ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರೇಝ್ ಕಣಿವೆಯಲ್ಲಿ ಶಾಂತಿಗಾಗಿ ಕದನ

ಸೇನಾನಿಯ ಸ್ವಗತ
Last Updated 29 ಜನವರಿ 2019, 19:45 IST
ಅಕ್ಷರ ಗಾತ್ರ

ಗರೇಝ್ ಪ್ರಾಂತ್ಯದ 14500 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ನಮ್ಮ ಬೆಟಾಲಿಯನ್ ಬೀಡು ಬಿಟ್ಟಿತು. ಭೂಲೋಕದ ಸ್ವರ್ಗ ಎಂದೇ ಕರೆಸಿಕೊಳ್ಳುವ ಕಾಶ್ಮೀರದ ಗರೇಝ್ ಕಣಿವೆ, ಅತ್ಯಂತ ರಮಣೀಯ ಪ್ರದೇಶ. 9000 ಅಡಿಗಳೆತ್ತರದಲ್ಲಿ ಕಣ್ಣು ಹಾಯಿಸಿದಷ್ಟೂ ಕಾಣುವ ಪೈನ್ ಮತ್ತು ದೇವದಾರು ಮರಗಳ ಸಾಲು ಸಾಲು. ಭಯಾನಕವಾದ ಕ್ರೂರ ಮೃಗಗಳ ತಾಣ...ಹಿಮ ಚಿರತೆಗಳು, ಟ್ರೌಟ್ ಮೀನುಗಳು, ಕಸ್ತೂರಿ ಮೃಗಗಳು...! ವಾವ್...ಈ ಸೌಂದರ್ಯ ಪ್ರವಾಸಿಗರಿಗೆ ಸ್ವರ್ಗ ಸದೃ.

ಆದರೆ.....! ಸೈನಿಕನಿಗೆ ಇಲ್ಲಿನ ಪರಿಸ್ಥಿತಿ ಅತ್ಯಂತ ಕಠಿಣ-ದುರ್ಗಮ! 16ರಿಂದ 18ಅಡಿಗಳಷ್ಟು ಬೀಳುವ ಮಂಜುಗಡ್ಡೆ-ಹಿಮಪಾತ!. ಗಟ್ಟಿಯಾದ ಮಂಜುಗಡ್ಡೆ ಕರಗುತ್ತಾ ಪ್ರವಾಹೋಪಾದಿಯಾಗಿ ಬದಲಾಗುವುದು. ಗಟ್ಟಿ ನೆಲ ಎಂದು ಕಾಲಿಟ್ಟರೆ ಹಾಗೇ ಆಳಕ್ಕಿಳಿದು ಬಿಡುವ ಅಪಾಯ!. ಯಾವುದೇ ಸಂಪರ್ಕ ಸಾಧ್ಯತೆಯೂ ಇಲ್ಲದ ಪ್ರದೇಶ. ಸಂಗ್ರಹಿಸಿದ ಆಹಾರವನ್ನೇ ಸೇವಿಸಬೇಕಾದ ಅನಿವಾರ್ಯತೆ. ಅದೂ ಹೆಲಿಕಾಪ್ಟರ್ ಮೂಲಕ ನಮ್ಮನ್ನು ತಲುಪುತ್ತದೆ. ಅದನ್ನು ಬಿಸಿ ಮಾಡಲು ಸೀಮೆ ಎಣ್ಣೆ. ಇದೇ ಅನೇಕ ಸಂದರ್ಭಗಳಲ್ಲಿ ಮೈಕಾಯಿಸಿಕೊಳ್ಳುವ ಬೆಂಕಿಗೂ ಸಹಾಯವಾಗಬೇಕಾಗಿತ್ತು.

ಪ್ರತೀ ದಿನವೂ ಬೀಳುತ್ತಿದ್ದ ಮಂಜುಗಡ್ಡೆಗಳನ್ನು ಸರಿಸಿ ಸಾಗುವುದೇ ದುಸ್ತರ. ಟೆಲಿಫೋನ್ ಕಂಬಗಳೂ ಮುಚ್ಚಿ ಹೋಗಿ, ಅದೆಷ್ಟೋ ಕಡೆ ಕೇವಲ ಅದರ ತುದಿ ಕಾಣುತ್ತಿತ್ತು. ಇದೇ ನಮಗೆ ದಾರಿ ತೋರಲು ದಿಕ್ಕು. ಕಂಬದ ತುದಿಯನ್ನು ನೋಡಿ, ಒಂದೆಡೆಯಿಂದ ಇನ್ನೊಂದೆಡೆ ಈ ಮಂಜುಗಡ್ಡೆಯ ಸಾಗರದಲ್ಲೇ ಮೊಣಕಾಲಷ್ಟು ತನಕದ ಮಂಜಿನಲ್ಲೇ ನಡೆದು ಹೋಗ ಬೇಕಾಗಿತ್ತು. ಹೀಗೆ ನಮಗೆ ಅಲ್ಲಿ ಶಸ್ತ್ರಧಾರಿ ಸೈನಿಕರ ಮೇಲೆ ನಿಗಾ ಇಡುವುದಕ್ಕಿಂತಲೂ ದೊಡ್ಡ ಸವಾಲಾಗಿದ್ದುದು ಪ್ರಕೃತಿಯೊಂದಿಗೆ ಹೋರಾಟ ಮತ್ತು ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿತ್ತು.

ಹೀಗೆ ಆರಂಭಿಕ ಹಂತದಲ್ಲೇ ಹಿಮಪಾತದಿಂದಾಗಿ ನಾವು ಹನ್ನೊಂದು ಜನ ಸೈನಿಕರನ್ನು ಕಳೆದುಕೊಂಡೆವು. ಹಿಮದ ರಾಶಿಯೊಳಗೆ ಹೂತು ಹೋಗಿದ್ದ ಮೃತದೇಹಗಳನ್ನು ಹುಡುಕಿ ತೆಗೆದು, 14000ಅಡಿ ಎತ್ತರದಲ್ಲೇ ಹೂಳಬೇಕಾಯಿತು. ಇದು ನಮ್ಮ ಸೈನಿಕ ಬದುಕಿನ ಅತ್ಯಂತ ಕಠಿಣ ನಿರ್ಧಾರ ಮತ್ತು ನೋವಿನ ಗಳಿಗೆಯಾಗಿತ್ತು. ಹೀಗೆ ಇಂತಹ ಸಂದರ್ಭಗಳಲ್ಲಿ ರಿಸ್ಕ್ ತಂಡ ಎದುರಿಸುವ ಅತ್ಯಂತ ಕ್ಲಿಷ್ಟಕರ ಸವಾಲುಗಳದ್ದೇ ಬೇರೆ ಅಧ್ಯಾಯ. ನಮ್ಮ ದೇಶವನ್ನು ಕಾಯುವ ಸೈನಿಕರ ಜೀವನದ ಬಗ್ಗೆ ಹೇಳುತ್ತಾ ಹೋದಂತೆ ಸವಾಲುಗಳು-ಸವಾಲುಗಳು-ಸವಾಲುಗಳು!

ಗರೇಝನ ಇಂತಹ ಕಠಿಣ ಸನ್ನಿವೇಶದಲ್ಲೂ ಯಶಸ್ಸು ನಮ್ಮದಾಗಿತ್ತು. ಮುಖ್ಯವಾಗಿ ಪಾಕಿಸ್ಥಾನಿ ಸೈನಿಕರಲ್ಲಿ ಒಂದು ರೀತಿಯ ಭಯ ಹುಟ್ಟಿಸುವಲ್ಲಿ ನಾವು ಸಫಲರಾಗಿದ್ದೆವು. ವಿದೇಶೀ ಶತ್ರುಗಳೂ ನಮ್ಮ ಈ ಸಹಾಸಕ್ಕೆ ಬೆರಗಾದರು. ಇದು ನಮ್ಮ ಯಶಸ್ಸಿನ ಮೊದಲ ಮೆಟ್ಟಿಲು. ಪ್ರತೀ ರಾತ್ರಿಯೂ ನಮ್ಮ ಸೈನಿಕರ ತಂಡ ಹೊರಗಡೆ ಹೋಗಿ, ಇಂತಹ ವಾತಾವರಣದಲ್ಲೇ ಕಣಿವೆ ಪ್ರದೇಶದೆಡೆ ನಿಗಾ ಇಡುತ್ತಿತ್ತು. ಈ ಮೂಲಕ ಶತ್ರು ಸೈನಿಕರ ಒಳ ನುಸುಳುವಿಕೆಯನ್ನು ತಡೆಯುತ್ತಿದ್ದೆವು. ಇಂತಹ ಕಾಯುವಿಕೆಯಲ್ಲಿ ಅನೇಕ ಗುಂಡಿನ ಚಕಮಕಿಗಳಾದುವು(ಎನ್‍ಕೌಂಟರ್). ನಮ್ಮ ಒಬ್ಬನೇ ಒಬ್ಬ ಸೈನಿಕನೂ ಇದಕ್ಕೆ ಬಲಿಯಾಗಲಿಲ್ಲ!. ಅನೇಕ ಶತ್ರು ಸೈನಿಕರು ಬಲಿಯಾದರು. ಅವರಿಂದ ಅಸಂಖ್ಯ ಮದ್ದುಗುಂಡುಗಳನ್ನೂ ವಶಪಡಿಸಿಕೊಂಡೆವು. ಇದು ನಮ್ಮ ಸೈನ್ಯಕ್ಕೆ ಸಿಕ್ಕ ಅತ್ಯಂದ ದೊಡ್ಡ ಯಶವೆಂದೇ ದಾಖಲಾಗಿದೆ.

ಈ ಹಂತದಲ್ಲಿ ಅತ್ಯಂತ ಸ್ವಾರಸ್ಯಕರವಾದ ಒಂದು ಯುದ್ಧ ಸನ್ನಿವೇಶವನ್ನು ಹೇಳಲೇ ಬೇಕು.

ನಾವು ಈ ಗರೇಝ್ ಪ್ರದೇಶದಲ್ಲಿ ಈಗಾಗಲೇ ಐದು ತಿಂಗಳುಗಳನ್ನು ಕಳೆದಿದ್ದೆವು. 14500ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ನಮ್ಮ ಯಶಸ್ಸು ದಾಖಲಾಗುತ್ತಿತ್ತು-ಆ ಬಗ್ಗೆ ನಮಗೆ ಹೆಮ್ಮೆ ಇತ್ತು. ಇದೇ ಸಂದರ್ಭದಲ್ಲಿ ನಮ್ಮ ಬೆಟಾಲಿಯನ್‍ನಲ್ಲಿ ಸೈನಿಕರ ಕೊರತೆ ಎದುರಾಗುತ್ತಲೂ ಇತ್ತು. ಹೇಗೆಂದರೆ ಕೆಲವರು ನಿವೃತ್ತರಾಗುತ್ತಿದ್ದರು. 14-15ಜನ ಸುಬೇದಾರ್ ಗಳ ಸ್ಥಾನ ಖಾಲಿ ಇತ್ತು. ಇನ್ನು ಆರುತಿಂಗಳಲ್ಲಿ ಈ ಸ್ಥಾನಕ್ಕೆ ಸಮರ್ಥ ಸೈನಿಕರನ್ನು ನೇಮಿಸಬೇಕಿತ್ತು. ಈ ಕಾರಣದಿಂದ 19ಜನ ಹವಾಲ್ದಾರರನ್ನು ಅಗತ್ಯ ತರಬೇತಿ, ಪರೀಕ್ಷೆಗಳ ಮೂಲಕ ಪದೋನ್ನತಿ ನೀಡುವುದಕ್ಕೆ ಆಯ್ಕೆ ಮಾಡಲಾಯಿತು.

ಈ ಹತ್ತೊಂಭತ್ತು ಹವಾಲ್ದಾರರನ್ನು ತರಬೇತಿಗೊಳಿಸಲು, ಒಬ್ಬ ಯಂಗ್ ಆಫೀಸರ್ ಮತ್ತು ಒಬ್ಬ ಅತ್ಯುತ್ತಮ ಸುಬೇದಾರ್‍ಗೆ ಜವಾಬ್ದಾರಿ ವಹಿಸಲಾಯಿತು. ಈ ತರಬೇತಿಗೆಂದೇ ಒಂದು ವಿಶೇಷ ಸ್ಥಳ (ಪೋಸ್ಟ್) ನಿಗದಿಗೊಳಿಸಲಾಯಿತು. ಅಲ್ಲಿಗೆ ಈ 1+1+19 ಜನರನ್ನು ಕಳಿಸಲಾಯಿತು!. ಇವರ ಮುಖ್ಯ ಕರ್ತವ್ಯ ಎಂದರೆ ಹಗಲಿಡೀ ಪಠ್ಯದ ಮೂಲಕ ತರಬೇತಿ , ರಾತ್ರಿ ಪ್ರಾಯೋಗಿಕ ತರಬೇತಿ ಪಡೆಯುವುದಾಗಿತ್ತು.

ಮಂಜುಗಡ್ಡೆ ಕರಗುತ್ತಿತ್ತು. ಇದರೊಂದಿಗೆ ಬೀಸುಗಾಳಿ ಬೀಸುತ್ತಿತ್ತು. ಹಿಮಪಾತ, ಗಾಳಿಗಳೆರಡೂ ಜೊತೆಯಾಗಿ ಅದೊಂದು ರುದ್ರ ಸದೃಶ ವಾತಾವರಣ. ಇದರಿಂದಾಗಿ ಇಡೀ ವಾತಾವರಣವೇ ಅಪಾಯಕಾರಿಯಾಗಿ ಮಾರ್ಪಟ್ಟಿತ್ತು. ಅದರಲ್ಲೂ ರಾತ್ರಿಯಂತೂ ಭೀಕರತೆಯಿಂದ ಕೂಡಿತ್ತು.

ಆ ದಿನ 13 ಏಪ್ರಿಲ್ 1993!. ಆ ದಿನ ಶುಕ್ರವಾರ!. 13ರ ಶುಕ್ರವಾರ ಎಂದರೆ ಅಷ್ಟೇನೂ ಸುದಿನವಲ್ಲ ಎಂಬ ನಂಬಿಕೆ.

ಅದು ಅತ್ಯಂತ ಭೀಕರ ವಾತಾವರಣದ ಬೆಳಗ್ಗಿನ ಹೊತ್ತು. ನಮ್ಮ ಆ ತಂಡಕ್ಕೊಂದು ಆತಂಕದ ಸುಳಿವು ಸಿಕ್ಕಿತು. ಹುಲ್ಲುಗಾವಲಿನ ಆ ಪ್ರದೇಶದಲ್ಲಿ ಯಾರೋ ನಡೆದು ಹೋದ ಕುರುಹು. ಖಚಿತವಾಗಿತ್ತು-ಯಾರೋ ನುಸುಳುಕೋರರು ಗಡಿಯೊಳಗೆ ಬಂದಿದ್ದರು. ಮತ್ತು ಅವರು ನಡೆದು ಹೋದ ದಾರಿ ಸ್ಪಷ್ಟವಾಗಿ ನಮ್ಮ ದೇಶದ ಗಡಿಯೊಳಗೇ ಹೊರಟದ್ದು ಖಂಡಿತವಾಯ್ತು. ಬೆಳಗ್ಗಿನ 6.30ಕ್ಕೆ ನಮ್ಮ ಸೈನ್ಯದ ಟ್ರಾಕರ್ ನಾಯಿಯನ್ನು ಕರೆಸಲಾಯ್ತು. ಅದನ್ನು ಹಿಂಬಾಲಿಸಿ ಈ 21ಜನರೂ ಶತ್ರು ಬೇಟೆಗೆ ಹೊರಟರು.

ಊಟ ಇಲ್ಲ-ನಿದ್ದೆ ಇಲ್ಲ. ಎಲ್ಲಿ ನೋಡಿದರೂ ಬೆಟ್ಟ ಗುಡ್ಡಗಳು-ಕಲ್ಲುಗಳು. ಬೀಸುವ ತಂಗಾಳಿ-ಮೈ ಕೊರೆಸುವ ಹಿಮಪಾತ. ನಮ್ಮ 21 ಯೋಧರಲ್ಲಿ ಗಟ್ಟಿ ನಿರ್ಧಾರ-ಸದೃಢ ಮನೋಬಲ. 3-4 ಸಲ ಇಡೀ ತಂಡ ದಾರಿ ತಪ್ಪಿಸಿಕೊಂಡಿತು. ಆದರೂ ಧೃತಿಗೆಡಲಿಲ್ಲ. ಮತ್ತೆ ಮತ್ತೆ ಸರಿದಾರಿ ಹಿಡಿದು ಶೋಧ ಮುಂದುವರಿಸಿದರು. ಹೀಗೆ ಸಾಗುವಾಗ ಒಂದು ಸಾಕ್ಸ್(ಕಾಲುಚೀಲ) ಅವರಿಗೆ ಸಿಕ್ಕತು! ಶತ್ರುಪ್ರವೇಶ ಮತ್ತೆ ಖಚಿತವಾಯಿತು. ಹಾಗೇ ಮುಂದುವರಿದಾಗ ಮನುಷ್ಯರ ಮಲ ಸಿಕ್ಕಿತು!! ಮತ್ತೂ ಶೋಧ ಮುಂದುವರಿದಾಗ, ಕೆಲ ತಿಂದೆಸೆದ ಬಿಸ್ಕಿಟ್ ಪೊಟ್ಟಣಗಳು! ಹೀಗೇ ಹುಡುಕಾಟ ಮುಂದುವರಿಯಿತು. ಆಗಲೇ ಸಂಜೆ 5ಗಂಟೆ. ಎಲ್ಲರಿಗೂ ಆಯಾಸ-ಹಸಿವು!. ಆದರೆ ‘ಎಂದಿಗೂ ಪ್ರಯತ್ನ ಕೈ ಬಿಡಬಾರದು’ಎಂಬ ದೃಢ ಸಂಕಲ್ಪ ಅವರನ್ನು ಸೋಲೊಪ್ಪಿಕೊಳ್ಳಲು ಬಿಡುತ್ತಿರಲಿಲ್ಲ. ಆದರೆ....ಯಾವುದೇ ನಿರೀಕ್ಷೆ ಇರಲಿಲ್ಲ. ಕೊನೆಗೂ ಎಲ್ಲರೂ ಇನ್ನು ಈ ಪ್ರಯತ್ನ ಕೈಬಿಡುವುದೇ ಉಚಿತವೆಂದು ನಿರ್ಧರಿಸಿದರು. ಆದರೆ ಅವರಲ್ಲೂ ಕೆಲ ಬಿಸಿರಕ್ತದ ಸೈನಿಕರಿಗೆ ಸೋಲೊಪ್ಪಲು ಮನಸ್ಸಿಲ್ಲ. ಕೆಲವರು ಅಲ್ಲಿಯೇ ಎದ್ದು ನಿಂತಂತಿರುವ ಎತ್ತರದ ಒಂದು ಪರ್ವತದಂತಿರುವ ಪ್ರದೇಶವನ್ನು ಹತ್ತಿದರು. ಆ ನಿಶ್ಶಕ್ತತೆಯಲ್ಲಿ ಇದೊಂದು ಸಾಹಸವೇ ಸರಿ!

ಅಲ್ಲಿ......!

ಒಂದು ಶತ್ರು ಪಡೆಯ ಗುಂಪು ವಿರಮಿಸಲು ಅಣಿಯಾಗುತ್ತಿತ್ತು!!. ಇಂದೊಂದು ವಿಶ್ರಾಂತಿಯ ನಂತರ, ಮರುದಿನ ಎಂದರೆ ಈ ಗುಂಪು ಕಾಶ್ಮೀರ ಕಣಿವೆಯನ್ನು ಪ್ರವೇಶಿಸುತ್ತಿತ್ತು. ಅದೇ ನಿರ್ಧಾರದಿಂದ ಶತ್ರು ಸೈನಿಕರು ವಿಶ್ರಾಂತಿಗೆ ಮೊದಲು ಊಟಕ್ಕೆ ಅಣಿಯಾಗುತ್ತಿದ್ದರು. ಅವರ ಊಟದ ಪ್ಯಾಕೆಟ್‍ನ್ನು ತೆರೆಯುತ್ತಿದ್ದರು. ಆಗ ಸಂಜೆ 5.30. ತತ್ ಕ್ಷಣವೇ ನಮ್ಮೆಲ್ಲಾ ಸೈನಿಕರು ಅವರನ್ನು ಸುತ್ತುವರಿದರು. ಆಗ ಗನ್‍ಗಳು ಮೊಳಗಲಾರಂಬಿಸಿದುವು. ಗುಂಡಿನ ಮೊರೆತ ಆರಂಣಭವಾಯ್ತು. ಪರಸ್ಪರ ಕಾದಾಟ ತಾರಕಕ್ಕೇರಿತು. ಇದು 7 ಗಂಟೆ ತನಕವೂ ಮುಂದುವರಿಯಿತು. ಪರ್ವತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಗ ಕತ್ತಲಾಗುತ್ತದೆ. ಈ ಹಂತದಲ್ಲಿ ಉಳಿದ ರಿಸ್ಕ್ ತಂಡಗಳೂ ಶತ್ರುಗಳ ಪಾರಾಗುವಿಕೆಯನ್ನು ತಡೆಯಲು ಅಲ್ಲಿ ಸುತ್ತುವರಿದರು. ಕೊನೆಗೂ ಎಲ್ಲವೂ ಮುಗಿದು, ರೈಫಲ್‍ಗಳು ಶಾಂತವಾಗುವ ಹೊತ್ತಿಗೆ ವಿಜಯ ನಮ್ಮ ಸೈನಿಕರ ಪಾಲಾಗಿತ್ತು-ವಿಜಯದ ಉತ್ಸವ ಮನೆ ಮಾಡಿತ್ತು!.

ಇದೊಂದು ಅದ್ಭುತ ವಿಜಯ. ನಮ್ಮ 21ಜನ ಸೈನಿಕರು ಒಟ್ಟೂ 21ಜನ ಶತ್ರು ಸೈನಿಕರನ್ನು ಕೊಂದಿದ್ದರು. ಎರಡು ರಶ್ಯನ್ ಡ್ರಾಗನ್ ರೈಫಲ್‍ಗಳನ್ನು , ಟೆಲಿಸ್ಕೋಪ್ ಜೊತೆಗೆ ವಶಪಡಿಸಿಕೊಂಡಿದ್ದರು. ಒಂದು 303 ರೈಫಲ್, ಒಂದು ರಾಕೆಟ್ ಲಾಂಚರ್, ರಾಕೆಟ್, 16ಎಕೆ 47ರೈಫಲ್‍ಗಳು, 10 ಚೈನೀಸ್ ಪಿಸ್ತೂಲ್‍ಗಳು. 2 ಯುನಿವರ್ಸಲ್ ಮೆಶಿನ್‍ಗನ್‍ಗಳು, ಅಸಂಖ್ಯ ಗ್ರೆನೇಡ್, ಮದ್ದು ಗುಂಡುಗಳು ನಮ್ಮ ಕೈವಶವಾಗಿದ್ದುವು. ಆ ವರ್ಷ ಇದು ಅತ್ಯಂತ ದೊಡ್ಡ ಪ್ರಮಾಣದ ಶತ್ರು ಸೈನಿಕರ ಹತ್ಯೆ ಮತ್ತು ವಶಪಡಿಸಿಕೊಂಡ ಮದ್ದು ಗುಂಡುಗಳ ಸಂಗ್ರಹ. ಇದು ಎಂದೆಂದೂ ಸೋಲೊಪ್ಪಿಕೊಳ್ಳಲಾರದ, ನಮ್ಮ ಸೈನಿಕರ ಮನೋ ದಾರ್ಢ್ಯತೆಗೆ ಸಂದ ದೊಡ್ಡ ಜಯ. ನಮ್ಮ 21ಜನ ಯೋಧರು, ಎಲ್ಲಾ 21ಶತ್ರುಗಳನ್ನೂ ನಮ್ಮಲ್ಲಿ ಒಂದೇ ಒಂದೂ ಬಲಿಯೂ ಆಗದಂತೆ ಜಯಿಸಿದ್ದು, ನಮ್ಮ ಸೈನ್ಯದ ಚಾಣಾಕ್ಷತೆಗೆ ಸಾಕ್ಷಿ. ಇಂತಾದ್ದೇ ಮತ್ತೂ ಎರಡು ಘಟನೆಗಳು, ವಿಜಯಗಳು ನಮ್ಮ ಪಾಲಾಗಿದ್ದುವು. ನಮ್ಮ ಈ ವಿಜಯದಿಂದ ಪಾಕಿಸ್ಥಾನಿಗಳು ನಮ್ಮನ್ನು ಕಂಡರೆ ಭಯ ಪಡುವ ಹಾಗೂ ದ್ವೇಶಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದರು. ಇದು ನಮ್ಮ ಸೈನ್ಯದ ಗೆಲುವಿನ ಪತಾಕೆ.

ಮುಂದಿನ ವಾರ: ಭಾರತಾಂಬೆಯ ನಮ್ರ ಸೇವಕನಾಗಿ

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT