ಗುರುವಾರ , ಡಿಸೆಂಬರ್ 1, 2022
20 °C
ನಾಯಕತ್ವ ಆಧಾರಿತ ಚುನಾವಣಾ ಸ್ಪರ್ಧೆ ಎದುರಿಸಲು ಕಾಂಗ್ರೆಸ್ ಇನ್ನೂ ಸನ್ನದ್ಧವಾಗಿಲ್ಲ

ಜನರಾಜಕಾರಣ | ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ: ಹೊಸ ನಾಯಕತ್ವದಿಂದ ಬಯಸುವುದೇನು?

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಹೆಸರಿನಲ್ಲಿ ‘ಗಾಂಧಿ’ ಇಲ್ಲದವರೊಬ್ಬರು ಕಾಂಗ್ರೆಸ್ಸಿನ ಅಧ್ಯಕ್ಷ ರಾಗುವ ಸಂಭವ ಇದೆ ಎಂಬುದು ಈಗ ಸ್ಪಷ್ಟವಾಗಿದೆ. ಅಧ್ಯಕ್ಷ ಆಗಲು ತಾವು ಸಿದ್ಧವಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಯಾರ ನಡುವೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ. ಪಕ್ಷದ ಅಧಿಕೃತ ನಾಯಕತ್ವವು ಕೈಬದಲಾಗಲಿದೆ. ಆದರೆ, ಗಾಂಧಿ ಕುಟುಂಬದ ಪ್ರಭಾವವು ಹೊಸ ಅಧ್ಯಕ್ಷರ ಮೇಲೆ ಎಷ್ಟಿರಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಈ ನಡುವೆ, ರಾಹುಲ್ ಗಾಂಧಿ ಅವರು ‘ಭಾರತ್ ಜೋಡೊ’ ಭಾಗವಾಗಿ ದೇಶದ ದಕ್ಷಿಣದ ತುದಿಯಿಂದ ಉತ್ತರದ ತುದಿವರೆಗೆ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ನಡೆಯುತ್ತಿರುವ ಹೊತ್ತಿನಲ್ಲಿ ಗೋವಾದ ಕಾಂಗ್ರೆಸ್ ಶಾಸಕಾಂಗ ಪಕ್ಷವು ನಿರ್ನಾಮವಾಗುವ ಹಂತ ಸಮೀ‍‍‍‍ಪಿಸಿತ್ತು. ಯಾತ್ರೆ ಆರಂಭಕ್ಕೂ ಮೊದಲು, ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಪಕ್ಷದ ‍ಪ್ರಮುಖ ನಾಯಕರು ಪಕ್ಷ ತೊರೆದರು. ಪಕ್ಷದ ಒಳಗಿನ ಈ ಬದಲಾವಣೆಗಳು ಹೊಸವೇನೂ ಅಲ್ಲ. 2014ರಲ್ಲಿ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಕಳೆದುಕೊಂಡಾಗಿ ನಿಂದ ಕಾಲಕಾಲಕ್ಕೆ ಇಂಥವು ನಡೆಯುತ್ತಿವೆ. ಒಂದೆಡೆ ಪಕ್ಷವು ತಾನು ಎಂಟು ವರ್ಷಗಳ ಹಿಂದೆ ಅನುಭವಿಸಿದ ಚುನಾವಣಾ ಸೋಲಿನಿಂದ ಚೇತರಿಕೆ ಕಂಡುಕೊಳ್ಳಲು ಹೆಣಗುತ್ತಿದೆ. ಇನ್ನೊಂದೆಡೆ, ಆಡಳಿತ ಪಕ್ಷವಾಗಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದು ಹಾಗೂ ಅದು ಸತತ ಎರಡು ಬಾರಿ ಲೋಕಸಭೆಯಲ್ಲಿ ಬಹುಮತ ಪಡೆದಿದ್ದು ದೇಶದ ರಾಜಕೀಯ ಸಂಕಥನವನ್ನು ಮತ್ತು ರಾಜಕೀಯ ಸ್ಪರ್ಧಾಕಣವನ್ನು ದೇಶದಾದ್ಯಂತ ಬದಲಾಯಿಸಿದೆ. ಕಾಂಗ್ರೆಸ್ಸಿನ ಹೊಸ ಅಧ್ಯಕ್ಷರು ಈ ಸವಾಲನ್ನು ಎದುರಿಸಬೇಕಾಗುತ್ತದೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ಪೈಕಿ ಪ್ರಮುಖ ಸ್ಥಾನವನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ. ರಾಜ್ಯಗಳ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ತನ್ನದೇ ಪ್ರಧಾನ ಎದುರಾಳಿ ಪಕ್ಷಗಳಿಂದಾಗಿ ಅಂಚಿಗೆ ಜರುಗುತ್ತಿದೆ. ಅಪರೂಪಕ್ಕೆ ಒಮ್ಮೆ ಎಂಬಂತೆ ಕಾಂಗ್ರೆಸ್ ಪಕ್ಷವು ಚುನಾವಣಾ ಗೆಲುವು ಕಾಣುತ್ತಿದೆ. ದೇಶದ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ಮುನ್ನಡೆಸುತ್ತಿದೆ. ಮೂರು ರಾಜ್ಯಗಳಲ್ಲಿ ಪಕ್ಷವು ಸರ್ಕಾರದಲ್ಲಿ ಸಣ್ಣ ಪಾಲುದಾರ ಆಗಿದೆ. ಹದಿನೈದಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಅಥವಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಪಾಲುದಾರ ಪಕ್ಷಗಳು ಸರ್ಕಾರ ನಡೆಸುತ್ತಿವೆ. ಎಂಟು ರಾಜ್ಯಗಳಲ್ಲಿ ಎನ್‌ಡಿಎ ಹೊರತುಪಡಿಸಿದ, ಕಾಂಗ್ರೆಸ್ ಜೊತೆಗೂ ಮೈತ್ರಿ ಇಲ್ಲದ ಪಕ್ಷಗಳು ಸರ್ಕಾರ ನಡೆಸುತ್ತಿವೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಕ್ಕೆ ಇರುವ ಸ್ಥಾನವನ್ನು ಎನ್‌ಡಿಎ ಮೈತ್ರಿಕೂಟದ ಆಚೆಗಿನ ಪಕ್ಷಗಳಿಗೆ ಬಿಟ್ಟುಕೊಡುತ್ತಿರು
ವುದರ ಸ್ಪಷ್ಟ ನಿದರ್ಶನ ಇದು.

ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟು ಸ್ಪಷ್ಟವಾಗಿ ಮೂರು ಕಡೆಗಳಲ್ಲಿ ಕಾಣಿಸಿಕೊಂಡಿದೆ. ಮೊದಲನೆಯದಾಗಿ, ಕಾಂಗ್ರೆಸ್ ಪಕ್ಷವು ನಾಯಕತ್ವದ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಪಕ್ಷವನ್ನು ಒಂದಾಗಿ ಹಿಡಿದಿರಿಸಿಕೊಳ್ಳಲು ಅಥವಾ ಚುನಾವಣೆಗಳಲ್ಲಿ ಗೆಲುವು ತಂದುಕೊಡುವ ರೀತಿಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಆಗುತ್ತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸೋಲು ಕಂಡ ನಂತರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದರು. ಅದಾದ ನಂತರದಲ್ಲಿ, ಪಕ್ಷದಲ್ಲಿ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ಸೋನಿಯಾ ಗಾಂಧಿ ಅವರು ಪಕ್ಷದ ‘ಹಂಗಾಮಿ’ ಅಧ್ಯಕ್ಷ ರಾಗಿರುವುದರ ಹಿಂದೆ ‘ಶಾಶ್ವತ’ದ ಅಂಶವೊಂದು ಇರುವಂತೆ ಕಾಣುತ್ತಿತ್ತು. ರಾಹುಲ್ ಅವರು ರಾಜೀನಾಮೆ ನೀಡಿದ ನಂತರದಲ್ಲಿ ಪಕ್ಷವು ಸೋನಿಯಾ ಅವರತ್ತ ಮುಖ ಮಾಡಬೇಕಾಗಿ ಬಂದದ್ದು, ದೃಢ ನಾಯಕತ್ವವನ್ನು ನೀಡಲು ಪಕ್ಷಕ್ಕೆ ಆಗುತ್ತಿಲ್ಲ ಎಂಬುದರ ಸೂಚನೆ. ಗಾಂಧಿ ಕುಟುಂಬದ ಆಚೆಗೆ ನಾಯಕತ್ವವನ್ನು ಕಂಡುಕೊಳ್ಳು ವಲ್ಲಿ ಇದ್ದ ಹಿಂಜರಿಕೆಯನ್ನು ಪಕ್ಷವು ಈಗ ಕೊಡವಿ ಕೊಳ್ಳುತ್ತಿರುವಂತೆ ಕಾಣುತ್ತಿದೆ. ಇದರಿಂದಾಗಿ ಪರಿಸ್ಥಿತಿ ಒಂದಿಷ್ಟು ಬದಲಾಗಬಹುದು ಎಂಬ ನಿರೀಕ್ಷೆ ಇದೆ. ಕಾಂಗ್ರೆಸ್ಸಿಗೆ ಎದುರಾಳಿ ಈಗಿನ ಆಡಳಿತ ಪಕ್ಷ. ಆ ಪಕ್ಷದ ಬಲವರ್ಧನೆಗೂ ಅಲ್ಲಿನ ನಾಯಕತ್ವಕ್ಕೂ ಸಂಬಂಧ ಇದೆ. ಹೀಗಾಗಿ, ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆಯು ಮಹತ್ವ ಪಡೆದುಕೊಳ್ಳುತ್ತದೆ.

ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕತ್ವವು ಪಕ್ಷಕ್ಕೆ ಸ್ಪಷ್ಟ ದಿಕ್ಕು ತೋರಿಸಿಲ್ಲವಾದ ಕಾರಣ, ಪಕ್ಷದ ರಾಜ್ಯ ಘಟಕಗಳ ಲ್ಲಿಯೂ ನಾಯಕತ್ವ ಬೆಳೆದಿಲ್ಲ, ಸಶಕ್ತವಾಗಿಲ್ಲ. ರಾಜ್ಯಗಳ ಮಟ್ಟದಲ್ಲಿ ಕಾಂಗ್ರೆಸ್‌ ಎದುರಿಸುತ್ತಿರುವ ಬಿಕ್ಕಟ್ಟಿಗೆ ಹೆಚ್ಚಿನ ಕೊಡುಗೆ ನೀಡಿರುವುದು ಗುಂಪುಗಾರಿಕೆ ಮತ್ತು ಪರಸ್ಪರ ಸ್ಪರ್ಧೆಗೆ ಇಳಿದಿರುವ ನಾಯಕರ ನಡುವೆ ಅಧಿಕಾರಕ್ಕಾಗಿ ಇರುವ ಕಿತ್ತಾಟ. ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ರಾಷ್ಟ್ರೀಯ ನಾಯಕತ್ವಕ್ಕೆ ಆಗದಿರುವುದು ಹಾಗೂ ರಾಜ್ಯ ಮಟ್ಟದ ನಾಯಕರು ಪಕ್ಷದ ಚೌಕಟ್ಟಿಗೆ ಒಳಪಡುವಂತೆ ಮಾಡಲು ಅದಕ್ಕೆ ಸಾಧ್ಯವಾಗದಿರುವುದು ಹಲವು ರಾಜ್ಯಗಳಲ್ಲಿ ಕಣ್ಣಿಗೆ ಕಾಣುವಂತಿದೆ.

ನಾಯಕತ್ವವು ನಿರ್ಧಾರಗಳನ್ನು ಕೈಗೊಳ್ಳದೆ ಇರುವುದರ ಜೊತೆಯಲ್ಲಿ, ಹೈಕಮಾಂಡ್‌ಗೆ ಹತ್ತಿರ ಅನ್ನಿಸಿಕೊಂಡಿರುವ ಸಲಹೆಗಾರರ ತಂಡವೂ ಒಂದು ಸಮಸ್ಯೆಯಾಗಿದೆ. ಸಲಹೆಗಾರರಲ್ಲಿ ಬಹುತೇಕರು ವರ್ಷಗಳಿಂದ ನೇರ ಚುನಾವಣೆಯಲ್ಲಿ ಗೆದ್ದವರಲ್ಲ. ತಳಮಟ್ಟದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೇರವಾಗಿ ಕಾಣುವವರಲ್ಲ. ಹೀಗಾಗಿ, ನಾಯಕತ್ವಕ್ಕೆ ಸಿಗುವ ಮಾಹಿತಿಯು ಸಾಮಾನ್ಯವಾಗಿ ವಾಸ್ತವಕ್ಕೆ ಹತ್ತಿರವಾಗಿರು ವುದಿಲ್ಲ, ಸಲಹೆಗಾರರ ಅಜೆಂಡಾಗಳಿಗೆ, ಹಿತಾಸಕ್ತಿಗಳಿಗೆ, ಆಕಾಂಕ್ಷೆಗಳಿಗೆ ಅನುಗುಣವಾಗಿ ಮಾಹಿತಿ ಇರುತ್ತದೆ. ಪಕ್ಷಕ್ಕೆ ಹೊಸದಾಗಿ ಅಧ್ಯಕ್ಷ ಆಗುವವರು ಈ ಪ್ರವೃತ್ತಿಗೆ ಕಡಿವಾಣ ಹಾಕುವರೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಎರಡನೆಯ ಸಂಗತಿ ಎಂದರೆ, ಅಧಿಕಾರಕ್ಕೆ ಬರಬೇಕು ಎಂಬ ಹಸಿವನ್ನು ಕಾಂಗ್ರೆಸ್ ಪಕ್ಷವು ಕಳೆದುಕೊಂಡಂತಿದೆ. ವರ್ಷದ ಯಾವುದೇ ಸಂದರ್ಭದಲ್ಲಿ, ದಿನದ ಯಾವುದೇ ಹೊತ್ತಿನಲ್ಲಿ ರಾಜಕೀಯ ಸ್ಪರ್ಧೆಗೆ ಸನ್ನದ್ಧವಾಗಿ ಇರುವ ಬಿಜೆಪಿಯಂತಹ ಎದುರಾಳಿ ಇರುವಾಗಲೂ ಕಾಂಗ್ರೆಸ್ ಪಕ್ಷವು ಯಾವಾಗಲೋ ಒಮ್ಮೆ ಪ್ರತಿಕ್ರಿಯೆ ನೀಡುತ್ತಿರು ತ್ತದೆ. ಅದಕ್ಕಿಂತ ಮುಖ್ಯವೆಂದರೆ, ಕಾಂಗ್ರೆಸ್ ಪಕ್ಷವು ತಾನೇ ಒಂದು ಅಜೆಂಡಾವನ್ನು ಸಾರ್ವಜನಿಕರ ಮುಂದೆ ಇರಿಸುವ ಬದಲು ಬಿಜೆಪಿ ರೂಪಿಸುವ ಅಜೆಂಡಾಕ್ಕೆ ತಾನು ಪ್ರತಿಕ್ರಿಯೆ ಮಾತ್ರ ನೀಡುತ್ತಿರುತ್ತದೆ. ಕಾಂಗ್ರೆಸ್ ಪಕ್ಷವು ತನ್ನ ಎದುರಾಳಿ ಪಕ್ಷಗಳ ಖೆಡ್ಡಾಕ್ಕೆ ಜಾರಿಬಿದ್ದಿದೆ, ಚುನಾವಣಾ ಕಣದಲ್ಲಿ ಪರ್ಯಾಯ ನೀತಿಗಳ ಬಗ್ಗೆ ಚರ್ಚೆ ಆಗುವ ಬದಲು ನಾಯಕತ್ವದ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಅಭಿವೃದ್ಧಿ ಹಾಗೂ ಜನರ ಕಲ್ಯಾಣವನ್ನು ಕೇಂದ್ರೀಕರಿಸಿಕೊಂಡ ಪರ್ಯಾಯ ರಾಜಕೀಯ ಕಾರ್ಯಕ್ರಮಗಳನ್ನು ಜನರ ಮುಂದೆ ಇರಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗದಿರು ವುದರ ಪರಿಣಾಮವಾಗಿ, ಚುನಾವಣಾ ಸ್ಪರ್ಧೆಯು ನಾಯಕತ್ವವನ್ನು ಕೇಂದ್ರೀಕರಿಸಿಕೊಂಡು ಆಗುತ್ತಿದೆ. ಆದರೆ, ಹಿಂದೆಯೇ ಹೇಳಿರುವಂತೆ ನಾಯಕತ್ವ ಆಧಾರಿತ ಚುನಾವಣಾ ಸ್ಪರ್ಧೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷವು ಸನ್ನದ್ಧವಾಗಿಯೇ ಇಲ್ಲ. ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷ ಬಂದ ನಂತರದಲ್ಲಿಯೂ, ಅವರನ್ನು ಪರ್ಯಾಯ ನಾಯಕ ಎಂಬಂತೆ ಬಿಂಬಿಸುವ ಸಾಧ್ಯತೆ ಕಡಿಮೆ.


ಪ್ರೊ. ಸಂದೀಪ್ ಶಾಸ್ತ್ರಿ

ಮೂರನೆಯದಾಗಿ, ರಾಜಕೀಯ ಹಾಗೂ ಚುನಾವಣೆ ಸ್ಪರ್ಧೆಗಳು ಹೊಸ ಸಂಕಥನಗಳ ಸುತ್ತ ನಡೆಯುವಂತೆ ಬಿಜೆಪಿ ನೋಡಿಕೊಂಡಿದೆ. ರಾಷ್ಟ್ರೀಯತೆ, ದೇಶಭಕ್ತಿ, ರಾಷ್ಟ್ರ ನಾಯಕತ್ವ, ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನಾಯಕರನ್ನು ಈ ಸಂಕಥನ ಒಳಗೊಳ್ಳುತ್ತದೆ. ಆದರೆ, ಕಾಂಗ್ರೆಸ್ ಪಕ್ಷವು ಇವಕ್ಕೆಲ್ಲ ತನ್ನ ಪ್ರತಿಕ್ರಿಯೆಗಳು ದೃಢವಾಗಿರುವಂತೆ ನೋಡಿಕೊಳ್ಳುತ್ತಿಲ್ಲ. ಸವಕಲು ತಂತ್ರಗಾರಿಕೆಯನ್ನು, ಹಳೆಯ ಶೈಲಿಯನ್ನು ಕಾಂಗ್ರೆಸ್ ನೆಚ್ಚಿಕೊಳ್ಳುತ್ತಿದೆ. ಚುನಾವಣಾ ಕಣದ ರೂಪುರೇಷೆಗಳನ್ನು ಬಿಜೆಪಿಯು ಬದಲಾಯಿಸುವತ್ತ ಮುಂದಡಿ ಇರಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಕಾಂಗ್ರೆಸ್ಸಿನ ಹೊಸ ಅಧ್ಯಕ್ಷರು ಎದುರಿಸಬೇಕಿರುವ ಸವಾಲುಗಳು ಹಲವು. ಪಕ್ಷಕ್ಕೊಂದು ನಾಯಕತ್ವ ಇದೆ, ಆ ನಾಯಕತ್ವಕ್ಕೆ ಶಕ್ತಿ ಇದೆ ಎಂಬುದನ್ನು ಮತ್ತೆ ಹೇಳುವುದು, ರಾಜಕೀಯ ಹಾಗೂ ಚುನಾವಣಾ ತಂತ್ರಗಾರಿಕೆಯನ್ನು ಪುನಃ ಅನ್ವೇಷಿಸುವುದು, 21ನೆಯ ಶತಮಾನದ ಅಗತ್ಯಗಳಿಗೆ ಸ್ಪಂದಿಸುವ ಪಕ್ಷ ತಾನು ಎಂಬ ಚಿತ್ರಣ ರೂಪಿಸುವುದು ಅಗತ್ಯವಾಗಿ ಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು