ಮಂಗಳವಾರ, ಅಕ್ಟೋಬರ್ 22, 2019
22 °C

ಬದುಕಿನ ನಶ್ವರತೆ

ಗುರುರಾಜ ಕರಜಗಿ
Published:
Updated:
Prajavani

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೀಮಂತ ಶ್ರೇಷ್ಠಿಯ ಮಗನಾಗಿ ಹುಟ್ಟಿದ್ದ. ಅವನ ತಂದೆಗೆ ಎಂಭತ್ತು ಕೋಟಿ ಹಣದ ಐಶ್ವರ್ಯವಿತ್ತು. ವ್ಯಾಪಾರ ವೃದ್ಧಿಯಾಗುತ್ತಲೇ ಇತ್ತು. ಬೋಧಿಸತ್ವನಿಗೊಬ್ಬ ಅಣ್ಣನಿದ್ದ. ಆತ ವ್ಯವಹಾರದಲ್ಲಿ ತಂದೆಯಿಂದ ಎಲ್ಲವನ್ನೂ ಕಲಿತು ಪರಿಣತಿ ಪಡೆದಿದ್ದ. ಬೋಧಿಸತ್ವ ಸುಮಾರು ಹದಿನೈದು ವರ್ಷದವನಾಗುವ ಹೊತ್ತಿಗೆ ಅವನ ತಂದೆ-ತಾಯಿಯರಿಬ್ಬರೂ ಸ್ವಲ್ಪವೇ ದಿನಗಳ ಅಂತರದಲ್ಲಿ ತೀರಿಹೋದರು. ಆದರೆ ಅಣ್ಣ ಹಿರಿಯವನಾದ್ದರಿಂದ ಮತ್ತು ವ್ಯವಹಾರಗಳನ್ನೆಲ್ಲ ತಿಳಿದವನಾದ್ದರಿಂದ ಅವನೇ ಕುಟುಂಬವನ್ನು ಚೆನ್ನಾಗಿ ಪಾಲಿಸುತ್ತಿದ್ದ. ಹೀಗಾಗಿ ಪರಿವಾರದವರಿಗೆಲ್ಲ ಮನೆಯ ಹಿರಿಯರಿಬ್ಬರ ಸಾವು ಬಹಳ ದಿನ ಕಾಡಲಿಲ್ಲ. ಅನೇಕ ವರ್ಷಗಳವರೆಗೆ ಅಣ್ಣನೇ ಎಲ್ಲವನ್ನೂ ನಿಭಾಯಿಸಿದ. ಆತ ಎಲ್ಲರ ಮೇಲೆ ತೋರಿಸಿದ ಕಾಳಜಿ, ಮಾಡುತ್ತಿದ್ದ ವ್ಯವಸ್ಥೆಗಳು ಅವನನ್ನು ಮನೆಯ ಎಲ್ಲರಿಗೂ ಅನಿವಾರ್ಯವನ್ನಾಗಿಸಿದ್ದವು. ಬೋಧಿಸತ್ವನಿಗಾಗಲಿ, ಮನೆಯವರಿಗಾಗಲಿ ಯಾವ ಚಿಂತೆಯೂ ಇಲ್ಲದೆ ನಿರಾಳರಾಗಿದ್ದರು.

ಹೀಗಿರುವಾಗ ಒಂದು ದಿನ ಯಾವ ಮುನ್ಸೂಚನೆಯೂ ಇಲ್ಲದೆ, ಯಾವ ರೋಗವೂ ಇಲ್ಲದೆ ಥಟ್ಟನೆ ಅಣ್ಣ ಸತ್ತು ಹೋದ. ಇದು ಏಕಾಏಕಿ ಆದದ್ದರಿಂದ ಎಲ್ಲರಿಗೂ ಆಘಾತವಾಗಿತ್ತು. ಮನೆಯ ಜನರೆಲ್ಲ ಕೈ ಹಿಡಿದುಕೊಂಡು ರೋದಿಸತೊಡಗಿದರು. ಅವರ ದುಃಖಕ್ಕೆ ತಡೆಯೇ ಇಲ್ಲದಂತಾಯಿತು. ದಿನ ಕಳೆದರೂ ಅವರ ಕೊರಗು ಕಡಿಮೆಯಾಗಲಿಲ್ಲ. ಆದರೆ ವಿಚಿತ್ರವೆಂದರೆ ಬೋಧಿಸತ್ವ ಮಾತ್ರ ಏನೂ ಆಗದಂತೆ ಮೊದಲಿನಂತೆಯೇ ಇದ್ದುಬಿಟ್ಟಿದ್ದ. ಮನೆಯವರೆಲ್ಲ ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರೂ ಬೋಧಿಸತ್ವ ಅಳಲಿಲ್ಲ, ದುಃ:ಖ ತೋರಲಿಲ್ಲ. ಬಂದವರು ಇವನ ಬಗ್ಗೆ ತಪ್ಪು ತಿಳಿಯತೊಡಗಿದರು. ಬಹುಶಃ ಇವನು ಇದಕ್ಕೇ ಕಾಯುತ್ತಿದ್ದನೋ ಏನೋ? ಅಣ್ಣ ಸತ್ತರೆ ಆಸ್ತಿಯೆಲ್ಲ ತನಗೇ ಬರುತ್ತದೆಂದು ಯೋಚನೆ ಮಾಡಿದ್ದಿರಬಹುದು ಎಂದು ಜನ ಮಾತನಾಡಿಕೊಳ್ಳತೊಡಗಿದರು. ಕೊನೆಗೊಬ್ಬ ಹಿರಿಯರು ಬಂದು ಅವನ ಈ ಸ್ಥಿತಪ್ರಜ್ಞತೆಗೆ ಕಾರಣವನ್ನು ಕೇಳಿದರು. ಆಗ ಬೋಧಿಸತ್ವ ಹೇಳಿದ, “ನನ್ನ ಸಂಬಂಧ ಅಣ್ಣನ ಆತ್ಮದೊಂದಿಗೆ ಇತ್ತು, ಈಗ ಅದಿಲ್ಲ. ದೇಹದ ಬಗ್ಗೆ ದುಃಖವೇಕೆ? ನಾವು ಸತ್ತವರಿಗೆ ಮಾತ್ರ ಅಳುತ್ತೇವೆ ಆದರೆ ನಾವೂ ಸಾಯುತ್ತೇವಲ್ಲ ಎಂದು ಯಾರೂ ಏಕೆ ಅಳುವುದಿಲ್ಲ? ಎಲ್ಲ ಶರೀರಧಾರಿಗಳೂ ಒಂದಿಲ್ಲ ಒಂದು ದಿನ ಶರೀರವನ್ನು ತ್ಯಜಿಸಲೇಬೇಕು. ಜಗತ್ತಿನಲ್ಲಿ ಇರುವವರೆಗೆ ಸೃಷ್ಟಿಯಾದ ಯಾವ ಜೀವವೂ ತನ್ನ ಶರೀರದ ಮೇಲೆ ಅಧಿಕಾರವನ್ನು ಉಳಿಸಿಕೊಂಡಿಲ್ಲ. ಹೀಗೆ ಮನುಷ್ಯರ ಬದುಕೇ ಸಂಪೂರ್ಣ ಅಸ್ಥಿರವಾದಾಗ, ಅದು ಹೋದಾಗ ಅಳುವುದು ಏಕೆ? ಸ್ಥಿರವಾದದ್ದು ಕಳೆದರೆ ದುಃಖಪಡಬೇಕು. ಅಸ್ಥಿರವಾದದ್ದು ಹೋದರೆ ಅತಿಯಾದ ದುಃಖ ಸರಿಯಲ್ಲ. ಅದಕ್ಕೇ ನಾನು ಅಳುತ್ತಿಲ್ಲ”.

ಬೋಧಿಸತ್ವನ ಬೋಧೆಯಿಂದ ಜನರಿಗೆಲ್ಲ ದೇಹದ ನಶ್ವರತೆಯ ಅರಿವು ಉಂಟಾಗಿ ದುಃಖದ ತೀವ್ರತೆ ಅಳಿಯಿತು. ಸಾವು-ಹುಟ್ಟುಗಳೆಂಬುವು ಆಕಸ್ಮಿಕವಾದವುಗಳು. ಈ ಆಕಸ್ಮಿಕಗಳಿಗಿಂತ ಬದುಕಿನಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂಬುದನ್ನು ಅರಿತರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)