ಕವಿಗಳನ್ನು ಪ್ರೀತಿಸಲು ಎಷ್ಟೊಂದು ಕಾರಣಗಳಿವೆ...

7
ಪಡಸಾಲೆ

ಕವಿಗಳನ್ನು ಪ್ರೀತಿಸಲು ಎಷ್ಟೊಂದು ಕಾರಣಗಳಿವೆ...

Published:
Updated:
ಕೆ.ವಿ. ತಿರುಮಲೇಶ್‌

ಕವಿ ಕೆ.ವಿ. ತಿರುಮಲೇಶ್‌ ಅವರಿಗೆ ಭಾರತದಲ್ಲಿ ಸುಂದರಿಯರೇ ಕಾಣಿಸುವುದಿಲ್ಲ. ಅವರ ಕಣ್ಣಿಗೆ ಭಾರತೀಯ ಸ್ತ್ರೀಯರು ಚಂದ ಕಾಣಿಸುವುದಿಲ್ಲ.

ತಿರುಮಲೇಶರ ಸೌಂದರ್ಯಪ್ರಜ್ಞೆಯ ಬಗ್ಗೆ ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ ಅವರ ಪ್ರೀತಿಯ ಆರೋಪವಿದು. 2018ರ ಸಾಲಿನ ‘ಮಾಸ್ತಿ ಪ್ರಶಸ್ತಿ’ ಸ್ವೀಕರಿಸಲು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ತಿರುಮಲೇಶರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಲೇ, ತಮ್ಮ ಗ್ರಹಿಕೆಯೊಂದನ್ನು ವಿಜಯಶಂಕರ್‌ ಹಂಚಿಕೊಂಡಿದ್ದು ಹೀಗೆ.

ವಿಮರ್ಶಕ ಕಾಣದ್ದನ್ನು ಓದುಗ ಕಾಣಬಲ್ಲ ಎನ್ನುವಂತೆ – ‘ಕಳ್ಳಿಗಿಡದ ಹೂ’ ಸಂಕಲನದ ‘ಸ್ಪರ್ಶ’ ಕಥೆಯಲ್ಲಿ ಹುಡುಗಿಯೊಬ್ಬಳ ಕುರಿತು ತಿರುಮಲೇಶರು ‘ಸ್ನಿಗ್ಧ ಸೌಂದರ್ಯ’ ಎನ್ನುವ ವಿಶೇಷಣ ಬಳಸಿರುವುದನ್ನು, ಈ ನೆಲದ ಒಬ್ಬಳು ಹುಡುಗಿಯಾದರೂ ತಿರುಮಲೇಶರ ಕಣ್ಣಿಗೆ ಚಂದ ಕಂಡಿರುವುದನ್ನು ಓದುಗರೊಬ್ಬರು ವಿಮರ್ಶಕರ ಗಮನಕ್ಕೆ ತಂದರು.

ಅಪವಾದಗಳ ಮಾತಿರಲಿ, ಭಾರತೀಯ ಚೆಲುವೆಯರ ಬಗ್ಗೆ ತಿರುಮಲೇಶರೇಕೆ ಕುರುಡು? ಮರುದಿನದ ಹರಟೆಯ ಸಂದರ್ಭದಲ್ಲಿ ಎದುರಾದ ಈ ಪ್ರಶ್ನೆಗೆ ತಿರುಮಲೇಶರು ನಸುನಗುತ್ತಾ ಹೇಳಿದ್ದು: ‘ರವಿವರ್ಮನ ಹೆಂಗಸರು ಎನ್ನುವ ಕವಿತೆಯನ್ನೇ ನಾನು ಬರೆದಿದ್ದೇನೆ. ರವಿವರ್ಮನ ಚಿತ್ರಗಳಲ್ಲಿನ ರೂಪದರ್ಶಿಗಳು ಮರಾಠಿ ಹೆಂಗಸರು, ಕೇರಳೀಯರಲ್ಲ. ಅವನಿಗೆ ಮರಾಠಿ ಸಂಪರ್ಕ ಇತ್ತು. ದಮಯಂತಿ, ದೀಪಧಾರಿಣಿ ಕೃತಿಗಳಲ್ಲಿನ ಹೆಂಗಸರ ಕಚ್ಚೆ ಉಡುಪಿನಲ್ಲಿ ಮರಾಠಿ ಶೈಲಿಯನ್ನು ಗಮನಿಸಬಹುದು. ಒಂದು ಸಂಗತಿ ಹೇಳಬೇಕು: ಸೀತೆ, ಮಂಡೋದರಿ, ದ್ರೌಪದಿಯರ ಬಗ್ಗೆ ಚಿಕ್ಕಂದಿನಿಂದಲೂ ಕೇಳುತ್ತಿರುತ್ತೇವೆ, ಮಾತನಾಡುತ್ತಿರುತ್ತೇವೆ. ಹಾಗಾಗಿ ಬೇರೆ ಬೇರೆ ಪುರಾಣಗಳತ್ತ, ಇತಿಹಾಸಗಳತ್ತ ಗಮನಹರಿಸಬೇಕು ಅನ್ನಿಸುತ್ತದೆ.

ಆ ಕಾರಣದಿಂದಲೇ ಕ್ಲಿಯೊಪಾತ್ರ, ನೆಫರ್ಟಿಟಿಯರ ಬಗ್ಗೆ ನನಗೆ ಹೆಚ್ಚು ಕುತೂಹಲ. ಈಜಿಪ್ಟಿನ ನೆಫರ್ಟಿಟಿ ಬಗ್ಗೆ ಇನ್ನಷ್ಟು ಬರೆಯಲಿಕ್ಕಿದೆ. ಆಕೆಯ ಗಂಡ ಆಕೆನಾಟನ್‌ ಏಕದೇವತಾರಾಧನೆಯನ್ನು ಪ್ರತಿಪಾದಿಸಿದ ರಾಜ. ಆಗ ಈಜಿಪ್ಟ್‌ನಲ್ಲಿದ್ದ ಬಹು ದೇವತಾರಾಧನೆಯ ವಿರುದ್ಧವಾಗಿ ಗಂಡಹೆಂಡತಿ ಏಕದೇವರಾಧನೆಯನ್ನು ಪ್ರತಿಪಾದಿಸಿದರು. ಹೊಸ ರಾಜಧಾನಿಯನ್ನು ನಿರ್ಮಿಸಿದರು. ಹಿಸ್ಟರಿಯ ಈ ಮಿಸ್ಟರಿಯನ್ನು ಕನ್ನಡಕ್ಕೆ ತರಲು ಪ್ರಯತ್ನಿಸುತ್ತಿರುತ್ತೇನೆ’.

ರವಿವರ್ಮನಿಂದ ವಿಶ್ವದ ಮತ್ತೊಬ್ಬ ಅಪ್ರತಿಮ ಚಿತ್ರಕಾರ ವ್ಯಾನ್‌ಗೋ ಬಗ್ಗೆ ಮಾತು ಹೊರಳಿತು. ‘ಬೂಟ್‌’ ಎನ್ನುವುದು ವ್ಯಾನ್‌ಗೋನ ಪ್ರಸಿದ್ಧ ಕಲಾಕೃತಿಗಳಲ್ಲೊಂದು. ಅದು ರೈತನ ಶೂ. ರೈತನ ಶ್ರಮದ ಬದುಕನ್ನು ಸೂಚಿಸುವಂತೆ ಕಲಾವಿದ ಶೂ ಜೊತೆಗೆ ಕೊಳೆ ತೋರಿಸುತ್ತಾನೆ. ಆವರೆಗೆ ಯಾರೂ ಶೂ ಕುರಿತು ಕಲಾಕೃತಿ ರಚಿಸಿರಲಿಲ್ಲ. ವ್ಯಾನ್‌ಗೋನ ಕಲಾಕೃತಿ ಅಪಾರ ವಿಮರ್ಶೆಗೊಳಗಾಯಿತು. ಕೊನೆಗೆ ಆ ವಿಮರ್ಶಕರೆಲ್ಲ ಏನಾದರು? ಅವರು ವ್ಯಾನ್‌ಗೋನ ಶೂ ಕೆಳಗೆಹೋದರು! ಇದು ತಿರುಮಲೇಶರ ಕವಿತೆ.

‘ಇಲ್ಲೊಬ್ಬ ಕವಿ ಕೂತಿದ್ದಾನೆ. ಅವನು ವ್ಯಾನ್‌ಗೋ ಕಲಾಕೃತಿಗಳ ಮ್ಯೂಸಿಯಂ ನೋಡಿಲ್ಲ, ಅವನ ಕುರಿತ ಸಿನಿಮಾ ನೋಡಿಲ್ಲ. ಆದರೆ ಅವನ ಕುರಿತು ಕವಿತೆ ಬರೆದಿದ್ದಾನೆ’ ಎನ್ನುವ ತಿರುಮಲೇಶರ ಮಾತು ಕವಿಯ ಕಣ್ಣಿನ ಅಗಾಧಶಕ್ತಿಯನ್ನು ಸೂಚಿಸುವಂತಿತ್ತು. ಮಾತಿನ ನಡುವೆ  ತಿರುಮಲೇಶರಿಗೊಂದು ದೂರವಾಣಿಯ ಕರೆ. ಆ ಕರೆಯ ಹಿಂದೊಂದು ಕಥೆ. ತಿರುಮಲೇಶರಿಗೆ ತಮ್ಮ ಪುಸ್ತಕವೊಂದನ್ನು ಕೊಟ್ಟಿದ್ದ ಕವಿಯೊಬ್ಬರು, ಪುಸ್ತಕದಲ್ಲಿ ಯಾವುದೋ ರಸೀದಿ ಇರಿಸಿ ಮರೆತಿದ್ದರು. ಆ ರಸೀದಿ ಹುಡುಕಿಕೊಂಡು ತಿರುಮಲೇಶರು ತಂಗಿದ್ದಹೋಟೆಲ್‌ ಕೋಣೆಗೆ ಬಂದಿದ್ದರು. ಆ ಕೋಣೆಯಿಂದಲೇ ಫೋನ್‌ ಮಾಡಿದ್ದ ಅವರು –‘ಕವಿ ಇಲ್ಲದಿರುವ ಕೋಣೆಯಲ್ಲಿ ಉಸಿರಾಡುತ್ತಿರುವ ಅವರ ಕವಿತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಆ ತುದಿಯಿಂದ ಹೇಳಿದ್ದರು. ‘ಧಾರಾಳವಾಗಿ ತೆಗೆದುಕೊಂಡು ಹೋಗಿ. ಅವುಗಳನ್ನು ನೀವೇ ಬರೆಯಿರಿ’ ಎನ್ನುವುದು ‘ಅಕ್ಷಯಕಾವ್ಯ’ದ ಕವಿಯ ಉತ್ತರ.

ಕವಿಯ ಅನುಪಸ್ಥಿತಿಯಲ್ಲಿ ಆತನ ಕವಿತೆಗಳು ಕೋಣೆಯಲ್ಲಿ ಸುಳಿದಾಡುವುದು – ಆಹಾ, ಎಂಥ ಕಲ್ಪನೆ!

ಕಾವ್ಯವಷ್ಟೇ ಅಲ್ಲ, ಕವಿಯೊಂದಿಗೆ ಒಡನಾಡುವುದು ಕೂಡ ಒಂದು ಅಪೂರ್ವ ಅನುಭೂತಿ. ಶಕ್ತ ಕವಿಯೊಬ್ಬನ ಅನುಪಸ್ಥಿತಿಯಲ್ಲೂ ಆತನ ಕವಿತೆಗಳು ಕವಿಯ ಹಾಜರಿಯ ಅನುಭವ ನೀಡಬಲ್ಲವು. ತಿರುಮಲೇಶರ ‘ಮುಖಾಮುಖಿ’, ‘ಪೆಂಟಯ್ಯನ ಅಂಗಿ’, ಅಕ್ಷಯಕಾವ್ಯದ ತುದಿಮೊದಲಿರದ ಅನುಭವಗಳು... ಕಾವ್ಯಪ್ರೇಮಿಗಳ ಪಾಲಿಗೆ ಅಗಣಿತ ಅಮೃತಕ್ಷಣಗಳು. ‘ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ, ಬಿಟ್ಟುಕೊಡುವುದರಿಂದ’ ಎನ್ನುವುದು ಅವರದೇ ಸಾಲು. ಅವರು ಬಿಟ್ಟುಕೊಟ್ಟದ್ದೇನು, ಗೆದ್ದುದೇನು ಎನ್ನುವುದು ಅವರಿಗೂ ಓದುಗರಿಗೂ ಗೊತ್ತಿರುವ ಗುಟ್ಟು.

ಅನುಭವದ ಮೊಗಸಾಲೆಯಿಂದ ತಾರುಣ್ಯದ ಪಡಸಾಲೆಗೆ ಬನ್ನಿ. ತಿರುಮಲೇಶರಿಗೆ ಮಾಸ್ತಿ ಪ್ರಶಸ್ತಿ ಸ್ವೀಕಾರದ ಸಂದರ್ಭದಂತೆಯೇ ಆರಿಫ್‌ ರಾಜಾ ‘ಲಂಕೇಶ್‌ ಪ್ರಶಸ್ತಿ’ ಒಲ್ಲೆನೆಂದಿರುವುದು ಕೂಡ ಒಂದು ಕಾವ್ಯಕ್ಷಣವೇ. ಶಿವಮೊಗ್ಗದ ಕರ್ನಾಟಕ ಸಂಘದ ‘ಲಂಕೇಶ್‌ ಪ್ರಶಸ್ತಿ’ಯನ್ನು ಆರಿಫ್‌ ನಿರಾಕರಿಸಿದ ಸಂಗತಿ ಲೇಖಕರ ನಡುವೆ ಚರ್ಚೆಯಾಗುತ್ತಿದೆ. ‘ನನ್ನ ಹೆಸರಿನಲ್ಲಿ ಪ್ರಶಸ್ತಿ ಕೊಡಲೇಬೇಕು ಅಂತಿದ್ದರೆ ಉದಯೋನ್ಮುಖ ಮುಸ್ಲಿಂ ಯುವ ಸಾಹಿತಿಗೆ ಕೊಡಿ’ ಎನ್ನುವ ಲಂಕೇಶರ ಆಶಯದಂತೆ ಕರ್ನಾಟಕ ಸಂಘ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದೆ.

‘ಲಂಕೇಶ್ ಹೆಸರಿನ ಈ ಬಹುಮಾನದ ಪ್ರಾರಂಭಿಕ ಆಶಯ ಒಳ್ಳೆಯದೇ ಆಗಿರಬಹುದು. ಕೊಡಮಾಡುವ ಕಾರಣ ಯಾವುದೇ ಸಂವೇದನಾಶೀಲರಿಗೆ ಮುಜುಗರ ಉಂಟುಮಾಡುವಂಥದ್ದು (ಕೇವಲ ಮಸ್ಲಿಂ ಸಮುದಾಯದವರಿಗೆ!). ದಲಿತ ಸಂವೇದನೆ, ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆ ಇವೆಲ್ಲವೂ ಆಯಾ ಕಾಲಘಟ್ಟದ ಸಾಹಿತ್ಯದ ಹೊಸತನ ಗುರುತಿಸಲು ನಾವಾಗಿಯೇ ಮಾಡಿಕೊಂಡ ಓದಿನ ಕ್ರಮವೇ ಹೊರತು ಅವೇ ಅಂತಿಮವಲ್ಲ. ಕನ್ನಡದ ಕವಿಯಾಗಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಪ್ರತಿಪಾದಕನಾದ ನನಗೆ ಇದು ಅಸಮಾಧಾನ ಉಂಟು ಮಾಡಿದೆ.

ನಿಜವಾದ ಸಾಹಿತಿ–ಸಾಹಿತ್ಯ ಜಾತ್ಯತೀತ ಎಂದು ಬಲವಾಗಿ ನಂಬಿರುವ ನನಗೆ ಈ ಪುಸ್ತಕ ಬಹುಮಾನವನ್ನು ಸ್ವಿಕರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರಿಫ್‌ ಹೇಳಿದ್ದಾರೆ. ಅವರ ಈ ನಿಲುವು ಕೆಲವರಿಗೆ ಅವಸರದ್ದಂತೆ, ಲಂಕೇಶರ ಆಶಯದ ಅವಗಣನೆಯಂತೆ ಕಾಣಿಸಿದೆ. ಆದರೆ, ಯುವಕವಿಯೊಬ್ಬ ಜಾತ್ಯತೀತ ನಿಲುವನ್ನು ಮುಂದಿಟ್ಟು ಪ್ರಶಸ್ತಿಯನ್ನು ನಿರಾಕರಿಸುತ್ತಿರುವುದರ ಹಿಂದಿನ ವೈಚಾರಿಕತೆ ಮುಖ್ಯವಾದುದು. ಲಂಕೇಶರ ಸಮಯದಲ್ಲಿ ‘ಮುಸ್ಲಿಂ ಲೇಖಕ’ ಎನ್ನುವ ಶಬ್ದಕ್ಕಿದ್ದ ಅರ್ಥಕ್ಕೂ ಇಂದು ಅದು ಪಡೆದುಕೊಂಡಿರುವ ಧ್ವನಿಗೂ ಇರುವ ವ್ಯತ್ಯಾಸ ಮೇಲ್ನೋಟಕ್ಕೇ ಕಾಣಿಸುವಂತಿದೆ. ಇಂಥ ಸಂದರ್ಭದಲ್ಲಿ ಆರಿಫ್‌ ನಿಲುವು ‘ಕನ್ನಡಕವಿ’ಯ ಬಗ್ಗೆ ಗೌರವಮೂಡಿಸುವಂತಿದೆ.

ಆರಿಫ್‌ ನಿಲುವಿನ ಹಿನ್ನೆಲೆಯಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಬೇಕು. ಕಳೆದ ವರ್ಷ ಕೂಡ ಇಂತಹುದೇ ಚರ್ಚೆಗಳು ನಡೆದಿದ್ದವು. ಇವೆಲ್ಲ ಚರ್ಚೆಗಳು ವ್ಯಕ್ತಿ, ಸಮುದಾಯ ಕೇಂದ್ರಿತವಾಗಿವೆಯೇ ಹೊರತು ಕೃತಿ ಕೇಂದ್ರಿತವಾಗಿಲ್ಲ. ಪ್ರಶಸ್ತಿ ಆಯ್ಕೆಯ ಮಾನದಂಡದ ಬಗ್ಗೆ ಚರ್ಚಿಸುತ್ತಿರುವ ಯಾರೊಬ್ಬರೂ ಪುರಸ್ಕೃತ ಕೃತಿಯನ್ನು ಚರ್ಚಿ
ಸುವ ಮೂಲಕ ತಮ್ಮ ತಕರಾರುಗಳನ್ನು ಮಂಡಿಸಲು ಹೋಗಿಲ್ಲ ಎನ್ನುವುದು ಏನನ್ನು ಸೂಚಿಸುತ್ತದೆ? ಕೃತಿಗಿಂತಲೂ ವ್ಯಕ್ತಿಯೇ ಮುಖ್ಯವಾಗುವುದು ಏನನ್ನು ಹೇಳುತ್ತದೆ? ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆ – ಪ್ರಶಸ್ತಿ ಬಂದರೂ ಪ್ರಶಸ್ತಿ ನಿರಾಕರಿಸಿದರೂ ಅದನ್ನು ಜಾತಿಯ ಚೌಕಟ್ಟಿನಿಂದ ನೋಡುವುದು ಏನನ್ನು ಸೂಚಿಸುತ್ತದೆ?

ತಿರುಮಲೇಶರ ‘ಪ್ರಜ್ಞೆ’ ಎನ್ನುವ ಕವಿತೆಯ ಕೊನೆಯ ಭಾಗ ಹೀಗಿದೆ: ‘ಅಸ್ತವ್ಯಸ್ತದ ಈ ಪ್ರಾಕಾರದಲ್ಲಿ / ನಿನ್ನೆ / ಇಂದು / ನಾಳೆಗಳನ್ನು / ಮೌನವಾಗಿ ನುಂಗಿ ಹಾಕುತ್ತ / ಬಂದಿದೆ ನನ್ನ ಪ್ರಜ್ಞೆ / ಒಮ್ಮೆ ಟೈರೀಸಿಯಸ್‌ನ ನಿಲಿಸಿ / ಕೇಳಬೇಕು: / ಇದೆಲ್ಲ ಏನು? / ಮತ್ತು ಏಕೆ?’

ಸಾಹಿತ್ಯ ಸಂದರ್ಭವೇ ಅಸಂಗತವಾಗಿರುವಾಗ, ಕವಿತೆಯೊಂದರ ಸಾಲುಗಳನ್ನು ಹೀಗೆ ಅನಾಮತ್ತಾಗಿ ಕತ್ತರಿಸಿ ಎತ್ತಿ ಉಲ್ಲೇಖಿಸುವುದು ಅಸಂಗತ ಆಗಲಾರದೇನೊ?

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !