ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಂತೆ ಬದುಕು, ಸಾಧನೆಗೆ ಪ್ರೇರಣೆ

ಸೇನಾನಿಯ ಸ್ವಗತ
Last Updated 29 ಜನವರಿ 2019, 10:47 IST
ಅಕ್ಷರ ಗಾತ್ರ

1991ರ ಆರಂಭ. ಸೈನಿಕ ಜೀವನದ ಮತ್ತೊಂದು ಮಗ್ಗುಲಿನ ಸುಂದರ ವರ್ಷದ ಆರಂಭವೆಂದೇ ಈಗಲೂ ನೆನೆಸಿಕೊಳ್ಳುತ್ತೇನೆ. ನನ್ನನ್ನು ಸೈನಿಕನಾಗಿ ರೂಪಿಸಿದ ನನ್ನದೇ ಬೆಟಾಲಿಯನ್‍ಗೆ ನಾನೀಗ ಕಮಾಂಡರ್ ಆಗಿದ್ದೇನೆ.

ಒಬ್ಬ ಬೆಟಾಲಿಯನ್ ಕಮಾಂಡರ್ ಯಶಸ್ವೀ ನಾಯಕನಾಗಬೇಕಾದರೆ ಅನೇಕ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪ್ರತೀ ಸೈನಿಕನ ಒಳಗಿನ ತುಡಿತ-ಬಡಿತದ ಅರಿವಿರಬೇಕು, ಪ್ರತೀ ಆಫೀಸರ್‍ನನ್ನು ಪ್ರತ್ಯೇಕವಾಗಿ, ಚಾಣಾಕ್ಷತನದಿಂದ ಸಂಭಾಳಿಸಬೇಕು. ಕಾಲ ಕಾಲಕ್ಕೆ, ಅಗತ್ಯಕ್ಕನುಸಾರವಾಗಿ ಬೇಕಾದ ತರಬೇತಿಯನ್ನು ನೀಡುವುದು, ಯುದ್ಧ ಸನ್ನದ್ಧತೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದು, ಆಡಳಿತಾತ್ಮಕವಾಗಿ ಸಕಾಲಿಕ ತೀರ್ಮಾನ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು –ಹೀಗೆ ಒಂದಿಡೀ ಬೆಟಾಲಿಯನ್‍ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಇರಬೇಕಾಗುತ್ತದೆ.

ನನ್ನ ಬೆಟಾಲಿಯನ್‍ನಲ್ಲಿ ಹೆಚ್ಚಿನ ಕಿರಿಯ ಮತ್ತು ಹಿರಿಯ ಆಫೀಸರ್‍ಗಳು ನನಗೆ ಪರಿಚಿತರೇ ಆಗಿದ್ದುದು ನನಗೆ ಅನುಕೂಲವೇ ಆಯ್ತಾದರೂ ಕೆಲ ಸನ್ನಿವೇಶಗಳನ್ನು ನಿಭಾಯಿಸುವುದರಲ್ಲಿ ತುಸು ಕಷ್ಟಕ್ಕೂ ಕಾರಣವಾಗುತ್ತಿತ್ತು. ಜಮ್ಮುವಿನಲ್ಲಿ ನಮ್ಮ ಕಾರ್ಯಕ್ಷೇತ್ರ ಪಾಕಿಸ್ತಾನದಿಂದ ಕೇವಲ 18ಕಿಮೀ ದೂರದಲ್ಲಿತ್ತು. 800ಸೈನಿಕರಿಗೆ ಅಲ್ಲಿಯೇ ವಸತಿಗೃಹಗಳಿದ್ದರೆ, ಸೇನಾ ಮುಖ್ಯಸ್ಥರಲ್ಲಿ 12 ಮಂದಿ ವಿವಾಹಿತರಿಗೆ ಮತ್ತು ಆರು ಮಂದಿ ಅವಿವಾಹಿತರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯೂ ಇತ್ತು. 140ಜನ ವಿವಾಹಿತ ಸೈನಿಕರಿಗೂ ಉಳಿಯಲು ವಸತಿ ವ್ಯವಸ್ಥೆ ಇತ್ತು. ತರಬೇತಿ, ಸ್ಟೋರ್ಸ್, ಕ್ರೀಡಾಂಗಣ, ಶಸ್ತ್ರಸಂಗ್ರಹ ಕೊಠಡಿ– ಹೀಗೆ ಇದೊಂದು ರೀತಿಯ ಸರ್ವ ಸಜ್ಜಿತ ವ್ಯವಸ್ಥೆಯ ಶಾಂತಿ ತಾಣ. ಜೀವನ ಕ್ರಮದಲ್ಲಿ ಒಂದಷ್ಟು ಅನುಕೂಲಕರ ವಾತಾವರಣವೂ ಇತ್ತು.

ಹೀಗೆ ಹೊಣೆಗಾರಿಕೆಯ ಸೈನಿಕ ಜೀವನ ನಡೆದಿರುವ ಹೊತ್ತಿನಲ್ಲಿ ನಾನು ಹೆಚ್ಚಾಗಿ ತರಬೇತಿ ವಿಭಾಗದಲ್ಲಿ ತಲ್ಲೀನನಾಗಿರುತ್ತಿದ್ದೆ. ಆಗೆಲ್ಲಾ ನನ್ನ ಪತ್ನಿ ಉಳಿದ 140 ಸೈನಿಕ ಕುಟುಂಬದ ಮಕ್ಕಳು, ಸಂಸಾರದೊಂದಿಗೆ ಅವರ ಕ್ಷೇಮ ಪಾಲನೆಯ ಕೆಲಸದಲ್ಲಿ ನಿರತಳಾಗಿರುತ್ತಿದ್ದಳು. ಅವರಿಗೆ ಅಗತ್ಯವಾದ ವೈದ್ಯಕೀಯ ಶಿಬಿರದ ಆಯೋಜನೆ, ವೈದ್ಯಕೀಯ ಸವಲತ್ತುಗಳ ಪೂರೈಕೆಯೂ ಸೇರಿದಂತೆ ಅವರ ಎಲ್ಲಾ ರೀತಿಯ ಬೇಕು ಬೇಡಗಳ ಸಮಸ್ಯೆಗೆ ಸ್ಪಂದಿಸುತ್ತಾ ಒಂದರ್ಥದ ಸಮಾಜ ಸೇವೆ ಮಾಡುತ್ತಾ ಖುಷಿಯಾಗಿದ್ದಳು. ಈ ಎಲ್ಲಾ ನಿರಂತರ ಚಟುವಟಿಕೆಗಳು, ತರಬೇತಿಗಳು ಧನಾತ್ಮಕ ಫಲಿತಾಂಶದೊಂದಿಗೆ ಮುಂದುವರಿದುವು. ನಮ್ಮ ಬೆಟಾಲಿಯನ್ ಎಲ್ಲಾ ವಿಭಾಗಗಳಲ್ಲೂ ಮುಂಚೂಣಿಯನ್ನು ಕಾಯ್ದುಕೊಂಡು, ಐ ಎನ್ ರೈ ಬೆಟಾಲಿಯನ್ ಎಂದರೆ ಇಡೀ ಸೈನ್ಯದಲ್ಲಿಯೇ ಮೆಚ್ಚುಗೆಯ ನೋಟಕ್ಕೆ ಕಾರಣವಾಗಿದ್ದು, ನನಗೆ ಸಾರ್ಥಕ್ಯ ಭಾವಕ್ಕೆ ಕಾರಣವಾಗಿತ್ತು. ನಮ್ಮ ಬೆಟಾಲಿಯನ್ ಶೂಟಿಂಗ್, ಸ್ನೈಪರ್ಸ್, ಮೋರ್ಟರ್, ಆ್ಯಂಟಿ ಟ್ಯಾಂಕ್, ಮೈನ್ ಲೇಯಿಂಗ್, ಹಾಕಿ, ಫೂಟ್ ಬಾಲ್, ಹ್ಯಾಂಡ್ ಬಾಲ್, ಬಾಸ್ಕೆಟ್ ಬಾಲ್ ಈಜು..ಹೀಗೆ ಎಲ್ಲಾ ಸ್ಪರ್ಧೆಗಳಲ್ಲೂ ನಾವೇ ಮುಂಚೂಣಿ ಗೆಲುವಿನಲ್ಲಿರುತ್ತಿದ್ದೆವು. ಇದು ನಮ್ಮೆಲ್ಲರ ನಿರಂತರ ಪರಿಶ್ರಮಕ್ಕೆ ಪ್ರತಿಫಲವಾಗಿತ್ತು.

ನಿಮಗೆಲ್ಲಾ ಅಚ್ಚರಿ ಎನಿಸೀತು-ಇದೆಲ್ಲವೂ ದೇಶ ಕಾಯುವ ವ್ಯವಸ್ಥೆಯಲ್ಲಿ ಎಷ್ಟು ಅಗತ್ಯವೆಂದು. ಹೌದು, ಈ ರೀತಿಯ ಸರ್ವಾಂಗೀಣ ಚಟುವಟಿಕೆಗಳೂ ಯೋಧನಿಗೆ ಮುಖ್ಯ. ಯುದ್ಧ ಭೂಮಿಯಲ್ಲಿ ಹೋರಾಡುವುದು ಎಂದರೆ ಕೇವಲ ಮದ್ದು ಗುಂಡುಗಳನ್ನು ನಂಬಿ, ಜೀವ ಪಣಕ್ಕಿಡುವುದಲ್ಲ. ಒಬ್ಬ ಯೋಧನ ಇಂತಹ ಚಟುವಟಿಕೆಗಳೂ ಆತನ ಮನೋಸ್ಥೈರ್ಯ, ದೈಹಿಕ ಬಲ ಹಾಗೂ ಚಾಣಾಕ್ಷತೆಗೆ ಬಹಳ ಮುಖ್ಯವಾಗಿರುತ್ತದೆ. ಅದನ್ನೇ ನಾವು ತರಬೇತಿಗೊಳಿಸುತ್ತಿರುತ್ತೇವೆ.

ಹೀಗೆ ಅಲ್ಲಿಯೇ ಒಂದು ವರ್ಷ ಹತ್ತು ತಿಂಗಳು ಕಳೆದೆವು. ಈ ಎಲ್ಲಾ ಚಟುವಟಿಕೆಗಳೊಂದಿಗೆ ಕೆಲ ಯುದ್ಧ ತರಬೇತಿ, ಅಭ್ಯಾಸ ಮಾಡಿದೆವು. ಯುದ್ಧವನ್ನೂ ಒಂದು ಆಟದಂತೆ ಅಭ್ಯಾಸ ಮಾಡುವ ಮೂಲಕ, ನಮ್ಮ ಬೆಟಾಲಿಯನ್‍ನ್ನು ಎಂತಾದ್ದೇ ಸನ್ನಿವೇಶಕ್ಕೂ ಒಗ್ಗಿಕೊಳ್ಳುವ ಹಾಗೆ ಬೆಳೆಸುವ ಸವಾಲನ್ನು ನಾವು ಸಮರ್ಥವಾಗಿ ನಿಭಾಯಿಸಿದೆವು-ಇದೂ ನನ್ನನ್ನಿಂದೂ ರೋಮಾಂಚನಗೊಳಿಸುವ, ಪ್ರೀತಿಯ ಜೀವನವಿಧಾನವಾಗಿತ್ತು.

ಈ ಹಂತದಲ್ಲಿಯೇ ನನ್ನೊಳಗಿನ ಸದಾ ಜಾಗೃತ ಸೈನಿಕನನ್ನು ಮತ್ತೊಮ್ಮೆ ಬಡಿದೆಚ್ಚರಿಸುವಂತೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟಕ್ಕೆ ಹೊರಡುವ ‘ನಿರೀಕ್ಷಿತ’ ಅವಕಾಶಬಂತು. ಹೊರಟೆವು!

ಅದು 1992ರ ಕಾಲ. ಜಮ್ಮು, ಕಾಶ್ಮೀರದಲ್ಲಿ ಉಗ್ರರ ಉಪಟಳ ಬಹಳ ಹೆಚ್ಚಾಗಿತ್ತು. ಈ ಉಪಟಳ ಸರ್ಕಾರಕ್ಕೂ ದೇಶಕ್ಕೂ ಎಚ್ಚರಿಕೆಯನ್ನು ನೀಡಿತು. ಮುಸ್ಲಿಮೇತರರು ಅನಿವಾರ್ಯವಾಗಿ ಜಮ್ಮು ಕಣಿವೆಯನ್ನು ತೊರೆದರೆ, ವಿದೇಶೀ ಭಯೋತ್ಪಾದಕರೂ ಸೇರಿ, ಪಾಕಿಸ್ತಾನಿ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಗಡಿ ನುಸುಳಲು ಸನ್ನದ್ಧರಾದರು. ಜಮ್ಮುವಿನಲ್ಲಿ ಅತಿಕ್ರಮಿಗಳ ‘ಆಝಾಧಿ’ ಘೋಷಣೆ ಅಪಾಯಕಾರಿ ಮಟ್ಟದಲ್ಲಿತ್ತು. ಇದೇ ಸಂದರ್ಭದಲ್ಲಿ ಜಮ್ಮುವಿನ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮಹಮದ್ ಸಯೀದ್ ಪುತ್ರಿಯ ಅಪಹರಣವೂ ಆಯ್ತು!. ಇಡೀ ದೇಶದಲ್ಲಿ ಈ ಅಪಹರಣ ತಲ್ಲಣವನ್ನೇ ಸೃಷ್ಟಿಸಿತು.

ಈ ಹಂತದಲ್ಲಿ ನಮ್ಮ ಬೆಟಾಲಿಯನ್‍ಗೆ ಕಾಶ್ಮೀರ ಕಣೀವೆಯ ಉತ್ತರ ಪರ್ವತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಲು ಕಳಿಸಲಾಯ್ತು. ಇದೊಂದು ಸಂದಿಗ್ಧದ ಕಾಲ. ಸೈನ್ಯದ ಕ್ಯಾಂಪ್‍ನಲ್ಲಿದ್ದ ಎಲ್ಲಾ ಕುಟುಂಬಗಳನ್ನೂ ಸ್ಥಳಾಂತರಗೊಳಿಸಿ, ಅವರವರ ಊರಿಗೆ ಕಳುಹಿಸಲಾಯ್ತು. ನನ್ನ ಪತ್ನಿಯನ್ನೂ ಕಾರ್ಕಳಕ್ಕೆ ಕಳುಹಿಸಿದೆ. ಎಲ್ಲರಲ್ಲಿಯೂ ಒಂದು ರೀತಿಯ ಆತಂಕ ಸೃಷ್ಟಿಯಾಗಿದ್ದರೆ ನಮ್ಮೊಳಗಿನ ಸೈನಿಕನಲ್ಲಿ ಯುದ್ಧ ನಿರೀಕ್ಷೆ.

ಇದೇ ಹಂತದಲ್ಲಿ ನನ್ನ ಲಡಾಕ್, ನಾಗಾಲ್ಯಾಂಡ್ ಹಾಗೂ ಶ್ರೀಲಂಕಾದ ಯುದ್ಧಾನುಭವಗಳು ಬಹಳ ಉಪಯೋಗಕ್ಕೆ ಬಂದವು ಈ ಅನುಭವದ ಹಿನ್ನೆಲೆಯಲ್ಲಿ ನಾನು ನಮ್ಮ ಬೆಟಾಲಿಯನ್‍ನ ಎಲ್ಲಾ ಸೈನಿಕರಿಗೂ ಐದು ತಿಂಗಳ ಕಾಲ ತರಬೇತಿ ನೀಡಿದ್ದೆ. ಈ ಮೂಲಕ ಎಲ್ಲಾ ಸೈನಿಕರಿಗೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಉಗ್ರರನ್ನು ಎದುರಿಸುವ ಚಾಕಚಕ್ಯತೆ ಮತ್ತು ಧೈರ್ಯ-ಸ್ಥೈರ್ಯ ತುಂಬಿಕೊಂಡಿತು. ಅಗತ್ಯಕ್ಕನುಗುಣವಾಗಿ ಬೇಕಾದಷ್ಟು ಯುದ್ಧ ಟ್ರಕ್ಕುಗಳನ್ನೂ ನಮ್ಮ ಪಯಣಕ್ಕೆ ಅಣಿಗೊಳಿಸಿದ್ದು 1992ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು.‌ ಹೀಗೆ ನಾವು ತಲುಪಿದ್ದು ಅತ್ಯಂತ ಕಠಿಣ ವಾತಾವರಣ , ಹಿಮಪಾತಗಳಿಂದ ಪ್ರತಿಕೂಲ ವಾತಾವರಣವಿದ್ದ, ಹೊರ ನೋಟಕ್ಕೆ ಭೂಲೋಕದ ಸ್ವರ್ಗ ಎಂದೇ ಗುರುತಿಸಿಕೊಳ್ಳುತ್ತಿದ್ದ ಕಾಶ್ಮೀರ ಕಣಿವೆಯ ಗುರೇಝ್‍ ಎಂಬಲ್ಲಿಗೆ. ಗುರೇಝ್ ಜೀವನವೂ ಒಂದು ರೋಚಕ ಅನುಭವ.

ಮುಂದಿನ ವಾರ:‌ ಗುರೇಝ್ ಕಣಿವೆಯಲ್ಲಿ ಶಾಂತಿಗಾಗಿ ಕದನ

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT