ಪರೀಕ್ಷಾ ಭಯ ನಿವಾರಣೆಗಾಗಿ ‘ಅದಲು–ಬದಲು’

7

ಪರೀಕ್ಷಾ ಭಯ ನಿವಾರಣೆಗಾಗಿ ‘ಅದಲು–ಬದಲು’

Published:
Updated:
Deccan Herald

ಬಸವನಬಾಗೇವಾಡಿ: ಎಸ್‌.ಎಸ್‌.ಎಲ್‌.ಸಿ. ಪ್ರತಿಯೊಬ್ಬ ವಿದ್ಯಾರ್ಥಿ ಬದುಕಿನ ಮಹತ್ವದ ಘಟ್ಟ. ಹತ್ತನೇ ತರಗತಿಗೆ ಪಾದರ್ಪಣೆ ಮಾಡಿದ ಬಹುತೇಕ ವಿದ್ಯಾರ್ಥಿಗಳ ಮನದಲ್ಲಿ ಆರಂಭದಿಂದಲೇ ಪರೀಕ್ಷಾ ಭಯ ಕಾಡಲಾರಂಭಿಸುತ್ತದೆ.

ವಿದ್ಯಾರ್ಥಿಗಳ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ವಿನೂತನ ಯತ್ನ ಆರಂಭಿಸಿದ್ದಾರೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳ ಮನದ ಮೂಲೆಯಲ್ಲಿ ಅಡಗಿ, ಬೇತಾಳದಂತೆ ಕಾಡುತ್ತಿರುವ ಪರೀಕ್ಷಾ ಭಯ ನಿವಾರಣೆಗಾಗಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.

ತಾವು ರೂಪಿಸಿರುವ ವಿಷಯ ಶಿಕ್ಷಕರ ‘ಅದಲು–-ಬದಲು’ ಎಂಬ ಈ ವಿನೂತನ ಕಾರ್ಯಕ್ರಮದ ಕುರಿತಂತೆ ‘ಪ್ರಜಾವಾಣಿ’ ಜತೆ ಗುಳೇದಗುಡ್ಡ ಸವಿಸ್ತಾರವಾಗಿ ಮಾತನಾಡಿದ್ದಾರೆ. ಈ ಮಾತುಕತೆಯ ಸಾರ ಇಲ್ಲಿದೆ.

* ‘ವಿಷಯ ಶಿಕ್ಷಕರ ಅದಲು–-ಬದಲು’ ಏನಿದು?

ಒಂದು ಶಾಲೆಯ ವಿಷಯ ಶಿಕ್ಷಕರು ಇನ್ನೊಂದು ಶಾಲೆಗೆ ಅದಲು–ಬದಲುಗೊಂಡು, ಅಲ್ಲಿ ತಮ್ಮ ವಿಷಯದ ಕುರಿತು ಚರ್ಚಿಸುವುದು. ಪ್ರತಿ ಶನಿವಾರ ವಿಷಯ ಶಿಕ್ಷಕರು ಮೂರು ಅವಧಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ. ಹಿಂದೆ ಆಗಿರುವ ಪಾಠಗಳಲ್ಲಿನ ಕ್ಲಿಷ್ಟ ಅಂಶಗಳನ್ನು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದೇ ಇದರ ಮೂಲ ಆಶಯ.

* ವಿಶೇಷತೆ ಏನು?

ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕರ ಪಾಠವನ್ನು ವರ್ಷವಿಡಿ ಕೇಳುತ್ತಿರುತ್ತಾರೆ. ಈ ರೀತಿ ವಿಷಯ ಶಿಕ್ಷಕರ ಅದಲು-–ಬದಲು ಮಾಡುವ ಮೂಲಕ ಹೊಸ ಶಿಕ್ಷಕರನ್ನು ಮಕ್ಕಳಿಗೆ ಪರಿಚಯಿಸುವುದರಿಂದ, ಕಲಿಕೆಯಲ್ಲಿ ಕುತೂಹಲ, ಆಸಕ್ತಿ ಹೆಚ್ಚುವುದು. ಶಿಕ್ಷಕರಲ್ಲಿರುವ ವಿಶೇಷ ವಿಷಯ ತಜ್ಞತೆ ಮಕ್ಕಳಿಗೆ ವರದಾನವಾಗಲಿದೆ.

* ಮಕ್ಕಳ ಪ್ರತಿಕ್ರಿಯೆ ಹೇಗಿದೆ?

ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತಷ್ಟು ಹೆಚ್ಚುತ್ತಿದೆ. ಬೇರೆ ಶಾಲೆಯ ಶಿಕ್ಷಕರು ತಮ್ಮ ಶಾಲೆಗೆ ಬರುವ ಮುಂಚಿತವಾಗಿಯೇ ಮಕ್ಕಳು ಪಾಠಗಳಲ್ಲಿನ ಕ್ಲಿಷ್ಟತೆಯನ್ನು ಪಟ್ಟಿ ಮಾಡಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

* ಶಿಕ್ಷಕರ ಪ್ರತಿಕ್ರಿಯೆ ಹೇಗಿದೆ?

ಪ್ರತಿ ವಿಷಯ ಶಿಕ್ಷಕರು ಉತ್ಸಾಹದಿಂದ ಪಾಠದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾವು ಕರ್ತವ್ಯ ನಿರ್ವಹಿಸುವ ಸಮೀಪದ ಶಾಲೆಗೆ ತೆರಳಿ ಬೋಧನೆಯಲ್ಲಿ ತೊಡಗುತ್ತಿದ್ದಾರೆ. ಶಿಕ್ಷಕರ ಅದಲು–-ಬದಲು ಕಾರ್ಯಕ್ರಮ ಉತ್ತಮವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

* ಪರೀಕ್ಷೆ ಭಯ ನಿವಾರಣೆಗೆ ಕೈಗೊಂಡ ಇತರೆ ಕ್ರಮಗಳೇನು?

ಪ್ರತಿ ಪಾಠ ಮುಗಿದ ನಂತರ ಮಕ್ಕಳ ಗುಂಪು ಚರ್ಚೆ. ಕಿರು ಪರೀಕ್ಷೆ. ವಾರಕ್ಕೊಂದು ದಿನ ರಸಪ್ರಶ್ನೆ. ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಾರದ ಪ್ರಯೋಗ ಸೇರಿದಂತೆ ವಿಷಯಾಧಾರಿತ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !