ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಗುಣ-ಆನಂದ

Last Updated 26 ಏಪ್ರಿಲ್ 2019, 20:46 IST
ಅಕ್ಷರ ಗಾತ್ರ

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ |
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ||
ಏನೋ ಎಂತೋ ಸಮಾಧಾನಗಳನರಸುತಿಹ |
ನಾನಂದವಾತ್ಮಗುಣ– ಮಂಕುತಿಮ್ಮ || 124 ||

ಪದ-ಅರ್ಥ:ಸಮಾಧಾನಗಳನರಸುತಿಹ=ಸಮಾಧಾನಗಳನು+ಅರಸುತಿಹ(ಹುಡುಕುತ್ತಿರುವ) ಆನಂದವಾತ್ಮಗುಣ=ಆನಂದ+ಆತ್ಮಗುಣ.
ವಾಚ್ಯಾರ್ಥ: ಮನುಷ್ಯ ಮೌನದಲ್ಲೋ, ಮಾತಿನಲ್ಲೋ, ಹಾಸ್ಯದೊಳಗೋ, ಹಾಡಿನಲ್ಲೋ, ಪ್ರಣಯದಲ್ಲೋ, ಶೌರ್ಯದಿಂದ ವಿಜಯದಲ್ಲೋ, ಹೇಗೋ, ಎಂತೋ ಸಮಾಧಾನವನ್ನು ಹುಡುಕುತ್ತಾನೆ. ಈ ಆನಂದಆತ್ಮದಗುಣ.

ವಿವರಣೆ: ಮಾನವನ ಬದುಕಿನ ಪರಮ ಉದ್ದೇಶ ಆನಂದ. ಮನುಷ್ಯಜೀವ ಭೂಮಿಗೆ ಬಂದ ಮೇಲೆ ಆಹಾರ ವಿಹಾರಗಳಲ್ಲಿ ಬದಲಾವಣೆಯಾಗಿದೆ. ವಸತಿಸೌಕರ್ಯಗಳು ಬದಲಾಗಿವೆ, ಭಾಷೆಗಳು, ನಡವಳಿಕೆಗಳು ಬದಲಾಗಿವೆ ಆದರೆ ಮನುಷ್ಯನ ಮೂಲ ಅಪೇಕ್ಷೆಗಳು ಮಾತ್ರ ಹಾಗೆಯೇ ಉಳಿದಿವೆ. ಕೆಲವರಿಗೆ ಸಣ್ಣ ಸಣ್ಣಅಪೇಕ್ಷೆಗಳು, ಕೆಲವರಿಗೆ ದೊಡ್ಡ ಅಪೇಕ್ಷೆಗಳು. ಈ ಎಲ್ಲ ಅಪೇಕ್ಷೆಗಳಲ್ಲಿ ಅತ್ಯಂತ ಮುಖ್ಯವಾದವು ಎರಡು. ಒಂದು ಅಜರಾಮರ, ನಾವೆಂದಿಗೂ ಸಾಯಬಾರದು ಎಂಬ ಬಯಕೆ. ಜನರು ಬದುಕು ಸಾಕು, ಸಾವು ಬೇಕು ಎನ್ನುತ್ತಾರೆ ಆದರೆ ಅದು ಎದುರು ಬಂದು ನಿಂತರೆ ಸ್ವಾಗತಿಸುವವರು ಕಡಿಮೆ. ಎರಡನೆಯದು-ಆನಂದ.

ಇವೆರಡರಲ್ಲಿ ಯಾವುದು ಮುಖ್ಯ? ವೈದ್ಯರು ರೋಗಿಗೆ ಹೀಗೆ ಹೇಳುತ್ತಾರೆಂದು ತಿಳಿಯಿರಿ, “ನೀನು ಸಾಯಲಾರಿ. ಹೀಗೇ ಒಂದು ಐವತ್ತು ವರ್ಷ ಹಾಸಿಗೆಯ ಮೇಲೆಯೇ ಕೈಕಾಲು ಕೂಡ ಅಲುಗಾಡಿಸದಂತೆ ಮಲಗಿರ ಬೇಕಾಗುತ್ತದೆ ಯಾಕೆಂದರೆ ಈ ರೋಗಕ್ಕೆ ಬೇರೆ ಯಾವ ಮದ್ದೂ ಇಲ್ಲ”. ಈ ಸಂದರ್ಭದಲ್ಲಿ ಜೀವಂತ ಶವದಂತೆ ಇರುವುದು ಒಳ್ಳೆಯದೋ, ಸಾವು ಒಳ್ಳೆಯದೋ? ನರಳಾಟದ, ಅಸಹಾಯಕತೆಯ ಬದುಕಿಗಿಂತ ಸಾವು ಮೇಲು ಎನ್ನಿಸುತ್ತದೆ. ಹಾಗಾದರೆ ಚಿರಂಜೀವಿತ್ವ ಹಾಗೂ ಆನಂದದ ನಡುವೆ ಆಯ್ಕೆಯಿದ್ದರೆ ಅದು ಆನಂದವೇ ಆಗುತ್ತದೆ. ಈ ಆನಂದವೇ ಮನುಷ್ಯನ ಆತ್ಮಗುಣ.

ಮನುಷ್ಯ ಈ ಆನಂದವನ್ನುಎಲ್ಲೆಲ್ಲಿಯೋ ಹುಡುಕುತ್ತಾನೆ. ಅಂತರ್ಮುಖಿಯಾದವರು, ಸದಾಕಾಲ ಅಂತರೀಕ್ಷಣೆಯಲ್ಲಿರುವವರು, ಧ್ಯಾನಮಾಡುವವರುಆನಂದವನ್ನುಅನುಭವಿಸುವುದು ಮೌನದಲ್ಲಿ. ಅಲ್ಲಮಪ್ರಭು ಹೇಳುವಂತೆ “ಶಬ್ದದೊಳಗಿನ ನಿಶ್ಯಬ್ದ”ವೇಅವರಿಗೆ ಇಷ್ಟ. ಇನ್ನೂ ಕೆಲವರು ಸಂಭ್ರಮಿಸುವುದು ಮಾತಿನಲ್ಲಿ. ಮಾತೆಂದರೆ ಬಡಬಡ ಶಬ್ದವಲ್ಲ. ಬಸವಣ್ಣನವರು ಹೇಳುವಂತೆ “ಲಿಂಗ ಮೆಚ್ಚಿ ಅಹುದಹುದೆನ್ನುವ” ಮಾತು. ಅದು ಕೇಳುವವರಿಗೂ, ಆಡುವವರಿಗೂ ಆನಂದವನ್ನು ತರುತ್ತದೆ. ಹಾಸ್ಯವೂ ಆನಂದದ ಸ್ರೋತವೇ. ಆದರೆ ಹಾಸ್ಯಕಟಕಿ, ವ್ಯಂಗ್ಯ, ವಕ್ರೋಕ್ತಿಯಾಗಿ ಮನಸ್ಸನ್ನು ನೋಯಿಸಬಾರದು.

ತಿಳಿಹಾಸ್ಯ ನಿಜವಾಗಿಯೂ ಆನಂದವನ್ನು ನೀಡುವ ಸಾಧನ. ಹಾಡಂತೂ ಸುಖಾನುಭವ ಕೊಡುತ್ತದೆ. ಮನುಷ್ಯನ ಸರ್ವೋತ್ಕೃಷ್ಟ ಭಾವನೆಗಳು ಪ್ರಕಟಗೊಳ್ಳುವುದು ಸಂಗೀತದಲ್ಲೇ. ಪ್ರಣಯವೂ ಆನಂದದ ಒಂದು ರಹದಾರಿ. ಕೆಲವರಿಗೆ ಪರಮಾನಂದವಾಗುವುದು ಯುದ್ಧ ಭೂಮಿಯಲ್ಲಿ ಶೌರ್ಯದಿಂದ ಹೋರಾಡಿ ವೈರಿಗಳನ್ನು ದೂಳಿ ಪಟಮಾಡಿ ವಿಜಯವನ್ನು ಸಾಧಿಸಿದಾಗ.

ಇವೆಲ್ಲ ಆನಂದವನ್ನು ಪಡೆಯುವ ಮಾರ್ಗಗಳು. ಮನುಷ್ಯ ತನಗೆ ಸಾಧ್ಯವಾಗುವ, ಇಷ್ಟವಾಗುವ ವಿಧಾನಗಳನ್ನು ಬಳಸಿ ಆನಂದವನ್ನು, ತನ್ಮೂಲಕ ಸಮಾಧಾನವನ್ನು ಪಡೆಯ ಬಯಸುತ್ತಾನೆ. ಆನಂದ ಪ್ರಾಪ್ತಿಯೇ ಆತ್ಮದಗುಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT