ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಖ್ ಲೈಟ್ ಇನ್ಫಂಟರಿಯ ಕರ್ನಲ್ ಆಗಿ ನೇಮಕ

ಸೇನಾನಿಯ ಸ್ವಗತ
Last Updated 27 ಫೆಬ್ರುವರಿ 2019, 9:59 IST
ಅಕ್ಷರ ಗಾತ್ರ

ಅಲಹಾಬಾದ್ ನಲ್ಲಿದ್ದ ವೇಳೆಗೆ ಒಂದು ಬೆಳಿಗ್ಗೆ ಮನೆಯ ಬೆಲ್ ನನ್ನನ್ನು ಎಚ್ಚರಿಸಿತು. ಹೊರ ಬಂದು ಬಾಗಿಲು ತೆರೆದೆ. ಅದು ಅತ್ಯಂತ ಚಳಿಯ ವಾತಾವರಣದ ನವೆಂಬರ್‍ನ ಬೆಳಗು. ಬಾಗಿಲು ತೆರೆದು ನೋಡಿದರೆ ಇಬ್ಬರು ಸಿಕ್ ಯೋಧರು ನಿಂತಿದ್ದರು. ಅವರನ್ನು ಎಲ್ಲೋ ನೋಡಿದ ಹಾಗನಿಸುತ್ತಿತ್ತು. ನಗುತ್ತಾ ನಿಂತಿದ್ದ ಇಬ್ಬರನ್ನೂ ಒಳ ಕರೆದೆ. ಓಹ್, ಹೌದು, 1978ರಲ್ಲಿ ಪಶ್ಚಿಮ ಬಂಗಾಲದಲ್ಲಿ ನಾನು ಬಿಟ್ಟು ಬಂದಿದ್ದ 8 ಸಿಕ್ ಲೈಟ್ ಇನ್ಫಂಟರಿಯ ಸೈನಿಕರಾಗಿದ್ದವರು!. ಈ ಹನ್ನೊಂದು ವರ್ಷಗಳಲ್ಲಿ ಅವರೂ ಸಿಪಾಯಿಗಳಾಗಿದ್ದವರು ಹವಾಲ್ದಾರ್ ಆಗಿ ಪದೋನ್ನತಿ ಹೊಂದಿದ್ದವರು. ಅವರ ಬೆಟಾಲಿಯನ್ ಜಮ್ಮುವಿನಲ್ಲಿತ್ತು!. 1971ರ ಡಿಸೆಂಬರ್ 11ರ ಫತೇಪುರ ಗೆಲುವನ್ನು ನಮ್ಮ ಸೈನ್ಯ ಪ್ರತೀ ವರ್ಷ ವಿಜಯೋತ್ಸವವಾಗಿ ಆಚರಿಸುತ್ತಿದ್ದೆವು. ಈ ದಿನಾಚರಣೆಗಾಗಿ ನನ್ನನ್ನು ಆಹ್ವಾನಿಸಲು ಈ ಇಬ್ಬರೂ ಹವಾಲ್ದಾರರು ಜಮ್ಮುವಿನಿಂದ ಅಲಹಾಬಾದ್‍ಗೆ ಬಂದಿದ್ದರು. ಓರ್ವ ದೇಶ ಸೇವಕ ಸೈನಿಕನಾಗಿ ನನಗೆ ಸಿಕ್ಕ ಈ ಆತ್ಮೀಯ ಗೌರವ ನೆನಪಿಸಿಕೊಂಡರೆ ಇಂದೂ ಕಣ್ಣಂಚನ್ನು ಒದ್ದೆಯಾಗಿಸುತ್ತದೆ! ಆ ಸಂದರ್ಭವನ್ನು ನಾನು ಪದಗಳಲ್ಲಿ ವರ್ಣಿಸಲಾರೆ. ಹಾಗಾಗಿಯೇ ಯಾವುದೇ ಬೇರೆ ಯೋಚನೆಗಳಿಲ್ಲದೇ ನಾನು ಜಮ್ಮುವಿಗೆ ಫತೇಪುರ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ರೈಲ್ವೇ ಟಿಕೆಟ್ ಬುಕ್ ಮಾಡಿದೆ!

ಅದೊಂದು ಜೀವಮಾನದಲ್ಲೇ ಮರೆಯಲಾರದ ಅತ್ಯದ್ಭುತ ಕ್ಷಣ. ನಮಗಲ್ಲಿ ವಿಜೃಂಭಣೆಯ ಸ್ವಾಗತ. 19ವರ್ಷದ ಮೊದಲು ಫತೇಪುರ್ ನಲ್ಲಿ ನನ್ನೊಂದಿಗೆ ಯುದ್ಧದಲ್ಲಿ ಭಾಗಿಯಾದ ಅನೇಕ ಹಳೆಯ ಸೈನಿಕ ಸ್ನೇಹಿತರನ್ನು ಮತ್ತೆ ನೋಡುವ, ಮಾತಾಡುವ ಆಪ್ತ ಕ್ಷಣ. ಭಾವನಾತ್ಮಕ ಕ್ಷಣವೂ ಆಗಿತ್ತು. ಕೆಲವರು ಈಗಾಗಲೇ ನಿವೃತ್ತರಾಗಿದ್ದರು. ಕೆಲವರು ಸುಬೇದಾರ್ ಆಗಿ ಪದೋನ್ನತಿ ಹೊಂದಿದ್ದರೆ ನನ್ನೊಂದಿಗೆ ಕೆಲಸ ಮಾಡಿದ್ದ ಓರ್ವ ಸಿಪಾಯಿ ಸುಬೇದಾರ್ ಮೇಜರ್ ಆಗಿದ್ದರು. ಹೀಗೆ ಇದೊಂದು ಪುನರ್ಮಿಲನವಾಗಿತ್ತು ಹಾಗೂ ಹೃದಯಸ್ಪರ್ಶಿಯೂ ಆಗಿತ್ತು!

ಹೀಗೆ ನಾವೆಲ್ಲರೂ ಸಂಭ್ರಮದಲ್ಲಿ ತೇಲಾಡುತ್ತಿದ್ದ ವೇಳೆಗೆ ನನಗೆ ಒಂದು ಆಜ್ಞಾ ಪತ್ರ ಕೈಸೇರಿತು. ನನಗೆ ಮತ್ತೆ ಪ್ರಮೋಷನ್!. ನಾನು ಕಮಾಂಡಿಂಗ್ ಕರ್ನಲ್ ಆಗಿ ಪ್ರಮೋಷನ್ ಹೊಂದಿದೆ. ಅಷ್ಟೇ ಅಲ್ಲದೇ ಓರ್ವ ಸೈನಿಕನ ಜೀವನದಲ್ಲೇ ಅತ್ಯಪೂರ್ವ ಎನಿಸುವ ರೀತಿಯಲ್ಲಿ 1970ರಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ನಾನು ಸೇವೆ ಸಲ್ಲಿಸಿದ್ದ, 1971ರ ಯುದ್ಧದಲ್ಲಿ ಗೆಲುವನ್ನು ಸಂಭ್ರಮಿಸಿದ್ದ, 8ಸಿಕ್ ಲೈಟ್ ಇನ್ಫಂಟರಿಗೇ ನಾನು ಕರ್ನಲ್ ಆಗಿ ಪದೋನ್ನತಿ ಹೊಂದಿದ್ದೆ. ಅಂದರೆ ನಾನೇ ತರಬೇತಿಗೊಳಿಸಿದ ನನ್ನದೇ ಸೈನಿಕರ ಜೊತೆ ಅವರನ್ನು ಮುಂಚೂಣಿಯಲ್ಲಿದ್ದು ನಡೆಸುವ ಜೀವನದಲ್ಲೆ ಅತ್ಯಂತ ಖುಷಿ, ಹೆಮ್ಮೆಗೆ ಕಾರಣವಾಗುವ ಅವಕಾಶ ನನ್ನದಾಗಿತ್ತು. ಫತೇಪುರ್ ವಿಜಯ ದಿನದ ಸಂಭ್ರಮಾಚರಣೆಗೆ ಈ ಸಂಭ್ರಮವೂ ಸೇರಿಕೊಂಡಿದ್ದು, ಜೀವನದ ಮರೆಯಲಾರದ ಕ್ಷಣಗಳಲ್ಲಿ ಒಂದು! ನಿವೃತ್ತ ಹಾಗೂ ಸೇವೆಯಲ್ಲಿರುವ ಪ್ರತೀ ಸೈನಿಕರೂ ಈ ಸಂಭ್ರಮವನ್ನು ಮೈದುಂಬಿಕೊಂಡರು.

ಪ್ರತೀ ಸೈನಿಕನಿಗೂ ಇದೊಂದು ಕನಸು. ತಾನೇ ಬೆಳೆದುಬಂದ ತನ್ನದೇ ಇನ್ಫಂಟರಿಗೆ ಕರ್ನಲ್ ಆಗಿ ನೇಮಕ ಆಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನನಗದು ದೊರೆತಿತ್ತು. ಸಂತಸದಲ್ಲೇ ನಾನದನ್ನು ಸ್ವೀಕರಿಸಿದೆ. ಹೀಗೆ ನನ್ನ ಮುಂದಿನ ಪಯಣ, ಅಲಹಾಬಾದ್ ನಿಂದ ಜಮ್ಮುವಿನೆಡೆಗೆ. ನನ್ನ ಸೈನ್ಯ ಜೀವನದ ಮತ್ತೊಂದಷ್ಟು ಸಾಧನೆಗಳ ದಾಖಲೆಗಳಿಗೆ ಕಾರಣವಾದ ಜಮ್ಮುವಿಗೆ! 1991ರ ಜನವರಿ 7ರಂದು ನಾನು 8 ಸಿಕ್‌ ಲೈಟ್ ಇನ್ಫಂಟರಿಯ ಕಮಾಂಡಿಂಗ್ ಕರ್ನಲ್ ಆಗಿ ಅಧಿಕಾರ ಸ್ವೀಕರಿಸಿದೆ.

ಕಣ್ಣುಗಳು ಹನಿಗೂಡುತ್ತವೆ

34ವರ್ಷಗಳ ಸೈನ್ಯದ ಜೀವನವನ್ನು ನೆನೆಯುತ್ತಾ ಈಗ ಕುಳಿತಿರುವಾಗ ಎಲ್ಲಾ ಒಮ್ಮೊಮ್ಮೆ ತೀರಾ ಭಾವುಕನಾಗುತ್ತೇನೆ. ಹೊರ ಪ್ರಪಂಚ ನನ್ನದು ಈಗಿನ ಜೀವನ ಆರಾಮದಾಯಕ ಎಂದುಕೊಳ್ಳುತ್ತಿದೆ. ಆದರೆ ನನಗೆ ಸೈನಿಕನಾಗಿ ನನ್ನ ಪ್ರೀತಿಯ ಯೋಧರ ನಡುವೆ, ಆ ಹವಾಮಾನ ವೈಪರೀತ್ಯ, ಶತ್ರು ಸೈನ್ಯದ ನಡುವೆ ಅವರನ್ನು ಹುರಿದುಂಬಿಸುತ್ತಾ, ಅಪಾಯಗಳನ್ನು ಎದುರಿಸುತ್ತಾ ಇದ್ದ ಜೀವನವೇ ಆಪ್ತವಾಗಿತ್ತು. ಈಗ ನಗರ ಮಧ್ಯದ ಮನೆಯಲ್ಲಿ ಕುಳಿತಾಗೆಲ್ಲಾ ನಾನು ಕಳದುಕೊಳ್ಳುತ್ತಿರುವುದನ್ನು ನೆನೆಸಿಕೊಳ್ಳುತ್ತಾ. ಹಳೆಯ ಘಟನೆಗಳನ್ನು ಮರಳಿ ಕೆದಕಿಕೊಳ್ಳುತ್ತಾ ಎಷ್ಟೋ ಸಲ ಕಣ್ಣೂ ಹನಿಗೂಡುತ್ತದೆ.

ಸೈನ್ಯದಲ್ಲಿ ಏರುವ ಒಂದೊಂದೇ ಹಂತವೂ, ಜವಾಬ್ದಾರಿಗಳೊಡನೆ ದೇಶ ಹಿತದೆಡೆಗಿನ ನಮ್ಮ ಬದ್ಧತೆಯನ್ನು ಹೆಚ್ಚು ಹೆಚ್ಚು ಮಾಡುತ್ತಾ ಹೋದ ಹಾಗೇ ಅಲ್ಲಿನ ನೆನಪುಗಳು ಸದಾ ನಮ್ಮೊಳಗಿನ ಸೈನಿಕನನ್ನು ಜಾಗೃತಗೊಳಿಸುತ್ತಾ ಇರುತ್ತದೆ. ಇಂದು ನನ್ನನ್ನು ನೀವು ಯಾವ ಜೀವನ ಸುಖದ್ದು ಎಂದು ಕೇಳಿದರೆ ನಾನು ನನ್ನ ಸೈನ್ಯದ ಆ ಜೀವನವೇ ಇಷ್ಟದ್ದು ಮತ್ತು ಪರಮೋನ್ನತವಾದದ್ದು ಎನ್ನ ಬಲ್ಲೆ!. ಈಗಲೂ ನನ್ನ ಅಂದಿನ ಸಹೋದ್ಯೋಗಿ ಮಿತ್ರರು, ನನ್ನೊಂದಿಗೆ ಅಥವಾ ನನ್ನ ಕೈಕೆಳಗೆ ಕೆಲಸ ಮಾಡಿದವರು ಸಿಕ್ಕಾಗ, ಸಂದೇಶ ಕಳಿಸಿದಾಗ ಆ ದಿನಗಳನ್ನು ನೆನೆದು ಖುಷಿ ಪಡುತ್ತೇವೆ.

ಓರ್ವ ಸೈನಿಕನಾಗಿ ಪತ್ರಿಕೆಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ನಮ್ಮ ಸೈನಿಕರು ಮಾಡುವ ಸಾಧನೆ ನೋಡಿದಾಗ, ಅಥವಾ ಅವರ ತ್ಯಾಗಗಳನ್ನು ನೋಡಿದಾಗ, ಅದು ಕೇವಲ ಓದಿ ಅಥವಾ ಕೇಳಿಬಿಡುವ ವಿಷಯವೇ ಅಗಿರುವುದಿಲ್ಲ-ಒಂದು ಜೀವನವೇ ಆಗಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ನಾವು ಗಮನಿಸುತ್ತೇವೆ. ಹತ್ತು ಉಗ್ರರು ಅಥವಾ ಶತ್ರುಗಳನ್ನು ಕೊಂದಾಗ ನಮ್ಮ ಒಂದೆರಡು ಸೈನಿಕರು ಹುತಾತ್ಮರಾದಾಗ, ಓಹ್, ಶತ್ರುಗಳಿಗಿಂತ ನಮ್ಮವರ ಸಾವು ಕಡಿಮೆ ಎಂದು ಕೊಳ್ಳುತ್ತೇವೆ!. ಆದರೆ ವಾಸ್ತವದಲ್ಲಿ ಈ ಒಂದೆರಡು ಸಾವೇ ನಮ್ಮನ್ನು ಬಹುಕಾಲ ಬಾಧಿಸುತ್ತದೆ. ಎಲ್ಲಾ ವೈಪರೀತ್ಯಗಳ ನಡುವೆ, ಕ್ಷಣ ಕ್ಷಣಕ್ಕೂ ಅಪಾಯಕಾರಿ ಸನ್ನಿವೇಶಗಳಲ್ಲಿ ಹೋರಾಡುವ ಸೈನಿಕ, ಯಾವ ಮನಃಸ್ಥಿತಿಯಲ್ಲಿರಬೇಕಾಗುತ್ತದೆ ಎಂಬುದನ್ನು ಓರ್ವ ಸೈನಿಕನಾಗಿ ನಾನು ಅರ್ಥೈಸಿಕೊಂಡಷ್ಟನ್ನು ಬೇರಾರೂ ಅನುಭಾವಿಸಲಾರರು. ಇದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಲ್ಲೆ!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT