ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದಿಂದ ಹಾಲಾಹಲದ ಫಲ

Last Updated 14 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬಹುಕಾಲದ ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದ ಸಮಯದಲ್ಲಿ ಬೋಧಿಸತ್ವ ಒಂದು ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ. ಸಂಸ್ಕಾರಗಳನ್ನು ಪಡೆದು ದೊಡ್ಡವನಾಗಿ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಕೆಲಸಕ್ಕೆ ಸಹಕಾರಿಗಳಾಗಿ ಸಾಕಷ್ಟು ಜನ ಸೇವಕರು ಇದ್ದದ್ದರಿಂದ ಅವನಿಗೆ ಸಾಕಷ್ಟು ಸಮಯ ವಿರಾಮವಾಗಿ ಇರಲು ಸಿಗುತ್ತಿತ್ತು. ಆ ವಿರಾಮ ಸಮಯದಲ್ಲಿ ಆತ ಜೊತೆಗಾರರೊಂದಿಗೆ ಜೂಜು, ಪಗಡೆ ಇವುಗಳನ್ನು ಆಡುತ್ತಾ ಕಾಲಕಳೆಯುತ್ತಿದ್ದ.

ಈ ಜೂಜಾಟಗಳಲ್ಲಿ ಅವನಿಗೆ ಮತ್ತೊಬ್ಬ ಜೂಜುಗಾರನ ಪರಿಚಯವಾಯಿತು. ಆತ ಕುಟಿಲ ಮನುಷ್ಯ, ಏನಾದರೊಂದು ಮೋಸ ಮಾಡಿ ಆಟವನ್ನು ಗೆಲ್ಲುವುದೇ ಅವನ ಉದ್ದೇಶ. ತಾನು ಗೆಲ್ಲುತ್ತಿದ್ದರೆ ಯಾವ ತಕರಾರೂ ಇಲ್ಲದೆ ಕುಳಿತಿರುತ್ತಿದ್ದ. ಆದರೆ ತನಗೆ ಸೋಲಾಗುತ್ತಿದೆ ಎನ್ನುವ ಸಮಯದಲ್ಲಿ ಒಂದು ಪಗಡೆಯ ಕಾಯಿಯನ್ನು ಬಾಯಿಯಲ್ಲಿ ಹಾಕಿಕೊಂಡು. ನನ್ನ ಕಾಯಿ ಕಳೆದುಹೋಗಿದೆ, ಅದೆಲ್ಲೋ ಬಿದ್ದು ಹೋಯಿತು ಎಂದು ಹಾರಾಡುತ್ತಿದ್ದ. ಪಗಡೆಕಾಯಿ ಇಲ್ಲದೆ ಆಟ ಹೇಗೆ ಎಂದು ಕೂಗಾಡುತ್ತ ಆಟವನ್ನು ಕೆಡಿಸಿ ಹೋಗಿಬಿಡುತ್ತಿದ್ದ.

ಬೋಧಿಸತ್ವ ಇವನ ಮೋಸಗಾರಿಕೆಯನ್ನು ತಿಳಿದು ಅದಕ್ಕೊಂದು ಉಪಾಯ ಮಾಡಬೇಕೆಂದು ಯೋಚಿಸಿದ. ಒಂದು ದಿನ ಎಲ್ಲ ಪಗಡೆಯ ಕಾಯಿಗಳನ್ನು ಮನೆಗೊಯ್ದು ಆ ಮರದ ಕಾಯಿಗಳನ್ನು ಒಂದು ಮಂದವಾದ ವಿಷದಲ್ಲಿ ಚೆನ್ನಾಗಿ ನೆನೆಸಿಬಿಟ್ಟು ನಂತರ ಒಣಗಿಸಿ ತಂದ. ಮರುದಿನ ಈ ಕುಟಿಲ ಸ್ನೇಹಿತನನ್ನು ಜೂಜಿಗೆ ಕರೆದ. ಅವನೂ ಉತ್ಸಾಹದಿಂದ ಬಂದ. ಆಟ ರಂಗೇರಿತು. ನಿಧಾನವಾಗಿ ಮೋಸಗಾರನಿಗೆ ಹೊಳೆಯಿತು, ತಾನು ಸೋಲುತ್ತಿದ್ದೇನೆ. ಬೋಧಿಸತ್ವನಿಗೆ ಅರಿವಾಗದ ಹಾಗೆ ಮೆಲ್ಲಗೆ ಒಂದು ಪಗಡೆ ಕಾಯಿಯನ್ನು ಎತ್ತಿ ಬಾಯಿಯಲ್ಲಿ ಹಾಕಿಕೊಂಡು ಬಿಟ್ಟ. ಬೋಧಿಸತ್ವನಿಗೆ ಇವನು ಹೀಗೆ ಮಾಡುತ್ತಾನೆಂಬುದರ ಅರಿವಿದ್ದುದರಿಂದ ನೋಡದವನಂತೆ ಕುಳಿತಿದ್ದ. ಆಗಲಿ, ಅವನು ಕೊಂಚ ಹೊತ್ತು ಇದನ್ನು ಅನುಭವಿಸಲಿ ಎಂದು ಸುಮ್ಮನಿದ್ದ. ಮೋಸದ ಜೂಜುಗಾರ ಎಷ್ಟು ಹೊತ್ತು ಆ ಪಗಡೆಯನ್ನು ಬಾಯಿಯಲ್ಲಿ ಇಟ್ಟುಕೊಂಡಾನು? ಬಾಯಿಯಿಂದ ಜೊಲ್ಲು ಹೊಟ್ಟೆ ಸೇರಿದಾಗ ವಿಷ ತನ್ನ ಕೆಲಸ ಮಾಡತೊಡಗಿತು. ಆತ ಅದರ ತೀವ್ರತೆಗೆ ಮೂರ್ಛಿತನಾಗಿ ಕಣ್ಣುಗುಡ್ಡೆಗಳನ್ನು ಬೆಳ್ಳಗೆ ಮಾಡಿಕೊಂಡು ಬಿದ್ದುಬಿಟ್ಟ.

ಇವನಿಗೆ ಬುದ್ಧಿ ಬರಬೇಕು, ಆದರೆ ಪ್ರಾಣ ಹೋಗಬಾರದೆಂದು, ಬೋಧಿಸತ್ವ ಸಿದ್ಧಮಾಡಿಟ್ಟುಕೊಂಡಿದ್ದ ಔಷಧಿಯನ್ನು ಕೊಟ್ಟು ವಿಷವನ್ನು ವಾಂತಿಮಾಡಿಸಿದ. ನಂತರ ಶಕ್ತಿ ಬರುವುದಕ್ಕಾಗಿ ತುಪ್ಪ, ಬೆಲ್ಲ, ಜೇನುತುಪ್ಪ ಇವುಗಳನ್ನು ಕೊಟ್ಟು ನಿರೋಗಿಯಾಗಿಸಿದ. ಅವನು ಪೂರ್ತಿಯಾಗಿ ಗುಣವಾದ ಮೇಲೆ ತಾನು ಮಾಡಿದ್ದನ್ನೆಲ್ಲ ಅವನಿಗೆ ವಿವರಿಸಿ ಮತ್ತೊಮ್ಮೆ ಹೀಗೆ ಮಾಡದಂತೆ ಉಪದೇಶ ಮಾಡಿ ಕಳುಹಿಸಿದ. ಅಂದಿನಿಂದ ಆ ಕಪಟ ಮನುಷ್ಯ ಮೋಸಮಾಡುವುದನ್ನು ನಿಲ್ಲಿಸಿದ. ನಾವು ಮಾಡುವ ಯಾವುದೇ ಮೋಸದ ಕಾರ್ಯ ವಿಷಸೇವನೆಯಂತೆಯೇ ವಿಪರೀತ ಫಲ ನೀಡದೆ ಇರುವುದಿಲ್ಲ.

ಬುದ್ಧ ಹೇಳಿದ, ‘ವಿಷದಿಂದ ನೆನೆದಿರುವ ಪಗಡೆಕಾಯಿಯನ್ನು ನುಂಗುವವನು ಆಗ ಅದನ್ನು ಅರಿತಿರಲಾರ. ಆದರೆ ಆ ಪಾಪಿ ಕಹಿಯಾದ ಫಲವನ್ನು ಅನುಭವಿಸುವುದು ಮಾತ್ರ ತಪ್ಪಲಾರದು. ಅದಕ್ಕೇ ಆಲೋಚಿಸದೇ ಮಾಡುವ ಕಾರ್ಯಗಳು, ಮೋಸದಿಂದ ಪಡೆದ ವಸ್ತುಗಳು, ನಮ್ಮ ಮೇಲೆ ಹಾಲಾಹಲದಂತೆಯೇ ಪರಿಣಾಮಗಳನ್ನು ಮಾಡುತ್ತವೆ. ಆದ್ದರಿಂದ ಮೋಸದಿಂದ ಸದಾಕಾಲ ದೂರವಿರಬೇಕು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT