್ಲ ಪ್ರಾಣಿಗಳಲ್ಲಿ ದಯೆ, ಉದ್ವೇಗವಿಲ್ಲದ ಶಾಂತಿ, ಮತ್ತೊಬ್ಬರ ಬಗ್ಗೆ ಅಸೂಯೆಯಿಲ್ಲದ ಅನಸೂಯ ಗುಣ, ಅಂತರಂಗ ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಳ್ಳುವ ಶೌಚ, ಅತಿಯಾದ ಆಯಾಸವಾಗದಂತಿರುವ ಅನಾಯಾಸ ಗುಣ, ಸಕಲ ಜೀವಿಗಳಿಗೆ ಸದಾಕಾಲ ಶುಭವನ್ನೇ ಹಾರೈಸುವ ಮಂಗಲ ಬುದ್ಧಿ, ಜಿಪುಣತನವನ್ನು ಬಿಟ್ಟು ಸಂತೋಷದಿಂದ ಬದುಕುವ ಅಕಾರ್ಪಣ್ಯ ಬುದ್ಧಿ, ತನ್ನದಲ್ಲದರ ಬಗ್ಗೆ ಆಸೆಯಿಲ್ಲದೆ ಬದುಕುವ ಅಸ್ಪೃಹ ಗುಣ.

ಕಗ್ಗ ಎಷ್ಟೆಲ್ಲವನ್ನು ಸಮಗ್ರವಾಗಿ ನಾಲ್ಕು ಸಾಲಿನಲ್ಲಿ ಹೇಳುತ್ತದೆ! ಅವರ್ಣನೀಯವಾದ ಆತ್ಮ, ದೇಹದ ಕರಣಗಳನ್ನೆಲ್ಲ ಬಳಸಿಕೊಂಡು, ಅಷ್ಟಗುಣಗಳನ್ನು ಪಡೆದು, ಅವುಗಳನ್ನು ಅನುಭವದ ಕನ್ನಡಿಯಲ್ಲಿ ಕಂಡಾಗ ಅದರ ಮೂಲ ಪ್ರಕಾಶ ಹೊಳೆಯುತ್ತದೆ. ಅದೇ ಅನ್ಯಾದೃಶವಾದ ಸೌಂದರ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT